Sunday, April 26, 2009
ಕನಸು ಕಲ್ಲಾಗುವ ಮೊದಲು...!!
ನಿನ್ನ ನೆನಪಾದಾಗ ಅಮಾವಾಸ್ಯೆಯೂ ಹುಣ್ಣಿಮೆಯಂತೆ. ನೀ ನನ್ನೊಳಗೆ ಮಾತಿಗಿಳಿದಾಗ ಸುಡುವ ನೇಸರನೂ ತಂಪು ಸೂಸುವ ಚಂದಿರನಂತೆ. ನಿನ್ನ ಮೌನದ ದನಿ ಎದೆ ತಟ್ಟಿದಾಗ ಭಾವಗಳೂ ಜೀವ ಪಡೆಯುತ್ತವೆ. ಯಾಕೋ ನೀನಿಟ್ಟ ಪ್ರೀತಿಯ ಕಚಗುಳಿ ಮತ್ತೆ ಮತ್ತೆ ಹೃದಯದಲ್ಲಿ ಮಾರ್ದನಿಸುತ್ತದೆ ಗೆಳೆಯಾ. ಅನನ್ಯವಾದ ಬದುಕನ್ನು, ಅಮ್ಮನೆಂಬ ಶ್ರೇಷ್ಠ ಸತ್ಯವನ್ನು ಪ್ರೀತಿತಿಸಲು ಮಾತ್ರ ಅರಿತಿದ್ದ ನಾನು ನಿನ್ನನ್ನೂ ಪ್ರೀತಿಸಲು ಕಲಿತೆ. ನಿನ್ನಲ್ಲೂ ಜೀವನಪ್ರೀತೀನ ಕಂಡೆ. ನಿನ್ನಲ್ಲೂ ಬದುಕಿನ ಪ್ರತಿಬಿಂಬ ಕಂಡೆ. ನಾನಂದುಕೊಂಡಿರಲಿಲ್ಲ ಗೆಳಯಾ...ನೀ ಮೌನದಲ್ಲೇ ಪ್ರೀತಿಯಾಗಿ ನನ್ನೆದೆಯಲ್ಲಿ ಸ್ವಾತಿ ಮುತ್ತಾಗುವೆಂದು!
ಕಳೆದ ಬದುಕಿನ ಹಾದಿಯಲ್ಲಿ ನಂಬಿಕೆಯ ಪುಷ್ಪ ಹರಿಸಿ ನನ್ನೊಡನೆ ಹೆಜ್ಜೆಯಾಗಿದ್ದವನು ನೀನು. ಮನದೊಳಗೆ ಅವಿತಿದ್ದ ಶೋಕವನ್ನೇ ಶ್ಲೋಕವನ್ನಾಗಿಸಿ, ಅಳಲಿನ ಅಲೆಗಳನ್ನೇ ಸವಿಹಾಡಾಗಿಸಿದ ಗೆಳೆಯನೇ, ನಿನ್ನ ಖುಷಿಗೆ ನಾ ಬೆಳಕಾಗಬೇಕಾದರೆ ನಿನ್ನ ದುಃಖದ ಕತ್ತಲಲ್ಲೂ ನಾ ಕರಗಿ ಕಣ್ಣೀರಾಗಬೇಕು. 'ನಿನಗೆ ಬೆಳಕಷ್ಟೇ ನೀಡುತ್ತೇನೆ ಗೆಳತೀ..' ಎನ್ನುತ್ತಾ ದುಃಖವನ್ನೇಲ್ಲಾ ಬದುಕ ಮೇಲೆ ಹೊದ್ದು ಮಲಗುತ್ತೇನೆ ಎನ್ನುವ ಘನ ವ್ಯಕ್ತಿತ್ವ ನಿನ್ನದಾದರೂ ನಿನ್ನ ತುಂಬಾ ಪ್ರೀತಿಸುವ ಗೆಳತಿಯಾಗಿ, ಅಕ್ಕರೆಯ ಸಹೋದರಿಯಾಗಿ, ನೋವು-ನಲಿವಿಗೆ ಅಮ್ಮನಾಗಿ ಮಮತೆಯ ಮಡಿಲಾಗುವ ಅವಕಾಶ ಕೊಡ್ತೀಯಾ ಹೇಳು..?! ಬೆಳದಿಂಗಳ ಮಳೆಗೆ ಮಾತ್ರವಲ್ಲ ಬೆಂಕಿಮಳೆಯ ಕಾಳರಾತ್ರಿಯಲ್ಲೂ ನಿನ್ನ ಜೊತೆ ನಾ ಹೆಜ್ಜೆಯಾಗಬೇಕು. ಕಂಗಳಿಂದ ಜಾರೋ ಹನಿಬಿಂದು ಪಾದತಳಕ್ಕೆ ಬಿದ್ದು ಮಣ್ಣಾಗುವ ಮೊದಲು ಒಂದೇ ಒಂದು ಸಲ ಹೇಳಿಬಿಡು ಗೆಳಯಾ, "ಗೆಳತೀ ನನ್ನ ದುಃಖಕ್ಕೂ ಹೆಗಲಾಗಲೆಂದು..!"
ಹೃದಯ ತುಂಬಾ ದುಗುಡ-ಕಾರ್ಮೋಡವನ್ನು ಹೊತ್ತು 'ಮರೆತುಬಿಡು' ಎನ್ನುವಷ್ಟು ಸುಲಭವಲ್ಲ ಪ್ರೀತಿ-ಭಾವದ ಬಂಧನ. ನಿನ್ನ ಹುಣ್ಣಿಮೆ ನಗುವಿಗೆ, ಪ್ರೀತಿಯ ಕಚಗುಳಿಗೆ ಸಂಸ್ಕೃತಿ-ಕಟ್ಟಳೆಗಳ ಹಂಗಿರಲಿಲ್ಲ. ಸುತ್ತಮುತ್ತಲ ಜನ ದೇಶ ಭಾಷೆ ಕಲಿಯಬಹುದು..ಎನ್ನುವುದು ಭರವಸೆಯ ಹೊಂಗಿರಣವಲ್ಲ ಗೆಳೆಯಾ. 'ತೆರೆದಿದೆ ಮನೆ ಓ ಬಾ ಗೆಳತೀ..' ಎಂದು ಕೈಬೀಸಿ ಕರೆದು ಧಡ್ ! ಎಂದು ಮನದ ಕದ ಮುಚ್ಚದಿರು. ಅಂತರಂಗದ ಬಾಗಿಲು ತೆರೆದುಬಿಡು...ಪ್ರೀತಿಯ ಗಾಳಿ ಒಳಕ್ಕೆ ಹರಿದುಬಿಡಲಿ. ಬಣ್ಣ ತುಂಬಿಬಿಡು..ನೆನಪುಗಳಿಗೆ, ಪ್ರತಿ ರಾತ್ರಿಯ ಕನಸುಗಳಿಗೆ..ಜೀವನ ರಂಗೋಲಿಗೆ! ತಡವೇಕೆ..ಕಾಲ ಕಲಿಸುವ ಬದುಕಿಗೆ ನೀನ್ಯಾಕೆ ಬಂಧಿಯಾಗುತ್ತೀಯಾ ಹೇಳು? ಮನತುಂಬಿ ನಕ್ಕು ಬಿಡು..ಚಂದಿರನೂ ನಸು ನಾಚುವಂತೆ, ಅರಳುವ ಜಾಜಿಯೂ ಹುಸಿಮುನಿಸು ತೋರುವಂತೆ! ಅನನ್ಯ ಬದುಕಿನಲ್ಲಿ ಸ್ವಚ್ಚಂದ ಹಕ್ಕಿಯಾಗಿ ಆಕಾಶಕ್ಕೆ ಹಾರೋ ಆಡಂಬರತೆ ಬೇಡ..ನಮ್ಮದೇ ಬಿದಿರ ಹುಲ್ಲಿನ ಗುಡಿಸಲಿನಲ್ಲಿ ಪ್ರೀತಿಯ ಗೂಡು ಕಟ್ಟಿ ಕಲರವಗುಟ್ಟೋಣ. ಮೊಂಬತ್ತಿಯಡಿಯಲ್ಲೇ ಜೀವನಪ್ರೀತಿಯ ಅನುಭೂತಿ ಪಡೆಯೋಣ. ನಿನ್ನ ಬದುಕಿನಾಗಸದಲ್ಲಿ ಪುಟ್ಟ ನಕ್ಷತ್ರವಾಗೋ ಅವಕಾಶ ಕೊಡ್ತೀಯಾ ಹೇಳು ಗೆಳೆಯಾ....ಕನಸು ಕಲ್ಲಾಗುವ ಮೊದಲು..!!ಇಂತೀ,
ನಿನ್ನವಳೇ
Saturday, April 25, 2009
ಕೆಂಡಸಂಪಿಗೆಗೆ ಪ್ರೀತಿಯ ಥ್ಯಾಂಕ್ಸ್ಉಉಉ...
