Sunday, September 27, 2009

ಬದುಕನ್ನು ಪ್ರೀತಿಸಿದಷ್ಟೇ ಸ್ವಾಭಿಮಾನವನ್ನೂ ಪ್ರೀತಿಸ್ತೀನಿ...

ಹೌದು, ಯಾಕೋ ಸ್ವಾಭಿಮಾನದ ಬಗ್ಗೆ ಬರೆಯೋಣ ಅನಿಸ್ತಾ ಇದೆ. ಸ್ವಾಭಿಮಾನಕ್ಕೆ ಬಿದ್ದ ಪುಟ್ಟ ಪೆಟ್ಟು ಕೂಡ ಆ ಬಗ್ಗೆ ನಮ್ಮನ್ನು ಮತ್ತೆ ಮತ್ತೆ ಈ ಬಗ್ಗೆ ಯೋಚಿಸುವಂತೆ ಮಾಡುತ್ತೆ, ಕಾಡುತ್ತೆ ಅಲ್ವಾ?

ಸ್ವಾಭಿಮಾನ. ..! ನನಗೂ, ನಿಮಗೂ ಅದು ಇದೆ...ಬದುಕುವ ಪ್ರತಿಯೊಬ್ಬರಿಗೂ ಇದೆ. ಹುಟ್ಟುವಾಗ ಸ್ವಾಭಿಮಾನ ಅಂದರೆ ಏನು ಗೊತ್ತಿರಲಿಲ್ಲ. ಅಮ್ಮ ಆಗಾಗ ಬದುಕಿಗೆ ಬೇಕಾಗುವಷ್ಟು ಹೇಳಿಕೊಡುತ್ತಿದ್ದ ಸ್ವಾಭಿಮಾನದ ಪಾಠ ಪ್ರತಿಹೆಜ್ಜೆಯಲ್ಲೂ ನೆನಪಾಗುತ್ತಿದೆ.'ಮಗು ಸ್ವಾಭಿಮಾನ ಬಿಟ್ಟು ಬದುಕಬೇಡಮ್ಮಾ...'ಅನ್ನುತ್ತಿದ್ದಳು ಪ್ರೀತಿಯ ಅಮ್ಮ. ಬಡತನ ಬೇಗೆಯಲ್ಲಿ ನರಳುತ್ತಿರುವಾಗಲೂ ಪ್ರತಿ ಅಮ್ಮ ಹೇಳಿಕೊಡುವ ಪಾಠ ಅದು ಸ್ವಾಭಿಮಾನದ ಬದುಕು. ನಮ್ಮಮ್ಮ ನಿಮ್ಮಮ್ಮ ಹೇಳಿಕೊಡುವ ಬದುಕಿನ ಮೊದಲ ಪಾಠ ಸ್ವಾಭಿಮಾನದ ಬದುಕು ಅಲ್ವೇ?

ಹೌದು,
ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಅದೆಷ್ಟು ನೋವಾಗುತ್ತೆ ಅಲ್ವಾ? ಅದೇ ಆಫೀಸ್ನಲ್ಲಿ ಬಾಸ್, ಆತ್ಮೀಯ ಗೆಳೆಯ, ಪ್ರೀತಿಯ ಗೆಳತಿ....ಯಾರೇ ಆಗಲೀ ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟಾಗ ಮನಸ್ಸೆಷ್ಟು ನೋಯುತ್ತೆ ಅಲ್ವಾ? ಹೌದು, ಹಗಲಿಡೀ ಬೆನ್ನು ಮುರಿದು ಕೆಲಸ ಮಾಡಿದರೂ ಬಾಸ್ ಬೈತಾನೆ..ಥತ್ ನೀನು ಕೆಲಸಕ್ಕೆ ನಾಲಾಯಕ್ಕು ಅಂತಾನೆ. ಯಾರದೋ ಕೋಪವನ್ನು ತಮ್ಮ ಮೇಲೆ ತೀರಿಸಿಕೊಳ್ಳೋ ಬಾಸ್ , ನಮ್ಮ ಹೆಸರಿನ ಮುಂದಿರುವ ಡಿಗ್ರಿಯನ್ನು ಅಣಕಿಸುತ್ತಾನೆ. ಓದಿದ್ದು ವ್ಯರ್ಥ, ಕಲಿತದ್ದು ವ್ಯರ್ಥ, ನಿನ್ನ ಮಿದುಳಿನಲ್ಲಿ ಏನೂ ಇಲ್ಲ..ಅಂತಾ ಬಿಸಿಬಿಸಿಯಾಗಿ ಬೈತಾನೆ. ಹೊಟ್ಟೆಪಾಡು...ಮೈಯೆಲ್ಲಾ ಬೆಂಕಿ ಹರಿದರೂ ಬಾಯಿ ಮೌನವಾಗುತ್ತೆ. ಒಳಗೊಳಗೆ ಮನಸ್ಸು ನೋವು ಪಡುತ್ತೆ ಅಲ್ವಾ?

