Thursday, June 13, 2013

ನನ್ನೆದೆಯ ಮರುವಸಂತ


ಮಗ ಹುಟ್ಟಿದಾಗ ನನ್ನಲ್ಲಿ ಅದೆಂಥ ಸಂಭ್ರಮ? ಊರಮಂದಿಗೆಲ್ಲ ಲಡ್ಡು ಹಂಚಿದ್ದೇ ಹಂಚಿದ್ದು. ಮೇಲಿಟ್ಟರೆ ಕಾಗೆ ಹೊತ್ತೊಯ್ಯುತ್ತೆ, ಕೆಳಗಿಟ್ಟರೆ ಇರುವೆ ಕಚ್ಚುತ್ತೆ ಎಂದು ಅವನ ನನ್ನೆದೆಯಿಂದ ಕೆಳಗೆ ಇಳಿಸಿದ್ದೇ ಕಡಿಮೆ. ಕಂಕುಳಲ್ಲೇ ಹಾಲು ಕುಡಿದು ಅಲ್ಲೇ ನಿದ್ದೆಗೆ ಜಾರುತ್ತಿದ್ದ ನನ್ನ ರಾಜಕುಮಾರ.
ಅದೆಂಥ ಕತೆಗಳನ್ನು ಅವನಿಗೆ ಹೇಳಿದ್ದೆ. ಜೀಜಾಬಾಯಿ ಕಥೆ ಹೇಳಿ "ಮಗನೇ ಶಿವಾಜಿ ನೀನಾಗು'' ಎನ್ನುತ್ತಿದ್ದೆ. ರಾಮಾಯಣ, ಮಹಾಭಾರತದಿಂದ ಹಿಡಿದು ಗಾಂಧೀ, ಅಂಬೇಡ್ಕರ್ನಂಥ ಮಹಾನುಭಾವರ ಕತೆಗಳನ್ನು ಹೇಳಿಸಿಕೊಂಡೇ ನಿದ್ದೆ ಮಾಡುತ್ತಿದ್ದ ನನ್ನ ಮಗ. ಕಥೆ ಹೇಳದಿದ್ದರೆ "ಅಮ್ಮ, ನೀನು ಕತೆ ಹೇಳು'' ಎಂದು ನನ್ನ ಸೆರಗ ಹಿಡಿದು ಜಗ್ಗುತ್ತಿದ್ದ. ನನಗೆ ಕಥೆ ಹೇಳೊದ್ರಲ್ಲೇ ಖುಷಿ. ನನ್ನ ಅಪ್ಪ-ಅಮ್ಮ ಹೇಳಿಕೊಟ್ಟಿದ್ದ ಕಥೆಗಳು, ಅಕ್ಕ-ಪಕ್ಕದವರ ಬಳಿ ಕೇಳಿ ತಿಳಿಕೊಂಡ ಕಥೆಗಳು ಎಲ್ಲವೂ ನನ್ನ ಮಗನಿಗೆ. ಕೆಲವೊಮ್ಮೆ ರಾತ್ರಿಯಿಡೀ ಮಲಗದೆ ಕಥೆ ಹೇಳಿಸಿಕೊಂಡಿದ್ದೂ ಉಂಟು. ಅದೆಂಥ ಕಥೆಯ ಹುಚ್ಚು? ಅವಂಗೆ.
ಕಥೆ ಕೇಳುತ್ತಲೇ ಬೆಳೆದ ಮಗನಿಗೆ ಐದು ದಾಟಿತು. ಶಾಲೆಗೆ ಸೇರಿಸಬೇಕು. "ಹೆಂಗಪ್ಪಾ, ಇಡೀ ದಿನ ನನ್ನ ಮುದ್ದು ಮಗನ ಬಿಟ್ಟಿರಲಿ?'' ಎಂದು ಕಣ್ಣುಗಳು ಮಂಜಾಗಿದ್ದವು. ಅವನಿಗೆ ಹೊಸ ಚಡ್ಡಿ, ಶರ್ಟ್,ಬ್ಯಾಗ್, ಶೂ ಹಾಕಿಸಿ ಸ್ಕೂಲ್ ಗೆ ರೆಡಿ ಮಾಡುವಾಗ ಅದೆಂಥ ಖುಷಿಯ ಹೊಳಪು ನನ್ನೊಳಗೆ?