ಧರಿತ್ರಿಯ ಹುಟ್ಟುಹಬ್ಬದ ಸಂಭ್ರಮ
ಪ್ರೀತಿಯ ತಮ್ಮನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ಧರಿತ್ರಿ. ಒಡಹುಟ್ಟಿದ ತಮ್ಮನಲ್ಲದಿದ್ದರೂ, ಒಡನಾಡಿ ಒಡಹುಟ್ಟಿದವನಾದ, ತಮ್ಮೂರು ಉಜಿರೆಯ ಕಾರಿಡಾರ್ ನಿಂದ ಈಗಿರುವ ಬೆಂಗಳೂರಿನ ಮನೆಯಲ್ಲೂ ತಮ್ಮೊಟ್ಟಿಗೆ ಕಲರವಗುಟ್ಟುವ ತಮ್ಮನ ಒಡನಾಟವನ್ನ ಧರಿತ್ರಿ ನೆನೆಯುತ್ತಿದ್ದಾರೆ. ಹೀಗಿರುವ ಪ್ರೀತಿಯ ತಮ್ಮನ ಹುಟ್ಟುಹಬ್ಬಕ್ಕೊಂದು ಕವಿತೆ ಇಟ್ಟು ಶುಭ ಕೋರುತ್ತಿದ್ದಾರೆ.
"ಧರಿತ್ರಿ ನನ್ನ ಅದಮ್ಯ ಕನಸು. ಸದಾ ಏನಾದ್ರೂ ಬರೀಬೇಕು ಅನ್ನೋದು ನನ್ ಮನಸ್ಸಿನ ತುಡಿತ. ಬರವಣಿಗೆ ಅನ್ನೋದು ನಿಂತ ನೀರಾಗಬಾರದು..ಅದಕ್ಕೆ ಈ ಧರಿತ್ರಿ ಆಸರೆಯಾಗುತ್ತಾಳೆ ಅನ್ನೋ ನಂಬಿಕೆ." ಅನ್ನೋದು ಅವರ ಆಶಯ.
ಭಾವದಲೆಗಳ ಮೇಲೇರಿ ಸವಾರಿ ಮಾಡುತ್ತಿರುವಂತೆ ಬರೆವ ಧರಿತ್ರಿ ಬರಹಗಳು ಓದಲು ಬೆಚ್ಚನೆಯ ಅನುಭವ ಕೊಡುತ್ತವೆ. ಹುಟ್ಟಿದೂರು ಬಿಟ್ಟುಬಂದ ತಳಮಳ, ಒಂಟಿತನದ ಸಂಕಟ, ಈ ನಡುವೆ ತುಂತುರು ಮಳೆಯಲ್ಲಿ ನೆನಪುಗಳ ಮೆರವಣಿಗೆ....ಎಲ್ಲವೂ ಓದಲು ಖುಷಿ ಕೊಡುತ್ತವೆ.
(http://www.kendasampige.com/article.php?id=1774)
Tuesday, April 21, 2009
ನೋವು-ನಲಿವುಗಳ ಜೊತೆ ನಲಿದಾಡಿಬಿಡು ನನ್ನ ಪುಟ್ಟ ತಮ್ಮಾ...
ನಾನು ಡಿಗ್ರಿ ಮುಗಿಸಿ ಕಾಲೇಜಿಂದ ಹೊರನಡೆದಾಗ ಅಕ್ಕಾ ನಾ ನಿನ್ ಜೊತೆಗೇ ಬರ್ತೀನಿ ಎಂದು ಅಮ್ಮನೆದುರು ಮಗು ಗೋಗರದಂತೆ ಬಿಕ್ಕಿ ಬಿಕ್ಕಿ ಅತ್ತಿದ್ದ. "ನನಗಿಂತ ಹೆಚ್ಚಾಗಿ ನಿನ್ನ ಪ್ರೀತಿಸೋರು ಸಿಕ್ಕಾಗಲೂ ನನ್ನ ಮರೆಯಲ್ಲ ತಾನೇ?" ಎಂದು ಆಟೋಗ್ರಾಫ್ ತುಂಬಾ ಗೀಚಿಟ್ಟು ನನ್ನ ಕಣ್ಣುಗಳೂ ಒದ್ದೆಯಾಗುವಂತೆ ಮಾಡಿದ್ದ. ಕಾರಿಂಜ ದೇವಸ್ಥಾನ ಬೆಟ್ಟದ ತುತ್ತತುದಿಗೆ ಹೋಗಿ ನನ್ನ ಜೊತೆ ಫೋಟೋ ತೆಗೆಸಿಕೊಂಡು ನಿಂಗೆ ಬಾವ ಹುಡುಕುತ್ತೀನಿ ಅಂತ ತಮಾಷೆ ಮಾಡುತ್ತಿದ್ದ. ಸಿಕ್ಕವರಿಗೆಲ್ಲಾ ಫೋಟೋ ತೋರಿಸಿ ಇದು ನನ್ನಕ್ಕ ಅಂತ ಹೆಮ್ಮೆಪಡುತ್ತಿದ್ದ. ಅಂತೂ ನಾನು ಬೆಂಗಳೂರಿಗೆ ಬಂದಾಗಲೂ ನಿತ್ಯ ಮೊಬೈಲ್, ಮೆಸೇಜ್ ಗಳೊಂದಿಗೆ ನನ್ನೊಂದಿಗೆ ಕಲರವಗುಟ್ಟುತ್ತಿದ್ದ. ಡಿಗ್ರಿ ಮುದಿದ್ದೇ ತಡ..ಮನೆಯಲ್ಲಿ ಯಾರೂ ಹೇಳಿದ್ರೂ ಅಕ್ಕನ ಜೊತೆಗೇ ಇರ್ತೀನಿ ಅಂತ ಹಠ ಹಿಡಿದು ಬೆಂಗಳೂರಿಗೆ ಬಂದುಬಿಟ್ಟ. ನನ್ನ ಪುಟ್ಟ ಮನೆಯಲ್ಲಿ ನನ್ನ ಮಡಿಲೇ ಸೇರಿಬಿಟ್ಟ.
ನಿನ್ನೊಳಗೆ ತೂರಿಬರುವ
ಬೆಳಕಿನ ಕಿರಣಗಳನ್ನು ಹಿಡಿದಿಡು....
ಬದುಕಿನ ಎದೆಯಿಂದ ಎದೆಗೆ
ಪ್ರೀತಿಯ ಗಾಳಿ ಸೋಕಿಬಿಡು..
ಎಲ್ಲರ ನೋವು-ನಲಿವುಗಳ ಜೊತೆಯಾಗಿ ನಲಿದುಬಿಡು..ನನ್ನ ತಮ್ಮನಾಗಿ!
