Sunday, May 31, 2009

ನಿಮ್ಮ ಭವಿಷ್ಯ ಹೇಳತೇನ್ರೀ!

ನಿನ್ನೆಯ ಕನ್ನಡಪ್ರಭ ಸಾಪ್ತಾಹಿಕ ಓದುತ್ತಿದ್ದಂತೆ ಸುರೇಶ್ ವೆಂ. ಕುಲಕರ್ಣಿ ಎಂಬುವವರು ಬರೆದ ಬೇಂದ್ರೆ ಬದುಕಿನ ಪುಟ್ಟ ಘಟನೆಯೊಂದು ಕಣ್ಣಿಗೆ ಬಿತ್ತು. ಬೇಂದ್ರೆ ಅಜ್ಜ ಅಂದ್ರೆ ನಂಗೆ ತುಂಬಾ ಇಷ್ಟ. ಬದುಕಿನ ಜೊತೆ ನೇರ ಮಾತಿಗಿಳಿಯುವ ಅವರ ಕವನಗಳು ನಂಗಿಷ್ಟ. ಬೇಂದ್ರೆ ಕುರಿತಾಗಿ ಬರೆಯುವ ಸುನಾಥ್ ಅಂಕಲ್ ಬ್ಲಾಗ್ ಸಲ್ಲಾಪ, ಗೋದಾವರಿ ಮೇಡಂ ಎಲ್ಲಾರ ಬರಹಗಳನ್ನು ಓದುತ್ತಿರುವೆ. ಇದೀಗ ಕನ್ನಡಪ್ರಭದಲ್ಲಿ ಬಂದಿರುವ ಸುರೇಶ್ ವೆಂ. ಕುಲಕರ್ಣಿ ಅವರ ಬರಹಗಳನ್ನು ತೆಗೆದು ಯಥಾವತ್ತಾಗಿ ಹಾಕೊಂಡಿರುವೆ..ಇದು ಕೃತಿಚೌರ್ಯ ಅಲ್ಲ, ಬೇಂದ್ರೆ ಕುರಿತಾದ ಇಂಥ ಘಟನೆಗಳನ್ನು ಸಂಗ್ರಹಿಸುವತ್ತ ನನ್ನ ಪುಟ್ಟ ಹೆಜ್ಜೆಯಷ್ಟೇ.

"ಬೆಳಗಿನ ಏಳು ಗಂಟೆಯಾಗಿತ್ತು. ಬೇಂದ್ರೆಯವರು ಮನೆಮುಂದಿನ ಗೇಟಿನ ಹತ್ತಿರ ಬಿಳಿಧೋತರ, ಕರೇಕೋಟು ಮ್ಯಾಲೆ ಕುಲಾಯಿಟೋಪಿ ಹಾಕಿಕೊಂಡು, ಕೋಟಿನ ಕಿಸೆಯಲ್ಲಿ ಕೈ ಇಟಕೊಂಡು, ಆ ಕಡೆ-ಈ ಕಡೆ ಶತಪಥ ಹಾಕುತ್ತಾ ಇದ್ದರು. ಅವರನ್ನು ನೋಡಿ, ಒಬ್ಬ ವ್ಯಕ್ತಿ 'ಅಜ್ಜಾರ ಒಳಗೆ ಬರಬಹುದಾ?' ಅಂತ ಕೇಳಿದ.
ಬೇಂದ್ರೆ: ಯಾಕ, ನಿನ್ನ ಹೆಸರೇನು? ಯಾವೂರು?
ಭವಿಷ್ಯಗಾರ: ನಾನು ಊರೂರು ತಿರತೇನ್ರೀ. ನಿಮ್ಮ ಭವಿಷ್ಯ ಹೇಳತೇನ್ರಿ?
ಬೇಂದ್ರೆ: ಭವಿಷ್ಯವನ್ನು ಯಾವ ಆಧಾರದ ಮೇಲೆ ಹೇಳತೀ?
ಭವಿಷ್ಯಗಾರ: ನಿಮ್ಮ ಮುಖಾ ನೋಡಿ, ಕೈನೋಡಿ, ಹಸ್ತಾಕ್ಷರ ನೋಡಿ ಭವಿಷ್ಯವನ್ನು ಹೇಳತೇನ್ರಿ. ನಿಮ್ಮ ನಕ್ಷತ್ರ ಹೇಳಿದರ ಅದರ ಮ್ಯಾಲಿಂದನೂ ನಿಮ್ಮ ಭವಿಷ್ಯವನ್ನ ಹೇಳತೇನ್ರೀ.
ಬೇಂದ್ರೆ: ನಕ್ಷತ್ರದ ಬಗ್ಗೆ ನಿನಗೆ ಛಲೋ ತಿಳೀತದೇನು?
ಭವಿಷ್ಯಗಾರ: ತಿಳಿತದ್ರೀ

ಬೇಂದ್ರೆ: ಈಗ 'ವೇಗಾ' ಅಂದರ 'ಅಭಿಜಿತ್ ನಕ್ಷತ್ರ' ಎಲ್ಲೆ ಬರತದ?

ಭವಿಷ್ಯಗಾರ: (ವಿಚಾರಿಸಿ) ಗೊತ್ತಿಲ್ಲರಿ..
ಬೇಂದ್ರೆ: ಇರಲಿ, ಈಗ ನನಗೆ ಭವಿಷ್ಯ ಕೇಳೋದೇನಿಲ್ಲ. ನಿನ್ನ ವೇಳ್ಯಾ ತೊಗೊಂಡದ್ದಕ್ಕ 'ಫೀ' ಏನು?
ಭವಿಷ್ಯಗಾರ: ನಾನು ಭವಿಷ್ಯವನ್ನು ಹೇಳದs 'ಫೀ' ತೊಗೋಳ್ಳೋದಿಲ್ಲ. ಭವಿಷ್ಯವನ್ನು ಕೇಳಿರಿ ತೊಗೋತೀನಿ.
ಬೇಂದ್ರೆ: ನನ್ನ ಭವಿಷ್ಯವನ್ನು ಕೇಳೋದಿಲ್ಲ, ನಡೀಯಿನ್ನ.
ಭವಿಷ್ಯಗಾರ: ಊರಲ್ಲಿ ಹೋಗಲಿಕ್ಕೆ ಸಿಟಿಬಸ್ಸು ಎಲ್ಲಿ ನಿಲ್ಲತಾವು?
ಬೇಂದ್ರೆಯವರು ತಮ್ಮ ಮನೆಯ ಗೇಟಿನವರೆಗೆ ಹೋಗಿ, ಬಸ್ಸು ಎಲ್ಲಿ ನಿಲ್ಲತಾವು
ಅನ್ನೋದನ್ನು ಸ್ವತಃ ತಾವೇ ಹೋಗಿ ತೋರಿಸಿದರು. ಭವಿಷ್ಯವನ್ನು ಹೇಳುವವನು ನಾಲ್ಕು ಹೆಜ್ಜೆ ಮುಂದ ಹೋಗಿದ್ದ, ಅಷ್ಟರಾಗ ಬೇಂದ್ರೆಯವರು ಅವನನ್ನು ಕರೆದು, 'ನೀ ಖರೇನ ಭವಿಷ್ಯ ಹೇಳತೀ?
ಭವಿಷ್ಯಗಾರ: ಯಾಕ್ರೀ? ಕೇಳ್ಯಾರ ನೋಡ್ರೀ, ಹಿಂದಿನದು, ಮುಂದಾಗೋದು ಎಲ್ಲಾನೂ ಹೇಳತೀನಿ.
ಬೇಂದ್ರೆ: ಇಲ್ಲಾ, ಬೆಳಿಗ್ಗೆ ಎದ್ದ ಕೂಡಲೇ, ಯಾರ ಮನಿಗೆ ಹೋದ್ರ, ಭವಿಷ್ಯ ಕೇಳತಾರ? ಯಾರು ಕೇಳೊದಿಲ್ಲ? ಅನ್ನೋದು ನಿನಗs ತಿಳೀದs ನೀನು ಬೇರೆಯವರಿಗೆ ಹ್ಯಾಂಗ ಭವಿಷ್ಯವನ್ನು ಹೇಳತೀ?
ಭವಿಷ್ಯಗಾರ ಮರುಮಾತನಾಡದೆ ಬಸ್ ಸ್ಟಾಫಿಗೆ ಬಂದ.
ಚಿತ್ರಕೃಪೆ: ಅಂತರ್ಜಾಲ

Friday, May 22, 2009

ಥತ್!! ..ಈ ಜಡಿಮಳೆ ನನ್ನ ಕನಸುಗಳಿಗೆ ಸಾಥ್ ನೀಡಲಿಲ್ಲ..

