Thursday, July 29, 2010

ಅಮ್ಮನಾಗುವ ಅತ್ತೆ...


ಅಂದು ಅತ್ತೆ ‘ನೀನು ಮನೆಗೆ ಭಾಗ್ಯಲಕ್ಷ್ಮಿ ಕಣಮ್ಮಾ, ಬಲಗಾಲಿಟ್ಟು ಒಳಗೆ ಬಾ’ ಎಂದು ಕರೆದು ಮನೆ ತುಂಬಿಸಿಕೊಂಡಾಗ ನಿಜಕ್ಕೂ ಹೌದಾ? ನನ್ನ ಅತ್ತೆ ನನ್ನ ಚೆನ್ನಾಗಿ ನೋಡ್ಕೋತಾರಾ? ಅತ್ತೆ-ಸೊಸೆ ಎಂದರೆ ಹಾವು-ಮುಂಗುಸಿಯಂತೆ ಎಂದು ಯಾರ್‍ಯಾರೋ ಹೇಳಿದ ಮಾತು ನೆನೆಪಾಗುತ್ತಿತ್ತು. ನನ್ನ ಒಳಮನಸ್ಸು ‘ನೀನೀಗ ಸೊಸೆ’ ಎಂದು ಸಾರಿ ಸಾರಿ ಹೇಳುತ್ತಿತ್ತು. ಬದುಕಿನ ಒಂದು ಘಟ್ಟದಿಂದ ಮತ್ತೊಂದು ಘಟ್ಟಕ್ಕೆ ಕಾಲಿಟ್ಟಾಗ ಆತಂಕ, ಖುಷಿ ಎಲ್ಲವೂ ಧುತ್ತೆಂದು ಮನದೊಳಗೆ ಮನೆಮಾಡಿತ್ತು.

ಹೌದು, ಮದುವೆಯಾಗಿ ಆಗಿನ್ನೂ ಒಂದು ವಾರ ಪೂರ್ತಿಯಾಗಿರಲಿಲ್ಲ. ಅತ್ತೆ ಮನೆಯಿನ್ನೂ ಹೊಸತು. ಇನ್ನೂ ಗಂಡನ ಮುಖ ಬಿಟ್ಟರೆ ಬೇರೆನೂ ಪರಿಚಯವಿಲ್ಲ. ಅಡುಗೆ ಮನೆಯಲ್ಲಿ ‘ಅತ್ತೆಯೇ ವಿಜ್ಞಾನಿ’. ಆ ವಿಜ್ಞಾನವನ್ನು ನಾನಿನ್ನೂ ಕರಗತಮಾಡಿಕೊಳ್ಳಬೇಕು. ಪುಟ್ಟ ಮಗುವಿನಂತೆ ಎಲ್ಲವನ್ನೂ ಗಂಡನೇ ಹೇಳಬೇಕು. ಅಂದು ನಾಳೆ ಶುಕ್ರವಾರ ಕಣಮ್ಮಾ, ಲಕ್ಷ್ಮಿ ಪೂಜೆ ಮಾಡಬೇಕು. ಬೇಗ ಎದ್ದುಬಿಡು ಎಂದು ರಾತ್ರಿಯೇ ಅತ್ತೆ ನೆನಪಿಸಿದಾಗ, ‘ನೆನೆಸಿಕೊಂಡಲ್ಲಿ ದೇವರಿದ್ದಾನೆ’ ಎಂದು ನಂಬಿಕೊಂಡಿದ್ದ ನನಗೆ ಅವರ ಎಚ್ಚರಿಕೆಯನ್ನೂ ಮೀರಲಾಗಲಿಲ್ಲ. ‘ಏಳ್ತೀನಮ್ಮ’ ಎಂದು ನಗುಮುಖದಿಂದಲೇ ಒಪ್ಪಿಕೊಂಡಾಗ ಖುಷಿಯಿಂದ ಅತ್ತೆ ‘ಜಾಣೆ’ ಎಂದು ಬೆನ್ನುತಟ್ಟಿದ್ದರು.

