Sunday, December 18, 2011

ಹೆಣ್ಣು- ರಾಜಿ

ಅದು ಅಪ್ಪ ಹೋದ ಮರುದಿನ. ಅಪ್ಪ ನಮ್ಮನ್ನೆಲ್ಲಾ ಬಿಟ್ಟು ದೂರ ಹೋಗಿದ್ದ. ಅಮ್ಮ ಒಬ್ಬಳಾಗಿದ್ದಳು. ಕಣ್ಣೀರನ್ನೆಲ್ಲಾ ನುಂಗಿ ಕಲ್ಲಾಗಿದ್ದಳು. ರಾತ್ರಿ ಇಡೀ ನಿದ್ದೆ ಮಾಡದ ಅಮ್ಮ ಸೂರ್ಯ ಬರುವ ಮೊದಲೇ ಬಾಗಿಲು ತೆರೆದಿದ್ದಳು.
ಎದುರುಮನೆಯ ಅಮ್ಮನ ವಯಸ್ಸಿನ ಹೆಂಗಸು ನಿತ್ಯ ಸಂಜೆ ಜಗಲಿಕಟ್ಟೆಯಲ್ಲಿ ಹಾಜರಾಗುವಳು. ಸುಖ-ದುಃಖವೆಂದು ಮಾತಿಗಿಳಿಯುವಳು. ಅಪ್ಪ ಹೋದ ದಿನ ಅಮ್ಮನಿಗೆ ಸಮಾಧಾನದ ಮಾತುಗಳ ಹೇಳಿದವಳು.
ಆದರೆ, ಅಪ್ಪ ಹೋದ ಮರುದಿನ ಬಾಡಿಹೋದ ಮುಖದೊಂದಿಗೆ ಅಮ್ಮ ಬಾಗಿಲು ತೆರೆದಾಗ ಎದುರುಮನೆಯ ಬಾಗಿಲು ದಡಕ್ಕಂತ ಮುಚ್ಚಿತು. ದರಿದ್ರ, ಗಂಡ ಕಳಕೊಂಡವಳು! ಎಂದು ಆಕೆ ಉಸುರಿದ್ದು ಅಮ್ಮನ ಕಿವಿಗೆ ಬೀಳದಿರಲಿಲ್ಲ, ಅಮ್ಮನ ಕಣ್ಭಲ್ಲಿ ಕಣ್ಣೀರು ಬತ್ತಿಹೋಗಿತ್ತು. ಮುಚ್ಚಿದ ಮನೆಬಾಗಿಲು ಕಂಡು ನಿಟ್ಟುಸಿರು ಬಿಟ್ಟು ಅಮ್ಮ ಮೌನವಾದಳು.
***********
ಅಂದು ಅಪ್ಪನ ವೈಕುಂಠ ಸಮಾರಾಧನೆ ದಿನ. ಮುತ್ಯೈದೆಯರಿಂದ ಅರಿಶಿನ ಕುಂಕುಮ ಕೊಡಲು ಆದೇಶಿಸಿದರು. ಬೆಳ್ಲಿ ತಟ್ಟೆ ಎತ್ತಿಕೊಂಡು ನಾನು ಸರತಿ ಸಾಲಿನಲ್ಲಿ ಕುಳಿತು ಅರಿಶಿನ, ಕುಂಕುಮ ಹಂಚಿದೆ. ಮುತ್ಯೈದೆಯರ ಸರತಿ ಸಾಲಿನಲ್ಲಿ ಕುಳಿತ ಅಮ್ಮ ಸುಮ್ಮನಾದಳು. ಅಪ್ಪನಿರುವಾಗ ಅರಿಶಿನ ಕುಂಕುಮ ಎಂದರೆ ಮುಂದೆ ಬಂದು ಮುತ್ಯೈದೆ ಭಾಗ್ಯ ನೀಡು ದೇವಾ ಎಂದು ತಾಳಿಗೆ ಅರಿಶಿನ ಹಚ್ಚುತ್ತಿದ್ದ ಅಮ್ಮನಿಗೆ ಅರಿಶಿನ ಪಡೆಯುವ ಕನಿಷ್ಠ ಭಾಗ್ಯ ಇಲ್ಲದ ಈ "ಕಟ್ಟುಪಾಡು'ಗಳ ಬಗ್ಗೆ ಉತ್ತರವಿಲ್ಲದೆ ನಾನೂ ರಾಜಿಯಾಗಿದ್ದೆ!

Wednesday, December 7, 2011

ಅಗಲಿದ ಅಪ್ಪನೆಂಬ ಅಕ್ಕರೆಗೆ...


