Tuesday, May 5, 2009

ದುಃಖಗಳು ಸಾಯುತ್ತವೆ, ನೆನಪುಗಳು ಸಾಯೊಲ್ಲ..?!

ದುಃಖಗಳು ಸಾಯುತ್ತವೆ, ನೆನಪುಗಳು ಸಾಯೊಲ್ಲ..! ಹೌದು..ನೆನಪುಗಳು ಸಾಯೊಲ್ಲ..ದುಃಖಗಳು ಸಾಯುತ್ತವೆ..ನಿನ್ನೆ ಇದ್ದಕಿದ್ದಂತೆ ಈ ಮಾತು ನನ್ನ ತುಂಬಾ ಕಾಡಿಬಿಡ್ತು.

ನಾನಾಗ ಎರಡನೇ ಕ್ಲಾಸು. ಒಂದು ಸಂಜೆ ಶಾಲೆ ಮುಗಿಸಿ ನಮ್ಮೂರ ಹೊಳೆ ದಾಟಿ ಮನೆ ಸೇರುವಾಗ ಮನೆಯೇ ಸ್ಮಶಾನವಾಗಿತ್ತು. ನನ್ನ ಪ್ರೀತಿಯ ಅಜ್ಜ ನಮ್ಮನ್ನೆಲ್ಲಾ ಬಿಟ್ಟುಹೋಗಿದ್ದರು. ಅಜ್ಜ ಇನ್ನಿಲ್ಲವೆಂದಾಗ ಉಕ್ಕಿ ಬರುವ ದುಃಖವನ್ನು ಸಹಿಸುವುದು ತುಂಬಾ ಕಷ್ಟವಾಗುತ್ತಿತ್ತು. ನನ್ನ ಗುಂಗುರು, ಸಿಕ್ಕು ಹಿಡಿದ ತಲೆಕೂದಲನ್ನು ಎಣ್ಣೆ ಹಾಕಿ ನೀಟಾಗಿ ಬಾಚಿ ಜಡೆಹಾಕುತ್ತಿದ್ದುದು ನನ್ನಜ್ಜ. ಅಜ್ಜ ಎಷ್ಟೇ ಬೈಯಲಿ..ಅಜ್ಜಿಗಿಂತ ಒಂದು ಪಟ್ಟು ಪ್ರೀತಿ ಜಾಸ್ತಿ ನನ್ನಜ್ಜನ ಮೇಲೆ.

ಆ ದಿನ ನನ್ನ ಪ್ರೀತಿಯ ಅಜ್ಜನನ್ನು ಕಳೆದುಕೊಂಡಿದ್ದೆ. ಗಂಡನನ್ನು ಕಳಕೊಂಡ ದುಃಖ ಅಜ್ಜಿಗೆ, ಅಪ್ಪನನ್ನು ಕಳಕೊಂಡ ದುಃಖ ಅಮ್ಮ, ದೊಡ್ಡಮ್ಮ, ಚಿಕ್ಕಮ್ಮನವರಿಗೆ..! ನನ್ನನ್ನು ಸಮಾಧಾನಿಸುವವರು ಯಾರೂ ಇಲ್ಲ..ಆ ಶೋಕಸಾಗರದಲ್ಲಿ ಒಂದಾಗಿ ನಾನೂ ಬಿಕ್ಕಿ ಬಿಕ್ಕಿ ಅತ್ತಿದ್ದೆ. ಅಜ್ಜ ನೀನ್ಯಾಕೆ ನನ್ನ ಬಿಟ್ಟು ಹೋದೆ..ನೀ ಹೋದಲ್ಲಿಗೆ ನನ್ನನ್ನೂ ಕರೆದುಕೊಂಡು ಹೋಗಬಾರದಿತ್ತೆ? ಎಂದು ಗೋಳಾಡುತ್ತಿದ್ದೆ. ಯಾರ ಮಾತುಗಳನ್ನು ಕೇಳದೆ ಅಜ್ಜ ತಣ್ಣಗೆ ಮಲಗಿದ್ದ. ಏನೇನೋ ಶಾಸ್ತ್ರಗಳು..ಜಡಿಮಳೆಯಂತೆ ಕಣ್ಣಿಂದ ಹರಿಯೋ ನೀರನ್ನು ಸರಿಸಿ ಸರಿಸಿ ಅಜ್ಜನ ತಣ್ಣನೆಯ ಮುಖವನ್ನು ನಾ ನೋಡುತ್ತಿದ್ದೆ. ಕೊನೆಗೇ ಬೆಂಕಿಯಲ್ಲಿ ನನ್ನಜ್ಜ ಒಂದಾಗಲೂ ಹೃದಯ ದುಃಖದಿಂದ ಚೀರುತ್ತಿತ್ತು. ನಿಜವಾದ ದುಃಖ ನೋಡಬೇಕಾದ್ರೆ ಸಾವಿನ ಮನೆಗೆ ಹೋಗಬೇಕು..ಎನ್ನೋ ಮಾತು ಮತ್ತೆ ಮತ್ತೆ ನೆನಪಾಗುತ್ತಿತ್ತು.