ಮಳೆಯೇ ಶಿವರಾಯ ಓ ತಂದೆ
ಯಾವ ದೇವರಿಲ್ಲ ನಿನ ಮುಂದೆ..
ಯಾವತ್ತೋ ಕೇಳಿದ ಜನಪದ ಹಾಡಿನ ಸಾಲುಗಳು ಮತ್ತೆ ಮತ್ತೆ ನನ್ನೊಳಗೆ ಗುನುಗಿದವು. ಇತ್ತೀಚೆಗೆ ಬೆಂದ ಕಾಳೂರಿನ ಇಳೆಯಂಗಳಕ್ಕೆ ತುಂತುರು ಮಳೆ ಹನಿ ಸ್ಪರ್ಶಿಸಿದಾಗ ನೆನಪುಗಳ ಮೆರವಣಿಗೆಯಲ್ಲಿ ನನ್ನದೂ ಪುಟ್ಟ ಪಯಣವಾಗಿಸಿದ್ದೆ. ಬಾಲ್ಯದ ಭಾವಗೀತೆಗಳನ್ನು ತುಂತುರು ಮಳೆಹನಿಯ ಝೇಂಕಾರದೊಂದಿಗೆ ಮೆಲುಕುಹಾಕಿದ್ದೆ. ತಣ್ಣನೆಯ ಗಾಳಿ, ಮುತ್ತಿನ ನೀರ ಹನಿಗೆ ಸಂಭ್ರಮಗೊಂಡ ಪುಟ್ಟ ಮಕ್ಕಳು, ಮೊದಲ ಮಳೆ ಹನಿಯ ಸ್ಪರ್ಶದಿಂದ ಪುಳಕಿತಗೊಂಡ ಇಳೆ, ಗೂಡು ಸೇರುವ ತವಕದ ಹಕ್ಕಿಗಳ ಕಲರವ ಧರಿತ್ರಿಯಲ್ಲೂ ಒಂದು ಬಗೆಯ ಸಂಭ್ರಮದ ಹಬ್ಬವಾಗಿಸಿತ್ತು. ಹ್ಲಾಂ..ನೀವೇ ಓದಿದ್ರಲ್ಲಾ..ತುಂತುರು ಮಳೆಯಲ್ಲಿ ನೆನಪುಗಳ ಮೆರವಣಿಗೆ!!

ಆದರೆ, ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಸುರಿವ ಜಡಿಮಳೆ ಅದೇಕೋ ನನ್ನೊಳಗಿನ ಬೆಚ್ಚಗಿನ ಭಾವಕ್ಕೆ ಸಾಥ್ ನೀಡುತ್ತಿಲ್ಲ. ರಪರಪನೆ ಸುರಿವ ಮಳೆಹನಿಗಳಿಗೆ
ಕನಸುಗಳು ಗೂಡು ಕಟ್ಟೊಲ್ಲ. ಮುತ್ತಿನ ಹನಿಗಳ ಜೊತೆ ಆಡಿಬಿಡೋಣ ಎಂದೂ ಅನಿಸಲ್ಲ. ಮನೆಯೊಳಗೆ ಕುಳಿತು ಹಪ್ಪಳ ಸಂಡಿಗೆ ಮೆಲ್ಲುತ್ತಾ ವರುಣನ ಭೂ ಚುಂಬನ ನೋಡಿ ಖುಷಿಪಡೋಣ ಅಂದ್ರೂ ಈ ಬೆಂಗ್ಳೂರು ಮಳೆ ಮನೆ ಸೇರಕ್ಕೆ ಮೊದಲೇ ಗುಡುಗು-ಸಿಡಿಲ ಆರ್ಭಟ ಹೊತ್ತು ತಂದು ಮನಸ್ಸನ್ನೇ ಮುದುಡಿಸಿ ಬಿಡುತ್ತೆ. ಹೌದು, ಆ ಸಂಜೆಗೂ-ಬೆಂಗಳೂರಿನಲ್ಲಿ ಸುರಿಯೋ ಮಳೆಗೂ ಅದೇನೋ ಬಂಧ ..ಸಂಜೆಯಾಗುವಾಗಲೇ ಧೋ ಎಂದು ಮಳೆ ಸರಿಬೇಕಾ!
ಥತ್! ಕೆಟ್ಟ ಸಿಟ್ಟು ಬಂದು ಬಿಡುತ್ತೆ. ಈ ಮಳೆಯನ್ನು ಅನುಭವಿಸೋಕೆ ಆಗೊಲ್ಲ ಅಂತ ಅಲ್ವಾ? ಅಂತ ನಿರಾಶೆಯ ಕರಿಮೋಡ ನನ್ನನ್ನೇ ಆವರಿಸಿಬಿಡುತ್ತೆ.

ಮೊನ್ನೆ ಸುರಿದ ಜಡಿಮಳೆಗೆ ಬೆಂಗಳೂರಿನ ಡಾಂಬರ್ ರಸ್ತೆಗಳೆಲ್ಲ ಹಳ್ಳ-ಹೊಳೆ, ಮಹಾನದಿಗಳಾಗಿದ್ದವು. ಬಿರುಸಿನಿಂದ ಬೀಸಿದ ಗಾಳಿಯ ಅಟ್ಟಹಾಸಕ್ಕೆ ನನ್ನ ಪ್ರೀತಿಯ ಛತ್ರಿಯ ಬೆನ್ನೆಲುಬುಗಳೆಲ್ಲಾ ಮುರಿದು ನುಜ್ಜು-ಗುಜ್ಜಾಗಿ, ಆ ಮುದ್ದಿನ ಛತ್ರಿ ನನ್ನೆದೆ ಅಪ್ಪಿಕೊಂಡು ಮಲಗಿಬಿಟ್ಟಿತ್ತು. ಕಾಲಲ್ಲಿದ್ದ ಕಪ್ಪಗಿನ ಶೂ ಮಣ್ಣು ಮೆತ್ತಿಕೊಂಡು ನನ್ನನ್ನೂ ಹೊರಲಾಗದೆ ಬಸವಳಿದಿತ್ತು. ಮಳೆ ಬಿದ್ದ ರಭಸಕ್ಕೆ ನನ್ನ ದೇಹ ಸೋತು ಸುಣ್ಣವಾಗಿತ್ತು. ಅಟೋ ಎಂದು ಕೈಹಿಡಿದರೆ 2-3 ಕಿಮೀಗೂ 100 ಮೇಲೆ ಕೇಳಿದ್ರೆ ನಾ ಹ್ಯಾಂಗ ಕೊಡಲಿ? ಎಂದು ಮುನಿಸಿಕೊಂಡಿದ್ದೆ ..ಅಟೋ ಮಂದಿ ಜೊತೆ! ಬಸ್ಸು ಹುಡುಕಾಡಿದರೆ ನೀರ ಮೇಲೆ ನಿಂತ ಬಸ್ಸುಗಳು ಕದಲದೆ, ಅಲ್ಲೇ ಜಾಮ್ ಆಗಿಬಿಟ್ಟಿದ್ದವು. .! ಈ ಬೆಂಗಳೂರು ಮಳೆ ಅಂದ್ರೆ ಹಂಗೇ..ಅಯ್ಯೋ ಕರ್ಮಕಾಂಡ ಬೇಡವೇ ಬೇಡ..ಅಂದ ಶಾಪ ಹಾಕುತ್ತಾ ರಪರಪನೆ ಕೆನ್ನೆ ಮೇಲೆ ಬಡಿದ ಮಳೆಹನಿಯನ್ನು ಒರೆಸಿಕೊಳ್ಳುತ್ತಾ ಮಳೆರಾಯನ ಜೊತೆ ಕೋಪಿಸಿಕೊಂಡೆ..ಬಾ ಮಳೆಯೇ..ಎಂದು ಮನಸ್ಸು ಹಾಡಲೇ ಇಲ್ಲ!

