Saturday, May 2, 2009

ನಮ್ಮೂರ ಜಾತ್ರೇಲಿ..ಮಿರ ಮಿರ ಮಿನುಗಿದ್ದು!!!

'ಅಕ್ಕು ಈ ಸರ್ತಿ ಜಾತ್ರೆಗಾಂಡಲಾ ಬಲಾ, ಏತ್ ವರ್ಷ ಆಂಡ್ ಜಾತ್ರೆಗ್ ಬರಂತೆ..? ಏಪಲಾ ನಿನ್ನ ಕೆಲಸ ಮುಗಿಯರೆ ಇಜ್ಜಿ. ಕೆಲಸ ಏಪಲಾ ಉಪ್ಪಂಡು, ಜಾತ್ರೆ ವರ್ಷಗೊರೆನೆ ಬರ್ಪುನಿ(ಅಕ್ಕು..ಈ ಸಲ ಆದ್ರೂ ಜಾತ್ರೆಗೆ ಬಾ..ಎಷ್ಟು ವರ್ಷ ಆಯಿತು ಜಾತ್ರೆಗೆ ಬರದೆ. ಕೆಲಸ ಯಾವಾಗಲೂ ಇರುತ್ತೆ, ಜಾತ್ರೆ ಬರೋದು ವರ್ಷಕೊಮ್ಮೆ ಮಾತ್ರ) ನಮ್ಮೂರ ಜಾತ್ರೆ ಕುರಿತು ಅಮ್ಮ ಇತ್ತೀಚೆಗೆ ಫೊನ್ ಮಾಡಿದಾಗ, 'ಆಯ್ತಮ್ಮ, ಬರ್ತೀನಿ ಇರು. ಅರ್ಜೆಂಟ್ ಮಾಡಿದ್ರೆ ನಾ ಬರೊಲ್ಲ" ಅಂತ ನನ್ನ ಮಾಮೂಲಿ ಪ್ರೀತಿಯ ಸಿಟ್ಟನ್ನೇ ತೋರಿಸಿದ್ದೆ. ಬೆಂಗಳೂರಿಗೆ ಬರೋಕೆ ಮೊದಲು ಬಿಡಿ ಓದಿನ ನಿಮಿತ್ತ ಮನೆಯಿಂದ ಹೊರ ನಡೆದ ಮೇಲೆ ನನಗೆ ಊರ ಜಾತ್ರೆ ನೋಡೋ ಭಾಗ್ಯ ಕೂಡಿ ಬರಲೇ ಇಲ್ಲ!

ನಮ್ಮೂರಿನ ಜಾತ್ರೆ ಬರೋದು ಫೆಬ್ರವರಿ-ಮಾರ್ಚ ತಿಂಗಳಲ್ಲಿ. ಒಂಬತ್ತು ದಿನಗಳ ಕಾಲ ನಡೆಯುವ ಈ ಜಾತ್ರೆ ಎಂದರೆ ಮನೆ ಮನೆಯಲ್ಲೂ ಜಾತ್ರೆ. ಊರಿನ ಮನೆ ಮನೆಯಲ್ಲಿ ನೆಂಟರ ಸಂಭ್ರಮ. ದೂರದೂರಿನ ಗಂಡನ ಮನೆಯಿಂದ ತವರು ಮನೆಗೆ ಬರೋ ಹೆಣ್ಣುಮಕ್ಕಳ ಮನತುಂಬಾ ಖುಷಿಯ ರಂಗೋಲಿ. ಅದೂ ಹೊಸದಾಗಿ ಮದುವೆಯಾದವರ ಸಂಭ್ರಮ ಕೇಳೋದೇ ಬೇಡ. ಮನೆ ಮನೆಗೆಲ್ಲಾ ಸಗಣಿ ಸಾರಿ, ಒಂಬತ್ತು ದಿನಗಳ ಕಾಲವೂ ಮನೆಯಲ್ಲಿ ನೆಂಟರ, ಮಕ್ಕಳ ಖುಷಿಯ ಸಡಗರ. ಒಂಬತ್ತು ದಿನಗಳ ಕಾಲ ನಿತ್ಯ ಜಾತ್ರೆಗೆ ಹೋಗೋದು. ತಲೆತುಂಬಾ ಮಲ್ಲಿಗೆ ಘಮಘಮ, ಕೈತುಂಬಾ ಬಳೆಗಳ ಸದ್ದು, ಕಾಲಿಗೆ ಗೆಜ್ಜೆ, ಪರ್ಸ್ನಲ್ಲಿ ವರ್ಷದಿಂದ ಜಾತ್ರೆಗೆಂದು ಕೂಡಿಟ್ಟ ಚಿಲ್ಲರೆ ಹಣ, ಹೊಸ ಡ್ರೆಸ್ಸು..!! ಅಬ್ಬಾ..ಜಾತ್ರೆ ನೋಡೋದಕ್ಕಿಂತ ಹೊಸದಾಗಿ ಮಿರುಗೋ ನಮ್ಮನ್ನು ನಾವೇ ನೋಡಿಕೊಳ್ಳುವುದೂ ಒಂದು ಜಾತ್ರೆಯಂತೆ! ಆಮೇಲೆ ಕೆಲವು ಊರ ಹುಡುಗಿಯರನ್ನೆಲ್ಲಾ ವರ ನೋಡೋಕೆ ಬರುತ್ತಿದ್ದೂ ಜಾತ್ರೆಗೆ... ಹುಡುಗಿ ಓಕೆ ಆದ್ರೆ..ಆಮೇಲೆ ಮನೆಗೆ ಬಂದು ನೋಡೋ ಕಾರ್ಯಕ್ರಮ. ಅಷ್ಟೇ ಅಲ್ಲ, ಒಂದಿಷ್ಟು ಊರ ಮಂದಿಯೆಲ್ಲಾ ಜೊತೆಗೆ ಹರಟಲೂ ಆ ಜಾತ್ರೆಯಲ್ಲಿ ಸಾಧ್ಯವಾಗುತ್ತಿತ್ತು.

