ಮಳೆಯೇ ಶಿವರಾಯ ಓ ತಂದೆ
ಯಾವ ದೇವರಿಲ್ಲ ನಿನ ಮುಂದೆ..
ಯಾವತ್ತೋ ಕೇಳಿದ ಜನಪದ ಹಾಡಿನ ಸಾಲುಗಳು ಮತ್ತೆ ಮತ್ತೆ ನನ್ನೊಳಗೆ ಗುನುಗಿದವು. ಇತ್ತೀಚೆಗೆ ಬೆಂದ ಕಾಳೂರಿನ ಇಳೆಯಂಗಳಕ್ಕೆ ತುಂತುರು ಮಳೆ ಹನಿ ಸ್ಪರ್ಶಿಸಿದಾಗ ನೆನಪುಗಳ ಮೆರವಣಿಗೆಯಲ್ಲಿ ನನ್ನದೂ ಪುಟ್ಟ ಪಯಣವಾಗಿಸಿದ್ದೆ. ಬಾಲ್ಯದ ಭಾವಗೀತೆಗಳನ್ನು ತುಂತುರು ಮಳೆಹನಿಯ ಝೇಂಕಾರದೊಂದಿಗೆ ಮೆಲುಕುಹಾಕಿದ್ದೆ. ತಣ್ಣನೆಯ ಗಾಳಿ, ಮುತ್ತಿನ ನೀರ ಹನಿಗೆ ಸಂಭ್ರಮಗೊಂಡ ಪುಟ್ಟ ಮಕ್ಕಳು, ಮೊದಲ ಮಳೆ ಹನಿಯ ಸ್ಪರ್ಶದಿಂದ ಪುಳಕಿತಗೊಂಡ ಇಳೆ, ಗೂಡು ಸೇರುವ ತವಕದ ಹಕ್ಕಿಗಳ ಕಲರವ ಧರಿತ್ರಿಯಲ್ಲೂ ಒಂದು ಬಗೆಯ ಸಂಭ್ರಮದ ಹಬ್ಬವಾಗಿಸಿತ್ತು. ಹ್ಲಾಂ..ನೀವೇ ಓದಿದ್ರಲ್ಲಾ..ತುಂತುರು ಮಳೆಯಲ್ಲಿ ನೆನಪುಗಳ ಮೆರವಣಿಗೆ!!
ಆದರೆ, ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಸುರಿವ ಜಡಿಮಳೆ ಅದೇಕೋ ನನ್ನೊಳಗಿನ ಬೆಚ್ಚಗಿನ ಭಾವಕ್ಕೆ ಸಾಥ್ ನೀಡುತ್ತಿಲ್ಲ. ರಪರಪನೆ ಸುರಿವ ಮಳೆಹನಿಗಳಿಗೆ
ಕನಸುಗಳು ಗೂಡು ಕಟ್ಟೊಲ್ಲ. ಮುತ್ತಿನ ಹನಿಗಳ ಜೊತೆ ಆಡಿಬಿಡೋಣ ಎಂದೂ ಅನಿಸಲ್ಲ. ಮನೆಯೊಳಗೆ ಕುಳಿತು ಹಪ್ಪಳ ಸಂಡಿಗೆ ಮೆಲ್ಲುತ್ತಾ ವರುಣನ ಭೂ ಚುಂಬನ ನೋಡಿ ಖುಷಿಪಡೋಣ ಅಂದ್ರೂ ಈ ಬೆಂಗ್ಳೂರು ಮಳೆ ಮನೆ ಸೇರಕ್ಕೆ ಮೊದಲೇ ಗುಡುಗು-ಸಿಡಿಲ ಆರ್ಭಟ ಹೊತ್ತು ತಂದು ಮನಸ್ಸನ್ನೇ ಮುದುಡಿಸಿ ಬಿಡುತ್ತೆ. ಹೌದು, ಆ ಸಂಜೆಗೂ-ಬೆಂಗಳೂರಿನಲ್ಲಿ ಸುರಿಯೋ ಮಳೆಗೂ ಅದೇನೋ ಬಂಧ ..ಸಂಜೆಯಾಗುವಾಗಲೇ ಧೋ ಎಂದು ಮಳೆ ಸರಿಬೇಕಾ!
