Thursday, April 4, 2013

ಭಾವಕ್ಕೆ ದಕ್ಕಿದ ಪ್ರಸಂಗಗಳು--ಭಾಗ-2


ಅಮ್ಮನ ದೇವರಮೂಲೆ 
ಅಂದು ನಮಗಿಬ್ಬರಿಗೆ ಜೋರು ಜ್ವರ. ಅಮ್ಮ ಇಬ್ಬರನ್ನೂ ನಿಲ್ಲಿಸಿ ದೃಷ್ಟಿ ತೆಗೆದಳು. ದೃಷ್ಟಿ ತೆಗೆದ ಕಡ್ಡಿಗೆ ಬೆಂಕಿ ಹಚ್ಚಿದಾಗ ಪಟಪಟ ಎಂದು ಸದ್ದು ಮಾಡಿತು.
ಅಮ್ಮ ಬಂದು ಹೇಳಿದಳು,"ನೋಡಿ ಇಬ್ರಿಗೂ ದೃಷ್ಟಿ ಬಿದ್ದಿದೆ. ಅದಕ್ಕೆ ನೋಡು ಕಡ್ಡಿ ಪಟಪಟ ಎಂದು ಉರಿಯತೊಡಗಿತು'' ಎಂದು. ಇಬ್ಬರಿಗೂ ತುಟಿಯಂಚಿನಲ್ಲಿ ನಗು. ವೈದ್ಯರಿಗೆ ಕೊಟ್ಟ ದುಡ್ಡು ವೇಸ್ಟ್ ಆಯಿತಲ್ಲಾ...ಅಂಥ ಮನಸ್ಸಲ್ಲಿ.
ಮರುದಿನ ಬೆಳಿಗೆದ್ದು ನೋಡಿದರೆ ಅಡುಗೆ ಮನೇಲಿ ಪಾತ್ರೆ ತೊಳೆಯುವ ಸಿಂಕ್ ನ ಪಕ್ಕ ಹಿತ್ತಾಳೆ ಚೊಂಬಲ್ಲಿ ನೀರು, ನೀರ ಮೇಲೆ ತುಳಸಿ ದಳಗಳು. ನಾವಿಬ್ಬರೂ ಕಾಫಿ ಕುಡಿದು ಲೋಟ ತೊಳೆಯಲು ಹೋದರೆ,
"ಅಲ್ಲಿ ಮುಸುರೆ ಮಾಡಬೇಡಿ. ಅದು ದೇವರ ಮೂಲೆ ಅಂತೆ. ಅಲ್ಲಿ ನೀರಿಟ್ಟರೆ ಆರೋಗ್ಯ ಚೆನ್ನಾಗಿರುತ್ತೆ ಅಂತೆ'' ಅಮ್ಮನ ಆರ್ಡರ್.
"ಯಾರಮ್ಮಾ ಹೇಳಿದ್ದು ನಿಂಗೆ?"
"ನನ್ನ ವಾಕಿಂಗ್ ಫ್ರೆಂಡ್''
"ಅದೇನು ನಿನ್ ಫ್ರೆಂಡ್ ವಾಕಿಂಗ್ ರೂಟ್ ನಿಂದ ಅಡುಗೆಮನೆಗೂ ಬಂದ್ರಾ''
"ಹ್ಲೂಂ..ಅವರಿಗೆ ಜ್ಯೋತಿಷ್ಯ, ವಾಸ್ತು ಎಲ್ಲಾ ಗೊತ್ತಂತೆ. ನಾವು ಓಡಾಡುವ ಬಾಗಿಲು ಬದಲಾಗಬೇಕಂತೆ'
"ಅಮ್ಮಾ...ಅದೇನಿದ್ರೂ ವಾಕಿಂಗ್ ರೂಟ್ ಗೆ ಅಂದುಬಿಡು'' ಎಂದು ನನ್ನವ ಗದರಿದ. ಅಮ್ಮನ ಮುಖ ಸಣ್ಣಗಾಯಿತು.
ಆದರೆ, ಅಡುಗೆಮನೆಯ "ದೇವರ ಮೂಲೆ''ಯಲ್ಲಿ ಇಂದಿಗೂ ಚೊಂಬು ನೀರು ತಪ್ಪಿಲ್ಲ. ಅಲ್ಲಿ ಮುಸುರೆ ಪಾತ್ರೆಗಳನ್ನು ತೊಳೆಯುವಾಗಿಲ್ಲ. ಹಾಗಾಗಿ, ಮನೆಗೆಲಸದವಳಿಗೆ ದಿನಾ ಬೀಳುವ ಪಾತ್ರೆಗಳು ಹೆಚ್ಚಾಗುತ್ತಿವೆ. ಅವಳು "ಪಾತ್ರೆಗಳು ಜಾಸ್ತಿಯಾಗುತ್ತಿವೆ. ಸಂಬಳ ಜಾಸ್ತಿ ಕೊಡಿ'' ಎಂದು ರಚ್ಚೆ ಹಿಡಿದಿದ್ದಾಳೆ.
