Sunday, December 18, 2011

ಹೆಣ್ಣು- ರಾಜಿ

ಅದು ಅಪ್ಪ ಹೋದ ಮರುದಿನ. ಅಪ್ಪ ನಮ್ಮನ್ನೆಲ್ಲಾ ಬಿಟ್ಟು ದೂರ ಹೋಗಿದ್ದ. ಅಮ್ಮ ಒಬ್ಬಳಾಗಿದ್ದಳು. ಕಣ್ಣೀರನ್ನೆಲ್ಲಾ ನುಂಗಿ ಕಲ್ಲಾಗಿದ್ದಳು. ರಾತ್ರಿ ಇಡೀ ನಿದ್ದೆ ಮಾಡದ ಅಮ್ಮ ಸೂರ್ಯ ಬರುವ ಮೊದಲೇ ಬಾಗಿಲು ತೆರೆದಿದ್ದಳು.
ಎದುರುಮನೆಯ ಅಮ್ಮನ ವಯಸ್ಸಿನ ಹೆಂಗಸು ನಿತ್ಯ ಸಂಜೆ ಜಗಲಿಕಟ್ಟೆಯಲ್ಲಿ ಹಾಜರಾಗುವಳು. ಸುಖ-ದುಃಖವೆಂದು ಮಾತಿಗಿಳಿಯುವಳು. ಅಪ್ಪ ಹೋದ ದಿನ ಅಮ್ಮನಿಗೆ ಸಮಾಧಾನದ ಮಾತುಗಳ ಹೇಳಿದವಳು.
ಆದರೆ, ಅಪ್ಪ ಹೋದ ಮರುದಿನ ಬಾಡಿಹೋದ ಮುಖದೊಂದಿಗೆ ಅಮ್ಮ ಬಾಗಿಲು ತೆರೆದಾಗ ಎದುರುಮನೆಯ ಬಾಗಿಲು ದಡಕ್ಕಂತ ಮುಚ್ಚಿತು. ದರಿದ್ರ, ಗಂಡ ಕಳಕೊಂಡವಳು! ಎಂದು ಆಕೆ ಉಸುರಿದ್ದು ಅಮ್ಮನ ಕಿವಿಗೆ ಬೀಳದಿರಲಿಲ್ಲ, ಅಮ್ಮನ ಕಣ್ಭಲ್ಲಿ ಕಣ್ಣೀರು ಬತ್ತಿಹೋಗಿತ್ತು. ಮುಚ್ಚಿದ ಮನೆಬಾಗಿಲು ಕಂಡು ನಿಟ್ಟುಸಿರು ಬಿಟ್ಟು ಅಮ್ಮ ಮೌನವಾದಳು.
***********
ಅಂದು ಅಪ್ಪನ ವೈಕುಂಠ ಸಮಾರಾಧನೆ ದಿನ. ಮುತ್ಯೈದೆಯರಿಂದ ಅರಿಶಿನ ಕುಂಕುಮ ಕೊಡಲು ಆದೇಶಿಸಿದರು. ಬೆಳ್ಲಿ ತಟ್ಟೆ ಎತ್ತಿಕೊಂಡು ನಾನು ಸರತಿ ಸಾಲಿನಲ್ಲಿ ಕುಳಿತು ಅರಿಶಿನ, ಕುಂಕುಮ ಹಂಚಿದೆ. ಮುತ್ಯೈದೆಯರ ಸರತಿ ಸಾಲಿನಲ್ಲಿ ಕುಳಿತ ಅಮ್ಮ ಸುಮ್ಮನಾದಳು. ಅಪ್ಪನಿರುವಾಗ ಅರಿಶಿನ ಕುಂಕುಮ ಎಂದರೆ ಮುಂದೆ ಬಂದು ಮುತ್ಯೈದೆ ಭಾಗ್ಯ ನೀಡು ದೇವಾ ಎಂದು ತಾಳಿಗೆ ಅರಿಶಿನ ಹಚ್ಚುತ್ತಿದ್ದ ಅಮ್ಮನಿಗೆ ಅರಿಶಿನ ಪಡೆಯುವ ಕನಿಷ್ಠ ಭಾಗ್ಯ ಇಲ್ಲದ ಈ "ಕಟ್ಟುಪಾಡು'ಗಳ ಬಗ್ಗೆ ಉತ್ತರವಿಲ್ಲದೆ ನಾನೂ ರಾಜಿಯಾಗಿದ್ದೆ!