ನಾನೂ ಅಷ್ಟೇ..ಬದುಕನ್ನು ಪ್ರೀತಿಸಿದಷ್ಟೇ ಸ್ವಾಭಿಮಾನವನ್ನೂ ಪ್ರೀತಿಸ್ತೀನಿ. ಅದೇಕೋ ಗೊತ್ತಿಲ್ಲ..ಯಾರೇ ಆಗಲೀ ಸ್ವಾಭಿಮಾನಕ್ಕೆ ಹರ್ಟ್ ಆಗೋ ಏನು ಹೇಳಿದ್ರೂ ನಂಗೆ ಸಹಿಸಕ್ಕಾಗಲ್ಲ. ಥಟ್ಟನೆ ಎದುರು ಮಾತಾಡ್ತೀನಿ. ಅವರನ್ನು ಅಲ್ಲೇ ನಿರಾಕರಿಸಿ ಬಿಡ್ತೀನಿ. ಮತ್ತೆಂದೂ ಅವರನ್ನು ನನ್ನ ಕಣ್ಣುಗಳು ತಿರುಗಿ ನೋಡಲ್ಲ, ಅವರ ಜೊತೆ ಮಾತಾಡಬೇಕೆಂದು ಮನಸ್ಸಿಗೆ ಹೇಳೊಲ್ಲ, ಅವರ ಕುರಿತು ಕಿಂಚಿತ್ತೂ ಗೌರವ ಮೂಡಲ್ಲ, ಪ್ರೀತಿ ಮೂಡಲ್ಲ, ಕಾಳಜಿ, ಅನುಕಂಪ ಮೂಡಲ್ಲ. ಒಂದು ರೀತಿಯಲ್ಲಿ ಸಮಸ್ತ ಬಾಂಧವ್ಯಗಳು ಅವರಿಂದ ಕಳಚಿಬಿಡುತ್ತೆ. ಇದಕ್ಕೆ ನೀವೂ ಹೊರತಾಗಿಲ್ಲ ಅಂದುಕೊಂಡಿದ್ದೀನಿ.

ಒಂದು ಪುಟ್ಟ ಘಟನೆ. ನಾನು ನಿತ್ಯ ನೋಡೋ ಆಂಟಿ ಒಬ್ರು ಇದ್ದಾರೆ. ಆಂಟಿ ಒಳ್ಳೇ ಮನಸ್ಸಿನವರೇ. ಆದರೆ ಅದೇಕೇ ಗಂಡನಿಗೆ ಹೊಡೀತಾರೆ ಗೊತ್ತಾಗಲ್ಲ. ಪಾಪ, ಗಂಡನಿಗೆ ಹೊಡೆದು ಬಂದು ಅದನ್ನೇ ಅವರಿಗೆ ನಾಲ್ಕು ಕೊಟ್ಟೆ ಅನ್ತಾರೆ. ನಮಗೇ ಅಸಹ್ಯ ಆಗಿಬಿಡುತ್ತೆ. ಪಾಪ ಆ ಗಂಡ ಯಾರ ಮುಖನೂ ನೋಡಲ್ಲ. ನನಗನಿಸೋದು ಆ ಗಂಡನಿಗೆ ಸ್ವಲ್ಪನೂ ಸ್ವಾಭಿಮಾನ ಇಲ್ವಾ? ಅದನ್ನು ಮಾರಿಟ್ಟು ಹೆಂಡತಿ ಜೊತೆ ಬದುಕಬೇಕಾ? ಛೇ! ಅನಿಸುತ್ತೆ. ನೋಡುಗರಿಗೆ ಇದೊಂಥರಾ ತಮಾಷೆ ಅನಿಸಿದ್ರೂನೂ , ಇದರೊಳಗಿನ ಸೂಕ್ಷ್ಮ ತುಂಬಾ ನೋವು ಕೊಡುತ್ತೆ.

