Saturday, December 25, 2010
ಅರ್ಥವಾಗದವಳು!
೬೦ ವರ್ಷದ ಹಿಂದೆ ನಿನ್ನ ಸ್ಕೂಲಿಗೆ ಕಳುಹಿಸಿದ್ದೆ. ಸೂರ್ಯ ಮುಳುಗುವ ಹೊತ್ತು ಅದೇ ಕಬ್ಬಿಣದ ಗೇಟಿನಲ್ಲಿ ನಿಂತು ಸ್ಕೂಲಿನಿಂದ ಬರುವ ನಿನಗಾಗಿ ಕಾಯುತ್ತಿದ್ದೆ. ನಿನ್ನ ‘ಅಮ್ಮಾ’ ಕರೆಗಾಗಿ. ಆ ಸಂಜೆ ಹೊತ್ತಿನಲ್ಲಿ ಉಪ್ಪಿಟ್ಟು ಮಾಡಿ ನಿನಗಾಗಿ ಕಾಯುವುದೇ ನನಗೆ ಹೆಮ್ಮೆ. ಇದು ಒಡಲಾಳದ ದನಿ. ಎಲ್ಲವೂ ನನ್ನದೆಯ ನೆನಪು.
ಕಾಲ ನಿಲ್ಲುವುದಿಲ್ಲ. ಬದುಕು ಚಲಿಸುತ್ತದೆ. ಮನುಷ್ಯ ಇದಕ್ಕೆ ಹೊರತಲ್ಲ. ಎಷ್ಟೋ ಬಾರಿ ಇದನ್ನೆಲ್ಲಾ ನಿನ್ನ ಬಳಿ ಕುಳಿತು, ನಿನ್ನ ಕಣ್ಣುಗಳನ್ನು ನೋಡುತ್ತಲೇ ಹೇಳಬೇಕನಿಸುತ್ತೆ. ಆದರೆ, ನಿನ್ನ ದಿನನಿತ್ಯದ ಜಂಜಾಟದ ನಡುವೆ ಅಮ್ಮನ ಮಾತು ಕೇಳಲು ಅದೆಲ್ಲಿ ಸಮಯವಿರುತ್ತೆ? ಎಂದು ಎಲ್ಲವನ್ನೂ ಮೌನದೊಳಗೆ ಹೂತುಬಿಡ್ತೀನಿ.
ನಿಂಗೊತ್ತು ಅಮ್ಮನಿಗೆ ೮೦ ದಾಟಿದೆ. ಕೂದಲು ಬೆಳ್ಳಿಯಾಗಿದೆ. ಹಲ್ಲುಗಳು ಕಾಣಿಸುತ್ತಿಲ್ಲ. ಮುಖದಲ್ಲಿದ್ದ ನಗುನೂ ಮಾಸುತ್ತಿದೆ. ಕಣ್ಣುಗಳು ಗುಳಿಬಿದ್ದಿವೆ. ಬೆನ್ನು ಬಾಗಿದೆ. ಹಗಲಿಡೀ ತೋಟದೊಳಗೆ ಬದುಕು ಕಂಡಿದ್ದ ಅಮ್ಮ ಇಂದು ಊರುಗೋಲು ಹಿಡಿದು ನಡೆಯುತ್ತಿದ್ದಾಳೆ. ನಿನಗೆ ಹಿಡಿ ಅನ್ನ ಉಣಿಸಿದ ಆ ಬೆರಳುಗಳು ಇಂದು ನಡುಗುತ್ತಿವೆ. ನೀನು ನಿತ್ಯ ಮಾಡಿಸುವ ಆ ಜಳಕಕ್ಕೂ ನನ್ನ ಮೈ ಒಗ್ಗುತ್ತಿಲ್ಲ. ಪ್ರೀತಿಯಿಂದ ನೀಡಿದ ಹಿಡಿತುತ್ತು ನನಗೆ ರುಚಿಸುತ್ತಿಲ್ಲ.ಅರ್ಥವಿಲ್ಲದ ಕನಸುಗಳಿಗೂ ಜೀವವಿಲ್ಲ. ಪ್ರೀತಿಯ ಸವಿ ಅನುಭವಿಸುವ ಹೊತ್ತುನೂ ಕಳೆದುಹೋಗಿದೆ. ನಿನಗನಿಸಬಹುದು ಅಮ್ಮ ಅರ್ಥವಾಗದವಳು!, ಆದರೆ ಇದು ಅರ್ಥವಾಗದ ವಯಸ್ಸು. ಕಾಲ ಹಕ್ಕಿಯಂತೆ ಹಾರುತಿದೆ. ಈಗ ನನಗೆ ಕೊನೆಯ ಹೊತ್ತು.
೪೦ ವರ್ಷದ ಹಿಂದೆ ನೋಡಿದ ಕಸ್ತೂರಿ ನಿವಾಸದ ಹಾಡು ನೆನಪಾಗುತ್ತದೆ.
ಮೈಯನ್ನೇ ಹಿಂಡಿ ನೊಂದರೂ
ಕಬ್ಬು ಸಿಹಿಯ ಕೊಡುವುದು
ತೇಯುತಲಿದ್ದರೂ ಗಂಧದ ಪರಿಮಳ
ತುಂಬಿ ಬರುವುದು ತಾನೇ
ಉರಿದರೂ ದೀಪವು ಮನೆಗೆ
ಬೆಳಕು ತರುವುದು....