ಹೌದು, ಈ ಬೆಂಗಳೂರಲ್ಲಿ ಮಳೆ ಬಂದ್ರೆ..ಹಂಗೆ ರಸ್ತೆಗಳೆಲ್ಲಾ ನದಿಗಳಾಗಿಬಿಡೋದು. ಕೇಬಲ್, ಟೆಲಿಫೋನ್ ನವರು ಅಗೆದ ಗುಂಡಿಗಳು, ಬಿಬಿಎಂಪಿ ಅವರ ಕರ್ಮಕಾಂಡ ಕೆಲಕೆಲಸಗಳಿಗೆ ರಸ್ತೆಯನ್ನೆಲ್ಲಾ ಅಗೆದು ಎತ್ತರ-ತಗ್ಗು ಮಾಡಿ, ಈ ಜಡಿಮಳೆಗೆ ನಡೆದು ಹೋಗೋರು ಆ ಗುಂಡಿಯಲ್ಲಿ ಬಿದ್ರೂ ಕೇಳೋರು ಯಾರಿಲ್ಲ. ಬೇಸಿಗೆ, ಮಳೆ, ಚಳಿಗಾಲ...ಹೀಗೆ ಎಲ್ಲಾ ಕಾಲದಲ್ಲೂ ಈ ರಸ್ತೆಗಳ ಬದಿ ಗುಂಡಿಗಳನ್ನು ತೋಡುತ್ತಾನೆ ಇರೋರು ಬಿಬಿಎಂಪಿಯವ್ರು! ಮೊನ್ನೆ ಮೊನ್ನೆ ನಾನೂ ನಿಂತ ನೀರ ಮೇಲೆ ನಡೆದು ಪಾದಗಳು ಧೊಪ್ಪನೆ ಗುಂಡಿಯೊಳಗೆ ಬಿದ್ದಾಗ ನನ್ನ ಎತ್ತಿದ್ದು ನನ್ನ ಕಲೀಗ್.

ಮೊನ್ನೆ ಮಳೆಗಾಲ ಆರಂಭವಾದಾಗ ಬಿಬಿಎಂಪಿ ಆಯುಕ್ತರು, ನಾವು ಮಳೆ ಎದುರಿಸೋಕೆ ರೆಡಿ ಎಂದು ತೊಡೆ ತಟ್ಟಿ ಹೇಳಿದ್ದಾರೆ! ಆದರೆ ಕಳೆದ ಸಲನೂ ಅವರು ಹಾಗೇನೇ ಹೇಳಿ..ಕೊನೆಗೆ ಜೋರು ಮಳೆಗೆ ಮನೆ-ಮನೆಗೆಲ್ಲಾ ನೀರು ನುಗ್ಗಿದಾಗ ಪ್ರತಿಷ್ಠಿತ ಬಡಾವಣೆಗಳಿಗೆ ಮಾತ್ರ ಹೋಗಿ ವಾಪಾಸಾಗಿ ಕೊನೆಗೆ ಮಾಧ್ಯಮದಲ್ಲೆಲ್ಲಾ ಬಿಸಿಬಿಸಿ ಸುದ್ದಿಯಾದಾಗ ಒಂದೆರಡು ಕೊಳಗೇರಿಗಳಿಗೆ ಹೋಗಿ ಕೈತೊಳೆದುಕೊಂಡ್ರು.

ಇರಲಿ ಬಿಡಿ..ಈ ಬೆಂಗಳೂರಿನಲ್ಲಿ ಭೋರ್ಗರೆವ ಮಳೆ ಅದೇಕೋ ನಂಗೆ ಹಳ್ಳಿಯ ಮುಗ್ಧತೆ, ಖುಷಿಯ ಕಚಗುಳಿ ತರುತ್ತಿಲ್ಲ. ಜಡಿಮಳೆಗೆ ನಮ್ಮೂರ ತೋಟದಲ್ಲಿ ಹಸಿರೆಳೆಗಳನ್ನು ನೋಡುತ್ತಾ ನೆನೆದ ಸಂಭ್ರಮ ತರುತ್ತಿಲ್ಲ! ಥತ್..ಇರಲಿಬಿಡಿ...!!

Tuesday, May 19, 2009

ನಾನೂ ಆಡುತ್ತಾ ನಲಿವಾಗೋ ಮಗುವಾಗಿರಬೇಕಿತ್ತು...!!!

ಹೌದು! ನಾನೂ ಮಗುವಾಗಿರಬೇಕಿತ್ತು..ಆಟಿಕೆ, ಗೊಂಬೆಗಳ ಜೊತೆ ಆಡೋ, ಮುಗ್ಧತೆ, ಪ್ರಾಮಾಣಿಕತೆಯ ಪ್ರತೀಕ ಪುಟ್ಟ ಮಗುವಾಗಬೇಕಿತ್ತು!!
ಹೌದು..ನಿನ್ನೆ ಬೆಂಗಳೂರಿನಲ್ಲಿ ಸುರಿದ ಮಳೆಯ ಭೋರ್ಗರೆತವನ್ನು ಕಿಟಕಿ ಸಂದಿಯಲ್ಲಿ ಇಣುಕಿ ನೋಡುತ್ತಲೇ ಯಾಕೋ ಮತ್ತೆ ಮತ್ತೆ ಹೀಗೇ ಅಂದುಕೊಳ್ಳುತ್ತಿದ್ದೆ..ನಾನೂ ಮಗುವಾಗಿರುತ್ತಿದ್ದರೆ..?!

ಬೆನ್ನು ತುಂಬಾ ಭಾರದ ಬ್ಯಾಗ್ ಎತ್ತಿಕೊಂಡು, ಕೈಯಲ್ಲಿ ಟಿಫನ್ ಬಾಕ್ಸ್ ಹಿಡಿದುಕೊಂಡು ದಾರಿಯುದ್ದಕ್ಕೂ ನಲಿದಾಡುತ್ತಾ ಖುಷಿ ಖುಷಿಯಿಂದ ಶಾಲೆಗೋಗುವ ಪುಟ್ಟ ಮಕ್ಕಳನ್ನು ಕಂಡಾಗ ನಾನೂ ಮಗುವಾಗಿರಬೇಕಿತ್ತು ಅನಿಸುತ್ತೆ. ಬೆಳಿಗ್ಗೆ ಆಫೀಸಿಗೆ ಹೊರಟು ಬಸ್ ಸ್ಟಾಂಡಿನಲ್ಲಿ ನಿಂತಾಗ ಅಮ್ಮ-ಅಪ್ಪ ಜೊತೆಗೆ ಬಂದು ಶಾಲೆ ಬಳಿ ಇಳಿಯುವ , ಸಂಜೆಯಾಗುತ್ತಿದ್ದಂತೆ ಹಕ್ಕಿಗಳಂತೆ ಕಲರವಗುಟ್ಟುವ ಮುದ್ದು ಕಂದಮ್ಮಗಳನ್ನು ಕಂಡಾಗ ನಾನೂ ನಲಿವ ಮಗುವಾಗಬೇಕಿತ್ತು ಅನಿಸಿಬಿಡುತ್ತೆ.