ಸ್ವಾಭಿಮಾನ ನಮ್ಮ ಸ್ವತ್ತು, ನಮ್ಮ ಬದುಕು, ಬಿಟ್ಟುಕೊಡಬೇಡಿ, ಹೊಟ್ಟೆಗೆ ತುತ್ತಿಲ್ಲಾಂದ್ರೂ,....ಏನಂತೀರಿ?

Friday, September 11, 2009

ಈಗ ಅವಳು ಅವನಿಗೆ 'ಹಾಸಿಗೆ' ...

ಅವನು ಪತಿ, ಅವಳು ಪತ್ನಿ.

ಅದ್ಧೂರಿಯಾಗಿ ಸಪ್ತಪದಿ ತುಳಿದಿದ್ದಾರೆ...

ಸಾವಿರಾರು ಜನರು ಮದುವೆಯೂಟದಿಂದ ಚಪ್ಪರಿಸಿದ್ದಾರೆ...

ಒಂದಲ್ಲ, ಎರಡಲ್ಲ ಐದು ದಿನ ಮದುವೆ ನಡೆದಿದೆ...

ಒಂದು ವಾರ ಭರ್ಜರಿ ಮಧುಚಂದ್ರನೂ ಮುಗಿಸಿ ಬಂದಿದ್ದಾರೆ...

ಈಗ ಆರತಿಗೊಂದು, ಕೀರುತಿಗೊಂದು ಮಕ್ಕಳ ಕನಸು ಕಾಣುವ ಸಮಯ...



ಅವಳಿಗೆ ಅವನು, ಅವನಿಗೆ ಅವಳು ಕಣ್ಣಲ್ಲೇ ಪರಿಚಯ..

ನೋಡೋ ಕಣ್ಣುಗಳೇ ಸತ್ಯ ಹೇಳಿದ್ದವು...

ಪ್ರಾಮಾಣಿಕತೆಗೆ ಅವಳು ಇನ್ನೊಂದು ಹೆಸರು....

ಬಡತನ..ಪ್ರತಿಯೊಬ್ಬರ ಬದುಕನ್ನೂ ಕಿತ್ತು ತಿನ್ನುತ್ತೆ....ಅವಳನ್ನೂ ಬಿಡಲಿಲ್ಲ..

ಜನ್ಮ ನೀಡಿದ ಅಪ್ಪ-ಅಮ್ಮ ಬಡತನದಲ್ಲೇ ಮಣ್ಣಾಗಿ ಹೋದವರು..ಇವಳನ್ನು ಹಾಗೇ ಬಿಟ್ಟು...!

ಕಣ್ಣ ನೋಟದ ಆಸರೆ, ಪ್ರೀತಿಯ ಹುಡುಕಾಟಕ್ಕೆ ಸಿಕ್ಕಿದ್ದು ಆತ...

ಪ್ರಾಮಾಣಿಕತೆ, ಸತ್ಯದ ಗೆಲುವಿನ ಕುರಿತು ಮಾತನಾಡುತ್ತಿದ್ದವ...

ಅವಳ ಸೌಂದರ್ಯ, ನೇರ ನಡೆ-ನುಡಿಯನ್ನು ಹೊಗಳುತ್ತಿದ್ದವ...

ಅವಳು ಮಾತುಬಿಟ್ಟರೆ ಹಸಿವನ್ನು ಲೆಕ್ಕಿಸದೆ ಅನ್ನ, ನೀರು ಬಿಡುತ್ತಿದ್ದವ...

ಅವಳಿಗಾಗಿ ಹಗಲಿರುಳೂ ಪರಿತಪಿಸುವವ,

ಅವಳನ್ನು ಅಂಗೈಯಲ್ಲಿಟ್ಟುಕೊಂಡು ಸಾಕುತ್ತೇನೆಂದವ...



ಹೌದು..ಅವಳು ನಂಬಿದಳು..

ಹಗಲಿರುಳು ಅವನ ಕನಸಿನಲ್ಲಿ ತೇಲಾಡಿದಳು...

ಆ ದೇವಾಲಯದಲ್ಲಿ ಅವನ ಹೆಸರಿನಲ್ಲಿ ನಿತ್ಯ ಪೂಜೆ ಮಾಡಿಸಿದಳು...

ಜೊತೆ-ಜೊತೆಗೆ ಹೆಜ್ಜೆಯಿಟ್ಟು ಆ ದೇವಾಲಯಯದಲ್ಲಿ ಅವನ ಹಣೆಗೆ ಕುಂಕುಮವಿಟ್ಟಳು...

ಅವನ ಕೈಯಿಂದಲೇ ತಲೆಗೆ ಹೂವ ಮುಡಿಸಿಕೊಂಡಳು....