ಪ್ರೀತಿ ಪ್ರೇಮ ಸ್ನೇಹಗಳು
ಬೆಳೆದು ನಿಲ್ಲಲಿ, ಸುಗ್ಗಿ ಅರಳಲಿ
ನಿನ್ನ ಬಾಳು ಸದಾ ಹಸಿರಾಗಿರಲಿ..
ಪುಟ್ಟಾ...ನಿನಗಿದೋ ಹುಟ್ಟುಹಬ್ಬದ ಶುಭಾಶಯಗಳು.
Friday, April 17, 2009
ತುಂತುರು ಮಳೆಯಲ್ಲಿ ನೆನಪುಗಳ ಮೆರವಣಿಗೆ...
ತುಂತುರು ಮಳೆ! ಬೆಂಗಳೂರಿನ ನನ್ನ ಪುಟ್ಟ ಮನೆಯಂಗಳಕ್ಕೆ ವರುಣನ ಸ್ಪರ್ಶ. ನಾ ಹೊಸ ಮನೆಗೆ ಬಂದ ಮೇಲೆ ಇದೇ ಮೊದಲ ಬಾರಿಗೆ ಮಹಡಿ ಮನೆಯಲ್ಲಿ ಕುಳಿತು ತುಂತುರು ಮಳೆಯ ಹರ್ಷವನ್ನು ಸವಿದಿದ್ದೆ. ಅದೇನೋ ಖುಷಿ, ನಿತ್ಯ ಸೆಕೆಯಿಂದ ಮೈಯೆಲ್ಲಾ ಬೇಯುತ್ತಿದ್ದ ನನಗೆ ನಿನ್ನೆ ತಂಪು ಗಾಳಿಯ ಪುಳಕ. ಬೇಗನೆ ಅಡುಗೆ ಮಾಡಿ, ಸ್ನಾನ, ದೇವರಿಗೆ ದೀಪ ಹಚ್ಚಿ..ನನ್ನ ಪುಟ್ಟ ರೂಮಿನ ಕಿಟಕಿ ಬಳಿ ಕುಳಿತರೆ..ನಕ್ಷತ್ರಗಳೇ ಕಾಣದ ಕಪ್ಪನೆಯ ಆಗಸದಿಂದ ತುಂತುರು ಹನಿಗಳು ಜಿಟಿಯುತ್ತಿದ್ದವು. ಎದುರು ಮನೆಯ ಮಕ್ಕಳು ಟೆರೇಸ್ ಮೇಲೆ ಆಡಲು ಹೋಗುತ್ತಿದ್ದಂತೆ ಅವರಮ್ಮ ದೊಡ್ಡ ಸ್ವರದಿಂದ ಪುಟ್ಟ ಕಂದಮ್ಮಗಳಿಗೆ ಗದರುತ್ತಿದ್ದಳು. ಒಂದು ಕ್ಷಣ ಮಹಡಿ ಮೇಲಿಂದ ಕೆಳಗೆ ರಸ್ತೆಗಿಳಿದು..ಮಳೆಯಲ್ಲಿ ತೊಯ್ದು ಬಿಡೋಣ ಅನಿಸಿದ್ರೂ ಮನಸ್ಸೇಕೋ ಬೇಡ ಅಂದಿತ್ತು. ಬಾಗಿಲಲ್ಲಿ ನಿಂತು ಮಳೆಗೆ ಕೈ ಚಾಚಿ ಅಂಗೈಯಲ್ಲಿ ಆ ತುಂತುರು ಹನಿಗಳನ್ನು ಅಂಗೈಯಲ್ಲಿ ಹಿಡಿಯಹೊರಟರೆ. ಥತ್...! ಕೈಯಿಂದ ಜಾರಿಹೋಗಬೇಕೇ ಹನಿಗಳು...?!ಬದುಕು ಏನಾದರೂ ಬಲುದೂರ ಹೋದರೂ
ಬರಲಾರದಿಂಥ ಬೇರೊಂದು ನೆನಪು
ಏನೆಲ್ಲಾ ಮರೆತರೂ ಯಾರೊಡನೆ ಬೆರೆತರೂ
ಮರುಕಳಿಸುತಿಹುದು ನೂರೊಂದು ನೆನಪು...
ಫೋಟೋ: ಎನ್.ಕೆ.ಎಸ್.
Thursday, April 16, 2009
ನಿನ್ನ ಬಿಟ್ಟು ನಿಸರ್ಗವನ್ನು ಪ್ರೀತಿಸುತ್ತಿದ್ದರೆ..?!!
ಜಗತ್ತು ವಿಶಾಲ. ಬದುಕು ವಿಶಾಲ. ನಿನ್ನ ಹೃದಯನೂ ಅಷ್ಟೇ ವಿಶಾಲ ಅಂದುಕೊಂಡ ಮುಗ್ಧ ಮನಸ್ಸು ನನ್ನದು. ನಿನ್ನ ಪ್ರೀತಿಯ ತೀರದಲ್ಲಿ ಲಗೋರಿಯಾಟ ಆಡುತ್ತಿದ್ದಾಗ ಧೊಪ್ಪನೆ ದಡಕ್ಕಪ್ಪಳಿಸುತ್ತಿದ್ದ ಆ ಅಲೆಗಳೇಕೋ ಅಲೆಯೆನಿಸಲಿಲ್ಲ, ಪ್ರೀತಿಯ ಸೆಲೆಯೇನೋ ಅಂದುಕೊಂಡೆ. ನೀ ಗೀಚಿದ ನಾಲ್ಕಕ್ಷರಕ್ಕೆ ಜಗತ್ತನ್ನು ಮರೆಸುವ ಶಕ್ತಿ ಇದೆ, ನಿನ್ನ ಮಡಿಲು ನನ್ನ ಖುಷಿ-ದುಃಖಗಳಿಗೆ ಅಮ್ಮನಾಸರೆ ಆಗುತ್ತೆ ಅಂದುಕೊಂಡಿದ್ದೆ. ಗೆಳತೀ, ನೀ ಹಾಗಾಗಲಿಲ್ಲ ಬಿಡು..!
ನೀನಿತ್ತ ಭಾಷೆಗೆ ಸುಗ್ಗಿಯ ಸಂಭ್ರಮವಿತ್ತು. ನಾಳಿನ ಚಿಂತೆಗಳಿಗೆ ಅವಕಾಶವೇ ಇರಲಿಲ್ಲ ಗೆಳತೀ. ನಿನ್ನ ನಗು ಮತ್ತು ಕಣ್ಣುಗಳನ್ನು ನಾ ತುಂಬಾ ಪ್ರೀತಿಸುವೆ, ಖುಷಿಯಲ್ಲಿದ್ದಾಗ ಬೆಳಕು ನೀಡೆಂದು ಪದೇ ಪದೇ ದುಂಬಾಬು ಬೀಳುತ್ತಿದ್ದ ನಿನಗೆ ನಾ ನೀಡಿದ ಬೆಳಕು ಅದೇಕೆ ಅಮಾವಾಸ್ಯೆಯ ಕತ್ತಲೆಯೆನಿಸಿತು? ಅದೇಕೇ ಹುಣ್ಣಿಮೆಯಾಗಲಿಲ್ಲ? ಅದೇಕೇ ನಾ ನಿನ್ನ ಪಾಲಿಗೆ ಬೆಳದಿಂಗಳ ಚಂದಿರನೆನಿಸಲಿಲ್ಲ?! ಅದೇ ನೀನಿಲ್ಲದ ಬದುಕಿನಲ್ಲಿ ಕಪ್ಪನೆಯ ಆಕಾಶದಲ್ಲಿ ಮಿನುಗುವ ನಕ್ಷತ್ರಗಳನ್ನು ಎಣಿಸುತ್ತಾ ಇದೀಗ ಮತ್ತೆ ಮತ್ತೆ ಪ್ರಶ್ನೆಗಳನ್ನು ನನಗೇ ನಾ ಕೇಳಿಕೊಳ್ಳುತ್ತಿದ್ದೇನೆ. "ಮನುಷ್ಯ ಮನುಷ್ಯನಿಗೆ ಮಾಡುವ ಎಲ್ಲಾ ದ್ರೋಹಗಳೂ ಅತ್ಯಾಚಾರಗಳೇ, ನೀ ನನ್ನ ಬಿಟ್ಟು ಹೋಗಲ್ಲ ತಾನೇ? ಭಾಷೆ ಕೊಡು' ಎಂದು ಬೆಳ್ಳಂಬೆಳಿಗ್ಗೆ ಕಡಲ ತಡಿಯಲ್ಲಿ ಇಬ್ಬನಿ ಬೆಳಗನ್ನು ಸವಿಯುತ್ತಾ ನೀ ಕೇಳಿದ ಪ್ರಶ್ನೆ! ಗೆಳತೀ, ನೀ ಮಾಡಿದ ದ್ರೋಹವನ್ನು ನಾ ಏನೆಂದು ಕರೆಯಲಿ? ಅತ್ಯಾಚಾರವೇ? ದ್ರೋಹವೇ? ನಂಬಿಕೆಗೆ ಪೆಟ್ಟೇ?
