Tuesday, October 16, 2012

ಅಜ್ಜಿ ಮತ್ತು ಟಿಕೆಟ್


ನನ್ನ ಕಾಲದಲ್ಲಿ ಮಾರ್ಕೆಟ್ಟಿಗೆ ನಡೆದುಕೊಂಡು ಹೋಗ್ತಿದ್ದೆ ಕಣವ್ವಾ..ಎಂದು ಎಪ್ಪತ್ತರ ಅಜ್ಜಿ ನಕ್ಕು ನನ್ನ ಹತ್ತಿರ ಬಂದು ಕುಳಿತುಕೊಂಡಳು. ವೀಳ್ಯದೆಲೆ ತಿಂದು ಬಾಯಿ ಕೆಂಪಾಗಿತ್ತು. ಮೂಗಿನಲ್ಲಿ ಹಳೇ ಕಾಲದ ದೊಡ್ಡ ನತ್ತು ಮಿನುಗುತ್ತಿತ್ತು. ಸೊಂಟದಲ್ಲಿ ಕಾಸಿನ ಚೀಲ. ನೋಡಕ್ಕೂ ಲಕ್ಷಣವಾಗಿದ್ದ ಅಜ್ಜಿಯ ಮಾತಿಗೆ ಹ್ಲೂಂಗುಡದೆ ವಿಧಿಯಿಲ್ಲ.

ನಮ್ಮನೆ ಸಮೀಪ ಬಸ್ ಹತ್ತಿದರೆ ಮಾರುಕಟ್ಟೆಗೆ ಸುಮಾರು 10 ಕಿ.ಮೀ. ದೂರ. ಅಜ್ಹಿ ಮಾತು ಮುಂದುವರೆಸಿದಾಗ ಕಿವಿಯಲ್ಲಿದ್ದ ಇಯರ್ ಫೋನ್ ತೆಗೆದು ಬ್ಯಾಗ್ ಗೆ ತುಂಬಿಸಿಕೊಂಡೆ. 'ನಾನು ನಿನ್ ತರ ಇದ್ದಾಗ ಮಾರ್ಕೆಟ್ಟಿಗೆ ನಾಲ್ಕಾಣೆ ಟಿಕೆಟ್ ಕಣವ್ವಾ. ನಾಲ್ಕಾಣೆ ಸಂಪಾದಿಸಕೂ ಕಷ್ಟದ ಕಾಲ ಅದು. ಬಸ್ ಗೆ ಕೊಡೋ ನಾಲ್ಕಣೆಯಲ್ಲಿ ಬುಟ್ಟಿ ತುಂಬಾ ಹೂವ ಬರುತ್ತಿತ್ತು ತಾಯಿ. ಈಗ ಒಂದು ಮೊಳಕ್ಕೆ 20 ಕೊಡ್ಬೇಕು. ಆಗ ನೋಡು, ನಾಲ್ಕಾಣೆಗೆ ಐದು ಕೆ.ಜಿ. ಹೂವ ಸಿಗೋದು. ಏನ್ ಕಾಲ ಬಂತವ್ವಾ?' ಎಂದು ಕಿಟಕಿ ಪಕ್ಕ ಕುಳಿತ ನನ್ನ ಸರಿಸಿ, ವೀಳ್ಯದೆಲೆಯನ್ನು ಕ್ಯಾಕರಿಸಿ ಹೊರಗೆ ಉಗಿದಳು.

ಏನೂ ಅಂದ್ಕೋಬೇಡ ಕಣವ್ವಾ, ಬಾಯಲ್ಲಿ ಇಟ್ಟುಕೊಂಡು ನನಗೆ ಅಭ್ಯಾಸ ಇಲ್ಲ ಅಂದಳು. ಪರ್ವಾಗಿಲ್ಲಮ್ಮಾ ಅಂದೆ. ನಂಗೆ ಮಾರ್ಕೆಟ್ಟಿಗೆ 10 ರೂ. ಇತ್ತು. ಈಗ 12 ಆಗಿದೆ. ಏನ್ ರೇಟೋ? ಟಿಕೆಟ್, ತರ್ಕಾರಿ, ಪೆಟ್ರೋಲ್, ಗ್ಯಾಸ್ ಎಲ್ಲನೂ ಜಾಸ್ತಿ ಮಾಡವ್ರೆ. ದಿನಾ ಬಂದ್. ನಮ್ಮೊಂಥರಿಗೆ ಕಷ್ಟ. ಮೊನ್ನೆಬಂದ್ ಆಯಿತಲ್ಲಾ...ಹೂವ ತರಕೆ ಮಾರ್ಕೆಟ್ಟಿಗೆ ಬರ್ಬೇಕಿತ್ತು.  ಎರಡು ದಿನ ವ್ಯಾಪಾರ ಇಲ್ಲ. ಒಂದು ದಿನ ವ್ಯಾಪಾರ ಇಲ್ಲಾಂದ್ರೆ ಒಂದು ದಿನದ ಊಟ ಇಲ್ಲಮ್ಮಾ..ಎಂದು ಮತ್ತೊಮ್ಮೆ ನನ್ನ ಪಕ್ಕ ಸರಿಸಿ ಉಗಿದಳು. ಕಳೆದ ಸಲ ನಮ್ಮ ಮನೆಪಕ್ಕದ ಸಾಹುಕಾರಪ್ಪ ಎಲೆಕ್ಷನ್ ದಿನ ನಮ್ಮನೆಗೆ ಕಾರು ತಕೋ ಬಂದು ಹತ್ತಿಸಿಕೊಂಡಿದ್ದ. ಇಂಥ ಚಿಹ್ನೆಗೆ ಓಟು ಹಾಕ್ಬೇಕು ಅಂದಿದ್ದ. ಒಂದು ಸಾವಿರ ರೂಪಾಯಿನೂ ಕೊಟ್ಟಿದ್ದ. ನಾನು ಹಂಗೇ ಮಾಡಿದ್ದೆ ಕಣವ್ವಾ. ಅವನದೇ ಸರ್ಕಾರ ಬಂತು. ಆದ್ರೆ, ಈ ಬಾರಿಯಂತೂ ನಾನು ಓಟು ಹಾಕಕೇ ಹೋಗಲ್ಲ. ಈ ಪರಿ ರೇಟು ಮಾಡಿದ್ರೆ ಏಕಮ್ಮಾ ಓಟು ಹಾಕೋದು?...ಎನ್ನುತ್ತಿದ್ದ ಅಜ್ಜಿ ಕೈಚೀಲದಲ್ಲಿದ್ದ ಪುಡಿ ಚಿಲ್ಲರೆಯನ್ನು ತೆಗೆದು ನನ್ನ ಅಂಗೈಯಲ್ಲಿಟ್ಟು ಎಣಿಸಿಕೊಡು ಎಂದಳು.