ಪ್ರಕಟ: http://www.hosadigantha.in/epaper.php?date=12-08-2010&name=12-08-2010-13
Friday, December 3, 2010
ಬೆಳ್ಳಿ ಕಾಲುಂಗುರ
ಸುತ್ತಲೂ ವಾದ್ಯ, ಜಾಗಟೆಗಳ ಸದ್ದು. ನೆರೆದವರ ಮನಸ್ಸು ಸಂಭ್ರಮದ ಕಡಲು. ನಮಗರ್ಥವಾಗದ ಪುರೋಹಿತರ ಸಾಲು ಸಾಲು ಶ್ಲೋಕಗಳು. ಆಗ ತಾನೇ ನೀನು ನನ್ನ ಕೊರಳಿಗೆ 'ತಾಳಿ'ಯಾಗಿದ್ದೆ. ನನ್ನ ಮುಖದಲ್ಲಿ ಮುತ್ತೈದೆಯ ರಂಗು. ನಿನ್ನ ಮುಖದಲ್ಲಿ ಮಲ್ಲಿಗೆ ನಗು, ನಾಳಿನ ‘ರವಸೆಗಳು, ಹಸಿರಸಿರು ಕನಸುಗಳು. ಅಂದು ನೀನು ನನ್ನ ಕಾಲು ಮುಟ್ಟಿದಾಗ ಒಂದು ಕ್ಷಣ ಅಚ್ಚರಿ, ಭಯ, ನಾಚಿಕೆ. ಕೆನ್ನೆಯಲ್ಲಿ ಏಳು ಬಣ್ಣದ ರಂಗೋಲಿ. ನನ್ನ ಪುಟ್ಟ ಬಿಳಿಪಾದ, ಅದರ ತುದಿಯಲ್ಲಿರುವ ಆ ಸಣ್ಣ ಬೆರಳುಗಳು ನಿನ್ನ ಸ್ಪರ್ಶಕ್ಕೆ ಕಂಪಿಸತೊಡಗಿದವು. ಆದರೂ, ನನ್ನ ಮನಸ್ಸಿನಲ್ಲಿ ಖುಷಿಯ ಮೃದಂಗ.
ಬೆಳ್ಳಿ ಕಾಲುಂಗುರ
ಅಮ್ಮ ಹೇಳಿದ್ದ ನೆನಪು: ಗಂಡ ಒಂದೇ ಒಂದು ಸಲ ತನ್ನ ಹೆಂಡತಿಯ ಕಾಲನ್ನು ಮುಟ್ಟುತ್ತಾನಂತೆ, ಅದು ಕಾಲುಂಗುರ ತೊಡಿಸುವಾಗ. ಹೌದು, ನೀನು ಅಂದು ನನ್ನ ಕಾಲು ಮುಟ್ಟಿದ್ದೆ. ಅದೇ ಮೊದಲು. ಅದು ನನ್ನ ಜೀವನದ ಅಮೂಲ್ಯ ಕ್ಷಣವಾಗಿತ್ತು. ಬೆಳ್ಳಿ ಕಾಲುಂಗುರವನ್ನು ನನ್ನ ಆ ಪುಟ್ಟ ಬೆರಳುಗಳಿಗೆ ಹಾಕಿದ್ದೆ. ನನ್ನ ಮನಸ್ಸಲ್ಲಿ ಆ ಕ್ಷಣ ನೀನು ಗೊತ್ತು ಮಾಡಿದ ಪುಟ್ಟ ಬಾಡಿ ಗಾರ್ಡ್ ಅನಿಸಿತ್ತು. ಹೌದು, ನೀನು ಜೊತೆಗಿಲ್ಲದ ಸಮಯದಲ್ಲಿ ಅದು ನನ್ನ ಬಾಡಿ ಗಾರ್ಡ್, ಅದು ನೀನು ನನಗೆ ನೀಡಿದ ಆಣೆಯ ಉಡುಗೊರೆ. ಅದನ್ನು ಕಂಡರೆ ನನಗೆ ಗೌರವ, ನೀನೆಂಬ ಪ್ರೀತಿ. ನೀನು ತೊಡಿಸಿದ್ದೆಂಬ ಅಗಾ‘ ಹೆಮ್ಮೆ. ಆಗಾಗ ಅದನ್ನು ನೋಡಿ ಖುಷಿಪಡುತ್ತೇನೆ. ದಾರಿಗುಂಟ ಸಾಗುವಾಗ ನನ್ನನ್ನೇ ದಿಟ್ಟಿಸಿ ನೋಡುವ ಅದೆಷ್ಟೋ ಕಣ್ಣುಗಳಿಗೆ ನನ್ನ ಕಾಲುಂಗುರವೇ ಉತ್ತರ ಹೇಳುತ್ತದೆ. ಬೆಳ್ಳಿ ಕಾಲುಂಗುರ ಎಂದಾಗ ನೆನಪಾಗುವುದು ಅದೇ ಹಾಡು
ಬಾಳ ಕಡಲಲಿ ಪ್ರೇಮ ನದಿಗಳ ಸಂಧಿ
ಸಮಯದಲಿ ಮಿಂಚುವ ಮಿನುಗುವ ಸಾಕ್ಷಿ ಈ ಕಾಲುಂಗುರ
ನಾದಗಡಲಲಿ ವೇದ ಘೋಷದ ಸಪ್ತಪದಿಗಳಲಿ
ಬದುಕಿನ ಬಂಡಿಗೆ ಸಾರಥಿ ಕಾಲುಂಗುರ
ಶುಕವ ತರುವ ಸತಿ ಸುಖವ ಕೊಡುವ
ಮನ ಮನೆಯ ನೆಲದಲಿ ಗುನುಗುವ ಒಡವೆಯೋ....