ಎದುರುಮನೆಯ ಅಜ್ಜಿಯ ಮೊಮ್ಮಗಳು ನಾಲ್ಕು ವರ್ಷದ ಅಶ್ವಿನಿ ರಾತ್ರಿ ಹತ್ತು ಗಂಟೆಗೆ ಆಂಟಿ ಊಟ ಆಯಿತಾ? ಎಂದು ಮಾತಿಗಿಳಿಯುವಾಗ ಸುತ್ತಲಿನ ಮನೆಯವರೆಲ್ಲವರೂ ಅವಳ ಮುದ್ದು ಮುಖ ಕಂಡು ಪುಳಕಿತಗೊಂಡಾಗ ನಂಗೂ ಅನಿಸುತ್ತೆ: ನಾನೂ ಅಶ್ವಿನಿ ಥರದ ಮುದ್ದಾದ ಪುಟಾಣಿಯಾಗಿರುತ್ತಿದ್ದರೆ ಅಂತ! ಆಫೀಸ್ ನಿಂದ ಹೊರಡುವಾಗ ದಾರಿ ಮಧ್ಯೆ ಸಿಗೋ ಜಾರು ಬಂಡಿಯಲ್ಲಿ ಮಕ್ಕಳು ಆಡೋದನ್ನು ಕಂಡಾಗ, ಶಿವಾಜಿನಗರದ ಕಮರ್ಶಿಯಲ್ ರಸ್ತೆಯಲ್ಲಿ ನಡೆದಾಗ ಸಿಗುವ ಮಕ್ಕಳ ಬಣ್ಣ-ಬಣ್ಣದ ಡ್ರೆಸ್ ಗಳನ್ನು ಕಂಡಾಗ..ಛೇ! ನಾನೂ ಮಗುವಾಗಿರುತ್ತಿದ್ದರೆ ಇಷ್ಟು ಸುಂದರವಾದ ಬಟ್ಟೆ ಹಾಕಿ ನಾನೂ ಮೆರೆಯುತ್ತಿದ್ದೆ ಎಂದನಿಸುತ್ತೆ. ಬೊಕ್ಕುಬಾಯಿ ಅಗಲಿಸಿ ಕಥೆ ಹೇಳುವ ಎಂಬತ್ತರ ಮುತ್ತಜ್ಜಿ ಎದುರು ಕುಳಿತು ಕಣ್ಣು-ಕಿವಿ ಅರಳಿಸಿ ಕಥೆ ಕೇಳುವ ನಮ್ಮೂರ ಸೀತಕ್ಕನ ಅವಳಿ ಮಕ್ಕಳನ್ನು ಕಂಡಾಗ, ನಾನೂ ಅಮ್ಮನ ಮಡಿಲಲ್ಲಿ ಕುಳಿತು ಕಿಟ್ಟು-ಕಿಟ್ಟಿ ಕಥೆ ಕೇಳುತ್ತಲೇ ನಿದ್ದೆಯ ಮಂಪರಿಗೆ ಜಾರೋ ಕಂದಮ್ಮನಾಗಿರಬೇಕಿತ್ತು ಅನಿಸುತ್ತೆ. ಅಪ್ಪ-ಅಮ್ಮ ಜಗಳವಾಡುತ್ತಿದ್ರೂ ಅದಾವುದನ್ನೂ ಕಿವಿಗೆ ಹಾಕಿಕೊಳ್ಳದೆ ತನ್ನ ಪಾಡಿಗೆ ತಾನು ಖುಷಿಯಾಗುವ ಮುಗ್ಧ ಮಗುವನ್ನು ಕಂಡಾಗ ಛೇ! ನಾನೂ ಮಗುವಾಗಿರುತ್ತಿದ್ರೆ ಜಗತ್ತು ಕತ್ತಲಾದ್ರೂ ನಾ ಬೆಳಕಾಗುತ್ತಿದ್ದೆ ಎಂದನಿಸುತ್ತೆ.


ಹ್ಲಾಂ..! ಒಂದನೇ ಕ್ಲಾಸಿನಲ್ಲಿ ಎರಡನೆ ಬೆಂಚಿನಲ್ಲಿ ಕುಳಿತಿದ್ದ ಪ್ರತಿಭಾ ನನ್ನ ಕಡ್ಡಿ ಕದ್ದಾಗ ದಿನವಿಡೀ ಅತ್ತು ಕಣ್ಣು ಕೆಂಪಗಾಗಿಸಿದ ನಾನು ಮರುದಿನ ಬಂದು ಪ್ರೀತಿಯಿಂದ ಮಾತಿಗಿಳಿದಿದ್ದೆ. ನಾಲ್ಕನೇ ಕ್ಲಾಸಿನಲ್ಲಿರುವಾಗ ನನ್ನ ಜಡೆ ಹಿಡಿದೆಳೆದು ಶಿವರಾಮ ಮೇಷ್ಟ್ರ ಬಳಿ ಬೆತ್ತದ ರುಚಿ ಕಂಡ ತೀರ್ಥರಾಮನ ಬಳಿ ನಮ್ಮೂರ ಜಾತ್ರೇಲಿ ಐಸ್ ಕ್ಯಾಂಡಿ ಗಿಟ್ಟಿಸಿಕೊಳ್ಳೋದು ಮಾತ್ರ ನಾನು ಮರೀಲೇ ಇಲ್ಲ!

ಮೊನ್ನೆ ಮೊನ್ನೆ ಸಿಕ್ಕ ಗೆಳೆಯನ ಜೊತೆ ದಿನವಿಡೀ ಜಗಳವಾಡೀ ಸಿಟ್ಟಿನಿಂದ ಗುರ್ ಎನ್ನುತ್ತಾ ಸಿಡಿಲಂತೆ ಆರ್ಭಟಿಸುತ್ತಾ ಕೊನೆಗೆ ಅದು ತಣ್ಣಗಾಗೋದು ಆತ ರಾತ್ರಿ ಮಲಗೋಕೆ ಮುಂಚೆ ಫೋನ್ ಮಾಡಿ, Just Kidding Da..ಎಂದಾಗಲೇ. ಆವರೆಗೆ ಇಡೀ ದಿನವನ್ನು ಜಗಳದಲ್ಲೇ ಕಳೆದು ನೆಮ್ಮದಿಯೆಲ್ಲಾ ಮಣ್ಣುಪಾಲಾಗಿರುತ್ತೆ. ಇತ್ತೀಚೆಗೆ ಸುಂದರ ಗೆಳತಿಯೊಬ್ಬಳು ಪರಿಚಯವಾದಗ, ಆಕೆಯನ್ನು ಪಡೆದಿದ್ದೇ ಧನ್ಯೆ ಎನ್ನುವ ಶ್ರೇಷ್ಠತೆಯ ಭಾವ ನನ್ನನ್ನು ಆವರಿಸಿಕೊಳ್ಳುವಾಗಲೇ ಆಕೆ ನನ್ನ ಬಿಟ್ಟು ದೂರ ಹೋಗಿದ್ದು ಮನಸ್ಸಿಗೆ ತೀರ ನೋವಾಗಿತ್ತು. ಸಂಸಾರ, ಬದುಕು, ಜಂಜಾಟ ಎಂದು ಪರದಾಡುವ ಅದೆಷ್ಟೋ ಮಂದಿಯನ್ನು ಕಂಡಾಗ ನಾನೂ ಮಗುವಾಗಿರುತ್ತಿದ್ರೆ ಛೇ! ಈ ತಲೆಬಿಸಿನೇ ಇರ್ತಾ ಇರಲಿಲ್ಲ ಎಂದನಿಸುತ್ತೆ.

ಬೆಳ್ಳಂಬೆಳಿಗ್ಗೆ ಬಾಸ್ ಜೊತೆ ಕಿರಿಕಿರಿ ಮಾಡೋದು, ಮನೆಯಲ್ಲಿ ತಿಂಗಳ ಕೊನೆಯಲ್ಲಿ ಕಾಡೋ ವಿಪರೀತ ಚಿಂತೆಗಳು, ಭವಿಷ್ಯದ ಕುರಿತಾಗಿ ತಲೆತಿನ್ನೋ ಅರೆಬರೆ ಯೋಚನೆಗಳು, ಪದೇ ಪದೇ ಮನೆಯಲ್ಲಿ ನನ್ನ ಮದುವೆ ಬಗ್ಗೆ ತಲೆ ಕೊರೆಯುವ ಅಮ್ಮನನ್ನು ಕಂಡಾಗ ನಾನೂ ಮಗುವಾಗಿರುತ್ತಿದ್ರೆ ಈ ತಾಪತ್ರಯಗಳೆಲ್ಲಾ ಇರುತ್ತಿರಲಿಲ್ಲ ಎಂದನಿಸುತ್ತೆ. ಕಳೆದುಕೊಂಡ ಗೆಳೆಯ/ ಗೆಳತಿ, ಕಡಿದುಹೋದ ಸಂಬಂಧಗಳು, ಬೆಸದ ಭಾವಬಂಧ, ಆಸೆ-ಹಂಬಲಗಳ ಗೋಜು, ನಿರಾಶೆಯ ಕರಿಮೋಡ...ಬಹುಶಃ ಮಗುವಾಗಿರುತ್ತಿದ್ರೆ ಇದಾವುದೂ ನನ್ನ ಬಾಧಿಸುತ್ತಿರಲಿಲ್ಲ ಎಂದನಿಸುತ್ತೆ. ಬಾಲ್ಯದಲ್ಲಿ ಗೊಂಬೆಗಳ ಜೊತೆ ಆಟ ಆಡುವಾಗ ಅದೆಷ್ಟೋ ಗೊಂಬೆಗಳನ್ನು ನನ್ನ ಕೈಯಾರೆ ಹಾಳುಮಾಡಿದ್ದೆ..ತುಂಡು ತುಂಡು ಮಾಡಿ ಮನೆಯದುರು ಹರಿಯೋ ಹೊಳೆಗೆ ಬಿಸಾಕಿದ್ದೆ. ಅದಾವುದೂ ನನಗೆ ದುಃಖವಾಗಿ ಕಾಡಲಿಲ್ಲ..ಆದರೆ ಈ ಗೆಳೆತನ, ಬದುಕಿನ ಸಂಬಂಧಗಳು ನಮ್ಮಿಂದ ದೂರವಾದ್ರೆ ಅದೆಷ್ಟು ಮನಸ್ಸನ್ನು ಕಾಡುತ್ತೆ ಅಲ್ವಾ?

