ನೆನಪಿಗೂ ಡಿಲೀಟ್ ಬಟನ್ ಇರುವಂತಿದ್ದರೆ....
ಬೇಡವಾದ, ಇಷ್ಟವಿಲ್ಲದ ನೆನಪುಗಳನ್ನು ಡಿಲೀಟ್ ಬಟನ್ ಒತ್ತಿ ಅಳಿಸಿಬಿಡಬಹುದಿತ್ತು...
ಬೇಕಿದ್ದರೆ ಕಂಟ್ರೋಲ್ ಝಡ್ ಮಾಡಬಹುದಿತ್ತು....
ಎಲ್ಲಿಂದಲೋ ಎರವಲು ಪಡೆಯಬೇಕಿದ್ದರೆ ಕಂಟ್ರೋಲ್ ಕಾಪಿ&ಪೇಸ್ಟ್ ಮಾಡಬಹುದಿತ್ತು...
ಸಾಧ್ಯನಾ? ಮತ್ತೊಂದು ಪ್ರಶ್ನೆ ತಲೆಯೊಳಗೆ.
"ಬೆಳಗ್ಗೆಯಿಂದ ಎಷ್ಟು ಎನ್ ಕ್ವಾರಿ ಅಟೆಂಡ್ ಮಾಡಿದೆ?'' ಬಾಸ್ ಬಂದು ನನ್ನ ಮೇಜು ಮೇಲೆ ಸದ್ದು ಮಾಡಿದ.
"ಸರ್, ಐದು...''
"ಬರೀ ಐದೇ..ಬೆಳಿಗ್ಗೆ 10 ಗಂಟೆಗೆ ಆಫೀಸ್ ಬರ್ತಿಯಾ. ಈಗ ಗಂಟೆ ಐದು. ಇನ್ನು ಒಂದು ಗಂಟೆಯಲ್ಲಿ ಮನೆಗೆ ಹೊರಡುವ ಸಮಯ'' ಬಾಸ್ ಕಣ್ಣು ದೊಡ್ಡದಾಗಿತ್ತು. ಬಾಸ್ ಆತನ ಚೇಂಬರಿಗೆ ತೆರಳಿದ. ಗಾಜಿನ ಪರದೆಯ ಒಳಗಿನಿಂದ ಅವನ ಕಣ್ಣು ನನ್ನ ಮೇಲೆ.
ಮತ್ತೊಂದಷ್ಟು ನೆನಪುಗಳು. ಎದೆಯ ಸೀಳಿ ಹೊರಬಂದವು....
ಅಂದು ನಾನು ಹುಟ್ಟಿದ್ದು, ಚೌತಿ ದಿನ. ಬೆಳಿಗ್ಗೆ 7.20ಕ್ಕೆ.
ಹೆಣ್ಣುಮಗುವೆಂದು ಅಮ್ಮಂಗೆ ಖುಷಿ..
ಅಜ್ಜಿ ಮತ್ತು ಅಪ್ಪ "ಗಂಡು ಮಗು ಬೇಕೆಂದು'' ಗ್ರಾಮದೇವತೆಗೆ ಹರಕೆ ಹೊತ್ತಿದ್ದು ವ್ಯರ್ಥವಾಗಿತ್ತಂತೆ.
ನಾನು ಹುಟ್ಟಿದಾಗ ಅಪ್ಪ ನನ್ನ ನೋಡಲು ಬರಲಿಲ್ಲವಂತೆ..
ಹೆಣ್ಣು ಮಗು...ಮನೆಹಾಳು ಅಂದಿದ್ದನಂತೆ...
ಅಪ್ಪ...!,
ಅವನು ಅಮ್ಮಂಗೆ ಕಷ್ಟ ಕೊಟ್ಟಿದ್ದ. ಮೂಗಿನ ತನಕ ಕುಡಿದು ಮನೆಗೆ ಬಂದು ಅಮ್ಮನ ಹಿಂಸಿಸುತ್ತಿದ್ದ. ಅವನು ನನಗೆ ಬೇಡವಾಗಿತ್ತು...