ನೀನು ಸುಮ್ಮನೆ ಮಲಗಿದ್ದೆ, ಮೌನವಾಗಿ. ಆ ಗಾಜಿನ ಪೆಟ್ಟಿಗೆಯೊಳಗೆ ಮಲಗಿದ್ದ ನಿನ್ನ ನೋಡುವಾಗ ನಿನ್ನ ಬಿಳಿಮೀಸೆಯಡಿಗಿನ ಮುಗ್ಧ ನಗು ನೆನಪಾಗುತ್ತಿತ್ತು. ಮತ್ತೆ ಮಾತಿಗೆ ತುಟಿಬಿಚ್ಚುವಂತೆ ಭಾಸವಾಗುತ್ತಿತ್ತು. ಪುಟ್ಟಾ ಎಂದು ಕೂಗುತ್ತಿಯೇನೋ, ಕಣ್ಣುಗಳಲ್ಲೇ ನಗುತ್ತಿಯೇನೋ ಅಂದುಕೊಂಡೆ.
ಆದರೆ ನೀ ನಗಲಿಲ್ಲ, ನಾನು ಅತ್ತೆ, ಗೋಳಾಡಿದೆ. ಮನಸ್ಸು, ಹೃದಯ ಕಣ್ಣೀರಾದರೂ ನೀನು ಬರಲೇ ಇಲ್ಲ. ನಿನ್ನ ಅಪ್ಪಾ ಎಂದು ಕೂಗುವ ಹಕ್ಕನ್ನೂ ನಾ ಕಳೆದುಕೊಂಡೆ. ಅಪ್ಪನಿಲ್ಲದ ಜಾಗದಲ್ಲಿ ನೀನು ಅಪ್ಪನಾಗಿ ಬಂದಾಗ ನಾನು ಮಾಮ ಎಂದು ಮಮಕಾರ ತೋರಲಿಲ್ಲ, ಅಪ್ಪಾ ಎಂದೆ. ನೀನು ಸೊಸೆ ಎನ್ನಲಿಲ್ಲ, ಮಗಳೇ ಎಂದು ಎದೆಗಪ್ಪಿಕೊಂಡೆ.
ಆ ಸಂಜೆ ಹೊತ್ತು ನೀನು ಇದ್ದಕಿದ್ದಂತೆ ಉಸಿರಾಡುವುದನ್ನು, ಮಾತನಾಡುವುದನ್ನು, ನಗುವುದನ್ನು, ನಿನ್ನ ಪಾಡಿಗೆ ಗೊಣಗುವುದನ್ನು, ಅಮ್ಮನ ಜೊತೆ ಸುಖಾಸುಮ್ಮನೆ ಜಗಳವಾಡುವುದನ್ನು ನಿಲ್ಲಿಸಿದಾಗ ದೇವರ ಮೇಲೆ ಕೆಟ್ಟ ಸಿಟ್ಟು ಬಂತು! ನಿನ್ನ ಮರಳಿ ಕೊಡು ಎಂದು ಕಣ್ಣೀರಿಟ್ಟರೂ ದೇವರು ಕಿಂಚಿತ್ತೂ ದಯೆ ತೋರಲೇ ಇಲ್ಲ.

ರಾತ್ರಿಯಿಡೀ ಮನೆಯೆದುರು ಬೆಂಕಿ ಹಾಕಿ ಕುಳಿತೆ. ಮನೆಯೊಳಗೆ ಗಾಜಿನ ಪೆಟ್ಟಿಗೆಯಲ್ಲಿ ಮಂಜುಗಡೆಯ ತಂಪಿಗೆ ನೀನೂ ಮಂಜಾಗುತ್ತಿದ್ದೆ. ಕಿಸಾಗೋತಮಿ ಕಥೆ ನೆನಪಾಯಿತು. ಸಾವಿಲ್ಲದ ಮನೆಯ ಸಾಸಿವೆ ಗೌತಮಿಗೆ ಕೊನೆಗೂ ಸಿಗಲೇ ಇಲ್ಲ.
ಆದರೂ ಇಷ್ಟು ಬೇಗ ನನ್ನ, ನಿನ್ನ ಅಗಲುವಿಕೆ ನ್ಯಾಯವಲ್ಲ ಎನ್ನೋದು ನನ್ನ ತಕರಾರು. 25 ವಸಂತಗಳನ್ನು ದಾಟಿದ ನಂತರ ನೀನು ಸಿಕ್ಕಿದೆ, ಬಾಯಿ ತುಂಬಾ ಅಪ್ಪಾ ಎಂದು ನಿನ್ನ ಕರೆದೆ. ನಿನ್ನ ಹೆಗಲ ಮೇಲೆ ಕೈಯಿಟ್ಟಾಗ ಸಲಿಗೆ ಎಂದು ಬೈಯಲಿಲ್ಲ. ಎಪ್ಪತ್ತೈದು ದಾಟಿದ ನೀನು ಪದೇ ಪದೇ ನನ್ನ ಕೂಗಿದಾಗ ನಾನು ರೇಗಾಡಿದರೂ ಮಗಳೆಂದು ಸಹಿಸಿಕೊಂಡೆ.
ನೀನು ಕಣ್ಣಲ್ಲಿ ಕಣ್ಣಿಟ್ಟು ಸಾಕಿದೆ, ಕಿವಿಗೆ ಓಲೆ, ಜುಮುಕಿ ತಂದೆ, ಕೈಗಳಿಗೆ ಮಿನುಗು ಬಳೆಗಳನ್ನು ತಂದೆ, ಮುಡಿಗೆ ಮಲ್ಲಿಗೆ ಮೊಳ ತಂದೆ, ಕಣ್ಣಿಗೆ ಕಾಡಿಗೆ ತಂದೆ, ಕಾಲಿಗೆ ಸದ್ದುಗೈಯುವ ಗೆಜ್ಜೆ ತಂದೆ, ಮನೆ ತುಂಬಾ ಗೆಜ್ಜೆಯ ಸಪ್ಪಳ ಮಾಡಿದೆ. ಆದರೆ, ಒಂದೇ ಒಂದು ನಿನ್ನಾಸೆ ಈಡೇರಲಿಲ್ಲ, ನನಗೆ ಮೊಗ್ಗಿನ ಜಡೆ ಇಳಿಸಿ ನೋಡಬೇಕೆಂಬ ನಿನ್ನಾಸೆ ಈಡೇರಲೇ ಇಲ್ಲ. ದೇವರ ಅನ್ಯಾಯವಿದು!