ಈ ಚಡ್ಡಿ ಹಾಕುವ ಮಗ ಯಾವಾಗ ಪ್ಯಾಂಟ್ ಹಾಕೋನು ಆಗ್ತಾನೆ? ಅನ್ನೋ ಕನಸು ಬೇರೆ. ದಿನಾ ಮುಂಜಾವು ಐದು ಗಂಟೆಗೆ ಎದ್ದು ಅವನಿಗೆ ಬಾಕ್ಸ್ ರೆಡಿ ಮಾಡಿ ಸ್ಕೂಲ್ ಗೆ ಕಳುಹಿಸುವಾಗ ಅದೆಂಥ ಸಂಭ್ರಮ? ಈ ದಿನ, ತಿಂಗಳು, ವರ್ಷಗಳೆಲ್ಲಾ ಉರುಳಿ ಒಮ್ಮೆಲೇ ನನ್ನ ಮಗ 'ದೊಡ್ಡವನಾಗಿಬಿಟ್ಟಿದ್ದರೆ' ಎಷ್ಟು ಚೆನ್ನಾಗಿರುತ್ತಿತ್ತು? ಎಂಬ ಹುಚ್ಚುಚ್ಚು ಕನಸು.
ಅವನು ಏನು ಕೇಳಿದ್ರೂ ಕೊಡಿಸೋದ್ರಲ್ಲಿ ನನಗೊಂದು ಹೊಸ ಖುಷಿ. ಪ್ರತಿ ಮಳೆಗಾಲಕ್ಕೂ ಹೊಸ ಕೊಡೆ ಕೇಳುತ್ತಿದ್ದ. ಕೆಲವೊಮ್ಮೆ ಹೆಣ್ಣುಮಕ್ಕಳಂತೆ ನನಗೆ ಬಣ್ಣದ ಕೊಡೆ ಬೇಕೆಂದು ರಚ್ಚೆ ಹಿಡಿಯುತ್ತಿದ್ದಾಗ ನಗು ಬರುತ್ತಿತ್ತು. ಬೇಸಿಗೆ ರಜೆ ಮುಗಿದ ತಕ್ಷಣ ಹೊಸ ಬಟ್ಟೆ, ಬ್ಯಾಗು, ಪುಸ್ತಕಗಳ ಸಂಭ್ರಮ. ಆ ಪುಸ್ತಕಗಳಿಗೆ ಬೈಂಡ್ ಹಾಕೋದು ಅಬ್ಬಬ್ಬಾ...ಅದೆಂಥ ಕೆಲಸ? ಒಂದೇ ವಾರದಲ್ಲಿ ಅವೆಲ್ಲಾ ಹರಿದು ಚಿತ್ರಾನ್ನವಾಗುತ್ತಿದ್ದವು. ಮತ್ತದೇ ಬೈಂಡ್ ಹಾಕುವ ಕೆಲಸ ನನಗೆ. ಪ್ರೈಮರಿ ಹೇಗೋ ಮುಗಿಯಿತು. ನೋಡು ನೋಡುತ್ತಿದ್ದಂತೆ ಹೈಸ್ಕೂಲು ಕೂಡ ಮುಗಿದೇ ಹೋಯ್ತು. ವರ್ಷಗಳೆಲ್ಲಾ ಹಕ್ಕಿ ತರ ರೆಕ್ಕೆಬಡಿದು ಏಕ್ ದಂ ಹಾರಿಬಿಟ್ಟಾವೆ ಎಂದನಿಸಿತು.
ಕಾಲೇಜು ಸೇರಿದ. ಓದಲು, ಬರೆಯಲು ಸಪರೇಟು ರೂಮ್ ಬೇಕು ಅಂದ. ಮೊಬೈಲ್, ಅದು-ಇದು ಏನೇನೋ ಕೇಳಿದ. ಎಲ್ಲನೂ ಕೊಡಿಸಿದ್ದಾಯಿತು. ಎಲ್ಲವೂ ನನ್ನ ಮಗ ರಾಜಕುಮಾರನಿಗಾಗಿ. ದಿನ, ತಿಂಗಳು, ವರ್ಷಗಳೆಲ್ಲಾ ಉರುಳಿ ನನ್ನ ಮಗ 'ದೊಡ್ಡವನಾಗೇಬಿಟ್ಟ'.