ನಂಬಿದಳು...ಅವಳಿಗಿಂತಲೂ ಹೆಚ್ಚಾಗಿ ಅವನನ್ನೇ ನಂಬಿದಳು....

ಪ್ರೀತಿಯ ಹಾರಕ್ಕೆ ಕೊರಳೊಡ್ಡಿದಳು...

ಮನೆ-ಮನ ಎಲ್ಲೆಲ್ಲೂ ಪ್ರೀತಿಯ ಕನಸು ಕಾಣತೊಡಗಿದಳು...


ಅದೇನಾಯಿತೋ...

ಆತ ಪ್ರೀತಿಯ ಆಸರೆಯಾಗಲಿಲ್ಲ...ಕನಸುಗಳಿಗೆ ಕಣ್ಣುಗಳಾಗಲಿಲ್ಲ...

ರಾತ್ರಿಯ ಸುಖಕ್ಕೆ ಅವನಿಗೆ ಅವಳು 'ಹಾಸಿಗೆ'ಯಾದಳು

ಈಗ ಅವಳು ಅವನಿಗೆ 'ಹಾಸಿಗೆ' ...

ಹಣದ ಅರಮನೆಯಲ್ಲಿ ಅವಳು ಅಂಗಾತ ಬಿದ್ದ ಹೆಣ...



ಇನ್ನೊಂದೆಡೆ...

ಬೇಂದ್ರೆ ಅಜ್ಜನ...

ನಾನು ಬಡವಿ, ಆತ ಬಡವ, ಒಲವೇ ನಮ್ಮ ಬದುಕು,
ಬಳಸಿಕೊಂಡವದನೇ ಅದಕು, ಇದಕು, ಎದಕೂ…

ನೆನಪಾಗುತ್ತಲೇ ಬದುಕನ್ನೇ ಅಣಕಿಸಿದಂತೆ ಭಾಸವಾಗುತ್ತಿತ್ತು ಅವಳಿಗೆ.

Monday, September 7, 2009

ಆ ದೇವಾಲಯದಲ್ಲಿ ನಿನ್ನ ಕೈಯಾರೆ ಕುಂಕುಮ ಇರಿಸಿಕೊಳ್ಳಬಹುದಿತ್ತು...

ಮುನ್ನಾ...
'ಚಳಿಗೆ ಶ್ವೆಟರ್ ಹಿಡಿದುಕೋ. ಕಿಟಕಿ ಸಂದಿಯಲ್ಲಿ ಮುಖ ಹಾಕಿ ಕೂರಬೇಡ. ಚಳಿಗೆ ಜ್ವರ, ನೆಗಡಿ ಜಾಸ್ತಿ ಆದೀತು. ಕಿಟಕಿ ಬಾಗಿಲು ಮುಚ್ಚಿಕೋ, ಕಿವಿ, ಮುಖವನ್ನೆಲ್ಲಾ ಮುಚ್ಚಿಕೋ. ಬ್ಯಾಗಲ್ಲಿ ಬಿಸಿನೀರು ಹಾಕೋ ಮುನ್ನಿ..' ಎಂದು ಪ್ರೀತಿಯಿಂದ ನೀ ಕಳಿಸಿದ ಮೆಸೇಜ್ ಅನ್ನು ಎಷ್ಟು ಬಾರಿ ಓದಿದ್ದೇನೋ ನನಗೇ ಗೊತ್ತಿಲ್ಲ. ಅದೇ ಗುಂಗಿನಲ್ಲಿ ಇದೀಗ ಪತ್ರ ಬರೀತಾ ಇದ್ದೀನಿ ನೋಡು. ಸೂರ್ಯ ಮೂಡುವ ಆ ಮುಂಜಾವು ಬೆಂಗಳೂರಿನಿಂದ ಅಮ್ಮನೂರಿನ ಬಸ್ಸು ಹಿಡಿದಾಗ ನಾನಿರುವ ಪುಟ್ಟ ಮನೆ, ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದ ನನ್ನ ಪ್ರೀತಿಯ ಪುಸ್ತಕಗಳು, ನಿತ್ಯ ನನ್ನ ಕಣ್ಣುಗಳಿಗೆ ಖುಷಿ ನೀಡುತ್ತಿದ್ದ ಎದುರುಮನೆಯ ಪುಟ್ಟ ಮಗುವಿನ ನಗು ನನ್ನ ಕಾಡಲಿಲ್ಲ. ಕಾಡಿದ್ದು ನಿನ್ನ ನೆನಪು, ನಿನ್ನ ನಗು, ನಿನ್ನ ಖುಷಿ, ಕಾಳಜಿ, ಪ್ರೀತಿ ತುಂಬಿದ ನಿನ್ನ ಮಾತುಗಳು, ನನ್ನ ಬದುಕಿನ ಹೆಜ್ಜೆಗಳನ್ನು ತಿದ್ದಿ ತೀಡಿದ ನಿನ್ನ ವಿಶಾಲ ಹೃದಯ, ಭಾವನೆಗಳ ಜೋಕಾಲಿಯಲ್ಲಿ ನನ್ನ ತೂಗಿದ ಆ ನಿನ್ನ ನಿಷ್ಕಲ್ಮಶ ಪ್ರೀತಿ, ಅತ್ತಾಗ ಸಂತೈಸಿದ ನಿನ್ನ ಮಡಿಲು, ಪ್ರತಿ ಕ್ಷಣ ಕ್ಷಣವೂ ನನ್ನ ಆರೋಗ್ಯ, ನನ್ನ ಇರುವು, ನನ್ನ ಬದುಕು, ಇಡೀ 'ನನ್ನನ್ನೇ' ಕಣ್ಣುರೆಪ್ಪೆಯಲ್ಲಿಟ್ಟುಕೊಂಡು ಕಾಪಾಡಿದ ನಿನ್ನ ಅದಮ್ಯ ಅಕ್ಕರೆ.....!! ಹೌದು...ಮುನ್ನಾ..ಇದೇ ಕಾಡಿದ್ದು...ಬೇರೇನಲ್ಲ.

