Saturday, March 3, 2012

ನನಗೊಬ್ಳು ನಾದಿನಿ ಬಂದ್ಳು


ನನಗೊಬ್ಬನೇ ತಮ್ಮ. ಅಮ್ಮನ ಜೊತೆಗೆ ಕೃಷಿಗೆ ಯಜಮಾನ. ಮೊನ್ನೆ-ಮೊನ್ನೆ ಅವನಿಗೂ ಮದುವೆ ಆಯಿತು. ನನ್ನ ಮದುವೆ ಹಳ್ಳಿ ಸೊಬಗನ್ನೆಲ್ಲಾ ಮೈತುಂಬಿಸಿಕೊಂಡಿರಲಿಲ್ಲ. ಆದರೆ, ತಮ್ಮನಿಗೆ ಚಾನ್ಸ್ ಸಿಕ್ಕಿತು. ಹಸಿರು ವನದ ನಡುವಿರುವ ನಮ್ಮನೆಯಲ್ಲೇ ಮದುವೆ.

ವಾರದ ಮೊದಲೇ ಮನೆಯಂಗಳದಲ್ಲಿ ತೆಂಗಿನ ಮಡಲಿನ ಚಪ್ಪರದ ಶೃಂಗಾರ. ಮಾವಿನ ತಳಿರುಗಳ ತೋರಣ ಚಪ್ಪರಕ್ಕೆ ರಂಗು ತಂದಿತ್ತು. ಅಗಳವಾದ ಅಂಗಳ. ಸುತ್ತಲೂ ಅಮ್ಮ ನೆಟ್ಟ ಹೂವಿನ ಗಿಡಗಳು. ನಮ್ಮನೆಯ ಬಾವಿಯಲ್ಲಿ ನೀರಿಗೆ ಬರವಿಲ್ಲ, ಹಾಗಾಗಿ, ಹೂವಿನ ಗಿಡಗಳೂ ಹಸುರು ಹಸುರಾಗಿವೆ. ಅಂಗಳದಿಂದ ಇಳಿಯುತ್ತಲೇ ತೋಟ, ಸುತ್ತಮುತ್ತ ದೊಡ್ಡ ದೊಡ್ಡ ಮರಗಳು. ಮದುವೆಗೆಂದು ಸಿಂಗಾರಗೊಂಡ ಮನೆಯೇ ಮದುಮಗಳಂತೆ ಕಂಗೋಳಿಸುತ್ತಿತ್ತು.

ಮದುವೆಗೆ ತಮ್ಮನದೇ ಓಡಾಟ. ಅಮ್ಮನಿಗೆ ಆರೋಗ್ಯದ ಚಿಂತೆ. ದೂರದೂರಿನಲ್ಲಿ ಗಂಡನ ಹುಡುಕಿದ ನನಗೆ ಮನೆ ಹತ್ತಿರವಿರಬಾರದಿತ್ತೇ ಅನಿಸುತ್ತಿದೆ ನಿಜ. ತಮ್ಮನ ಮದುವೆಗೆ ನಾನೇ ಓಡಾಟ ಮಾಡಬೇಕನಿಸಿತ್ತು. ಅನಿವಾರ್ಯ ಬದುಕು. ಬೆಂಗಳೂರಲ್ಲಿ ಇನ್ನೊಂದು ಅಮ್ಮ ಸಿಕ್ಕಿದ್ದಾರೆ, ಅದು ಅತ್ತೆಮ್ಮ. ಮೂರು ದಿನಗಳ ಮೊದಲು ತವರು ಸೇರಿದೆ. ತಮ್ಮನಿಗೆ ಗಡಿಬಿಡಿ.
ಮದುವೆ ಗಂಡಿಗೆ ರೆಸ್ಟ್ ಇಲ್ಲ. ಜೊತೆಗೆ ವಾರದ ಮೊದಲೇ ತಯಾರಿ. ಸುತ್ತಮುತ್ತಲಿನ ಗೌಡ್ರ ಹೆಂಡ್ತಿಯರು ಮನೆಯಲ್ಲಿ ಠಿಕಾಣಿ.ನಮ್ಮ ಅಪ್ಪನ, ಅಜ್ಜಿಯ ಕಡೆಯವರೆಲ್ಲಾ ಮನೆ ತುಂಬಿಕೊಂಡಿದ್ದರು. ಮಾತು, ಹಾಸ್ಯ, ನಗು, ಖುಷಿ-ಖುಷಿಯ ಜಾತ್ರೆ. ನನ್ನ ಅಜ್ಜನ ಕಡೆಯವರು ಆರು ಮಂದಿ ಅತ್ತಿಗೆ ಆಗಬೇಕಾದವ್ರು ಇದ್ದಾರೆ. ಎಲ್ಲರೂ ಎರಡು ದಿನ ಮೊದಲೇ ಮನೆ ಸೇರಿದ್ದರು. ಅವರು ಬಂದ್ರೆ ಸಾಕು ಮನೆಯಲ್ಲಿ ಜನಜಾತ್ರೆ. ಅಡುಗೆ ಮನೆಯಲ್ಲೂ ಅವರದೇ ಕಾರುಬಾರು. ನಮ್ಮನೆಯ ಹಿಂದೆ ಅಡುಗೆಗೆಂದೇ ಚಪ್ಪರದ ಹಾಲ್ ರೆಡಿಯಾಗಿತ್ತು. ಸುತ್ತಮುತ್ತಲಿನ ಮನೆಗಳಿಂದಲೇ ಪಾತ್ರೆಗಳನ್ನು ತಂದದ್ದಾಯಿತು.ಇದಕ್ಕೇನೂ ಬಾಡಿಗೆ ರೊಕ್ಕವಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಕೆಲ್ಸ. ಸಾಗಣಿ ಸಾರಿದ ಅಂಗಳದಲ್ಲೇ ತರಕಾರಿ ಹಚ್ಚುವ ಕೆಲಸ