ನನಗೆ ನೆನಪಿರೋದು ನಾನು ಆರನೇ ಕ್ಲಾಸಿನಲ್ಲಿರುವಾಗ ನಮ್ಮೂರ ದೇವಸ್ಥಾನಕ್ಕೆ ಬ್ರಹ್ಮಕಲೋಶೋತ್ಸವ ಆಗಿ, ಆ ವರ್ಷವೇ ಜಾತ್ರೆ ಪ್ರಾರಂಭವಾಗಿದ್ದು. ಆವಾಗ ಅಮ್ಮ ನನಗೆ ಹಸಿರು ಚೂಡಿದಾರ ತಂದಿದ್ರು. ಅಲ್ಲಿಯವರೆಗೆ ನಾ ಚೂಡಿ ಹಾಕಿರಲೇ ಇಲ್ಲ! ಅದೇ ಮೊದಲು..ಊರ ಜಾತ್ರೆಯಂದು ಅಮ್ಮ ತಂದ ಕಡು ಹಸಿರು ಚೂಡಿಯನ್ನು ಧರಿಸಿ ಮಿರ ಮಿರ ಮಿನುಗಿದ್ದೆ. ಎರಡು ಜಡೆ ಹಾಕಿ ಅಮ್ಮ ತಲೆ ತುಂಬಾ ಮಂಗಳೂರು ಮಲ್ಲಿಗೆ ಮುಡಿಸಿದ್ರು. ಭಾಳ ಖುಷಿ ನನಗೆ. ಅಜ್ಜಿ ಜೊತೆ ಜಾತ್ರೆಗೆ ಹೋಗಿ, ಜಾತ್ರೆ, ದೇವರು, ಜನರನ್ನು ನೋಡೋದಕ್ಕಿಂತ ನನ್ನ ಹೊಸ ಚೂಡಿದಾರವನ್ನು ಮತ್ತೆ ಮತ್ತೆ ನೋಡಿಕೊಳ್ಳುವುದರಲ್ಲೇ ಮೈಮರೆತಿದ್ದೆ. ಎಲ್ಲಿ ಪಿನ್ ಹಾಕಿದ್ದ ವೇಲ್ ಜಾರುತ್ತೋ, ಪ್ಯಾಂಟ್ ನಲ್ಲಿ ಮಣ್ಣಾಗುತ್ತೋ ಅಂತ ಪ್ಯಾಂಟನ್ನು ಒಂದು ಕಡೆಯಿಂದ ಎತ್ತಿಕೊಂಡು ನಡೆಯುತ್ತಿದ್ದ ನನ್ನ ನೋಡಿ ಮನೆಯಲ್ಲಿ ಎಲ್ರೂ ನಗುತ್ತಿದ್ದರು. ಆ ಚೂಡಿದಾರ ಎಷ್ಟು ಇಷ್ಟವಾಗಿತ್ತು ಅಂದ್ರೆ ಏಳನೇ ಕ್ಲಾಸಿನಲ್ಲಿ ಫೋಟೋ ಸೆಶನ್ ಗೂ ಅದೇ ಚೂಡಿದಾರ ಧರಿಸಿದ ಹುಚ್ಚಿ ನಾನು!