ಮರುದಿನ ಬೆಳಿಗ್ಗೆ ಬೇಗನೇ ಎದ್ದು ಸ್ನಾನ ಮಾಡಿ, ಸೀರೆಯುಟ್ಟು, ಕೈ ತುಂಬಾ ಬಳೆ, ಮುಡಿತುಂಬಾ ಹೂವು ಮುಡಿದು ಅತ್ತೆ ಹೇಳಿದಂತೆ ಲಕ್ಷ್ಮಿಯನ್ನು ಪೂಜಿಸಿದ್ದೆ. ನನಗೆ ಶ್ಲೋಕಗಳು ಗೊತ್ತಿಲ್ಲದಿದ್ದರೂ ಪಟಪಟನೆ ಶ್ಲೋಕಗಳನ್ನು ಬಾಯಿಪಾಠ ಮಾಡಿಕೊಂಡು ಹೇಳಿಕೊಡುತ್ತಿದ್ದ ಅತ್ತೆಯ ಪ್ರತಿಭೆಗೆ ನಾನೇ ಬೆರಗಾಗಿದ್ದೆ. ಬಹುಶಃ ಎಲ್ಲಾ ಅತ್ತೆಯರು ಹೀಗೇನೋ ಎಂದು ಮನಸ್ಸು ಕೇಳುತ್ತಿತ್ತು. ಹೊಸ ಬದುಕಿನಲ್ಲಿ ಹೊಸತರ ಬೆರಗು ನನ್ನೊಳಗೆ ಮನೆಮಾಡಿತ್ತು. ಆದ್ರೂ ಅತ್ತೆ-ಸೊಸೆಯರನ್ನು ಯಾಕೆ ಪರಸ್ಪರ ಶತ್ರುಗಳಂತೆ ಕಾಣ್ತಾರೆ? ಸಮಾಜವೇ ಹಾಕಿಕೊಟ್ಟ ಚೌಕಟ್ಟು ಇದಲ್ವಾ? ಸುಮ್ಮ ಸುಮ್ಮನೆ ಹೆಣ್ಣಿಗೆ ಹೆಣ್ಣೇ ಮರುಗುವ ‘ಹೆಣ್ಣು ಬದುಕು’ ಇದೆಯಾದರೂ ಪರಸ್ಪರ ಎತ್ತಿಕಟ್ಟುವ ಪರಂಪರೆಯನ್ನು ಸಮಾಜವೇ ಬೆಳೆಸಿದ್ದಲ್ವಾ? ಎಂದನಿಸುತ್ತಿತ್ತು.

ಅಂದು ಯುಗಾದಿ ಹಬ್ಬದಂದು ನನ್ನತ್ತೆ ನನಗೆ ಗುಲಾಬಿ ಬಣ್ಣದ ಹೊಸ ಚೂಡಿದಾರ್ ತಂದಾಗ ನಾನೆಷ್ಟು ಖುಷಿಪಟ್ಟಿದ್ದೆ? ಹೊಸ ಚೂಡಿಧಾರ್ ಧರಿಸಿ ಅತ್ತೆ ಕಾಲಿಗೆ ನಮಸ್ಕರಿಸಿ ಅಫಿಸಿಗೆ ಹೊರಟಾಗ ನನ್ನ ಹಣೆಗೆ ಕುಂಕುಮವಿಟ್ಟು ತಬ್ಬಿ ಮುತ್ತಿಟ್ಟ ಅತ್ತೆಯನ್ನು ಕಂಡಾಗ, ಅಮ್ಮ-ಅತ್ತೆನ ಅದೇಕೆ ಸಮಾಜ ಅಷ್ಟೊಂದು ಅಂತರದಲ್ಲಿ ಕಾಣುತ್ತೆ ಎಂದನಿಸಿತ್ತು. ಹೌದು, ಅತ್ತೆನೂ ಅಮ್ಮ ಆಗ್ತಾಳೆ, ಏಕಂದ್ರೆ ಅವಳು ಅಮ್ಮನಾಗಿದ್ದವಳು!

(ಹೊಸದಿಗಂತದಲ್ಲಿ ನಾನು ಬರೆಯುವ ಭಾವಬಿಂದು ಅಂಕಣದಲ್ಲಿ ಪ್ರಕಟ:
http://hosadigantha.in/epaper.php?date=07-29-2010&name=07-29-2010-15)

Friday, July 2, 2010

ಕಲೆ ವಿಲಾಸಕ್ಕಲ್ಲ, ವಿಕಾಸಕ್ಕಾಗಿ...