ಮದುವೆಗೆ ಮೊದಲ ದಿನ ಮದರಂಗಿ ಶಾಸ್ತ್ರ. ರಾತ್ರಿಯಿಡೀ ಪರಸ್ಪರ ಅಂಗೈಯಲ್ಲಿ ಚಿತ್ತಾರ ಬಿಡಿಸುವ ಕೆಲಸ. ಆಗಾಗ, ನಡುರಾತ್ರಿಯಲ್ಲೂ ಪಟಾಕಿಗಳ ಸದ್ದು. ಯಾರಿಗೂ ನಿದ್ದೆಯಿಲ್ಲ. ಹಾಡು-ಆಟಗಳಲ್ಲೇ ಕಳೆದುಹೋಗುವ ಸಮಯ. ಚಂದ್ರ ಮರೆಯಾಗಿ ಸೂರ್ಯ ಕಾಣುವ ತನಕವೂ ಮಾತಿನ ಜಾತ್ರೆ.

ಸೂರ್ಯ ಮೇಲೆರುವ ಹೊತ್ತಿಗೇ ಹೆಣ್ಣಿನ ಕಡೆಯವರ ದಿಬ್ಬಣ. ಲುಂಗಿ-ರುಮಾಲು ಸುತ್ತಿದ ಬಂಟರು. ಮೈ ತುಂಬಾ ಒಡವೆಯಲ್ಲಿ ಸೀರೆಯುಟ್ಟ ಹೆಂಗಳೆಯರ ನಗೆಚೆಲುವು. ತೋಟದಲ್ಲೆಲ್ಲಾ ಓಡಾಡಿ ಖುಷಿಪಡುವ ಪುಟಾಣಿಗಳ ಕಲರವ. ಮದುವೆಯಾಗದ ಗಂಡುಮಕ್ಕಳ ಕಣ್ಣಲ್ಲಿ ಹುಡುಕಾಟ. ನನ್ನ ಯಾರು ನೋಡುತ್ತಾರೋ ನಾಚಿಕೆಯಲ್ಲಿ ಮುದುಡಿದ ಹುಡುಗಿರ ಕಣ್ಣುಗಳು. ಅಕ್ಕನ ಜೊತೆಗೆ ಆಗಾಗ ಕ್ಯಾಮರಾಕ್ಕೆ ಪೋಸು ಕೊಡುವ ಮದುಮಗಳ ತಂಗಿ. ಚಿನ್ನ-ಬಣ್ಣಗಳಿಂದ ದೂರವಿದ್ದ ನನಗೆ ಅಮ್ಮನಿಂದ ಬೈಗುಳ. ಕೈ ತುಂಬಾ ಬಳೆ ಹಾಕು, ಒಡವೆ ಹಾಕೋ, ಮುಡಿಗೆ ಹೂವ ಮುಡಿ, ನೀಟಾಗಿ ಸೀರೆಯುಟ್ಟುಕೋ,..ಹೇಳಿ ಹೇಳಿ ಅಮ್ಮನಿಗೇ ಸುಸ್ತು. ಮಗಳ ಬಗ್ಗೆ ಕೊಂಚ ಕೋಪ. ಅಂತೂ ಮದುವೆ ಮುಗಿಯಿತು. ಮನೆಗೆ ಮಗಳೊಬ್ಬಳು ಬಂದ ಖುಷಿ ಅಮ್ಮನಿಗೆ, ಹೆಂಡ್ತಿ ಬಂದ ಖುಷಿ ತಮ್ಮನಿಗೆ, ಅಮ್ಮನ ಮಾತುಗಳಿಗೆ ಕಿವಿಯಾಗಿ, ಬದುಕಿಗೆ ಸಾಥ್ ನೀಡುವ ಗಟ್ಟಿಗಿತ್ತಿ ನಾದಿನಿ ಬಂದ ಖುಷಿ ನನಗೆ.