ಥತ್! ಕೆಟ್ಟ ಸಿಟ್ಟು ಬಂದು ಬಿಡುತ್ತೆ. ಈ ಮಳೆಯನ್ನು ಅನುಭವಿಸೋಕೆ ಆಗೊಲ್ಲ ಅಂತ ಅಲ್ವಾ? ಅಂತ ನಿರಾಶೆಯ ಕರಿಮೋಡ ನನ್ನನ್ನೇ ಆವರಿಸಿಬಿಡುತ್ತೆ.
ಮೊನ್ನೆ ಸುರಿದ ಜಡಿಮಳೆಗೆ ಬೆಂಗಳೂರಿನ ಡಾಂಬರ್ ರಸ್ತೆಗಳೆಲ್ಲ ಹಳ್ಳ-ಹೊಳೆ, ಮಹಾನದಿಗಳಾಗಿದ್ದವು. ಬಿರುಸಿನಿಂದ ಬೀಸಿದ ಗಾಳಿಯ ಅಟ್ಟಹಾಸಕ್ಕೆ ನನ್ನ ಪ್ರೀತಿಯ ಛತ್ರಿಯ ಬೆನ್ನೆಲುಬುಗಳೆಲ್ಲಾ ಮುರಿದು ನುಜ್ಜು-ಗುಜ್ಜಾಗಿ, ಆ ಮುದ್ದಿನ ಛತ್ರಿ ನನ್ನೆದೆ ಅಪ್ಪಿಕೊಂಡು ಮಲಗಿಬಿಟ್ಟಿತ್ತು. ಕಾಲಲ್ಲಿದ್ದ ಕಪ್ಪಗಿನ ಶೂ ಮಣ್ಣು ಮೆತ್ತಿಕೊಂಡು ನನ್ನನ್ನೂ ಹೊರಲಾಗದೆ ಬಸವಳಿದಿತ್ತು. ಮಳೆ ಬಿದ್ದ ರಭಸಕ್ಕೆ ನನ್ನ ದೇಹ ಸೋತು ಸುಣ್ಣವಾಗಿತ್ತು. ಅಟೋ ಎಂದು ಕೈಹಿಡಿದರೆ 2-3 ಕಿಮೀಗೂ 100 ಮೇಲೆ ಕೇಳಿದ್ರೆ ನಾ ಹ್ಯಾಂಗ ಕೊಡಲಿ? ಎಂದು ಮುನಿಸಿಕೊಂಡಿದ್ದೆ ..ಅಟೋ ಮಂದಿ ಜೊತೆ! ಬಸ್ಸು ಹುಡುಕಾಡಿದರೆ ನೀರ ಮೇಲೆ ನಿಂತ ಬಸ್ಸುಗಳು ಕದಲದೆ, ಅಲ್ಲೇ ಜಾಮ್ ಆಗಿಬಿಟ್ಟಿದ್ದವು. .! ಈ ಬೆಂಗಳೂರು ಮಳೆ ಅಂದ್ರೆ ಹಂಗೇ..ಅಯ್ಯೋ ಕರ್ಮಕಾಂಡ ಬೇಡವೇ ಬೇಡ..ಅಂದ ಶಾಪ ಹಾಕುತ್ತಾ ರಪರಪನೆ ಕೆನ್ನೆ ಮೇಲೆ ಬಡಿದ ಮಳೆಹನಿಯನ್ನು ಒರೆಸಿಕೊಳ್ಳುತ್ತಾ ಮಳೆರಾಯನ ಜೊತೆ ಕೋಪಿಸಿಕೊಂಡೆ..ಬಾ ಮಳೆಯೇ..ಎಂದು ಮನಸ್ಸು ಹಾಡಲೇ ಇಲ್ಲ!