ಆತ ಕಲೆಗಾರ.
ತನ್ನ ಪುಟ್ಟ ಸ್ಟುಡಿಯೋದಲ್ಲಿ ಕುಳಿತ ಆತನಿಗೆ ಆತನದೇ ಲೋಕ. ಆ ಬಣ್ಣದ ಪೆನ್ನುಗಳು, ಒಂದಷ್ಟು
ಬ್ರಶ್‌ಗಳು, ಹಾಳೆಗಳು, ತಂತಿಗಳು, ಮರಳಿನ ಹುಡಿ...ಈ ಎಲ್ಲವುಗಳ ನಡುವೆ ಕುಳಿತ ಆತ ಕಲೆಗಾರ. ಮಾತೆತ್ತಿದ್ದರೆ 'ಕಲೆ ವಿಲಾಸಕ್ಕಲ್ಲ, ವಿಕಾಸಕ್ಕಾಗಿ' ಟಾಲ್‌ಸ್ಟಾಯ್ ಹೇಳಿರುವ ಮುತ್ತಿನ ಮಾತುಗಳು ಅವರ ಬಾಯಿಂದ ಉದುರುತ್ತವೆ. ಜೊತೆಗೆ 'ಕಲೆ ಹೃದಯದ ಭಾಷೆ. ಅದಿರುವುದು ಮನುಷ್ಯನನ್ನು ಶುದ್ಧಮಾಡುವುದಕ್ಕಾಗಿ. ತಮ್ಮ ಅನುಭವ, ಭಾವಗಳನ್ನು ಚಿತ್ರದ ಮೂಲಕ ವ್ಯಕ್ತಿಪಡಿಸಬೇಕು. ಆಗ ಅಲ್ಲಿ ತಮ್ಮತನ ಅಭಿವ್ಯಕ್ತಿಗೊಳ್ಳುತ್ತೆ'' ಎಂದು ಕಲೆಗೆ ತಮ್ಮದೇ ವ್ಯಾಖ್ಯಾನ ನೀಡುತ್ತಾರೆ.

ಇವರೇ ರಾಘವೇಂದ್ರ ಹೆಗಡೆ.
ಹುಟ್ಟಿದ್ದು ಶಿರಸಿಯ ಕೃಷಿ ಕುಟುಂಬವೊಂದರಲ್ಲಿ. ಗಜಾನನ ಹೆಗಡೆ ಮತ್ತು ಯಮುನಾ ಹೆಗಡೆ ಇವರ ಅಪ್ಪ-ಅಮ್ಮ. ಬಾಲ್ಯದಲ್ಲಿ ಕಲೆ ಏನೆಂದು ಗೊತ್ತಿಲ್ಲದಿದ್ದರೂ ಸುಂದರವಾದ ಚಿತ್ರಗಳನ್ನು ಕಂಡಾಗ ಕುತೂಹಲಗೊಂಡಿದ್ದು, ಸಂಭ್ರಮದಿಂದ ಕೇಕೆ ಹಾಕಿದ್ದು ನಿಜ. ಅಂಥ ಹುಡುಗನ ಚಿತ್ರ ನೋಡಿ ರಾಷ್ಟ್ರಪತಿಯಾಗಿದ್ದ ಅಬ್ಧುಲ್ ಕಲಾಂ ಅವರೇ ಖುಷಿಪಟ್ಟಿದ್ದರು. ಅಷ್ಟೇ ಅಲ್ಲ, ಇವರು ಬಿಡಿಸಿದ ಚಿತ್ರವನ್ನು ತಾನೇ ಸ್ವತಃ ಕೊಂಡೊಯ್ದು ರಾಷ್ಟ್ರಪತಿ ಭವನದಲ್ಲಿರುವ ಮ್ಯೂಸಿಯಂನಲ್ಲಿ ಇಟ್ಟಿದ್ದಾರೆ. ಹಲವಾರು ಪ್ರಸಿದ್ಧ ಕಲಾವಿದರ ಚಿತ್ರ ಸಂಗ್ರಹದ ಜೊತೆಗೆ ಕನ್ನಡದ ಯುವಕನೊಬ್ಬನ ಚಿತ್ರ ಇಂದು ರಾಷ್ಟ್ರಪತಿ ಭವನದಲ್ಲಿದೆ ಕನ್ನಡಿಗರಿಗೂ ಹೆಮ್ಮೆ,