ಮೊನ್ನೆ ಮನೇಲಿ ಯಾವುದೋ ಒಂದು ಪುಟ್ಟ ವಿಚಾರದ ಕುರಿತು ನಾನೂ-ತಮ್ಮ ಮಾತಿಗಿಳಿಯುತ್ತಿದ್ದಂತೆ ತಮ್ಮ, "ಅಕ್ಕಾ..ನಾವು ಅಜ್ಜ ಸತ್ತಾಗ ಎಷ್ಟು ಅತ್ತಿದ್ದೀವಿ. ಈವಾಗ ಅದು ದುಃಖಂತ ಅನಿಸೋದೇ ಇಲ್ಲ. ಮನುಷ್ಯ ದುಃಖವನ್ನು ಎಷ್ಟು ಬೇಗ ಮರೀತಾನೆ..ಆದರೆ ಅದ್ರ ನೆನಪು ಮಾತ್ರ ಹಾಗೇ ಇರುತ್ತಲ್ಲಾ.." ಅಂದಾಗ ನನ್ನ ಮನಸ್ಸಲ್ಲಿ 'ಹೌದು ದುಃಖಗಳು ಸಾಯುತ್ತವೆ, ನೆನಪುಗಳು ಸಾಯೊಲ್ಲ" ಎನ್ನೋ ಮಾತು ಮತ್ತೆ ಮತ್ತೆ ಗುನುಗುತ್ತಾನೇ ಇತ್ತು.

ಸಾವಿನ ಮನೆಯ ದುಃಖ ಮಾತ್ರವಲ್ಲ..ಎಷ್ಟೋ ಬಾರಿ ಪುಟ್ಟ ಪುಟ್ಟ ವಿಚಾರಗಳು ನಮಗೆ ತೀರ ನೋವು ಕೊಡುತ್ತವೆ. ನಿತ್ಯ ಅಮ್ಮನ ತೆಕ್ಕೆಯಲ್ಲೇ ನಿದ್ದೆಯ ಮಂಪರಿಗೆ ಜಾರುತ್ತಿದ್ದ ನಾನು ಎಸ್ ಎಸ್ಎಲ್ ಸಿ ಪಾಸಾಗಿ ದೂರದ ಹಾಸ್ಟೇಲಿಗೆ ಬರಬೇಕಾದ್ರೆ ವಾರಗಟ್ಟಲೆ ದಿಂಬು ಒದ್ದೆಯಾಗಿಸಿದ್ದೆ. ಹಾಸ್ಟೇಲಿನಲ್ಲಿ ನಾ ಒಂಟಿ ಒಂಟಿ ಎಂದು ಬಾತ್ ರೂಮಿಗೆ ಹೋಗಿ ಅಳ್ತಾ ಇದ್ದೆ. ಪಿಯುಸಿಯಲ್ಲಿ ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಗೆಳತಿ ದೂರದ ಬೆಂಗಳೂರಿಗೆ ಹಾರಿದಾಗ ತಿಂಗಳುಗಟ್ಟಲೆ ಕಣ್ಣೀರು ಸುರಿಸಿದ್ದೆ. ಪದವಿ ವಿದಾಯ ಸಮಾರಂಭದಲ್ಲಿ ನನ್ನೆಲ್ಲಾ ಕನಸು-ಕಲ್ಪನೆಗಳಿಗೆ ಮೂರ್ತ ರೂಪ ನೀಡಿದ ಗುರುಹಿರಿಯರ ಮುಖ ನೋಡುತ್ತಲೇ ವೇದಿಕೆಯನ್ನು ಕಣ್ಣೀರಾಗಿಸಿದ್ದೆ. ಪದವಿ ಮುಗಿದು ಬೆಂಗಳೂರಿಗೆ ಬಂದಾಗ ಅಯ್ಯೋ ಬೆಂಗಳೂರೇ ಬೇಡ ಮರಳಿ ಊರಿಗೆ ಹೋಗ್ತೀನಿ ಎಂದು ರಚ್ಚೆ ಹಿಡಿದಿದ್ದೆ. ನಮ್ಮನೆಯ ಪ್ರೀತಿಯ ನಾಯಿ 'ಕರಿಯ' ಬಾವಿಗೆ ಬಿದ್ದು ಸತ್ತಾಗ, ನನ್ನ ಮುದ್ದಿನ ಹಸು ಅಕತಿಯನ್ನು ಅಮ್ಮ ಮಾರಿಬಿಟ್ಟಾಗ.....ನಾನೆಷ್ಟು ಅತ್ತಿದ್ದೇ? ...ಇಲ್ಲೆಲ್ಲಾ ಸಹಿಸಲಾಗದ ಅಸಹನೀಯ ದುಃಖದ ಮಡುವಿನಲ್ಲಿ ನಾ ಬಿದ್ದು ಹೊರಳಾಡಿದ್ದೆ..!