ಏನೋಪ್ಪಾ..ಯಾರಾದ್ರೂ ಇಂಥ ತಲೆಹರಟೆ ಯೋಚನೆ ಮಾಡ್ತಾರಾ? ಅಂತ ನನ್ನ ಬೈಕೋಬೇಡಿ. ಇಷ್ಟಕ್ಕೂ ಈ ಬರಹ ಬರೆಯೋಕೆ ಕಾರಣವಾಗಿದ್ದು ಮಡಿಕೇರಿಯಿಂದ ಗೆಳೆತಿಯೊಬ್ಬಳು ನಿನ್ನೆ ರಾತ್ರಿ ಕಳಿಸಿದ ಪುಟ್ಟ ಸಂದೇಶ: "Broken Toys and Lost pencils" Better than "Broken Hearts and Lost Friends"!!!

ಚಿತ್ರ ಕೃಪೆ : www.flickr.com

Wednesday, May 13, 2009

ನೀ ನನ್ ಜೊತೆ ಟೂ ಬಿಡಲ್ಲ ತಾನೇ?!

ಅಮ್ಮಾ...


ನಂಗೊತ್ತು ನೀ ನನ್ ಮೇಲೆ ಮುನಿಸಿಕೊಂಡಿದ್ದಿಯಂತ. ಇನ್ನು ನಾ ಮನೆಗೆ ಬಂದು ನೀ ನನ್ನ ದರುಶನ ಪಡೆಯುವವರೆಗೂ ನಿನ್ನ ಸಿಟ್ಟು ಕಡಿಮೆಯಾಗಲ್ಲ. ನಿತ್ಯ ಫೋನ್ ಮಾಡಿ ಗೊಣಗುತ್ತೀಯಾ. ಪ್ರೀತಿಯಿಂದ ಬೈತೀಯಾ. ಕೊನೆಗೆ ನೀನೆ ಸೋತಾಗ ದಡಕ್ಕಂತ ಫೋನಿಡ್ತೀಯಾ. ಮತ್ತೆ ಸಂಜೆ ಫೋನ್ ಮಾಡಿ ಪುಟ್ಟಿ ಒಂದೇ ಒಂದ್ಸಲ ಮನೆಗೆ ಬಂದು ಹೋಗು ಅಂತ ಗೋಳಿಡ್ತೀಯಾ. ಮಕ್ಕಳು ಅಂದ್ರೆ ಹಿಂಗೆ ಕಣಮ್ಮ..ಅಮ್ಮ ಅಂದ್ರೆ ನಿನ್ ಥರ ಅಲ್ವಾ? ಮೊನ್ನೆ ನೀ ಪೋನ್ ಮಾಡಿ, "ನೀನೆನು ಎಲೆಕ್ಷನ್ಗೆ ನಿಂತಿದ್ದೀಯೇನೆ? ಬ್ಯುಸಿ ಬ್ಯಸಿ ಅಂತ ಹೇಳಕ್ಕೆ?' ಅಂತ ಗೊಣಗಿದಾಗ ನಿಜವಾಗಲೂ ನನಗೆ ಸಿಟ್ಟು ಬಂದಿಲ್ಲಮ್ಮ, ನಗು ಬಂದು ಜೋರಾಗಿ ನಕ್ಕುಬಿಟ್ಟಿದ್ದೆ.


ಹ್ಲಾಂ..ಅಮ್ಮಾ ನೀ ಚೆನ್ನಾಗಿದ್ದಿಯಲ್ಲಾ? ತಮ್ಮ ಹೇಗಿದ್ದಾನೆ? ಜೋಪಾನವಾಗಿರಕೆ ಹೇಳು. ನನ್ ನೆನೆಕೆಗಳನ್ನು ಅವನಿಗೆ ತಿಳಿಸು. ನಿನ್ನ ಆರೋಗ್ಯ ಹೆಂಗಿದೆ? ಕರೆಕ್ಟಾಗಿ ಮದ್ದು ತಕೋತಿಯಲ್ಲಾ? ದಿನಾ ಗ್ಲುಕೋಸ್ ಕುಡೀತಿಯಲ್ಲಾ. ನಾನಿಲ್ಲಿ ಚೆನ್ನಾಗಿದ್ದೀನಮ್ಮಾ..ಮೂರು ಹೊತ್ತು ತಿಂದುಂಡು ಗುಂಡು ಗುಂಡಾಗಿದ್ದೀನಿ. ನಾನೆಷ್ಟು ದಪ್ಪಗಿದ್ರೂ ಸಣ್ಣ ಸಣ್ಣಗಿದ್ದಿ ಅಂತ ಬಾಯಿ ಬಡಬಡ ಮಾಡ್ತಿಯಲ್ಲಾ..ನೋಡು ಸಲ ಕನ್ನಡಕ ತರ್ತೀನಿ.!!


ಅಮ್ಮಾ ಬೆಳ್ಳಂಬೆಳಿಗ್ಗೆ ಆಫೀಸು, ಸೂರ್ಯ ಮುಳುಗಿದ ಮೇಲೆ ಮನೆ ಸೇರುವುದು, ಒಂದಷ್ಟು ಅನ್ನ-ಸಾರು ಮಾಡುವುದು, ಒಂದಷ್ಟು ಹೊತ್ತು ಟಿವಿ ಜೊತೆ ಮಾತನಾಡುವುದು ಅಷ್ಟೇ ಕಣಮ್ಮ. ನಮ್ಮೂರ ಬತ್ತದ ಹೊಳೆ, ಹಸಿರು ತೋಟ, ಸಾಲು-ಸಾಲು ಮರಗಿಡಗಳು, ಹಳ್ಳಿ ಮನೆಗಳು, ಕರುಗಳ ಅಂಬಾ, ಕನಕಾಂಬರ ಬಳ್ಳಿಯ ಸೊಬಗು, ಕುರಿಮಂದೆ, ಕಥೆ ಹೇಳುವ ಅಜ್ಜಿ, ಕಳ್ಳು ತೆಗೆಯುವ ಅಜ್ಜ ಯಾರೂ ಕಾಣೋಕೆ ಸಿಗ್ತಿಲ್ಲಮ್ಮ. ಆದ್ರೂ ಬೆಂಗ್ಳೂರು ತುಂಬಾ ಜನ್ರ ಹಸಿದ ಹೊಟ್ಟೆಗೆ ಅನ್ನ ನೀಡುತ್ತೆ. ಏನೋ ಒಂಥರಾ ಖುಷಿ ಕೊಡುತ್ತೆ. ನನ್ ಪುಟ್ಟ ರೂಮೊಳಗೆ ನಾನೂ ಖುಷಿಪಡ್ತೀನಮ್ಮ.