ಗೆಳತೀ, ನೀ ನನಗೆ ರಾಜಬೀದಿಯಾಗು ಎನ್ನಲಿಲ್ಲ, ನನ್ನ ಪಾಲಿಗೆ ಪುಟ್ ಪಾತ್ ಆಗಿಬಿಡು ಎಂದವ ನಾನು. ನೇಸರನಾಗಿ ಬೆಳಗು ಎಂದಿಲ್ಲ, ಪುಟ್ಟ ನಕ್ಷತ್ರವಾಗಿ ನನ್ನ ಬದುಕಿನಲ್ಲಿ ಬೆಳಗುತ್ತಿರು ಎಂದಿದ್ದೆ. ನಾ ಹೆಣೆದ ಪುಟ್ಟ ಕನಸುಗಳು ಅದೇಕೋ ಬಲಿತು ಹಣ್ಣಾಗುವ ಮೊದಲೇ...?! ಇರುಳ ಕತ್ತಲಿನಲ್ಲಿ ಪುಟ್ಟ ಹಣತೆ ಹಚ್ಚಿಟ್ಟು..ಆತ್ಮದೊಂದಿಗೆ ಮಾತನಾಡಲಷ್ಟೇ ನಾ ಕಲಿತಿದ್ದೆ ಗೆಳತೀ, ದೇಹದೊಂದಿಗಲ್ಲ! ಮನದ ಕನ್ನಡಿಯಲ್ಲಿ ಮುರಿದ ಮನಸ್ಸಿನ ಜಾತ್ರೆಯಲ್ಲಿ ಭಾವವಿಹೀನ ಬಿಂಬಗಳನ್ನು ಕಾಣುತ್ತ ಕುಳಿತ ನನಗೆ ನೀನಿತ್ತ ಭಾಷೆ ಮತ್ತೆ ಮತ್ತೆ ನೆನಪಾಗುತ್ತಿದ್ದೆ. ನೆನಪಿಡು, ಮನದ ಕದ ನಾ ಬಡಿಯಲಿಲ್ಲ ಗೆಳತೀ...ನೀನೇ ಕೈಯಾರೆ ಬಡಿದಿದ್ದೀಯಾ...ನೋಡು ಈಗ ನಿನ್ನ ಕೈಯಾರೆ ಮುಚ್ಚಿಬಿಡುತ್ತಿದ್ದೀಯಾ! "ಎಲ್ಲಾ ಸಮಸ್ಯೆಗಳಿಗೂ ನಮ್ಮ ಸೋಲಿಸಲು ದೈರ್ಯವಿರುವುದಿಲ್ಲ" ಎಂದು ನನ್ನ ಬದುಕಿಗೆ ಭರವಸೆ ತುಂಬಿದ ನೀ ಮಬ್ಬಿಗೆ ಬೆಳಕಾಗಿ, ಎಳೆಬಿಸಿಲಿಗೆ ಬಣ್ಣದ ರಂಗೋಲಿಯಾಗಿ ನೀ ಬರುವ ಕನಸು ಕಂಡಿದ್ದೆ. ಯಾಕೋ ಸುಗ್ಗಿಯ ಸಂಭ್ರಮ ಕೊನೆ ತನಕ ಉಳಿಯಲಿಲ್ಲ. ಕನಿಷ್ಠ ಪಕ್ಷ ನಿನ್ಮ ಪ್ರೇಮ ಬಿಡು, ಜೀವನ ಪ್ರೀತಿಯನ್ನೂ ನೀ ಉಳಿಸಿಕೊಂಡಿಲ್ಲವಲ್ಲಾ ಎನ್ನುವ ಕೊರಗು ನನ್ನದು. ಕಣ್ಣಲ್ಲಿ ನೀರು ತುಂಬಿಕೊಂಡು, ಮುಖದಲ್ಲಿ ಕೃತಕ ನಗುವನ್ನು ಹೊರಸೂಸುವ ಸರದಿ ನನ್ನದು. ಥೂ! ಎಂಥ ದುರಂತ...! ಪ್ರೀತಿಗಾಗಿ ಹಪಹಪಿಕೆ ಸರಿಯಲ್ಲ...ಕಣ್ಣೀರ ಬೆಲೆ ಅರ್ಥವಾಗದವರ ಎದುರು ಕಣ್ಣೀರು ಹಾಕೋದು ತರವಲ್ಲ..ಆದರೆ ಎದೆಯಾಳದಿಂದ ಹೊರಹೊಮ್ಮುವ ದುಃಖದ ಬೇಗೆ, ಕಂಗಳಿಂದ ಹನಿ ಹನಿಯಾಗಿ ಸುರಿಯುತ್ತಿದೆ ನೋಡು...! ಗೆಳತೀ..ಒಂದೇ ಒಂದು ಬಾರಿ ನಿನ್ನ ಆತ್ಮದೊಡನೆ ಕೇಳಿಬಿಡು...ನಾನೂ ಮಾತಿಗಿಳಿದಿದ್ದು ನಿನ್ನ ಆತ್ಮದ ಜೊತೆ ಮಾತ್ರ!
ನನ್ನೊಂದಿಗೆ ಮಾತನಾಡುವ, ನನ್ನೊಂದಿಗೆ ಒಡನಾಡುವ, ನನ್ನ ಮೌನ-ಮಾತುಗಳನ್ನು ಹಂಚಿಕೊಳ್ಳುವ, ನನ್ನೆದೆಯಲ್ಲಿ ಪ್ರೀತಿ ಬೆಳಕು ವಿಶ್ವಾಸಗಳನ್ನು ತುಂಬುವ ಗೆಳತಿಯಾಗ್ತೀಯಾ ಅಂದುಕೊಂಡೆ. ಆದರೆ ಹಾಗಾಗಿಲ್ಲ ಬಿಡು, ಯಾಕೋ ನೆನಪಾಗುತ್ತಿದೆ, ಭೈರಪ್ಪ ಅವರ ದೂರಸರಿದರು ಕಾದಂಬರಿಯಲ್ಲಿ ಬರುವ "ಮನುಷ್ಯರನ್ನು ಪ್ರೀತಿಸುವುದಕ್ಕಿಂತ ನಿಸರ್ಗವನ್ನು ಪ್ರೀತಿಸುವುದರಲ್ಲಿ ನಿರಾಶೆಗೆ ಒಳಗಾಗುವ ಭೀತಿ ಕಡಿಮೆ" ಎಂಬ ಮಾತು. ಈವಾಗ ಇದು ನಿಜವೆನಿಸುತ್ತೆ. ಜುಳು ಜುಳು ಎಂದು ಹರಿಯೋ ನದಿ, ದಡಕ್ಕಪ್ಪಳಿಸುವ ಅಲೆ, ಪ್ರಶಾಂತ ಸಾಗರ, ಸಕಲ ಜೀವಕೋಟಿಗಳಿಗೂ ಆಸರೆ ನೀಡಿದ ಭೂಮಿ, ಸುರಿಯುವ ಮಳೆ, ಬೀಸುವ ಗಾಳಿ, ಮೌನವಾಗಿ ಬಿದ್ದಿರುವ ಕಲ್ಲು, ಹಸುರು ಮರಗಿಡಗಳು, ಚಿಲಿಪಿಲಿ ಕಲರವಗುಟ್ಟುವ ಹಕ್ಕಿಗಳು, ನೀಲ ಆಕಾಶ, ಚಲಿಸುವ ಮೋಡಗಳು, ಮನಕ್ಕೆ ಖುಷಿಕೊಡುವ ಹೂವುಗಳು...ಇವುಗಳನ್ನು ನಿನಗಿಂತ ಹೆಚ್ಚು ಪ್ರೀತಿಸ್ತಾ ಇದ್ರೆ ಬಹುಶಃ ನನ್ ಕಣ್ಣಲ್ಲಿ ಹನಿಬಿಂದುವಿಗೂ ಅವಕಾಶ ಇರಲಿಲ್ಲ ಎನಿಸುತ್ತೆ ಗೆಳತೀ!