ತುಂಬಾ ಪ್ರೀತಿಸಿದ ನಿತ್ಯ ಭರವಸೆಯ ನುಡಿಯಾಗಿದ್ದ ಜೀವದ ಗೆಳೆಯ ಕೈಬಿಟ್ಟಾಗ ನೀನಿಲ್ಲದೆ ನಾ ಹೇಗಿರಲಿ ಎಂದು ನಿತ್ಯ ಮಡಿಲಾಗಿದ್ದ ಗೆಳತಿ ದೂರವಾದಾಗ, ಬದುಕಿನ ಯಾವುದೋ ಘಟ್ಟದಲ್ಲಿ ಅನಿವಾರ್ಯತೆಗೆ ಸಿಲುಕಿ ಸಂಬಂಧಗಳನ್ನೇ ಕಳೆದುಕೊಂಡಾಗ ಮನಸ್ಸು ಎಷ್ಟು ನೋವು ಪಡುತ್ತೆ? ಆದರೆ ಇಲ್ಲೆಲ್ಲಾ..ದಿನಕಳೆದಂತೆ ಈ ದುಃಖಗಳು ಸಾಯುತ್ತವೆ..ಬರೇ ನೆನಪುಗಳನ್ನಷ್ಟೇ ಉಳಿಸಿಬಿಟ್ಟು! ಕಹಿಯಾಗೋ..ಸಿಹಿಯಾಗೋ..ಮತ್ತೆ ಮತ್ತೆ ಕಾಡೋ ನೆನಪುಗಳಷ್ಟೇ ಬದುಕಿನ ಹಾದಿಯ ನಮ್ಮ ಹೆಜ್ಜೆಯಲ್ಲಿ ನೆರಳಂತೆ ಹಿಂಬಾಲಿಸುತ್ತವೆ ಅಲ್ವೇ? ಹೌದು. ಇದೂ ಒಳ್ಲೆಯದೇ..ದುಃಖಗಳು ಸಾಯಬೇಕು, ನೆನಪುಗಳು ಉಳಿಯಬೇಕು, ಖುಷಿಯ ಕ್ಷಣಗಳಷ್ಟೇ ನಿತ್ಯ ನಮ್ಮನ್ನು ಕಾಡುವ, ಖುಷಿಯೊಳಿಸುವ ಹುಣ್ಣಿಮೆಯಂತೆ ಪಸರಿಸಬೇಕು.

ಅದಕ್ಕೇ ತಾನೇ ಹೇಳೋದು 'ಕಾಲವೇ ನೋವಿಗೆ ಮದ್ದು' ಅನ್ನೋದು....ಅಲ್ವಾ?