ಅಮ್ಮನೂರಿಗೆ ಸಾಗುವ ಆ ಬೃಹತ್ ಬೆಟ್ಟ ದಾಟಿ ಸಾಗುವಾಗ ನೀನಿದ್ದರೆ ನಿನ್ನ ಮಡಿಲಲ್ಲೇ ಆರಾಮವಾಗಿ ನಿದ್ದೆಹೋಗಬಹುದಿತ್ತು ಅನಿಸಿತ್ತು. ಅಮ್ಮನಿಗೆ ನಿನ್ನ ಪರಿಚಯಿಸಬಹುದಿತ್ತು, ನಮ್ಮೂರ ಸುಂದರ ತೋಟದಲ್ಲಿ ನಿನ್ನ ಸುತ್ತಾಡಿಸಬಹುದಿತ್ತು. ನಮ್ಮ ಪುಟ್ಟ ಹೆಂಚಿನ ಮನೆಯಲ್ಲಿ ಕುಳಿತು ನನ್ನ ಜೊತೆ ಅಮ್ಮ ಮಾಡಿಟ್ಟ ಹಪ್ಪಳ ಸಂಡಿಗೆ ಮೆಲ್ಲಬಹುದಿತ್ತು. ಜಡಿಮಳೆಗೆ ಜುಳು ಜುಳು ಎನ್ನುತ್ತಾ ಹರಿಯೋ ನಮ್ಮೂರ ನೇತ್ರಾವತಿಯನ್ನು ನಿನಗೂ ತೋರಿಸಬಹುದಿತ್ತು ಅನಿಸಿತ್ತು. ಹಸಿರ ವನಸಿರಿಯಲ್ಲಿ ನಿನ್ನ ಜೊತೆ ನಾನೂ ದಾರಿಯುದ್ದಕ್ಕೂ ಸಾಗಬಹುದಿತ್ತು. ನಮ್ಮೂರ ದೇವಾಯಲಕ್ಕೆ ನಿನ್ನ ಕರೆದುಕೊಂಡು ಹೋಗಿ ನಿನ್ನ ಕೈಯಾರೆ ಕುಂಕುಮ ಇರಿಸಿಕೊಳ್ಳಬಹುದಿತ್ತು ಅನಿಸಿತ್ತು..ಹೌದು..ಮುನ್ನಾ..ನೆನಪಾಗಿದ್ದು ನೀನು ಮಾತ್ರ....ನನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸೋ ನೀನು ಮಾತ್ರ.