ಕಲ್ಲು, ಮರ, ಮಣ್ಣು, ಲೋಹ ಎಲ್ಲವೂ ಇವರ ಕೈಯಲ್ಲಿ ಕಲಾಕೃತಿಗಳಾಗುತ್ತವೆ. ಸೊಳ್ಳೆ ಪರದೆಯಂಥ ಸಣ್ಣ ತಂತಿಗಳನ್ನು ಬಳಸಿ, ಅವುಗಳಿಂದ ವೈವಿಧ್ಯಮಯ ಕಲಾಕೃತಿಗಳನ್ನು ಬಿಡಿಸುವ ಇವರ ಕಲಾಪ್ರತಿಭೆ ಅದ್ಭುತ. ರಷ್ಯಾ ಮತ್ತು ಇಂಗ್ಲೆಂಡ್‌ನ ಇಬ್ಬರು ಕಲಾವಿದರನ್ನು ಹೊರತುಪಡಿಸಿದರೆ ನಮ್ಮ ದೇಶದ ಕಲಾಪ್ರತಿಭೆ ಎಂದರೆ ಅದು ರಾಘವೇಂದ್ರ ಹೆಗಡೆಯವರೊಬ್ಬರೇ. ಹಾಗೇ ಮರಳ ಮೇಲೆ ಕಲಾಕೃತಿ ಬಿಡಿಸುವ ಕಲೆ ಇನ್ನೂ ಚೆನ್ನ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅಂಥ ಅಪರೂಪದ ಕಾರ್ಯಕ್ರಮ ಆಯೋಜಿಸಿದ್ದರು. ಹಾಡುಗಾರರು ಹಾಡುತ್ತಾ ಇದ್ದರೆ, ಇತ್ತ ಗಾಜಿನ ಮೇಲೆ ಹರಡಿರುವ ಮರಳ ಮೇಲೆ ತನ್ನ ಬೆರಳುಗಳಿಂದಲೇ ಹಾಡಿಗೆ ಜೀವ ತುಂಬುತ್ತಿದ್ದರು. ಈ ಕಲೆ ಇಂಗ್ಲೆಂಡ್‌ನಲ್ಲಿ ಹೊರತುಪಡಿಸಿದರೆ ಬೇರೆಲ್ಲೂ ಇಲ್ಲ. ಇದೀಗ ಇಂಥ ಅದ್ಭುತ ಕಲೆಯನ್ನು ದೇಶಕ್ಕೆ ಪರಿಚಯಿಸಿದ ಕೀರ್ತಿ ರಾಘವೇಂದ್ರ ಅವರಿಗೆ ಸಲ್ಲುತ್ತದೆ.




"ನಮ್ಮ ಕಲೆಗಳು ಯಾವುದೋ ಮಾಲ್‌ಗಳಿಗೆ, ಪ್ರದರ್ಶನಗಳಿಗೆ, ಶೋಕೇಸ್‌ಗೆ ಸೀಮಿತವಾಗಬಾರದು. ಜನರ ಮುಂದೆ ಕಲೆ ಹೋಗಬೇಕು. ಆಗ ಜನ ನಮ್ಮನ್ನು ಗುರುತಿಸುತ್ತಾರೆ. ನನ್ನ ಭಾವಾಭಿವ್ಯಕ್ತಿ ಜನಸಾಮಾನ್ಯನ ಮುಂದೆ ಹೋಗಬೇಕೆನ್ನುವುದೇ ನನ್ನಾಸೆ’ ಎನ್ನುವ ರಾಘವೇಂದ್ರ ಅವರು ಕೇವಲ ಚಿತ್ರಕಲಾವಿದರು ಮಾತ್ರವಲ್ಲ, ಅವರ ಕ್ಷೇತ್ರಗಳು ಇನ್ನೂ ವಿಶಾಲ. ಮಂದ್ರಾ, ಗಂಗಾವತರಣ, ಇಡಿಪಸ್, ಮುದ್ರಾ ರಾಕ್ಷಸ ಮುಂತಾದ ನಾಟಕಗಳಿಗೆ ಕಲಾನಿರ್ದೇಶಕನಾಗಿ ಹಾಗೂ ಮೈಸೂರು ಮಲ್ಲಿಗೆ ಸೇರಿದಂತೆ ಹಲವಾರು ನಾಟಕಗಳಲ್ಲಿ ಅಭಿನಯಿಸಿರುವ ರಾಘವೇಂದ್ರ ಅವರು, ಬೆಂಗಳೂರಿನ ಹಲವಾರು ಕಾಲೇಜುಗಳಲ್ಲಿ ಕಲೆಯ ಕುರಿತಾದ ಬೋಧನೆಗೆ 'ಅತಿಥಿ ಉಪನ್ಯಾಸಕನಾಗಿ'ಯೂ ಕಾರ್ಯನಿರ್ವಹಿಸುತ್ತಿದ್ದಾರೆ.