ಆಮೇಲೆ ನಮ್ಮ ಮನೆ ಓನರ್ರು ಅಕ್ಕ ತುಂಬಾ ಒಳ್ಳೆಯವರಮ್ಮ. ನಂಗೆ ಒಂದು ಒಳ್ಳೆ ಅಕ್ಕ ಸಿಕ್ಕಂಗೆ ಆಗಿದೆ. ಮೊನ್ನೆ ನಂಗೆ ಜ್ವರ ಬಂದಿತ್ತು ಅಂದ್ನಲ್ಲಾ..ನನ್ನ ತುಂಬಾ ಚೆನ್ನಾಗ್ ನೋಡಿಕೊಂಡ್ರಮ್ಮ. ಏನೇನೋ ಕಶಾಯ ಮಾಡಿಕೊಟ್ರು...ಥೇಟ್ ನಿನ್ನ ಥರಾನೇ..ಹೊಟ್ಟೆ ಫುಲ್ ಆದ್ರೂ ಮತ್ತೆ ಮತ್ತೆ ತಿನ್ನು ಅನ್ನುತ್ತಾ ತುರುಕೋದು! ಅಲ್ಲಿ-ಇಲ್ಲಿ ಸುತ್ತಾಡೋಕೆ ಹೋದ್ರೆ, ಶಾಪಿಂಗ್ ಹೋದ್ರೆ ನನ್ನ ಕರ್ಕೊಂಡು ಹೋಗ್ತಾರಮ್ಮಾ. ಪೂಜೆಗೆಂದು ಮನೆಗೆ ತಂದ ಮಲ್ಲಿಗೆಯಲ್ಲಿ ನನಗೂ ಒಂದು ಮೊಳ ಮುಡಿಸಿ ಮಲ್ಲಿಗೆಯಂತೆ ಘಮ್ ಅಂತ ನಗ್ತಾರೆ ಅಮ್ಮಾ.


ಅಮ್ಮಾ..ಹೇಳಿದ್ನಲ್ಲಾ ಮುಂದಿನ ತಿಂಗಳು ಊರಿಗೆ ಬರ್ತೀನಂತ. ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಹಾಕಿದ್ದಿಯಲ್ಲಾ..ಒಂದಷ್ಟು ಅಕ್ಕಿ ರೊಟ್ಟಿ, ಹಲಸಿನ ಹಪ್ಪಳ ರೆಡಿ ಮಾಡಿಡಮ್ಮಾ. ಬೆಂಗ್ಳೂರು ಮಳೆಗೆ ಮೆಲ್ಲೋಕೆ ಭಾಳ ಖುಷಿ ಆಗುತ್ತೆ. ಮತ್ತೆ ನನ್ನ ಇಷ್ಟದ ನೀರು ದೋಸೆ ಮಾಡಕೆ ಬೆಳ್ತಕ್ಕಿ, ಹತ್ತು ಕೆಜಿ ಕುಚಲಕ್ಕಿನೂ ತಂದಿಡಕೆ ತಮ್ಮಂಗೆ ಹೇಳು. ವಾಪಾಸ್ ಬರುವಾಗ ತಕೊಬಂದ್ರೆ ಒಂದು ತಿಂಗಳು ಚಿಂತೆಯಿಲ್ಲ. ನಂಗೊತ್ತು ಇದೆಲ್ಲಾ ರೆಡಿ ಮಾಡಿಯೇ ನಿತ್ಯ ಸುಪ್ರಭಾತ ಹಾಡ್ತೀಯಂತ.

ಅಮ್ಮ ನಮ್ಮನೆ ಪಕ್ಕದ್ಮನೆಗೆ ಹೊಸಬರು ಬಾಡಿಗೆಗೆ ಬಂದಿದ್ದಾರೆ. ಅಲ್ಲೊಂದು ಪುಟ್ಟ ಪಾಪು ಇದೆ. ನೋಡಕ್ಕು ಮುದ್ದು ಮುದ್ದಾಗಿದೆ. ಆದ್ರೆ ರಾತ್ರಿ ಇಡೀ ಅಳೋ ಪಾಪು ನಮ್ಮ ನಿದ್ದೆನೂ ಕೆಡಿಸುತ್ತೆ. ಯವಾಗಲೂ ನೀ ನಂಗೆ ಹೇಳ್ತಿದ್ದಿಯಲ್ಲಾ, ನೀ ಬರೇ ಅಳುಮುಂಚಿ ನಿದ್ದೆ ಮಾಡಕ್ಕೂ ಬಿಡ್ತಿರಲಿಲ್ಲ ಅಂತ. ಮಗು ಅತ್ತು ರಂಪಾಟ ಮಾಡುವಾಗ ನೀ ಹೇಳಿದ ಮಾತು ನೆನಪಾಗಿ ಛೇ! ನಾನೆಷ್ಟು ಅಮ್ಮಂಗೆ ಕಾಟ ಕೊಟ್ಟಿದ್ದೀನಿ ಅನಿಸುತ್ತೆ ..ಹ್ಹಿಹ್ಹಿ!!!


ಅಮ್ಮಾ.. ಪತ್ರ ನೋಡಿಯಾದರೂ ನೀ ನನ್ನ ಜೊತೆ ಟೂ ಬಿಡಲ್ಲ ಅಂದುಕೋತೀನಿ. ಸಿಟ್ಟು ಕಡಿಮೆಯಾಗಿದೆಯಲ್ಲಾ...! ಹ್ಲಾಂ..ಖುಷಿಯೋ ಖುಷಿ. ಮುಂದಿನ ತಿಂಗಳು ಹುಣ್ಣಿಮೆ ದಿನ ಬಂದು ಬಿಡ್ತೀನಿ. ತಂಪು ಬೆಳದಿಂಗಳಲ್ಲಿ ನಮ್ಮನೆ ಎದುರು ಇರುವ ಕಲ್ಲುಬೆಂಚಿಯ ಮೇಲೆ ಒಂದಷ್ಟು ಹೊತ್ತು ಹರಟೋಣ ..ಸಿಟ್ ಮಾಡಿಕೊಳ್ಳೋಣ..ಜಗಳ ಆಡೋಣ..ನಿನ್ನಿಂದ ಬೈಸಿಕೋತೀನಿ. ಅದಕ್ಕಿಂತ ಹೆಚ್ಚಾಗಿ ನಿನನ್ನ ಮಡಿಲಲ್ಲಿ ಹುದುಗಿ ಮೊಗೆದಷ್ಟು ಬತ್ತದ ಪ್ರೀತಿನ ನನ್ನೊಳಗೆ ತುಂಬುಕೊಳ್ಳೋಕೆ ಬರ್ತಾ ಇದ್ದೀನಮ್ಮಾ. ಸದ್ಯಕ್ಕೆ ವಿರಾಮ..


ಇಂತೀ

ನಿನ್ನ ಪುಟ್ಟಿ

Tuesday, May 5, 2009

ದುಃಖಗಳು ಸಾಯುತ್ತವೆ, ನೆನಪುಗಳು ಸಾಯೊಲ್ಲ..?!

ದುಃಖಗಳು ಸಾಯುತ್ತವೆ, ನೆನಪುಗಳು ಸಾಯೊಲ್ಲ..! ಹೌದು..ನೆನಪುಗಳು ಸಾಯೊಲ್ಲ..ದುಃಖಗಳು ಸಾಯುತ್ತವೆ..ನಿನ್ನೆ ಇದ್ದಕಿದ್ದಂತೆ ಈ ಮಾತು ನನ್ನ ತುಂಬಾ ಕಾಡಿಬಿಡ್ತು.

ನಾನಾಗ ಎರಡನೇ ಕ್ಲಾಸು. ಒಂದು ಸಂಜೆ ಶಾಲೆ ಮುಗಿಸಿ ನಮ್ಮೂರ ಹೊಳೆ ದಾಟಿ ಮನೆ ಸೇರುವಾಗ ಮನೆಯೇ ಸ್ಮಶಾನವಾಗಿತ್ತು. ನನ್ನ ಪ್ರೀತಿಯ ಅಜ್ಜ ನಮ್ಮನ್ನೆಲ್ಲಾ ಬಿಟ್ಟುಹೋಗಿದ್ದರು. ಅಜ್ಜ ಇನ್ನಿಲ್ಲವೆಂದಾಗ ಉಕ್ಕಿ ಬರುವ ದುಃಖವನ್ನು ಸಹಿಸುವುದು ತುಂಬಾ ಕಷ್ಟವಾಗುತ್ತಿತ್ತು. ನನ್ನ ಗುಂಗುರು, ಸಿಕ್ಕು ಹಿಡಿದ ತಲೆಕೂದಲನ್ನು ಎಣ್ಣೆ ಹಾಕಿ ನೀಟಾಗಿ ಬಾಚಿ ಜಡೆಹಾಕುತ್ತಿದ್ದುದು ನನ್ನಜ್ಜ. ಅಜ್ಜ ಎಷ್ಟೇ ಬೈಯಲಿ..ಅಜ್ಜಿಗಿಂತ ಒಂದು ಪಟ್ಟು ಪ್ರೀತಿ ಜಾಸ್ತಿ ನನ್ನಜ್ಜನ ಮೇಲೆ.