ಇಂತೀ,
-ಗೆಳೆಯನಾಗಿದ್ದವ!
(ಈ ಪತ್ರ ಬರೆದಿದ್ದು ದಿನಾಂಕ 17.04.2009 ರಂದು. ಅಂದೇ ರಾತ್ರಿ ಲಗೋರಿಯಾಟದ ರಾಜೇಶ್ (http://manadapisumaathu.blogspot.com/) ಇದಕ್ಕೆ ಪ್ರತ್ಯುತ್ತರವಾಗಿ ತುಂಬಾ ಸುಂದರವಾದ ಪ್ರೇಮಪತ್ರ ಬರೆದಿದ್ದಾರೆ. ಅದೂ ಹುಡುಗಿಯಾಗಿ...! ಇದು ನಮ್ಮಿಬ್ಬರ ಬರಹದ ಸಮರ ಅಲ್ಲ...ಅವರಿಗೆ ನಾನು ಹುಡುಗನಾಗಿ ಬರೆದ ಪತ್ರ ಓದಿದ ಮೇಲೆ ಹುಡುಗಿಯಾಗಿ, ಹುಡುಗಿಯ ಮನದ ತುಮುಲಗಳನ್ನು ಕಲ್ಪಿಸಿಕೊಂಡು ಭಾವನೆಗಳನ್ನು ಅಕ್ಷರರೂಪಕ್ಕೆ ಇಳಿಸಿದ್ದಾರೆ. ನೀವೂ ಓದಿ. ರಾಜೇಶ್ ತುಂಬಾ ಚೆನ್ನಾಗಿ ಬರೆದಿದ್ದಕ್ಕೆ ಧನ್ಯವಾದಗಳು)
Saturday, April 11, 2009
ನನಗೂ ಅಕ್ಕಾ ಇರ್ತಾ ಇದ್ರೆ..?!
ಹೌದು, ನಂಗೂ ಅಕ್ಕಾ ಇರಬೇಕಿತ್ತು....ಈ ಆಸೆ ಇಂದಲ್ಲ...ನಾನು ಚಡ್ಡಿ ಹಾಕೊಂಡು ತಿರುಗಾಡುವಾಗಲೇ ಇರ್ತಾ ಇತ್ತು. ಆವಾಗಲ್ಲೇ ಅಮ್ಮನ ಜೊತೆ ಜಗಳ ಆಡ್ತಿದ್ದೆ. ಪಕ್ಕದ್ಮನೆ ಜಗ್ಗಣ್ಣನಿಗೆ ಯಶೋಧಕ್ಕ ಇದ್ದಾಳೆ..ನಂಗ್ಯಾಕೆ ಅಕ್ಕ ಇಲ್ಲ ಅನ್ತಾ ಇದ್ದೆ. ಆ ಪಕ್ಕದ್ಮನೆ ಯಶೋಧಕ್ಕ ಯಾವಾಗಲೂ ನಮ್ಮನೆಗೆ ಆಡಕೆ ಬರೋಳು...ಅವರು ಐದು ಜನ ಮಕ್ಕಳು. ಯಶೋಧಕ್ಕ ಎಲ್ಲರಿಗೂ ದೊಡ್ಡಕ್ಕ. ಹಾಗೇ ನಮಗೂ ದೊಡ್ಡ ಯಶೋಧಕ್ಕ. ಅವಳ ತಮ್ಮ-ತಂಗಿಯರನ್ನೆಲ್ಲಾ ಅವಳೇ ನೋಡಿಕೊಳ್ಳುತ್ತಿದ್ದಳು. ಅವರನ್ನು ಸ್ನಾನ ಮಾಡಿಸುವುದು, ಶಾಲೆಗೆ ಹೊರಡಿಸೋದು, ಅವಳೂ ಗಡಿಬಿಡಿಯಿಂದ ಶಾಲೆಗೆ ಹೊರಡೋದು....ಒಟ್ಟಿನಲ್ಲಿ ಅವಳದು ಮನೆಮಂದಿಯ ಉಸ್ತುವಾರಿ. ಆವಾಗೆಲ್ಲ ನಾನು ಅಮ್ಮಂಗೆ ಹೇಳ್ತಾ ಇದ್ದೆ..ಅಮ್ಮ ನಂಗೂ ಅಕ್ಕ ಇರ್ತಾ ಇದ್ರೆ...ನನ್ನ ಸ್ನಾನ ಮಾಡಿಸುವ, ನನಗೆ ಲಂಗ-ಧಾವಣಿ ತೊಡಿಸುವ ಕೂದಲು ಬಾಚಿ ಜಡೆ ಹೆಣೆದು ಮಲ್ಲಿಗೆ ಮುಡಿಸುವ, ಹಣೆಗೆ ಬೊಟ್ಟು ಇಡುವ, ದೇವರೆದುರು ದೀಪ ಹಚ್ಚಿ ದೇವರಿಗೆ ಅಡ್ಡ ಬೀಳು ಎಂದು ಆದೇಶಿಸುವ, ಜಾತ್ರೆಗೆ ಕರೆದುಕೊಂಡು ಹೋಗಿ ಮೀಠಾಯಿ ಕೊಡಿಸುವ, ಸುಮ್ ಸುಮ್ನೆ ಅತ್ತಾಗ ಮುದ್ದು ಮಾಡುವ, ಪಪ್ಪಿ ಕೊಡಿಸುವ ಅಕ್ಕಾ ನಂಗೂ ಬೇಕಿತ್ತು ಎಂದು.ನಿಜಕ್ಕೂ ಅಕ್ಕಾ ಇದ್ರೆ...ಅಮ್ಮನ ಅರ್ಧ ಜವಾಬ್ದಾರಿ ಇಳಿದಂತೆ. ಅದ್ರಲ್ಲೂ ಹುಡುಗೀಯರಿಗೆ ಅಕ್ಕಾ ಇರ್ಬೇಕು. ಅಮ್ಮನತ್ರ , ಸ್ನೇಹಿತರತ್ರ ಹೇಳಿಕೊಳ್ಳಲಾಗದ ಎಷ್ಟೋ ಬದುಕು-ಭಾವಗಳಿಗೆ ಅಕ್ಕಾ ಕಿವಿಯಾಗಬಹುದು. ಮನೆಯಲ್ಲಿ ಹೇಳಲಾಗದ ಯಾವುದೇ ವಿಚಾರವನ್ನು ಅಕ್ಕನ ಕಿವಿಗೆ ಹಾಕಿಬಿಟ್ಟು..