Tuesday, May 29, 2012

ಪ್ರಜಾವಾಣಿಯಲ್ಲಿ "ಧರಿತ್ರಿಯ ಚಿತ್ರಗಳು "



ಧರಿತ್ರಿ! ಇದು ಬ್ಲಾಗ್ ಹೆಸರು. ಇಲ್ಲಿನ ಬರಹಗಳಿಗೆ ಬಂದಿರುವ ಕಮೆಂಟುಗಳನ್ನು ಆಧರಿಸಿ ಹೇಳುವುದಾದರೆ ಬ್ಲಾಗಿತಿಯ ಹೆಸರು ಚಿತ್ರಾ. ತಮ್ಮ ಬಗ್ಗೆ ಹೆಚ್ಚೇನೂ ಹೇಳಿಕೊಳ್ಳದ ಚಿತ್ರಾ- `ನನ್ನೂರು ಕರಾವಳಿ ತೀರ. ಅಮ್ಮ, ಬದುಕು, ಪ್ರೀತಿ ಅಂದ್ರೆ ಅಕ್ಕರೆ` ಎಂದು ಸಕ್ಕರೆಯಂತೆ ಮಾತನಾಡಿ ಸುಮ್ಮನಾಗುತ್ತಾರೆ. 


ಕರಾವಳಿ ತೀರದ ಈ ಹೆಣ್ಣುಮಗಳು ಈಗ ಬೆಂಗಳೂರು ನಿವಾಸಿ ಎನ್ನಲಿಕ್ಕೆ ಅವರ ಬರಹಗಳೇ ಸಾಕ್ಷಿಯಾಗಿವೆ. ಮಲ್ಲೇಶ್ವರದಲ್ಲಿ ಕೊಂಡ ಅವರ ಕೊಡೆಗೀಗ ಮೂರನೇ ಮಳೆಗಾಲವಂತೆ. ಬೆಂಗಳೂರಿನಲ್ಲಿ ಬಿಸಿಲನ್ನೇ ಹೆಚ್ಚು ನೋಡಿರುವ ಅವರ ಕೊಡೆ, ಈಚೆಗೆ ಮಂಗಳೂರಿಗೆ ಹೋಗಿದ್ದಾಗ ಭರ್ಜರಿ ಮಳೆಯಲ್ಲಿ ಒದ್ದೆಯಾಯಿತಂತೆ. 


ಬೆಂಗಳೂರಿನ ಕೊಡೆ ಮಾತ್ರವಲ್ಲ, ಬಾಲ್ಯದ ದಿನಗಳ ಬಗೆಬಗೆ ಕೊಡೆಗಳ ಬಗ್ಗೆಯೂ ಅವರ ನೆನಪಿನ ಲಹರಿ ಹರಿದಿದೆ. ಯಜಮಾನರ ರೇನ್‌ಕೋಟ್ ಬಗ್ಗೆಯೂ ಚಿತ್ರಾ ಆಪ್ತವಾಗಿ ಬರೆದಿದ್ದಾರೆ. ಆಪ್ತತೆ ಯಾಕೆಂದರೆ, ಅದು ಅಪ್ಪ ಕೊಡಿಸಿದ ರೇನ್‌ಕೋಟು!


`ಬೆಳಗು ಇಬ್ಬನಿಯ ನಗು ಚೆಂದ`, `ಜೀವನ ಪ್ರೀತಿಯ ಅನುಭೂತಿ` ಎನ್ನುವುದು `ಧರಿತ್ರಿ` (http://dharithrick.blogspot.in) ಶೀರ್ಷಿಕೆಯ ಅಡಿಬರಹಗಳು. ಇಬ್ಬನಿಯ ನಗು ಮತ್ತು ಜೀವನ ಪ್ರೀತಿ ಎರಡರ ಆರ್ದ್ರತೆಯೂ ಅವರ ಬರಹಗಳಲ್ಲಿದೆ. ಊರಿನ ನೆನಪುಗಳು, ಅಲ್ಲಿನ ಜನ-ಜೀವನ, ಬೆಂಗಳೂರಿನಲ್ಲಿ ಕಂಡ ಚಿತ್ರಗಳು- ಹೀಗೆ ಚಿತ್ರಾ ಕಾಣಿಸುವ `ಭಾವಚಿತ್ರ`ಗಳು ಸಾಕಷ್ಟು. ಅವರ ಬರಹಕ್ಕೆ ಕಥನ ಗುಣವೂ ಇದೆ.