*********
ಬಣ್ಣದ ನಾಚಿಕೆ

ಅಂದು ನನ್ನೊಳಗೆ ಮೊಗ್ಗು ಮಲ್ಲಿಗೆ ಬಿರಿದ ಖುಷಿ. ಅಲ್ಲಿಯವರೆಗೆ ನಾಚಿಕೆ ಏನೂಂತ ಗೊತ್ತಿರಲಿಲ್ಲ. ಆದರೆ, ಅಂದು ಮಾತ್ರ ಸುಮ್ಮ-ಸುಮ್ಮನೆ ನಾಚಿಕೊಂಡಿದ್ದೆ. ಕಾರಣಗಳನ್ನು ಕೇಳಿದರೆ ಉತ್ತರ "ಗೊತ್ತಿಲ್ಲ''. ಆದರೆ ಮಾತು, ಮಾತಿಗೂ ಕೆನ್ನೆಯಲ್ಲಿ ...ಸೂರ್ಯೋದಯವಾಗುತ್ತಿತ್ತು,
ಮೈಯಲ್ಲಿ ಅದೇನೋ ಪುಳಕ... ಹೆಣ್ತನ ನನ್ನೊಳಗೆ ಹಡೆದಂತೆ. ತಲೆಯೊಳಗೆ ಕದ್ದು ಕೇಳಿದ ಸೀತಕ್ಕನ ಮಗಳು ದೊಡ್ಡವಳಾದ ಕತೆ...
ಎಲ್ಲವೂ ಸೇರಿ ಪಾದವನ್ನೇ ದಿಟ್ಟಿಸುತ್ತಿದ್ದ ಕಣ್ಣುಗಳಲ್ಲಿ ನಾಚಿಕೆ ಬಣ್ಣ ಪಡೆದಿತ್ತು...ಸುಮ್ಮನೆ ನಾಚಿಕೆ...ಕಾರಣಗಳೇ ಇಲ್ಲದ ನಾಚಿಕೆ.
ಅಂದು ಅಮ್ಮ ಉದ್ದ ಜಡೆ ಹಾಕಿ ಮಲ್ಲಿಗೆ, ಕೆಂಗುಲಾಬಿ ಮುಡಿಸಿದ್ದಳು. ಜಡೆ ಕೆನ್ನೆಬದಿಯಿಂದ ಕೆಳಗಿಳಿದಿತ್ತು...ಜಡೆಯ ತುದಿಯಲ್ಲಿ ಆಡುವ ನನ್ನ ಕಿರುಬೆರಳುಗಳಿಗೂ ನಾಚಿಕೆಯ ಹಂಗು. ಥತ್, ಬೆರಳನ್ನೂ ಬಿಡಲಿಲ್ಲ ನಾಚಿಕೆ! ವಾರದ ನಂತರ ಶಾಲೆಗೆ ಹೋಗಿದ್ದೆ. ಅಮ್ಮ ಕರೆದುಕೊಂಡು ಹೋಗಿ ಬಿಟ್ಟುಬಂದಿದ್ದಳು. "ಏಕೆ ರಜೆ'' ಎನ್ನುವುದಕ್ಕೆ ಅಮ್ಮನೇ ಹೆಡ್ ಮಾಸ್ತರ್ ಗೆ ತಿಳಿಸಿದ್ದಳು. ಆದರೆ, ಮುಡಿತುಂಬಾ ಮುಡಿದ ಘಮ್ಮನೆನ್ನುವ ಮಲ್ಲಿಗೆ ನೋಡಿ ಮೇಷ್ಟ್ರು ತರಗತಿಯಲ್ಲಿ ಕಿಸಕ್ಕನೆ ನಕ್ಕಾಗ ನನ್ನ ಕೆನ್ನೆಯಲ್ಲಿ ಹೋಳಿಯ ರಂಗಿನಾಟ!...ಥತ್...ಹಾಳು ನಾಚಿಕೆ...ಇಲ್ಲಿಯವರೆಗೆ ಇಲ್ಲದ್ದು ಈಗ್ಯಾಕೆ ಬಂತು? ಸಣ್ಣದೊಂದು ಹುಸಿಮುನಿಸು ನಾಚಿಕೆ ಮೇಲೆ!