ಆದರೆ, ಅಮ್ಮ "ಅವನೇ ತಾಳಿ, ಪಾಲಿಗೆ ಬಂದದ್ದು ಪಂಚಾಮೃತ. ಹೊಂದಿಕೊಂಡು ಹೋಗಬೇಕು'' ಎಂಬ ಮಾತಿನಲ್ಲಿ ನಂಬಿಕೆಯಿಟ್ಟಿದ್ದಳು.
ಎಂಥ ಒಳ್ಳೆಯ ಅಮ್ಮ, ಎಷ್ಟು ಕೆಟ್ಟ ಅಪ್ಪ...
ಅವನ ನೆನಪನ್ನು ಡಿಲೀಟ್ ಮಾಡಬೇಕು ಅನಿಸಿತ್ತು..ಬೆರಳು ಡಿಲೀಟ್ ಬಟನ್ ನತ್ತ ಸಾಗಿತ್ತು...
ಥತ್...
ಎನ್ ಕ್ವಾರಿ ಲಿಸ್ಟ್ ಡಿಲೀಟ್ ಆಗೋಯ್ತು...ಎದೆ ಢವಢವ.
"ಓಹ್..ಕಂಟ್ರೋಲ್ ಝಡ್'' ಲಿಸ್ಟು ಮತ್ತೆ ಬಂತು.
ಮತ್ತೆ ಬಿಡದೆ ಕಾಡುವ ನೆನಪುಗಳು....
ಬೆಂಗಳೂರಿಗೆ ಬಂದ ಹೊಸತು. ನಮ್ಮನೆ ಎದುರುಗಡೆ ಮನೆಯಲ್ಲಿ ಯುವತಿ ಇದ್ದಳು. ವಯಸ್ಸು ಮೂವತ್ತೊರಳಗೆ. ಉದ್ದ ಜಡೆಗೆ ಹೂವ ಮುಡಿದರೆ ನೋಡಲು ಇನ್ನೂ ಚೆಂದ. ದಿನಾ ಕಣ್ಣಿಗೆ ಕಾಡಿಗೆ ಹಚ್ಚುತ್ತಾಳೆ, ಕಿವಿಯಲ್ಲಿ ತೂಗಾಡುವ ಓಲೆ, ಮೂಗಿನಲ್ಲಿ ಮಿನುಗುವ ನತ್ತು, ಕೈ ತುಂಬಾ ಬಣ್ಣದ ಬಳೆ. ಮುಂಜಾವು ಸೂರ್ಯ ಅರಳುವ ಹೊತ್ತು ಮನೆಮುಂದೆ ರಂಗೋಲಿ ಇಡುತ್ತಾಳೆ. ನೀಳಜಡೆ ನೆಲದ ಮೇಲೆ ನಲಿದಾಡುತ್ತೆ....
ಅವಳ ಮನೆಯೆದುರು ನಡೆದಾಡಿದರೆ ಅವಳ ಕಾಲಲ್ಲಿದ್ದ ಬೆಳ್ಳಿ ಗೆಜ್ಜೆಯ ಸಪ್ಪಳ ನಮ್ಮನೆ ಅಡುಗೆ ಮನೆಗೂ ಕೇಳಿಸುತ್ತಿತ್ತು. ಮತ್ತೆ ಮತ್ತೆ ಅವಳ ನೋಡುತ್ತಿದ್ದೆ. ಚೆಂದದ ಹುಡುಗಿ ಅವಳು.
ಅವಳು ಕೆಲಸಕ್ಕೆ ಹೋಗುವುದಿಲ್ಲ...ಬೆಳಗ್ಗೆಯಿಂದ ಸಂಜೆ ತನಕ ಮನೆಯೊಳಗೇ ಸಿಂಗಾರವ್ವ. ದಿನಾ ಸಂಜೆ ಒಬ್ಬ ಅರವತ್ತು ದಾಟಿದ ಕಪ್ಪಗಿನ ಗಂಡಸು ಅವಳ ಮನೆಗೆ ಹಾಜರು. ಅವನು ಬರುವ ಹೊತ್ತು ಅವಳು ಕಾಯುವುದು ಶಬರಿ ರಾಮಂಗೆ ಕಾದಿದ್ದನ್ನು ನೆನಪಿಸುತ್ತಿತ್ತು. ಅವನ ಕುತ್ತಿಗೆಯಲ್ಲಿ ಸರಪಳಿಯಂಥ ಚಿನ್ನದ ಸರ, ಕೈಯಲ್ಲಿ ದಪ್ಪ ಬಳೆ.