ಮಗಳ ಮಡಿಲು ತುಂಬಲೆಂದು ದೇವರುಗಳ ಪ್ರಾರ್ಥಿಸುತ್ತಿದ್ದ ಅಪ್ಪನನ್ನು ನೆನಪಿಸಿಕೊಳ್ಳುವ ಈ ಹೆಣ್ಣುಮಗಳು ಬರೆಯುತ್ತಾರೆ: “ಮೊನ್ನೆ ನಮ್ಮ ಮದುವೆಗೆ ಎರಡು ವರ್ಷ. ಕಳೆದ ವರ್ಷ ದೇವರ ಮನೆಯಲ್ಲಿ ಅಪ್ಪ-ಅಮ್ಮ ಇಬ್ಬರೂ ನಿಂತು ಅಕ್ಷತೆ ಹಾಕಿ ಹರಸಿದ್ದರು. ಈ ಬಾರಿ ಅಮ್ಮ ಒಬ್ಬಳೇ ಇದ್ದಳು! ವರಾಂಡದಲ್ಲಿದ್ದ ಅಪ್ಪನ ಫೋಟೋಗೆ ಮಲ್ಲಿಗೆ ಹಾರ ಹಾಕಿ ನಮಸ್ಕರಿಸಿದೆ. ನನ್ನ ಕಣ್ಣುಗಳು ಒದ್ದೆಯಾದವು. ಅಪ್ಪ ತುಟಿ ಬಿಚ್ಚಲಿಲ್ಲ, ಮೊಮ್ಮಗು ಎಲ್ಲಿ ಎಂದು ಕೇಳಲಿಲ್ಲ. ಕಪ್ಪಗಿನ ದಪ್ಪ ಕನ್ನಡಕದೊಳಗಿನಿಂದ ನನ್ನ ನೋಡಿದ. ಅಪ್ಪ ಕೋಪಿಸಿಕೊಂಡಿರಬೇಕೆಂದು ನಾನೂ ಮಾತಿಲ್ಲದೆ ಸುಮ್ಮನಾದೆ”. ವೇದನೆ ಹಾಗೂ ಪ್ರಾರ್ಥನೆ ಎರಡನ್ನೂ ಕಥೆಯ ಚೌಕಟ್ಟಿನೊಳಗೆ ಒಳಗೊಂಡ ಈ ಬರಹ ಓದುಗರ ಕಣ್ಣನ್ನೂ ಒದ್ದೆಯಾಗಿಸುತ್ತದೆ.