ಥತ್! ನಾ ದೂರದಲ್ಲಿದ್ರೆ ನೀ ಮುನಿಸಿಕೊಳ್ತೀಯಾ. ರಂಪ ಮಾಡ್ತೀಯಾ. ಬೇಗ ಬಾ ಎಂದು ರಚ್ಚೆ ಹಿಡೀತೀಯಾ. ಪುಟ್ಟ ಮಕ್ಕಳಂತೆ ಹಠಮಾಡ್ತೀಯಾ. ಅದಕ್ಕೆಲ್ಲಾ ನಾ ಮೌನವಾಗಿದ್ದಾಗ ನಿಂಗೆ ಪ್ರೀತೀನೇ ಇಲ್ಲ ಅಂತೀಯಾ. ದಿನ, ವಾರ, ತಿಂಗಳುಗಟ್ಟಲೆ ಮಾತು ಬಿಡ್ತೀಯಾ. ಆದರೆ ನಾನಂತೀನಿ 'ಅದೇ ಕಣೋ ಪ್ರೀತಿ' ಅಂತ. ನೀ ಕೋಪದಲ್ಲಿದ್ದಾಗ ನಾನು ಕತ್ತಲನ್ನೂ ಪ್ರೀತಿಸೋಕೆ ಹೊರಡ್ತೀನಿ..ಕತ್ತಲೇ ಹಿತ ಅಂತೀನೀ. ಇರುಳನ್ನೂ ಬೆಳಕಿನಂತೆ ಪ್ರೀತಿಸುವ, ಅಮಾವಾಸ್ಯೆಯ ಕರಾಳ ರಾತ್ರಿಯನ್ನೂ ಪ್ರೀತಿಸುವ ಆ ಶಕ್ತಿ ನೀಡಿರೋದು ನಿನ್ನ ಪ್ರೀತಿ ಗೊತ್ತಾ?

ನಿನ್ನ ಪ್ರೀತಿಸ್ತೀನಿ...ನಿನ್ನನ್ನು, ನಿನ್ನ ಬದುಕನ್ನು, ನಿನ್ನ ಭಾವನೆಗಳನ್ನು, ನಿನ್ನ ಸಾಧನೆಯನ್ನು, ನಿನ್ನ ಕನಸುಗಳನ್ನು, ನಿನ್ನ ಸುತ್ತಲಿನ ನೋವು-ನಲಿವುಗಳನ್ನೂ ನಾ ಪ್ರೀತಿಸ್ತೀನಿ ಅನ್ನೋದನ್ನು ನಾ ಹ್ಯಾಗೆ ಪ್ರೂವ್ ಮಾಡಲಿ ಹೇಳು? ನೀ ದುಃಖದಲ್ಲಿದ್ದಾಗ ನನ್ನ ಕೊರಗು ಅದು ಕಲ್ಪನೆಗೂ ನಿಲುಕದು ಕಣೋ
ಮುನ್ನಾ..ನೀ ಖುಷಿಯಿರಬೇಕು. ನಿನ್ನ ಖುಷೀ, ಸಂಭ್ರಮನಾ ನಾ ನೋಡಬೇಕು. ನಿನ್ನ ನಾ ಪ್ರೀತಿಸ್ತೀನಿ, ನೀ ನನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸ್ತೀಯಾ..ನಿನಗೆ ಅತ್ಯಂತ ಖುಷಿ ತರುವ, ನಿನಗೆ ಅತ್ಯಂತ ಪವಿತ್ರ ಎನಿಸುವ ಸಂಗತಿಗಳನ್ನು ಮೀರಿದ ಯಾವ ವಿಚಾರಗಳೂ ನನಗೆ ಖುಷಿ ತರೊಲ್ಲ. ನಿನ್ನ ನೆಮ್ಮದಿನೇ ನನ್ನ ನೆಮ್ಮದಿ ನೋಡು. ನೀ ಪಡುವ ಸಂತೋಷ ನೆಮ್ಮದಿಯ ಸಂಭ್ರಮದ ಗಳಿಗೆಗಿಂತ ಈ ಜಗತ್ತಿನಲ್ಲಿರುವ ಇನ್ಯಾವುದೇ ವಸ್ತುಗಳು ನನಗೆ ಖುಷಿ ನೀಡಲಾರವು.

ಹ್ಲೂಂ..ಮಧ್ಯರಾತ್ರಿ 1 ಗಂಟೆ. ಇನ್ನು ಮಲಗಬೇಕು ಕಣೋ. ಉಳಿದಿದ್ದನ್ನು ಇನ್ನೊಂದು ಪತ್ರದಲ್ಲಿ ಬರೇತೀನಿ. ಅಲ್ಲಿತನಕ ಈ ಪತ್ರ ಓದುತ್ತಾ ಇರು..ಸರೀನಾ.

ನಿನ್ನ ಪ್ರೀತಿಯ
ಮುನ್ನಿ
.