ಹೌದು, ಈ ಬೆಂಗಳೂರಲ್ಲಿ ಮಳೆ ಬಂದ್ರೆ..ಹಂಗೆ ರಸ್ತೆಗಳೆಲ್ಲಾ ನದಿಗಳಾಗಿಬಿಡೋದು. ಕೇಬಲ್, ಟೆಲಿಫೋನ್ ನವರು ಅಗೆದ ಗುಂಡಿಗಳು, ಬಿಬಿಎಂಪಿ ಅವರ ಕರ್ಮಕಾಂಡ ಕೆಲಕೆಲಸಗಳಿಗೆ ರಸ್ತೆಯನ್ನೆಲ್ಲಾ ಅಗೆದು ಎತ್ತರ-ತಗ್ಗು ಮಾಡಿ, ಈ ಜಡಿಮಳೆಗೆ ನಡೆದು ಹೋಗೋರು ಆ ಗುಂಡಿಯಲ್ಲಿ ಬಿದ್ರೂ ಕೇಳೋರು ಯಾರಿಲ್ಲ. ಬೇಸಿಗೆ, ಮಳೆ, ಚಳಿಗಾಲ...ಹೀಗೆ ಎಲ್ಲಾ ಕಾಲದಲ್ಲೂ ಈ ರಸ್ತೆಗಳ ಬದಿ ಗುಂಡಿಗಳನ್ನು ತೋಡುತ್ತಾನೆ ಇರೋರು ಬಿಬಿಎಂಪಿಯವ್ರು! ಮೊನ್ನೆ ಮೊನ್ನೆ ನಾನೂ ನಿಂತ ನೀರ ಮೇಲೆ ನಡೆದು ಪಾದಗಳು ಧೊಪ್ಪನೆ ಗುಂಡಿಯೊಳಗೆ ಬಿದ್ದಾಗ ನನ್ನ ಎತ್ತಿದ್ದು ನನ್ನ ಕಲೀಗ್.
ಮೊನ್ನೆ ಮಳೆಗಾಲ ಆರಂಭವಾದಾಗ ಬಿಬಿಎಂಪಿ ಆಯುಕ್ತರು, ನಾವು ಮಳೆ ಎದುರಿಸೋಕೆ ರೆಡಿ ಎಂದು ತೊಡೆ ತಟ್ಟಿ ಹೇಳಿದ್ದಾರೆ! ಆದರೆ ಕಳೆದ ಸಲನೂ ಅವರು ಹಾಗೇನೇ ಹೇಳಿ..ಕೊನೆಗೆ ಜೋರು ಮಳೆಗೆ ಮನೆ-ಮನೆಗೆಲ್ಲಾ ನೀರು ನುಗ್ಗಿದಾಗ ಪ್ರತಿಷ್ಠಿತ ಬಡಾವಣೆಗಳಿಗೆ ಮಾತ್ರ ಹೋಗಿ ವಾಪಾಸಾಗಿ ಕೊನೆಗೆ ಮಾಧ್ಯಮದಲ್ಲೆಲ್ಲಾ ಬಿಸಿಬಿಸಿ ಸುದ್ದಿಯಾದಾಗ ಒಂದೆರಡು ಕೊಳಗೇರಿಗಳಿಗೆ ಹೋಗಿ ಕೈತೊಳೆದುಕೊಂಡ್ರು.
ಇರಲಿ ಬಿಡಿ..ಈ ಬೆಂಗಳೂರಿನಲ್ಲಿ ಭೋರ್ಗರೆವ ಮಳೆ ಅದೇಕೋ ನಂಗೆ ಹಳ್ಳಿಯ ಮುಗ್ಧತೆ, ಖುಷಿಯ ಕಚಗುಳಿ ತರುತ್ತಿಲ್ಲ. ಜಡಿಮಳೆಗೆ ನಮ್ಮೂರ ತೋಟದಲ್ಲಿ ಹಸಿರೆಳೆಗಳನ್ನು ನೋಡುತ್ತಾ ನೆನೆದ ಸಂಭ್ರಮ ತರುತ್ತಿಲ್ಲ! ಥತ್..ಇರಲಿಬಿಡಿ...!!
Friday, May 22, 2009
Subscribe to:
Posts (Atom)