"ಇವನೇನೋ ರಿಯಲ್ ಎಸ್ಟೇಟ್ ಸರದಾರ. ಅವಳ ಅಪ್ಪನಿರಬೇಕು'' ನನ್ನ ಅನುಮಾನಕ್ಕೆ ಮನಸ್ಸು ಉತ್ತರ ಕೊಟ್ಟಿತ್ತು.
ಪಕ್ಕದ್ಮನೆ ಹೆಂಗಸರು ಮಾತಾಡಿಕೊಳ್ಳುತ್ತಿದ್ದರು, "ಪಾಪ ಆ ಹುಡುಗಿ ಅಮ್ಮಂಗೆ ಎಂಟು ಜನ ಮಕ್ಕಳಂತೆ. ಇವಳು ನಾಲ್ಕನೆಯವಳು. ಅಪ್ಪ ಕಾಯಿಲೆಯಿಂದ ಸತ್ತುಹೋದ. ಹೆಣ್ಣುಮಕ್ಕಳ ಮದುವೆ ಮಾಡಕ್ಕಾಗದ ಅಮ್ಮ ಈ ಮುತ್ತಿನಂಥ ಹುಡುಗಿಗೆ ಎರಡನೇ ಸಂಬಂದ ಕಟ್ಟಿದ್ರಂತೆ. ಆಯಪ್ಪಂಗೆ ಮದುವೆಯಾದರೂ ಮಕ್ಕಳಾಗಿಲ್ಲ ಎಂದು ಇನ್ನೊಂದು ಮದುವೆ ಮಾಡಿಕೊಂಡಂತೆ. ಅದಕ್ಕೆ ದಿನಾ ಮನೆಗೆ ಬಂದು ನೋಡ್ಕೊಂಡು ಹೋಗ್ತಾನೆ...''
ಹಾಳು ನೆನಪುಗಳು...ಮತ್ತೆ ಮತ್ತೆ ಕಾಡ್ತವೆ...
ಸುಮ್ಮನೆ ಬಾಸ್ ಕೈಯಿಂದ ಬೈಗುಳ. ಫೈಲ್ ಡಿಲೀಟ್ ಆಗೋದು...ಎಲ್ಲವೂ ನೆನಪುಗಳಿಂದಲೇ...ಅವುಗಳ ಮೇಲೆ ತುಂಬಾ ಸಿಟ್ಟು ಬಂತು....
ಎದುರುಗಡೆ ಇದ್ದ ಗಡಿಯಾರದಲ್ಲಿ ಕಿರಿಯ ಮುಳ್ಳು ಆರು ತೋರಿಸುತ್ತಿತ್ತು.
ಎನ್ ಕ್ವಾರಿ ಲಿಸ್ಟ್ ಬಾಸ್ ಗೆ ಮೇಲ್ ಮಾಡಿದೆ....
ನನ್ನವನ ಕಾಲ್ "ಬಾ ಬೇಗ...ಗೇಟ್ ಬಳಿ ವೈಟ್ ಮಾಡ್ತಾ ಇದ್ದೀನಿ.."
ಮನಸ್ಸಿನಲ್ಲಿ ಮತ್ತದೇ "ನೆನಪುಗಳನ್ನು ಡಿಲೀಟ್ ಬಟನ್ ಒತ್ತಿ ಅಳಿಸಿಬಿಡುವಂತಿದ್ದರೆ...ಎಷ್ಟು ಚೆಂದ? ಬೇಕಾದ್ದು ಇಟ್ಕೊಂಡು ಬೇಡದ್ದು ಡಿಲೀಟ್ ಮಾಡಬಹುದಿತ್ತು''!