ಅಕ್ಕನ ಹಿಂದೆ ನಿಂತು ನಾವು ಕಿವಿಯಾಗಬಹುದು. ಅಷ್ಟೇ ಅಲ್ಲ, ಮತ್ತೆ ಅಕ್ಕ ತೊಡುತ್ತಿದ್ದ ರಾಶಿ ರಾಶಿ ಬಟ್ಟೆಗಳು ತಂಗಿಯ ಪಾಲಿಗದು ಲಾಭವೇ. ನಾನು ಸಣ್ಣವಳಿರುವಾಗ ನಮ್ಮ ಕ್ಲಾಸಿನ ಕೆಲವು ಹುಡುಗಿಯರು ದಿನಕ್ಕೊಂದು ಬಟ್ಟೆ ಹಾಕೋರು...ಹೊಸತಾ? ಅಂದ್ರೆ ಅದು ಅಕ್ಕಂದು..ಅಕ್ಕನಿಗೆ ಆ ಡ್ರೆಸ್ ಆಗಲ್ಲ..ಅದಕ್ಕೆ ನಂಗೆ ಕೊಟ್ಟಳು ಅನ್ತಾ ಇದ್ರು. ಅಕ್ಕನ ಒಡವೆಗಳನ್ನೆಲ್ಲಾ ಮೈ ತುಂಬಾ ಹಾಕೊಂಡು ಮಿಂಚೋ ಹುಡುಗಿಯರು ಇನ್ನೊಂದೆಡೆ. ಆವಾಗೆಲ್ಲಾ ಛೇ! ನಂಗೂ ಅಕ್ಕಾ ಇರ್ತಾ ಇದ್ರೆ...ಅಂಥ ತುಂಬಾ ಆಸೆಪಟ್ಟಿದ್ದೆ. ಆಮೇಲೆ ಅಕ್ಕನಿಗೆ ಮದುವೆ ಏನಾದ್ರೂ ಇದ್ರೆ..ಮದುವೆ ಮನೆಯಲ್ಲಿ ಮದುವೆ ಬಂದವರ ಕುತೂಹಲವೆಲ್ಲಾ ತಂಗಿ ಮೇಲೆ. ಅದ್ಯಾಕೋ ಗೊತ್ತಿಲ್ಲ...ನಾನು ಹುಟ್ಟಿದಂದಿನಿಂದ ಒಂದೆರಡು ಮದುವೆಗೆ ಹೋಗಿದ್ದೇನೆ. ಅಕ್ಕನಿಗೆ ಮದುವೆ...ಆದ್ರೆ ಮದುಮಗಳಿಗಿಂತ ತಂಗಿಯನ್ನೇ ಜಾಸ್ತಿ ಸಿಂಗಾರ ಮಾಡಿರ್ತಾರೆ. ಅವಳಿಗೂ ಅಕ್ಕನಂತೆ ಸಿಂಗರಿಸಿ ಸೀರೆ ಉಡಿಸ್ತಾರೆ. ಮತ್ತೆ ಎಲ್ಲಿ ಹೋದ್ರೂ ಹಣ್ಣು ಹಣ್ಣು ಅಜ್ಜ-ಅಜ್ಜಿಯರು ಕೂಡ ಮದುಮಗಳನ್ನು ಕೇಳೋ ಬದಲು ವಧುವಿನ ತಂಗಿ ಎಲ್ಲಿ ಅಂತ ಕೇಳ್ತಾರೆ. ನಂಗಿದು ಅಚ್ಚರಿಯಾಗುತ್ತಿತ್ತು. ಮುಂದಿನ ಟಿಕೆಟ್ ತಂಗಿಗೆ ಅಂತಾನೋ? ಯಾಕೋಪ್ಪಾ? ನನಗೂ ಅಕ್ಕಾ ಇರ್ತಾ ಇದ್ರೆ...ನಾನೂ ಅಕ್ಕನ ಮದುವೆಯಲ್ಲಿ 'ಮದುಮಗಳು' ಆಗುತ್ತಿದೆಯಲ್ಲಾ ..ಅಂತ ಅಂದುಕೊಳ್ಳುತ್ತಿದ್ದೆ.
Wednesday, April 8, 2009
ಮೀಸೆ ಜಿರಲೆ ಸಮರದಲ್ಲಿ ನಂದೇ ಮೇಲುಗೈ?!
ಏನು ಬರೆಯಬಹುದು? ವಸ್ತುನೇ ಇಲ್ಲವಲ್ಲ...ಎಂಬ ಚಿಂತೆ ಒಂದು ಬದಿಯಿಂದ ನನ್ನ ತಲೆಯನ್ನು ಕೊರೆಯುತ್ತಿದ್ದರೆ ಥಟ್ಟನೆ ನೆನಪಾಗಿದ್ದು ನನ್ನ ಮನೆಯಲ್ಲಿ ನನಗೂ-ಜಿರಲೆಗೂ ನಡೆದ ಭೀಕರ ಸಮರ. ಕಳೆದ ಅಕ್ಟೋಬರ್ 16ರಂದು ಕೋರಮಂಗಲದ ಸುಂದರ ಮನೆಗೆ ಕಾಲಿಟ್ಟಾಗ ಯಾಕೋ ನನಗೆ ಜಿರಲೆಗಳು ತೀರ ಕಾಟ ಕೊಟ್ಟವು. ಹಲ್ಲಿ, ಜಿರಳೆ,ಇರುವೆ ಗಳಿಲ್ಲದ ಮನೆ ಅದು ಮನೆಯೇ ಅಲ್ಲವ೦ತೆ. ಇವೆಲ್ಲ ನಮ್ಮ ಸಮೀಪ ಸ೦ಬ೦ಧಿಗಳೇನೋ ಅನ್ನುವ೦ತೆ ನಮ್ಮೊದಾನೆ ಸ೦ಘ ಜೀವನ ನಡೆಸುತ್ತ, ನಮ್ಮ ಮನೆಯ ಅ೦ದ, ನೈರ್ಮಲ್ಯವನ್ನು ಹಾಳುಗೆಡವುತ್ತ ನಮ್ಮ ವೈರಿಗಳ೦ತೆ ವರ್ತಿಸ್ತಾವೆ. ಅದ್ಕೇ ಇರ್ಬೇಕು ಕೆಲವರು ಒಲ್ಲದ, ಇಷ್ಟವಿಲ್ಲದ ನೆ೦ಟರನ್ನು "ಹಕ್ಲೆಗಳು"(ತುಳು ಭಾಷೆಯಲ್ಲಿ ಜಿರಲೆಗೆ ಹಕ್ಲೆ ಅಂತಾರೆ) ಅ೦ತ ಜಿರಲೆಗೆ ಹೋಲಿಸಿ ಬೈಯ್ಯುವುದು.
