ಅಂದು ನೀನು ಅತ್ತಿದ್ದೆ, ನನ್ನ ದೊಡ್ಡ ಬ್ಯಾಗನ್ನು ಎತ್ತಿ ಆ ಕೆಂಪು ಬಣ್ಣದ ಕಾರಿಗೆ ಹಾಕುವಾಗ ನೀನು ಮುಸಿ ಮುಸಿ ಅಳುತ್ತಿದ್ದುದನ್ನು ಕಂಡು ಒಂದು ಕ್ಷಣ ಅಚ್ಚರಿ. ಪ್ರತಿದಿನ ನೀನು ಅಳುಮುಂಜಿ ಎಂದು ರೇಗಿಸುತ್ತಾ, ನಿನ್ನಿಂದ ಬೈಗುಳ ತಿನ್ನುತ್ತಾ ಇದ್ದವಳಿಗೆ ಅಂದು ನೀನು ಅಳೋದು ನಿಜಕ್ಕೂ ವಿಸ್ಮಯ ಅನಿಸಿಬಿಡ್ತು. ಪ್ರೀತಿ ಅಂದ್ರೆ ಅದೇ ತಾನೇ? ನಿನ್ನ ಬಗ್ಗೆ ಯೋಚಿಸಿದಾಗಲೆಲ್ಲಾ ನನಗನಿಸುವುದು ಬಹುಶಃ ನನ್ನ ನೀನು ಪ್ರೀತಿ ಮಾಡಿದಷ್ಟೂ ಬೇರ್‍ಯಾವ ಅಣ್ಣಂದಿರೂ ಪ್ರೀತಿ ಮಾಡೊಲ್ಲ ಅಂತ! ಇದು ನನ್ನ ಹೆಮ್ಮೆ. ನಿನ್ನ ಮೇಲಿನ ಅತೀವ ಪ್ರೀತಿ, ವಿಶ್ವಾಸ.
ನಿನ್ನನ್ನು ಅಣ್ಣಾ ಅಂತ ಕೂಗೋದೇ ಒಂದು ಸಂಭ್ರಮ ಕಣೋ. ಅಂದು ನಾನು ಮದುವೆಯಾಗುತ್ತಿದ್ದೇನೆ ಅಂದಾಗ ಎಲ್ಲರಿಗಿಂತ ಖುಷಿ ಪಟ್ಟವನು ನೀನೇ ಅನಿಸುತ್ತೆ. ಹೋದಲೆಲ್ಲಾ ಸಿಕ್ಕ ಸಿಕ್ಕ ‘ಕಲ್ಲುದೇವರು’ಗಳ ಎದುರು ಮೂಕವಾಗಿ ನಿಂತು ನನ್ನ ತಂಗಿಗೆ ಮದುವೆಯಾಗಲಿ ಎಂದು ಬೇಡಿಕೊಳ್ಳುತ್ತಿದೆಯಲ್ಲಾ ಬಹುಶಃ ಅದರ ಫಲವೇ ಇರಬೇಕು ಅಂದುಕೊಂಡು ಮತ್ತೆ ಅದೇ ದೇಗುಲಗಳ ಮುಂದೆ ನಿಂತು ಹಣ್ಣು ಕಾಯಿ ಮಾಡಿಸಿದವನು ನೀನೇ! ನನ್ನಣ್ಣ ಎಂದು ನಿನ್ನ ನೂರು ಬಾರಿ ಕೂಗಿದರೂ ಯಾವತ್ತೂ ನೀನು ನನ್ನ ಎತ್ತಿ ಆಡಿಸಲಿಲ್ಲ, ಮುದ್ದು ಮಾಡಲಿಲ್ಲ, ಹೆಗಲ ಮೇಲೆ ಕುಳ್ಳಿರಿಸಿ ಪೇಟೆ ಸುತ್ತಾಡಿಸಿಲ್ಲ. ಆದರೂ ನಿನ್ನೊಳಗೇ ನನಗಾಗಿ ಕಾದಿಟ್ಟಿರುವ ಆ ಅನನ್ಯ ಪ್ರೀತೀನಾ ಕ್ಷಣ ಕ್ಷಣವೂ ಧಾರೆ ಎರೆಯುತ್ತಾ ಬಂದೆ.