ಆ ದಿನ ನನ್ನ ಪ್ರೀತಿಯ ಅಜ್ಜನನ್ನು ಕಳೆದುಕೊಂಡಿದ್ದೆ. ಗಂಡನನ್ನು ಕಳಕೊಂಡ ದುಃಖ ಅಜ್ಜಿಗೆ, ಅಪ್ಪನನ್ನು ಕಳಕೊಂಡ ದುಃಖ ಅಮ್ಮ, ದೊಡ್ಡಮ್ಮ, ಚಿಕ್ಕಮ್ಮನವರಿಗೆ..! ನನ್ನನ್ನು ಸಮಾಧಾನಿಸುವವರು ಯಾರೂ ಇಲ್ಲ..ಆ ಶೋಕಸಾಗರದಲ್ಲಿ ಒಂದಾಗಿ ನಾನೂ ಬಿಕ್ಕಿ ಬಿಕ್ಕಿ ಅತ್ತಿದ್ದೆ. ಅಜ್ಜ ನೀನ್ಯಾಕೆ ನನ್ನ ಬಿಟ್ಟು ಹೋದೆ..ನೀ ಹೋದಲ್ಲಿಗೆ ನನ್ನನ್ನೂ ಕರೆದುಕೊಂಡು ಹೋಗಬಾರದಿತ್ತೆ? ಎಂದು ಗೋಳಾಡುತ್ತಿದ್ದೆ. ಯಾರ ಮಾತುಗಳನ್ನು ಕೇಳದೆ ಅಜ್ಜ ತಣ್ಣಗೆ ಮಲಗಿದ್ದ. ಏನೇನೋ ಶಾಸ್ತ್ರಗಳು..ಜಡಿಮಳೆಯಂತೆ ಕಣ್ಣಿಂದ ಹರಿಯೋ ನೀರನ್ನು ಸರಿಸಿ ಸರಿಸಿ ಅಜ್ಜನ ತಣ್ಣನೆಯ ಮುಖವನ್ನು ನಾ ನೋಡುತ್ತಿದ್ದೆ. ಕೊನೆಗೇ ಬೆಂಕಿಯಲ್ಲಿ ನನ್ನಜ್ಜ ಒಂದಾಗಲೂ ಹೃದಯ ದುಃಖದಿಂದ ಚೀರುತ್ತಿತ್ತು. ನಿಜವಾದ ದುಃಖ ನೋಡಬೇಕಾದ್ರೆ ಸಾವಿನ ಮನೆಗೆ ಹೋಗಬೇಕು..ಎನ್ನೋ ಮಾತು ಮತ್ತೆ ಮತ್ತೆ ನೆನಪಾಗುತ್ತಿತ್ತು.

ಮೊನ್ನೆ ಮನೇಲಿ ಯಾವುದೋ ಒಂದು ಪುಟ್ಟ ವಿಚಾರದ ಕುರಿತು ನಾನೂ-ತಮ್ಮ ಮಾತಿಗಿಳಿಯುತ್ತಿದ್ದಂತೆ ತಮ್ಮ, "ಅಕ್ಕಾ..ನಾವು ಅಜ್ಜ ಸತ್ತಾಗ ಎಷ್ಟು ಅತ್ತಿದ್ದೀವಿ. ಈವಾಗ ಅದು ದುಃಖಂತ ಅನಿಸೋದೇ ಇಲ್ಲ. ಮನುಷ್ಯ ದುಃಖವನ್ನು ಎಷ್ಟು ಬೇಗ ಮರೀತಾನೆ..ಆದರೆ ಅದ್ರ ನೆನಪು ಮಾತ್ರ ಹಾಗೇ ಇರುತ್ತಲ್ಲಾ.." ಅಂದಾಗ ನನ್ನ ಮನಸ್ಸಲ್ಲಿ 'ಹೌದು ದುಃಖಗಳು ಸಾಯುತ್ತವೆ, ನೆನಪುಗಳು ಸಾಯೊಲ್ಲ" ಎನ್ನೋ ಮಾತು ಮತ್ತೆ ಮತ್ತೆ ಗುನುಗುತ್ತಾನೇ ಇತ್ತು.

ಸಾವಿನ ಮನೆಯ ದುಃಖ ಮಾತ್ರವಲ್ಲ..ಎಷ್ಟೋ ಬಾರಿ ಪುಟ್ಟ ಪುಟ್ಟ ವಿಚಾರಗಳು ನಮಗೆ ತೀರ ನೋವು ಕೊಡುತ್ತವೆ. ನಿತ್ಯ ಅಮ್ಮನ ತೆಕ್ಕೆಯಲ್ಲೇ ನಿದ್ದೆಯ ಮಂಪರಿಗೆ ಜಾರುತ್ತಿದ್ದ ನಾನು ಎಸ್ ಎಸ್ಎಲ್ ಸಿ ಪಾಸಾಗಿ ದೂರದ ಹಾಸ್ಟೇಲಿಗೆ ಬರಬೇಕಾದ್ರೆ ವಾರಗಟ್ಟಲೆ ದಿಂಬು ಒದ್ದೆಯಾಗಿಸಿದ್ದೆ. ಹಾಸ್ಟೇಲಿನಲ್ಲಿ ನಾ ಒಂಟಿ ಒಂಟಿ ಎಂದು ಬಾತ್ ರೂಮಿಗೆ ಹೋಗಿ ಅಳ್ತಾ ಇದ್ದೆ. ಪಿಯುಸಿಯಲ್ಲಿ ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಗೆಳತಿ ದೂರದ ಬೆಂಗಳೂರಿಗೆ ಹಾರಿದಾಗ ತಿಂಗಳುಗಟ್ಟಲೆ ಕಣ್ಣೀರು ಸುರಿಸಿದ್ದೆ. ಪದವಿ ವಿದಾಯ ಸಮಾರಂಭದಲ್ಲಿ ನನ್ನೆಲ್ಲಾ ಕನಸು-ಕಲ್ಪನೆಗಳಿಗೆ ಮೂರ್ತ ರೂಪ ನೀಡಿದ ಗುರುಹಿರಿಯರ ಮುಖ ನೋಡುತ್ತಲೇ ವೇದಿಕೆಯನ್ನು ಕಣ್ಣೀರಾಗಿಸಿದ್ದೆ. ಪದವಿ ಮುಗಿದು ಬೆಂಗಳೂರಿಗೆ ಬಂದಾಗ ಅಯ್ಯೋ ಬೆಂಗಳೂರೇ ಬೇಡ ಮರಳಿ ಊರಿಗೆ ಹೋಗ್ತೀನಿ ಎಂದು ರಚ್ಚೆ ಹಿಡಿದಿದ್ದೆ. ನಮ್ಮನೆಯ ಪ್ರೀತಿಯ ನಾಯಿ 'ಕರಿಯ' ಬಾವಿಗೆ ಬಿದ್ದು ಸತ್ತಾಗ, ನನ್ನ ಮುದ್ದಿನ ಹಸು ಅಕತಿಯನ್ನು ಅಮ್ಮ ಮಾರಿಬಿಟ್ಟಾಗ.....ನಾನೆಷ್ಟು ಅತ್ತಿದ್ದೇ? ...ಇಲ್ಲೆಲ್ಲಾ ಸಹಿಸಲಾಗದ ಅಸಹನೀಯ ದುಃಖದ ಮಡುವಿನಲ್ಲಿ ನಾ ಬಿದ್ದು ಹೊರಳಾಡಿದ್ದೆ..!