`ಭೂತಾಯಿಗೆ ಕಾಗೆ ಮುಟ್ಟುವುದು!`- `ಧರಿತ್ರಿ` ಕಣಜದಲ್ಲಿನ ಮತ್ತೊಂದು ಸೊಗಸಾದ ಬರಹ. ಚಿತ್ರಾ ಬರೆಯುತ್ತಾರೆ-
ಇವತ್ತು ಭೂತಾಯಿಗೆ ಕಾಗೆ ಮುಟ್ಟಿದೆ. ನೀವು ಜಾಸ್ತಿ ಜಗ್ಳ ಆಡಬಾರದು. ಜಗ್ಳ ಆಡಿದ್ರೆ ಭೂಮಿತಾಯಿ ಬೇಜಾರುಪಟ್ಕೊಳ್ತಾಳೆ... ಅಮ್ಮ ಬೆಳ್ಳಂಬೆಳಿಗ್ಗೆ ರೊಟ್ಟಿ ತಟ್ಟುತ್ತಾ ಹೇಳುತ್ತಿದ್ದಳು. ಒಲೆ ಮೇಲೆ ಕಲ್ಲಿನ ಕಾವಲಿಯಲ್ಲಿ ರೊಟ್ಟಿ ಬೇಯುತ್ತಿತ್ತು. ಮೊದಲ ರೊಟ್ಟಿ ನನಗೇ ಸಲ್ಲಬೇಕೆನ್ನುವುದು ತಮ್ಮನ ವಾದ. ಇದೇ ಸಿಟ್ಟಲ್ಲಿ ಒಲೆಯೊಳಗಿದ್ದ ಕಟ್ಟಿಗೆಯನ್ನು ಹಿಂದೆ-ಮುಂದೆ ಜಾರಿಸುತ್ತಿದ್ದ. ನನಗೆ ಕೊಡೆಂದು ಅಮ್ಮನ ಸೆರಗು ನಾನು ಹಿಡಿದುಕೊಂಡಿದ್ದೆ. 


ಅಮ್ಮನ ಮಾತು ಒಗಟು. ಅರೆ! ಕಾಗೆ ಮುಟ್ಟುವುದಕ್ಕೂ, ನಾವು ಜಗ್ಳ ಆಡೋದಕ್ಕೂ ಏನು ಸಂಬಂಧ? ಅಮ್ಮನ ಕೇಳಿಯೇ ಬಿಟ್ಟೆ.
`ನೋಡು ಪಕ್ಕದ್ಮನೆ ಲಲಿತಕ್ಕ ಕಾಗೆ ಮುಟ್ಟಿದೆ ಅಂತ ತಿಂಗ್ಳಲ್ಲಿ ಮೂರು ದಿನ ಹೊರಗಡೆ ಕೂರ‌್ತಾಳೆ. ಆಗ ಅವಳಿಗೆ ಅವ್ಳ ಅಮ್ಮ ಏನೂ ಕೆಲ್ಸ ಕೊಡಲ್ಲ. ಮನೆ ಹಿಂದಿನ ಕೋಣೆಯಲ್ಲಿ ಲಲಿತಕ್ಕ ಸುಮ್ಮನೆ ಮಲಗಿರ‌್ತಾಳೆ. ಹಂಗೆ, ಭೂಮಿತಾಯಿಗೂ ಕಾಗೆ ಮುಟ್ಟಿದೆ. ಅವಳಿಗೆ ನೋವು ಕೊಡಬಾರದು, ಸಿಟ್ಟು ಮಾಡಿ ಜಗಳ ಮಾಡಿಕೊಂಡ್ರೆ ಅವಳಿಗೆ ಬೇಜಾರಾಗುತ್ತೆ. ನೀವು ಸುಮ್ಮನಿರಬೇಕು` ಎಂದು ಹೇಳುತ್ತಿದ್ದಳು.