ಮತ್ತೆ ಊರ ಜಾತ್ರೆ ಬಂದಾಗಲೆಲ್ಲಾ ಹೊಸ ಡ್ರೆಸ್ಸು ತೆಗೆದುಕೊಡುತ್ತಿದ್ದರು. ಊರ ಜಾತ್ರೆ ನಮಗೆ ಅಮ್ಮನ ಬಳಿ ಹೊಸ ಡ್ರೆಸ್ಸು ತೆಗೆಸಿಕೊಡು ಎಂದು ರಚ್ಚೆ ಹಿಡಿಯಲು ಒಳ್ಳೆ ಅವಕಾಶ. ಡ್ರೆಸ್ಸು ತೆಗೆಸಿಕೊಡದಿದ್ರೆ ನಾವು ಜಾತ್ರೆಗೇ ಬರಲ್ಲ ಅಂತ ಜಗಳವಾಡೋ ನಮಗೆ ಡ್ರೆಸ್ಸು ತೆಗೆಸಿಕೊಡದೆ ಅನ್ಯ ಮಾರ್ಗಗಳೇ ಇರಲಿಲ್ಲ! ಯಾಕಂದ್ರೆ ಜಾತ್ರೆ ಬಂತೆಂದರೆ ಊರಿನ ಮಕ್ಕಳೆಲ್ಲಾ ಹೊಸ ಡ್ರೆಸ್ಸು ಹಾಕೋರು. ಜಾತ್ರೆಗೆ ಹೋದರೆ ಐಸ್ ಕ್ರೀಂ ತಿನ್ನಲೇಬೇಕು...ಮನೆಯಿಂದ ಹೊರಟಾಗಲೇ ಸಿಕ್ಕವರಲೆಲ್ಲಾ ಐಸ್ ಕ್ರೀಂ ಕೊಡಿಸ್ತೀರಾ ಮಾಮ...ಎನ್ನುತ್ತಾ ಐಸ್ ಕ್ರೀಂ ತೆಗೆದುಕೊಡೋರ ಹಿಂದೆ ಓಡೋ ಚಾಳಿ ನನ್ನದು. ಆಮೇಲೆ ಬಲೂನ್ ನನ್ನ ಫೇವರಿಟ್.

ಇಂದಿಗೆ ಜಾತ್ರೆಗೆ ಹೋಗದೆ ಏಳೆಂಟು ವರ್ಷಗಳಾಗಿದೆ. ಹತ್ತನೇ ಕ್ಲಾಸು ಮುಗಿದ ಮೇಲೆ ಜಾತ್ರೆ ನೋಡೋ, ಜಾತ್ರೆಯಲ್ಲಿ ಹೊಸ ಡ್ರೆಸ್ಸು ಹಾಕಿ ಮಿರುಗೋ ಅವಕಾಶನೇ ಸಿಕ್ಕಿಲ್ಲ. ಆದ್ರೂ ನಮ್ಮೂರ ಜಾತ್ರೆ ನೆನಪಾಗುತ್ತೆ. ಜಾತ್ರೆಗೆ ಬಿಡದೆ ಕರೆದೊಯ್ಯುವ ಅಜ್ಜಿ ನೆನಪಾಗುತ್ತಾಳೆ. ಜಾತ್ರೆಯ ಬಲೂನ್, ಐಸ್ ಕ್ರೀಂ ನೆನಪಾಗುತ್ತೆ. ಒಂದು ಸಲ ನನ್ನ ಚಪ್ಪಲಿ ಯಾರಿಗೋ ಬಲಿಯಾಗಿದ್ದು ನೆನಪಾಗುತ್ತೆ. ತಲೆತುಂಬಾ ಮುಡಿದ ಮಲ್ಲಿಗೆ ಪರಿಮಳ, ಕಾಲ್ಗೆಜ್ಜೆ, ಬಳೆಯ ಕಿಣಿಕಿಣಿ ನಿನಾದ, ಪಂಜಕಜ್ಜಾಯ ತಿನ್ನೋ ಆಸೆಯಿಂದ ಭಟ್ರ ಬಳಿ ಹೋಗಿ ಎರಡೆರಡು ಸಲ ದಕ್ಷಿಣೆ ಹಾಕಿದ್ದು ನೆನಪಾಗುತ್ತೆ. ಏನ ಮಾಡಲೀ..ಬೆಂಗಳೂರಿನ ಬದುಕ ಸುಂದರವಾಗಿ ಕಾಣುತ್ತೆ ಆದ್ರೆ ಮನಸ್ಸು ಮಾತ್ರ ನನ್ನ ಜಾತ್ರೆನ, ನನ್ನ ಹಸಿರ ಹಳ್ಳೀನ ಮಿಸ್ ಮಾಡ್ಕೋತಾ ಇದ್ದೀನಿ ಅನ್ನುತ್ತೆ. ಏನೋ ಬರೆಯಕೆ ವಿಷ್ಯ ಸಿಗ್ಲಿಲ್ಲ..ನಮ್ಮೂರ ಜಾತ್ರೆ ನೆನಪಾತು. ಒಪ್ಕೋತೀರಲ್ಲಾ...?!