ಅಂದಹಾಗೆ, ನಿನ್ ಊರು ಯಾವುದು? ಎಲ್ಲೋಗ್ಬೇಕು ಎಂದು ಪರಿಚಯನೂ ಮಾಡಿಕೊಂಡ ಅಜ್ಜಿ. ನನ್ನ ಮುಖವನ್ನೊಮ್ಮೆ ದಿಟ್ಟಿಸಿ ನೋಡಿದಳು. ಲಕ್ಷಣವಾಗಿದ್ದೀಯಾ, ಆದರೆ, ಒಂದು ಕೈಗೆ ಯಾಕೆ ಬಳೆ ಹಾಕಿಲ್ಲ ಎಂದು ಕೇಳಬೇಕೆ? ಹೆಣ್ಣು ಮಕ್ಕಳು ಹೂವ ಮುಡ್ಕೊಂಡು, ಕೈಗೆ ಬಳೆ ತೊಟ್ಟು ಲಕ್ಷಣವಾಗಿರಬೇಕು ಕಣಮ್ಮಾ. ಮುತ್ತೈದೆಯರಿಗೆ ಕೈಲೀ ಬಳೆ ಇರ್ಬೇಕು ಎಂದು ಉಪದೇಶ ಮಾಡಿದಳು. ನಿತ್ಯ ಬಳೆ ತೊಡುತ್ತಿದ್ದ ನಾನು ಅಂದು ಅರ್ಜೇಂಟಾಗಿ ಬಸ್ ಹತ್ತಿದ್ದೆ!. ಅಜ್ಜಿಯ ಮಾತಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಬಸ್ ಕೆ.ಆರ್. ಸರ್ಕಲ್ ಸಿಗ್ನಲ್ ನಲ್ಲಿ ನಿಂತಿತ್ತು. ಅಜ್ಜಿ ಇನ್ನೂ ಜಾಸ್ತಿ ಮಾತಾಡುತ್ತೆ ಎಂದೇಳಿ, ಮತ್ತೆ ಕಿವಿಗೆ ಇಯರ್ ಫೋನ್ ಇಟ್ಟೆ. ನನ್ ಕೈಯಲ್ಲಿದ್ದ ಐಪಾಡ್ ನೋಡಿ, "ಇದೇನು ಮಗಾ? ಮೊಬೈಲಾ?' ಅಂತ ಕೇಳಬೇಕೆ. ಅದನ್ನು ವಿವರಿಸಿ ಸುಮ್ಮನಾಗಿಬಿಟ್ಟೆ.


ಇನ್ನೇನೋ ಒಂದು ಸ್ಟಾಪ್, ಮಾರ್ಕೆಟ್ ಬಂದುಬಿಡುತ್ತೆ ಅನ್ನುವಾಗ ಅಜ್ಜಿ ಮತ್ತೆ ಮಾತಿಗೆ ಶುರುಮಾಡಿತ್ತು. ನೋಡವ್ವಾ, ನಂಗೆ ನಿನ್ ವಯಸ್ಸಿನ ಮೊಮ್ಮಕ್ಕಳು ಇದ್ದಾರೆ. ತುಂಬಾ ಮಾತಾಡಿಬಿಟ್ಟೆ. ಬೇಜಾರು ಮಾಡಬೇಡ ತಾಯಿ. ಒಳ್ಳೆದಾಗ್ಲಿ...ಅಂದುಬಿಟ್ಟಳು. ಕೂದಲು ಪೂರ್ತಿ ಬೆಳ್ಳಿಯಾಗಿದ್ದ ಅಜ್ಜಿ, ಜ್ಞಾನಕ್ಕೆ ಮನಸ್ಸಲ್ಲೇ ಸಲಾಂ ಅಂದೆ.