`ಹಾಗಾದ್ರೆ ಲಲಿತಕ್ಕನ ತರ ಭೂತಾಯಿಗೂ ತಿಂಗಳಿಗೊಮ್ಮೆ ಕಾಗೆ ಮುಟ್ಟುತ್ತಾ?` ತಮ್ಮನ ಮಾತು ಅಮ್ಮನನ್ನು ಪೇಚಿಗೆ ಸಿಲುಕಿಸಿತ್ತು. `ಮನುಷ್ಯರು ತಿಂಗಳಿಗೊಮ್ಮೆ, ಭೂತಾಯಿ ವರ್ಷಕ್ಕೊಮ್ಮೆ` ಎಂದಷ್ಟೇ ಹೇಳಿ, ನಮ್ಮಿಬ್ಬರಿಗೆ ಬೈದು ಸುಮ್ಮನಾಗಿಸುತ್ತಿದ್ದಳು. ಅಮ್ಮನ ಮಾತು ನಂಬಿದ ನಾವಿಬ್ಬರೂ ಜಗಳವಾಡದೆ ಸುಮ್ಮನಿರುತ್ತಿದ್ದೆವು. 
ವರ್ಷದಲ್ಲಿ ಒಂದು ಸಲ ಭೂತಾಯಿಗೆ ಕಾಗೆ ಮುಟ್ಟುತ್ತಿತ್ತು. ಅಮ್ಮ ತುಳಸಿ ಗಿಡದ ಪಕ್ಕದಲ್ಲಿ ಮಸಿಯಿಂದ ಚೌಕ ತರ ಮಾಡಿ, ಅಲ್ಲಿ ಸೀಗೆಕಾಯಿ, ಮಸಿ ತುಂಡು ಇಡುತ್ತಿದ್ದಳು. ನಾಲ್ಕನೇ ದಿನಕ್ಕೆ ಅದೇ ಜಾಗದಲ್ಲಿ ಸೆಗಣಿ ಸಾರಿ, ಬಾಳೆಲೆ ಹಾಕುತ್ತಿದ್ದಳು. ಬಳಿಕ ಅದರ ಮೇಲೆ ಎಣ್ಣೆ, ಅರಿಶಿನ, ಕುಂಕುಮ, ಬಳೆ, ಹೂವುಗಳನ್ನು ಇಟ್ಟು ಭೂಮಿಗೆ ಎಣ್ಣೆ ಬಿಡುತ್ತಿದ್ದಳು. `ಭೂಮಿತಾಯಿ ಸ್ನಾನ ಮಾಡಿಕೊಂಡು ಬಂದಿರ‌್ತಾಳೆ` ಎನ್ನುವ ಅಮ್ಮ, ಒಂದು ಎಲೆಯಲ್ಲಿ ರೊಟ್ಟಿ, ಸಾರು ಹಾಕಿಡುತ್ತಿದ್ದಳು. 
ಭೂತಾಯಿ ತಿಂದ ಮೇಲೆ ನಾವು ಅಂಗಳದಲ್ಲೇ ಕುಳಿತು ತಿನ್ನುತ್ತಿದ್ದೆವು. ತುಳುವಿನಲ್ಲಿ ಪುಯಿಂತೆಲ್ (ಮಕರ ಮಾಸ) ತಿಂಗಳಿನ ಕೊನೆಯ, ಅಂದ್ರೆ 27, 28, 29ನೇ ದಿನ ಕೆಡ್ಡಸ ಎಂದು ಆಚರಿಸುತ್ತಾರೆ. ಆ ಮೂರು ದಿನವೂ ಭೂಮಿತಾಯಿಗೆ ನೋವಾಗುವ ಯಾವುದೇ ಕೆಲಸಗಳನ್ನು ಅಮ್ಮ ಮಾಡುತ್ತಿರಲಿಲ್ಲ, ತೋಟದ ಕೆಲಸಗಳಿಗೆ ರಜೆ, ಹೊಲ ಗದ್ದೆಗಳಲ್ಲೂ ಹಾರೆ-ಗುದ್ದಲಿಗಳ ಸದ್ದಿಲ್ಲ. ಸಾಮಾನ್ಯವಾಗಿ ಜನವರಿ-ಫೆಬ್ರುವರಿ ತಿಂಗಳಲ್ಲಿ ಈ ಹಬ್ಬ ಬರುತ್ತದೆ. ಇಂದು ಅಮ್ಮನೂ ಕೆಡ್ಡಸ ಮರೆತುಬಿಡ್ತಾರೆ”.


ಇದು ಚಿತ್ರವತ್ತಾದ ಬರಹ ಅಲ್ಲವೇ?


"ಪ್ರಜಾವಾಣಿಗೆ ಥ್ಯಾಂಕ್ಸ್ "


http://prajavani.net/include/story.php?news=8495&section=56&menuid=13