ತಿಂಡಿ ಮಾಡಿಟ್ಟರೆ ಅದರ ಮೇಲೆ ಸವಾರಿ ಮಾಡಿ ಅದನ್ನು ಮತ್ತೆ ತಿನ್ನದಂತೆ ಮಾಡೋದು, ತೊಳೆದಿಟ್ಟ ಪಾತ್ರೆ, ಅಕ್ಕಿ, ತಿಂಡಿ-ತಿನಿಸು ಏನೇ ಮುಚ್ಚಿಡದೆ ಇದ್ದರೆ ಅದರ ಮೇಲೆ ಓಡಾಡಿ ಅದನ್ನು ಮೂಸಿ ನಾವು ಮತ್ತೆ ಅತ್ತ ಹೋಗದಷ್ಟು ಕೆಟ್ಟ ವಾಸನೆ ಬರಿಸುತ್ತಿದ್ದವು. ನನಗಂತೂ ದಿನಾ ಜಿರಲೆ ಓಡಿಸೋದು, ಪಾತ್ರೆ ತೊಳೆಯುವುದು, ಅಂತೂ-ಇಂತೂ ಸ್ವಚ್ಛ ಮಾಡೋದ್ರಲ್ಲೇ ಅರ್ಧ ಸಮಯ ವ್ಯರ್ಥ ಆಗುತ್ತಿತ್ತು. ಎಂಥ ಮಾಡೋದು ಮಾರಾಯ್ರೆ? ಎಲ್ಲಿ ನೋಡಿದ್ರೂ ಜಿರಲೆ ಕಾಟ. ರಾತ್ರಿ ಎದ್ದು ದೀಪ ಹಚ್ಚಿದ್ರೆ ಥರ ಥರ ಓಡಿ ಮೂಲೆ ಮೂಲೆ ಸೇರೋ ಜಿರಲೆಗಳನ್ನು ಕಂಡಾಗ ನಂಗೆ ಸಿಟ್ಟು ಬಂದು ನಿದ್ದೆ ಮಾಡದಿದ್ರೂ ಪರವಾಗಿಲ್ಲ ಒಂದೆರಡು ಕೊಂದು ಮಲಗುತ್ತಿದ್ದೆ. ಅದಕ್ಕೆ ನಮ್ಮ ಓನರ್ ಆಂಟಿ ಒಂದು ಉಪಾಯ ಹೇಳಿದ್ರು...ನೀನು ಜಿರಲೆ ಕಡ್ಡಿ ಹತ್ತಿಸಿಬಿಟ್ಟು..ಒಂದು ಇಡೀ ದಿನಾ ಮನೆ ಬಾಗಿಲು ಹಾಕಿ ನೀ ಹೊರಗಡೆ ಹೋಗಿರು...ಮತ್ತೆ ನೀ ವಾಪಾಸು ಬರುವಾಗ ನಿನ್ನ ರೂಮಲ್ಲಿ ರಾಶಿ ರಾಶಿ ಹೆಣಗಳು ಬಿದ್ದಿರುತ್ತವೆ ಅಂತ. ಒಳ್ಳೆ ಉಪಾಯ ಅನಿಸ್ತು..ಮತ್ತೆ ಶವ ಸಂಸ್ಕಾರ ಎಲ್ಲವನ್ನೂ ನಾನೇ ಮಾಡಬೇಕಲ್ಲಾ...ಅದಕ್ಕೆ ಮನೆಯಿಂದ ಹೊರಗೆ ಹೋಗೋದು ಬೇಡ..ನಾ ಮನೆಯಲ್ಲಿದ್ದುಕೊಂಡೇ ಕಡ್ಡಿ ಹಚ್ಚಿಟ್ಟು. ..ಶವ ಬಿದ್ದ ಹಾಗೇ ಪ್ಲಾಸ್ಟಿಕ್ ಕವರ್ ಗೆ ತುಂಬಿಸಿಬಿಡೋದು ಅಂದುಕೊಂಡು ಹಾಗೇ ಮಾಡಿದೆ. ಹುಡುಗೀಯರು ಮೀಸೆ ಇರೋ ಗಂಡಸರಿಗಿಂತಲೂ ಮೀಸೆ ಇರೋ ಜಿರಳೆಗಳಿಗೆ ಅದಕ್ಕೆ ಹೆದರುತ್ತಾರೆ೦ಬ ನ೦ಬಿಕೆ ಇದೆ. ನಂಗಂತೂ ಯಾರ ಮೀಸೆ ಹೆದರಿಕೆನೂ ಇಲ್ಲ ಬಿಡಿ. ಮೊನ್ನೆ ನಮ್ಮ ಸಾಗರದಾಚೆ ಇರೋ ಅಣ್ಣನೊಬ್ಬ ಹೇಳ್ತಾ ಇದ್ದ, ಆ ಜಿರಲೆಗಳ ಮೀಸೆ ಹಿಡಕೊಂಡು ನನ್ ಹೆಂಡತಿಗೆ ಹೆದರಿಸ್ತಾ ಇದ್ದೆ ಅಂತ.
ಮೊನ್ನೆ ಭಾನುವಾರ. ಬೆಳಿಗ್ಗೆ ಆರು ಗಂಟೆಗೆ ಎದ್ದು ಕಡ್ಡಿ ಹಚ್ಚಿಡುವ ಕೆಲಸ ಮಾಡಿದೆ. ಹಾಸಿಗೆಯಲ್ಲಿದ್ದ ನನ್ನ ತಮ್ಮ ಜಿರಲೆ ಕಡ್ಡಿಯ ಕೆಟ್ಟ ವಾಸನೆಗೆ ಜಿರಲೆ ಥರನೇ ವಿಲವಿಲ ಒದ್ದಾಡತೊಡಗಿದ್ದ. ಒಂದೆಡೆ ಬೈಗುಳಗಳ ಸುರಿಮಳೆ. ನಾನು ಕೈ , ಮೂಗು-ಬಾಯಿಗೆ ಗ್ಲೌಸ್ ಹಾಕೊಂಡು ಕೈಗೆ ಇನ್ನೊಂದು ಪ್ಲಾಸ್ಟಿಕ್ ಕಟ್ಟಿಕೊಂಡು..ಜಿರಲೆ ಕಡ್ಡಿ ವಾಸನೆ ಸಹಿಸಲಾಗದೆ ತಲೆ ತಿರುಗಿ ಜಿರಲೆಗಳು ಪಟಪಟನೆ ನೆಲದ ಮೇಲೆ ಬೀಳುತ್ತಿದ್ದವು. ಮತ್ತೊಂದೆಡೆ ಕೆಟ್ಟ ವಾಸನೆಗೆ ಮೂಲೆಯಿಂದ ಮೂಲೆಗೆ ಓಡಾಡುವ ಜಿರಲೆಗಳು, ಇನ್ನೊಂದೆಡೆ ಸಿಕ್ಕೆಲೆಲ್ಲಾ ತಲೆ ಮೇಲೆ , ಬೆನ್ನ ಮೇಲೆ ಬೀಳೋ ಜಿರಲೆಗಳು, ಜಿರಲೆ ಮರಿಗಳು..ಮನೆಯೆಲ್ಲಾ ಕೆಟ್ಟ ವಾಸನೆ. ಕೆಲವು ಸಾಯುತ್ತಿದ್ದರೆ, ಇನ್ನು ಕೆಲವು ಓಡುವಾಗ ನಾನು ಕೈಯಿಂದ ಹಿಡಿದು ಅದರ ತಲೆಯನ್ನೆಲ್ಲಾ ಜಜ್ಜಿ ಕೊಂದು ಬಿಡುತ್ತಿದ್ದೆ. ಕೊಂದು ಕೊಂದು, ಜಿರಲೆ ಹಿಂದೆ ಓಡಾಡಿ ನನ್ನ ಕೈ- ಕಾಲುಗಳೂ ಸುಸ್ತು ಹೊಡೆದಿದ್ದವು. ಆಶ್ಚರ್ಯವೆಂದರೆ ಅಂದು ಆರು ಗಂಟೆಗೆ ಎದ್ದರೂ ನಾನು ಹಲ್ಲಜ್ಜಿರಲಿಲ್ಲ., ಮುಖ ತೊಳೆದಿರಲಿಲ್ಲ...ತಮ್ಮ ಬೈದುಕೊಳ್ಳುತ್ತಲೇ ಇದ್ದ..ನೀನು ಊರಲ್ಲಿ ಹೊಲದಲ್ಲಿ ಕೆಲಸ ಮಾಡಕೆ ಲಾಯಕ್ಕು ಅನ್ತಾ ಇದ್ದ. ಯಾರು ಏನಂದ್ರೂ ನಂಗಂತೂ ಜಿರಲೆ ಕೊಲ್ಲಲೇ ಬೇಕಿತ್ತು..ಆ ಸಮರದಲ್ಲಿ ನಂಗೆ ಜಯ ಸಿಗಲೇಬೇಕಿತ್ತು.
ಗಂಟೆ ಹನ್ನೊಂದು...ಹೊಟ್ಟೆ ಚುರುಗುಟ್ಟುತ್ತಿತ್ತು. ನನ್ನ ಪ್ರೀತಿಯ ಅಣ್ಣ ನಿರಂಜನಣ್ಣನ ಫೋನ್..