ಇವರ ಯಾವುದೇ ಕಲಾಕೃತಿಗಳನ್ನು ನೋಡಿದರೂ ಅಲ್ಲಿ "ದೇಸಿತನ'' ಎದ್ದು ಕಾಣುತ್ತದೆ. ಭಾರತೀಯತೆ, ನಮ್ಮ ಸಂಸ್ಕಾರ, ಸಂಸ್ಕೃತಿ...ಇಂಥ ವಿಚಾರಗಳ ಕುರಿತಾಗೇ ಮಾತಿಗಿಳಿಯುವ ರಾಘವೇಂದ್ರ, ಒಂದು ಕ್ಷಣ ಕಲಾವಿದನಾಗಿಯೂ, ಮಗದೊಂದು ಕ್ಷಣ ಚಿಂತನಕಾರನಾಗಿಯೂ ಅಚ್ಚರಿಗೊಳಿಸುತ್ತಾರೆ. ಓರ್ವ ಎಂಜಿನಿಯರ್ ಅಥವಾ ವೈದ್ಯನಾದರೆ ಅವರು ಸಂತೋಷಗೊಳಿಸದೆಯೇ ದುಡ್ಡು ಮಾಡಬಹುದು, ಆದರೆ ತಾನೂ ಸಂತೋಷಗೊಳ್ಳುತ್ತಾ, ಇತರರನ್ನೂ ಸಂತೋಷಗೊಳಿಸುವುದು ಕಲೆ ಮಾತ್ರ ಎನ್ನುವ ರಾಘವೇಂದ್ರ ಅವರು ಜನಸಾಮಾನ್ಯರೂ ಸಂಭ್ರಮಿಸುವ ಉತ್ತಮ ಕಲಾವಿದರಾಗಲಿ ಎಂದು ಹಾರೈಸೋಣ.
****
ಒಂದೆಡೆ ಹಾಡುಗಾರರು ಹಾಡುತ್ತಿದ್ದರೆ, ಇತ್ತ ಕಲಾವಿದರೊಬ್ಬರು ಹಾಡಿನ ಭಾವವನ್ನು ಮರಳಿನ ಮೇಲೆ ಚಿತ್ರಗಳಲ್ಲೇ ನಿರೂಪಿಸುತ್ತಾರೆ. ಈ ಕಲೆ ರಾಘವೇಂದ್ರ ಅವರಿಗೆ ಕರಗತ. ಈ ಮೂಲಕ ದೇಶದಲ್ಲೇ ಮೊದಲ ಬಾರಿಗೆ "ಮರಳ ಕಲೆ" ಯನ್ನು ರಾಘವೇಂದ್ರ ಪರಿಚಯಿಸಿದ್ದಾರೆ(ಬೇರೆಲ್ಲೂ ಕೇಳಿಲ್ಲ) ಇವರ ಅದ್ಭುತ ಕಲಾ ಪ್ರತಿಭೆಯನ್ನು ಕಂಡು ಅಂದು ರಾಷ್ಟ್ರಪತಿಯಾಗಿದ್ದ ಅಬ್ಧುಲ್ ಕಲಾಂ ಅವರೇ ಬೆನ್ನು ತಟ್ಟಿದ್ದಾರೆ. ಇವರು ಬಿಡಿಸಿದ ಚಿತ್ರ ಇಂದು ರಾಷ್ಟ್ರಪತಿ ಭವನದ ಮ್ಯೂಸಿಯಂನಲ್ಲಿದೆ.

ಇಲ್ಲೂ ಓದಬಹುದು: http://hosadigantha.in/epaper.php?date=07-03-2010&name=07-03-2010-15