ಅಂದು ನನ್ನ ನೀನು ಅತ್ತೆ ಮನೆಗೆ ಕಳುಹಿಸಿಕೊಡುವಾಗ ನನ್ನ ತಬ್ಬಿಕೊಂಡು ಅದೆಷ್ಟು ಅತ್ತುಬಿಟ್ಟಿಯಲ್ಲಾ. ಅಲ್ಲಿಯವರೆಗೆ ನಿನ್ನ ಕಣ್ಣಿಂದ ಒಂದು ಹನಿ ಬಿಂದು ಜಾರಿದ್ದನ್ನೂ ನಾ ನೋಡಿರಲಿಲ್ಲ. ಇಂದಿಗೂ ಆ ಮುಖ ಕಣ್ಣೆದುರು ತೇಲಿಬಂದರೆ ನಾನೂ ಕಣ್ಣೀರಾಗುತ್ತೇನೆ. ಸಮಾಜ, ಬದುಕಿನ ಪ್ರಶ್ನೆ ಬಂದಾಗ ಅಲ್ಲೆಲ್ಲಾ ನಿನ್ನ ಕಾಳಜಿಯ ಚೌಕಟ್ಟು ಹಾಕಿದ್ದೆ. ನನ್ನೊಳಗಿರುವ ಪ್ರತಿಭೆಗಳನ್ನು ಹೆಕ್ಕಿ ತೆಗೆದು ನನ್ನೆದುರಿಟ್ಟೆ. ಒಡಹುಟ್ಟಿಲ್ಲಾಂದ್ರೂ ಒಡನಾಡಿಯಾಗಿದ್ದೆ. ಬಹುಶಃ ನನ್ನ ಬಾಯಿಂದ ಅಣ್ಣಾ...ಎಂಬ ಶಬ್ಧ ಬಂದರೆ ಅದು ನಿನ್ನ ಕಿವಿಗೇ ಬೀಳುತ್ತೆ, ಏಕೆಂದರೆ ನೀನೋರ್ವನೇ ಆ ಅಣ್ಣ! ಅಮ್ಮನ ನೆನಪಾದಗೆಲ್ಲಾ ನೀನೇ ಅಮ್ಮ ಅಂದಿದ್ದೀನಿ, ಮೌನವಾಗಿ ನಿನ್ನೆದುರು ಮೂಕಳಂತೆ ಅತ್ತಿದ್ದೀನಿ. ಎಲ್ಲವನ್ನೂ ನಿನ್ನೆದುರು ಹರವಿ ಮನಸ್ಸು ಹಗುರವಾಗಿಸಿಕೊಂಡಿದ್ದೀನಿ. ಎಲ್ಲೋ ಕಳೆದುಹೋದ ಕನಸು, ಪ್ರೀತಿ, ದೂರದಲ್ಲೆಲ್ಲೋ ಬಿಟ್ಟು ಬಂದ ಅಮ್ಮ, ಆ ನನ್ನ ಪುಟ್ಟ ಮನೆ...ಹೀಗೆ ಎಲ್ಲಾ ಕಡೆ ‘ಮಿಸ್’ ಆದದ್ದನ್ನೆಲ್ಲಾ ಒಮ್ಮೆಲೇ ನನ್ನೆದುರು ತಂದಿಟ್ಟವನು ನೀನೇ.
೨೪ ರಕ್ಷಾ ಬಂಧನ. ಅದಕ್ಕೆ ನಿನಗೆ ಶುಭಾಶಯ ಹೇಳೋಣ ಅಂಥ ಪತ್ರ ಬರೆದಿದ್ದೀನಿ. ಬೊಗಸೆ ತುಂಬಾ ಪ್ರೀತೀನ ನಿನಗಾಗಿ ಇಟ್ಟಿದ್ದೀನಿ. ಪತ್ರನ ಜೋಪಾನವಾಗಿ ನಿನ್ನ ಬೀರುವಿನಲ್ಲಿ ಭದ್ರವಾಗಿಟ್ಟುಕೋ. ಶುಭಾಶಯಗಳು...
ಮತ್ತದೇ ನಿನ್ನ ಮಡಿಲಾಸೆ...
ಇಂತೀ
ನಿನ್ನ ತಂಗಿ
(ಪ್ರಕಟ: http://hosadigantha.in/epaper.php?date=08-19-2010&name=08-19-2010-15)
Monday, August 23, 2010
Subscribe to:
Posts (Atom)