******
ಈಗ ಕನ್ನಡಿಯಲ್ಲಿ ಮತ್ತೆ ಮತ್ತೆ ನನ್ನ ನಾ ನೋಡಿಕೊಳ್ಳುತ್ತೇನೆ. ಕಪ್ಪು ಕೂದಲುಗಳ ನಡುವೆ ಅದೆಷ್ಟು ಚೆನ್ನಾಗಿತ್ತು ನನ್ನ ಬೈತಲೆ? ಆದರೆ, ಈಗ ಬಿಳಿ ಕೂದಲುಗಳ ರಾಶಿ. ಎಲ್ಲವೂ ಗೋಜಲು-ಗೋಜಲು. ಕಾಡಿಗೆ ಹಚ್ಚಿ ಹೊಳೆಯುತ್ತಿದ್ದ ಕಣ್ಣುಗಳು ಆಳಕ್ಕೆ ಹೋದಂಗೆ, ಕಣ್ಣ ಸುತ್ತ ನೆರಿಗೆಗಳು, ಕಪ್ಪು ಕಲೆಗಳು ಮೂಡಿದಂಗೆ ಅನಿಸುತ್ತೆ. ಯೌವನದಲ್ಲಿ ನನ್ನವನ ಮಾತು-ಮಾತಿಗೂ ನಾಚಿ ಕೆಂಪಾಗುತ್ತಿದ್ದ ಕೆನ್ನೆಯ ಬದಿಯಲ್ಲಿದ್ದ ಆ ಚೆಂದದ ಗುಳಿಗಳೂ ಮಾಯವಾಗಿವೆ. ಕಾಲೇಜು ಓದುವಾಗ ಹುಡುಗ್ರೆಲ್ಲಾ ಗುಳಿಚೆಲುವೆ ಎಂದು ರೇಗಿಸುತ್ತಿದ್ದರು. ಮುಖಾನ ಅಂದವಾಗಿಸಲು ಅದೇ ಹಳೆಯ ಬ್ರಾಂಡ್ ಪಾಂಡ್ಸ್ ಪೌಡರ್ ಹಚ್ತೀನಿ. ಬೈತಲೆ ಪಕ್ಕ ಕಾಣುವ ಬೆಳ್ಳಿಕೂದಲುಗಳನ್ನು ಮತ್ತೆ ಮತ್ತೆ ಕೀಳಕೆ ಪ್ರಯತ್ನ ಮಾಡ್ತೀನಿ. ಅದು ಬರಲೊಲ್ಲೆ ಎಂದು ರಚ್ಚೆ ಹಿಡಿಯುತ್ತೆ. ಉಸ್ಸಾಪ್ಪಾ...ಎಂಬ ನಿಟ್ಟುಸಿರು...ಎದೆಯೊಳಗಿಂದ ಹಾವು ಬುಸುಗುಟ್ಟಿದಂತೆ!.
ಎದುರಿಗಿದ್ದ ಮಗ ನೋಡಿ ನಕ್ಕು ಹೇಳುತ್ತಾನೆ. "ಅಮ್ಮಾ...ನಿಜವಾಗ್ಲೂ ನಿನ್ನ ಓಟರ್ ಐಡಿಯಲ್ಲಿ ಇರುವ 'ಡೇಟ್ ಆಫ್ ಬರ್ತ್' ಕರೆಕ್ಟಾ?''
ನನಗಿಂತ ಎತ್ತರಕ್ಕೆ ಬೆಳೆದ ಮಗನ ನೋಡಿ ಕತ್ತೆತ್ತಿ ಕಣ್ಣಲ್ಲೇ ಕೇಳುತ್ತೇನೆ; "ಏಕೆ?''
"ಅಮ್ಮಾ...ಗೆಸ್ ಮಾಡು'' ಎನ್ನುತ್ತಾನೆ.

ನನಗೆ ಮತ್ತೆ ಕನ್ನಡಿಯಲ್ಲಿ ನನ್ನ ನಾ ನೋಡಿಕೊಳ್ಳುವ ಖುಷಿ. ನನ್ನೆದೆಯಲ್ಲಿ ಮರುವಸಂತ.

1 comment:

sunaath said...

ತುಂಬಾ ಸೊಗಸಾದ ಕಲ್ಪನೆ ನಿಮ್ಮದು!