"ನಾ ನಿನ್ನ ಮನೆ ಬಳಿ ಇದ್ದೀನಿ....ಮನೆಯಲ್ಲೇ ಇದ್ದೀಯಾ? ...." ಎಂಥ ಕಿರಿಕಿರಿಯಪ್ಪಾ ಅಂದುಕೊಂಡೆ ಮನಸ್ಸಲ್ಲಿ. ಎಂಥ ಮಾಡೋದು? ನೀವು ಮನೆಗೆ ಬರಬೇಡ ಅನ್ನಕ್ಕೆ ಸರಿಯಾಗಲ್ಲ....ಅದೂ ಮೊದಲ ಬಾರಿಗೆ ಮನೆ ಬಳಿ ಬಂದು ತಂಗಿ ಜೊತೆ ಮಾತನಾಡಬೇಕು ಎಂದು ಖುಷಿಯಿಂದ ಬಂದಿದ್ದಾರೆ. ಯಾರ ಮನಸ್ಸಾದ್ರೂ ಬರೋದು ಬೇಡ ಅನ್ನೋದೇ? ಆಯ್ತು...ಬಾ ಅಣ್ಣ ಅಂದು...ಅಲ್ಲೇ ಪಕ್ಕದಲ್ಲಿನ ಹೊಟೇಲಿನಿಂದ ತಿಂಡಿ ತಂದೆ. ಅಣ್ಣನನ್ನು ಮನೆಯೊಳಗೆ ಕರೆದುಕೊಂಡು ಬರುತ್ತಿದ್ದರೆ...ಕೆ.ಆರ್. ಮಾರ್ಕೆಟ್ ಥರ ಗಜಿಬಿಜಿ ಅನ್ನೋ ಮನೆ ನೋಡಿ ಅಣ್ಣ ಏನಂತಾರೋ ಅನ್ನೋ ಪುಟ್ಟ ಭಯ ಮನಸ್ಸಿನಲ್ಲಿ. ಇರಲಿ ಬಿಡಿ..ಅಣ್ಣ ಏನಾದ್ರೂ ಹೇಳಿದ್ರೆ...ಅವರಿಗೆ ಮಂಗಳಾರತಿ ಮಾಡಿಬಿಡೋದು ಅಂದುಕೊಂಡು ಕರೆದುಕೊಂಡು ಬಂದೆ...,ಜಿರಲೆ ವಾಸನೆ,, ಜಿರಲೆ ಕಡ್ಡಿ ವಾನೆ, ಇನ್ನೊಂದು ಮತ್ತೂ ಪ್ರಾಣ ಭಯದಿಂದ ಓಡಾಡುತ್ತಿದ್ದ ಜಿರಲೆಗಳು! ಬದುಕಿನ ಉಳಿವಿಗಾಗಿ ಹಪಿಹಪಿಸುತ್ತಿದ್ದ ಜಿರಲೆಗಳ ಮಧ್ಯೆ...ನನ್ನಣ್ಣನಿಗೆ ಸೆಟ್ ದೋಸೆ, ಟೀ ನೀಡಿ ಖುಷಿಪಟ್ಟಿದ್ದೆ. ಜೊತೆಗೆ ಅಣ್ಣನಿಂದ ನಾ ಮಾಡಿದ ಟೀಗೂ ಶಹಭಾಷ್ ಗಿರಿ ಸಿಕ್ತು. ಅದು ಮತ್ತೊಂದು ಖುಷಿ. ಯಾವಾಗಲೂ ನಂಗೆ ಅಣ್ಣದಿರಿಂದ ಶಹಭಾಷ್ ಗಿರಿ ಗಿಟ್ಟಿಸಿಕೊಳ್ಳೋದಂದ್ರೆ ಭಾರೀ ಇಷ್ಟ. ಒಂದು ಗಂಟೆ ನನ್ನ ಜೊತೆ ಖುಷಿ ಖುಷಿಯಾಗಿ ಕಳೆದ ಅಣ್ಣ ಮತ್ತೆ ನನ್ನ ಬಿಟ್ಟು ಅವರ ದಾರಿ ಹಿಡಿದರು. ಜಿರಳೆ ಕೊಲ್ಲುವ ಉದ್ದೇಶದಿ೦ದ ಟಿ.ವಿ.ಜಾಹೀರಾತಿನಲ್ಲಿ ತೋರಿಸುವ೦ತೆ ನಾನು ಕೈಗೆ ಗ್ಲೌಸ್ ಹಾಕಂಡು ಸಮರ ಸಿ೦ಹಿಣಿಯ೦ತೆ ಗರ್ಜಿಸುತ್ತ, ಜೀವ ಉಳಿಸಲು ತತ್ತರಿಸುತ್ತಿದ್ದ ಜಿರಲೆಗಳ ಬೆನ್ನಟ್ಟಿ ಹೊಡೆಯುತ್ತಿದ್ದ ದೃಶ್ಯವನ್ನು ಕ೦ಡು ಮೊದಲ ಬಾರಿ ಮನೆಗೆ ಬ೦ದಿದ್ದ ಅಣ್ಣ ಯಾಕೋ ಹೆಚ್ಚು ಮಾತನಾಡಲೇ ಇಲ್ಲ. ನಾನು ಮತ್ತೆ ನನ್ನ ಸಮರ ಮುಂದುವರೆಸಿದ್ದೆ..ಸಮರ ಕಾರ್ಯಾಚರಣೆ ಮುಗಿಸಿ,ಕದನವಿರಾಮ ಘೋಷಿಸಿ, ಮನೆ ಶುಚಿಗೊಳಿಸಿ, ಸ್ನಾನ ಮಾಡಿ ಹೊರಬ೦ದು ಇನ್ನೇನು ಜಿರಳೆ ಗಳ ಸಮಸ್ಯೆ ಬಗೆಹರಿಯಿತು ಎ೦ಬ ಖುಷಿಯಲ್ಲಿ, ಜೊತೆಗೆ ಅಣ್ಣನ ಜೊತೆ ತಿಂಡಿ ತಿಂದ ಖುಷಿಯಲ್ಲಿ ಮನಸ್ಸು ತೂಗು ಉಯ್ಯಾಲೆಯಲ್ಲಿ ನಲಿದಾಡುತ್ತಿದ್ದಾಗ ಸೂರ್ಯ ನೆತ್ತಿಯಿಂದ ಕೆಳಗಿಳಿಯುತ್ತಿದ್ದ. ಒ೦ದು ಪುಸ್ತಕವನ್ನು ಓದಿಗೆ೦ದು ಅಲಮಾರದಿ೦ದ ತೆಗೆಯಹೊರಟಿದ್ದೆ. ಪ್ರತ್ಯಕ್ಷ ವಾಯಿತಲ್ಲ ಇನ್ನೊ೦ದು,ಮತ್ತೊ೦ದು ಜಿರಳೆ. ಇದೊ೦ದು ಮುಗಿಯದ ಸಮಸ್ಯೆ... ನಮ್ಮ ದೇಶವನ್ನು ಕಾಡುತ್ತಿರುವ ಭಯೋತ್ಪಾದಕರಂತೆ, ಸರ್ಕಾರಿ ಕಚೇರಿ, ವಿಧಾನಸೌಧ-ಶಾಸಕರ ಭವನದಲ್ಲಿರುವ 'ಭ್ರಷ್ಟಾಸೂರ'ರಂತೆ!
ಈಗ ಮತ್ತೊಂದು ಸಮರಕ್ಕೆ ಸಿದ್ಧವಾಗುತ್ತಿದ್ದೇನೆ....ಮುಂದಿನ ಸಮರದಲ್ಲಿ ಗ್ಯಾರಂಟಿ ಪೂರ್ತಿ ಗೆಲುವು ನಂದೇ ಎನ್ನೋ ವಿಶ್ವಾಸ ನನ್ನದು.