ನಾಚಿಕೆ...ನಾಚಿಕೆ...ನಾಚಿಕೆ..ನನ್ನ ನಾನೇ ಮುಟ್ಟಿ ನೋಡಿಕೊಂಡು ಖುಷಿಪಡವಾಗಲೂ ಸುಮ್ಮ-ಸುಮ್ಮನೆ ನಾಚಿಕೆ."ನೀನು ದೊಡ್ಡವಳಾಗಿದ್ದೀಯಾ'' ಶಾಲೆಗೆ ಹೊರಡುವಾಗ ಅಜ್ಹಿಯ ಹಿತನುಡಿ ಕೇಳಿದಾಗಲೂ ನನ್ನೊಳಗೊಂದು ಕಿರುನಾಚಿಕೆ. ಬೇಡ, ಬೇಡ ಎಂದರೂ ನನ್ನ ಬಳಿ ಸರಿದಿತ್ತು ನಾಚಿಕೆ. ನನ್ನ ಕಣ್ಣಲ್ಲಿ, ಕಣ್ಣುರೆಪ್ಪೆಯಲ್ಲಿ, ನಗೆಮಾತಿನಲ್ಲಿ, ಅಂಗೈ&ಪಾದಗಳ ಬೆರಳ ತುದಿಯಲ್ಲಿ, ಕೆನ್ನೆಯಲ್ಲಿ...ಎಲ್ಲಾ ಕಡೆಯೂ ನಾಚಿಕೆಯ ಚಿತ್ತಾರ.

********
ನಾಲ್ಕನೇ ಪುಟದ ಭವಿಷ್ಯ
ಬೆಳಿಗ್ಗೆದ್ದ ತಕ್ಷಣ ಅಮ್ಮಂಗೆ ಪತ್ರಿಕೆ ಓದೋ ಅಭ್ಯಾಸ. ನನಗಿಂತ ಮೊದಲೇ ಏಳುವ ಅಮ್ಮ ಮೊದಲು ಹೊಸಿಲು ಗುಡಿಸಿ ರಂಗೋಲಿ ಹಾಕಿ ನಮ್ಮನೆಗೆ ಬರುವ ಪತ್ರಿಕೆಯ ನಾಲ್ಕನೇ ಪುಟವನ್ನು ತೆರೆಯುವಳು!. ಅಲ್ಲಿ ನೋಡುವುದು ದಿನಭವಿಷ್ಯ. ನಾವು ಎದ್ದ ತಕ್ಷಣ ಭವಿಷ್ಯವನ್ನು ಜ್ಯೋತಿಷಿಯಂತೆ ಬಡಬಡ ಎಂದು ಹೇಳೋಳು. ಒಂದು ದಿನ ನನ್ನವನ ಭವಿಷ್ಯ ಹೀಗಿತ್ತು.
"ಈ ದಿನವನ್ನು ನೀವು ಸಂತೋಷವಾಗಿ ಕಳೆಯಲಿದ್ದೀರಿ. ಮನೆಯಲ್ಲಿ ಎಲ್ಲರಿಗೂ ಶುಭಸುದ್ದಿ ನೀಡುವಿರಿ. ನಿಮ್ಮ ಬದುಕಿನಲ್ಲಿ ಹೊಸ ವ್ಯಕ್ತಿಯೊಬ್ಬರ ಪ್ರವೇಶವಾಗಲಿದೆ...'' ಸೋಫಾ ಮೇಲೆ ಕುಳಿತ ನನ್ನವನ ಮುಖದಲ್ಲಿ ಕಳ್ಳನಗು. ಯಾಕೋ ಅಮ್ಮ ಓದುವ ಧಾಟಿ ಕೇಳಿ ನನ್ನೆದೆ ಢವಢವ. ಅಮ್ಮನ ಮುಖದಲ್ಲಿ ಸಂತೋಷದ ಹೊಂಬೆಳಕು, ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟು ಖುಷಿ.
ಸ್ವಲ್ಪವೂ ನಗದ ನನ್ನ ನೋಡಿ ಅಮ್ಮನಿಗೆ ಅಚ್ಚರಿ. "ಯಾಕಮ್ಮಾ, ಒಳ್ಳೆಯ ಭವಿಷ್ಯ ಅಲ್ವೇನೇ? ಒಳ್ಳೆ ಬೆಪ್ಪು ತಕ್ಕಡಿ ತರ ನಿಂತಿದ್ದಿ. ಹೊಸ ವ್ಯಕ್ತಿಯ ಪ್ರವೇಶ ಅಂದ್ರೆ ನಮ್ಮನೆಗೆ ಹೊಸ ಕಂದಮ್ಮ ಬರುತ್ತೆ ಅಂತ. ಪೆದ್ದಿ ಕಣೇ ನೀನು'' ಎಂದಳು. ನನ್ನ ಸಂತೈಸುತ್ತಾ ನನ್ನವನಂದ
"ನಿನ್ ಬಿಟ್ಟು ಯಾವ ಹುಡುಗಿನೂ ಕಣ್ಣೆತ್ತಿ ನೋಡದವನು ನಿನ್ ಗಂಡ ಎಂದು ಹೆಮ್ಮೆ ಪಡು''. ಅಮ್ಮನೆಂದಳು "ಈ ವಯಸ್ಸಲ್ಲಿ ನಾನು ಟ್ಯೂಬ್ ಲೈಟ್. ಈ ಹುಡುಗ್ರ ಯೋಚನೆಗಳೇ ಅರ್ಥವಾಗೋಲ್ಲ''.