ಸುತ್ತಲೂ ವಾದ್ಯ, ಜಾಗಟೆಗಳ ಸದ್ದು. ನೆರೆದವರ ಮನಸ್ಸು ಸಂಭ್ರಮದ ಕಡಲು. ನಮಗರ್ಥವಾಗದ ಪುರೋಹಿತರ ಸಾಲು ಸಾಲು ಶ್ಲೋಕಗಳು. ಆಗ ತಾನೇ ನೀನು ನನ್ನ ಕೊರಳಿಗೆ 'ತಾಳಿ'ಯಾಗಿದ್ದೆ. ನನ್ನ ಮುಖದಲ್ಲಿ ಮುತ್ತೈದೆಯ ರಂಗು. ನಿನ್ನ ಮುಖದಲ್ಲಿ ಮಲ್ಲಿಗೆ ನಗು, ನಾಳಿನ ‘ರವಸೆಗಳು, ಹಸಿರಸಿರು ಕನಸುಗಳು. ಅಂದು ನೀನು ನನ್ನ ಕಾಲು ಮುಟ್ಟಿದಾಗ ಒಂದು ಕ್ಷಣ ಅಚ್ಚರಿ, ಭಯ, ನಾಚಿಕೆ. ಕೆನ್ನೆಯಲ್ಲಿ ಏಳು ಬಣ್ಣದ ರಂಗೋಲಿ. ನನ್ನ ಪುಟ್ಟ ಬಿಳಿಪಾದ, ಅದರ ತುದಿಯಲ್ಲಿರುವ ಆ ಸಣ್ಣ ಬೆರಳುಗಳು ನಿನ್ನ ಸ್ಪರ್ಶಕ್ಕೆ ಕಂಪಿಸತೊಡಗಿದವು. ಆದರೂ, ನನ್ನ ಮನಸ್ಸಿನಲ್ಲಿ ಖುಷಿಯ ಮೃದಂಗ.
ಬೆಳ್ಳಿ ಕಾಲುಂಗುರ
ಅಮ್ಮ ಹೇಳಿದ್ದ ನೆನಪು: ಗಂಡ ಒಂದೇ ಒಂದು ಸಲ ತನ್ನ ಹೆಂಡತಿಯ ಕಾಲನ್ನು ಮುಟ್ಟುತ್ತಾನಂತೆ, ಅದು ಕಾಲುಂಗುರ ತೊಡಿಸುವಾಗ. ಹೌದು, ನೀನು ಅಂದು ನನ್ನ ಕಾಲು ಮುಟ್ಟಿದ್ದೆ. ಅದೇ ಮೊದಲು. ಅದು ನನ್ನ ಜೀವನದ ಅಮೂಲ್ಯ ಕ್ಷಣವಾಗಿತ್ತು. ಬೆಳ್ಳಿ ಕಾಲುಂಗುರವನ್ನು ನನ್ನ ಆ ಪುಟ್ಟ ಬೆರಳುಗಳಿಗೆ ಹಾಕಿದ್ದೆ. ನನ್ನ ಮನಸ್ಸಲ್ಲಿ ಆ ಕ್ಷಣ ನೀನು ಗೊತ್ತು ಮಾಡಿದ ಪುಟ್ಟ ಬಾಡಿ ಗಾರ್ಡ್ ಅನಿಸಿತ್ತು. ಹೌದು, ನೀನು ಜೊತೆಗಿಲ್ಲದ ಸಮಯದಲ್ಲಿ ಅದು ನನ್ನ ಬಾಡಿ ಗಾರ್ಡ್, ಅದು ನೀನು ನನಗೆ ನೀಡಿದ ಆಣೆಯ ಉಡುಗೊರೆ. ಅದನ್ನು ಕಂಡರೆ ನನಗೆ ಗೌರವ, ನೀನೆಂಬ ಪ್ರೀತಿ. ನೀನು ತೊಡಿಸಿದ್ದೆಂಬ ಅಗಾ‘ ಹೆಮ್ಮೆ. ಆಗಾಗ ಅದನ್ನು ನೋಡಿ ಖುಷಿಪಡುತ್ತೇನೆ. ದಾರಿಗುಂಟ ಸಾಗುವಾಗ ನನ್ನನ್ನೇ ದಿಟ್ಟಿಸಿ ನೋಡುವ ಅದೆಷ್ಟೋ ಕಣ್ಣುಗಳಿಗೆ ನನ್ನ ಕಾಲುಂಗುರವೇ ಉತ್ತರ ಹೇಳುತ್ತದೆ. ಬೆಳ್ಳಿ ಕಾಲುಂಗುರ ಎಂದಾಗ ನೆನಪಾಗುವುದು ಅದೇ ಹಾಡು
ಬಾಳ ಕಡಲಲಿ ಪ್ರೇಮ ನದಿಗಳ ಸಂಧಿ
ಸಮಯದಲಿ ಮಿಂಚುವ ಮಿನುಗುವ ಸಾಕ್ಷಿ ಈ ಕಾಲುಂಗುರ
ನಾದಗಡಲಲಿ ವೇದ ಘೋಷದ ಸಪ್ತಪದಿಗಳಲಿ
ಬದುಕಿನ ಬಂಡಿಗೆ ಸಾರಥಿ ಕಾಲುಂಗುರ
ಶುಕವ ತರುವ ಸತಿ ಸುಖವ ಕೊಡುವ
ಮನ ಮನೆಯ ನೆಲದಲಿ ಗುನುಗುವ ಒಡವೆಯೋ....
4 comments:
ಭಾವ-ಜೀವ ಮೀಡಿವ ಈ ಬರಹ ಸೊಗಸು....
ಗಂಡ ಕಾಲುಂಗುರ ತೊಡಿಸಲು ಹೆಂದತಿಯ ಕಾಲು ಮುಟ್ಟುವ ಒಂದೇ ಕ್ಷಣದ ಆ ನೆನಪು ಮಧುರ ಭಾವವನ ಹಂಚಿಕೊಂಡ ನಿನ್ನ ಪರಿ ಬಹಳ ಟಚಿಂಗ್...ತಂಗ್ಯಮ್ಮ, ತನ್ನವಳ ರಕ್ಷಣೆ ಕಾಲಿಂದ ಹಣೆವರೆಗೆ ಎನ್ನುವ ಪ್ರತೀಕ ಕಾಲುಂಗುರ ಹಣೆಯ ಸಿಂಧೂರ.....ನೈಸ್...
ತುಂಬಾ ಭಾವ ಪೂರ್ಣ ಬರಹ. ಇಷ್ಟವಾಯಿತು.
....ನನ್ನ ಕಾಲು೦ಗುರವೆ ಉತ್ತರ ಹೇಳುತ್ತದೆ ....ಎನ್ನುವ , ಮಾನಸಿಕ ಸ್ಥ್ತಿತಿ ,ಸ೦ಸಾರದ ಬುನಾದಿಯಲ್ಲವೆ .
Post a Comment