ತುಂಬಾ ಪ್ರೀತಿಸಿದ ನಿತ್ಯ ಭರವಸೆಯ ನುಡಿಯಾಗಿದ್ದ ಜೀವದ ಗೆಳೆಯ ಕೈಬಿಟ್ಟಾಗ ನೀನಿಲ್ಲದೆ ನಾ ಹೇಗಿರಲಿ ಎಂದು ನಿತ್ಯ ಮಡಿಲಾಗಿದ್ದ ಗೆಳತಿ ದೂರವಾದಾಗ, ಬದುಕಿನ ಯಾವುದೋ ಘಟ್ಟದಲ್ಲಿ ಅನಿವಾರ್ಯತೆಗೆ ಸಿಲುಕಿ ಸಂಬಂಧಗಳನ್ನೇ ಕಳೆದುಕೊಂಡಾಗ ಮನಸ್ಸು ಎಷ್ಟು ನೋವು ಪಡುತ್ತೆ? ಆದರೆ ಇಲ್ಲೆಲ್ಲಾ..ದಿನಕಳೆದಂತೆ ಈ ದುಃಖಗಳು ಸಾಯುತ್ತವೆ..ಬರೇ ನೆನಪುಗಳನ್ನಷ್ಟೇ ಉಳಿಸಿಬಿಟ್ಟು! ಕಹಿಯಾಗೋ..ಸಿಹಿಯಾಗೋ..ಮತ್ತೆ ಮತ್ತೆ ಕಾಡೋ ನೆನಪುಗಳಷ್ಟೇ ಬದುಕಿನ ಹಾದಿಯ ನಮ್ಮ ಹೆಜ್ಜೆಯಲ್ಲಿ ನೆರಳಂತೆ ಹಿಂಬಾಲಿಸುತ್ತವೆ ಅಲ್ವೇ? ಹೌದು. ಇದೂ ಒಳ್ಲೆಯದೇ..ದುಃಖಗಳು ಸಾಯಬೇಕು, ನೆನಪುಗಳು ಉಳಿಯಬೇಕು, ಖುಷಿಯ ಕ್ಷಣಗಳಷ್ಟೇ ನಿತ್ಯ ನಮ್ಮನ್ನು ಕಾಡುವ, ಖುಷಿಯೊಳಿಸುವ ಹುಣ್ಣಿಮೆಯಂತೆ ಪಸರಿಸಬೇಕು.

ಅದಕ್ಕೇ ತಾನೇ ಹೇಳೋದು 'ಕಾಲವೇ ನೋವಿಗೆ ಮದ್ದು' ಅನ್ನೋದು....ಅಲ್ವಾ?

Saturday, May 2, 2009

ನಮ್ಮೂರ ಜಾತ್ರೇಲಿ..ಮಿರ ಮಿರ ಮಿನುಗಿದ್ದು!!!

'ಅಕ್ಕು ಈ ಸರ್ತಿ ಜಾತ್ರೆಗಾಂಡಲಾ ಬಲಾ, ಏತ್ ವರ್ಷ ಆಂಡ್ ಜಾತ್ರೆಗ್ ಬರಂತೆ..? ಏಪಲಾ ನಿನ್ನ ಕೆಲಸ ಮುಗಿಯರೆ ಇಜ್ಜಿ. ಕೆಲಸ ಏಪಲಾ ಉಪ್ಪಂಡು, ಜಾತ್ರೆ ವರ್ಷಗೊರೆನೆ ಬರ್ಪುನಿ(ಅಕ್ಕು..ಈ ಸಲ ಆದ್ರೂ ಜಾತ್ರೆಗೆ ಬಾ..ಎಷ್ಟು ವರ್ಷ ಆಯಿತು ಜಾತ್ರೆಗೆ ಬರದೆ. ಕೆಲಸ ಯಾವಾಗಲೂ ಇರುತ್ತೆ, ಜಾತ್ರೆ ಬರೋದು ವರ್ಷಕೊಮ್ಮೆ ಮಾತ್ರ) ನಮ್ಮೂರ ಜಾತ್ರೆ ಕುರಿತು ಅಮ್ಮ ಇತ್ತೀಚೆಗೆ ಫೊನ್ ಮಾಡಿದಾಗ, 'ಆಯ್ತಮ್ಮ, ಬರ್ತೀನಿ ಇರು. ಅರ್ಜೆಂಟ್ ಮಾಡಿದ್ರೆ ನಾ ಬರೊಲ್ಲ" ಅಂತ ನನ್ನ ಮಾಮೂಲಿ ಪ್ರೀತಿಯ ಸಿಟ್ಟನ್ನೇ ತೋರಿಸಿದ್ದೆ. ಬೆಂಗಳೂರಿಗೆ ಬರೋಕೆ ಮೊದಲು ಬಿಡಿ ಓದಿನ ನಿಮಿತ್ತ ಮನೆಯಿಂದ ಹೊರ ನಡೆದ ಮೇಲೆ ನನಗೆ ಊರ ಜಾತ್ರೆ ನೋಡೋ ಭಾಗ್ಯ ಕೂಡಿ ಬರಲೇ ಇಲ್ಲ!

ನಮ್ಮೂರಿನ ಜಾತ್ರೆ ಬರೋದು ಫೆಬ್ರವರಿ-ಮಾರ್ಚ ತಿಂಗಳಲ್ಲಿ. ಒಂಬತ್ತು ದಿನಗಳ ಕಾಲ ನಡೆಯುವ ಈ ಜಾತ್ರೆ ಎಂದರೆ ಮನೆ ಮನೆಯಲ್ಲೂ ಜಾತ್ರೆ. ಊರಿನ ಮನೆ ಮನೆಯಲ್ಲಿ ನೆಂಟರ ಸಂಭ್ರಮ. ದೂರದೂರಿನ ಗಂಡನ ಮನೆಯಿಂದ ತವರು ಮನೆಗೆ ಬರೋ ಹೆಣ್ಣುಮಕ್ಕಳ ಮನತುಂಬಾ ಖುಷಿಯ ರಂಗೋಲಿ. ಅದೂ ಹೊಸದಾಗಿ ಮದುವೆಯಾದವರ ಸಂಭ್ರಮ ಕೇಳೋದೇ ಬೇಡ. ಮನೆ ಮನೆಗೆಲ್ಲಾ ಸಗಣಿ ಸಾರಿ, ಒಂಬತ್ತು ದಿನಗಳ ಕಾಲವೂ ಮನೆಯಲ್ಲಿ ನೆಂಟರ, ಮಕ್ಕಳ ಖುಷಿಯ ಸಡಗರ. ಒಂಬತ್ತು ದಿನಗಳ ಕಾಲ ನಿತ್ಯ ಜಾತ್ರೆಗೆ ಹೋಗೋದು. ತಲೆತುಂಬಾ ಮಲ್ಲಿಗೆ ಘಮಘಮ, ಕೈತುಂಬಾ ಬಳೆಗಳ ಸದ್ದು, ಕಾಲಿಗೆ ಗೆಜ್ಜೆ, ಪರ್ಸ್ನಲ್ಲಿ ವರ್ಷದಿಂದ ಜಾತ್ರೆಗೆಂದು ಕೂಡಿಟ್ಟ ಚಿಲ್ಲರೆ ಹಣ, ಹೊಸ ಡ್ರೆಸ್ಸು..!! ಅಬ್ಬಾ..ಜಾತ್ರೆ ನೋಡೋದಕ್ಕಿಂತ ಹೊಸದಾಗಿ ಮಿರುಗೋ ನಮ್ಮನ್ನು ನಾವೇ ನೋಡಿಕೊಳ್ಳುವುದೂ ಒಂದು ಜಾತ್ರೆಯಂತೆ! ಆಮೇಲೆ ಕೆಲವು ಊರ ಹುಡುಗಿಯರನ್ನೆಲ್ಲಾ ವರ ನೋಡೋಕೆ ಬರುತ್ತಿದ್ದೂ ಜಾತ್ರೆಗೆ... ಹುಡುಗಿ ಓಕೆ ಆದ್ರೆ..ಆಮೇಲೆ ಮನೆಗೆ ಬಂದು ನೋಡೋ ಕಾರ್ಯಕ್ರಮ. ಅಷ್ಟೇ ಅಲ್ಲ, ಒಂದಿಷ್ಟು ಊರ ಮಂದಿಯೆಲ್ಲಾ ಜೊತೆಗೆ ಹರಟಲೂ ಆ ಜಾತ್ರೆಯಲ್ಲಿ ಸಾಧ್ಯವಾಗುತ್ತಿತ್ತು.

ನನಗೆ ನೆನಪಿರೋದು ನಾನು ಆರನೇ ಕ್ಲಾಸಿನಲ್ಲಿರುವಾಗ ನಮ್ಮೂರ ದೇವಸ್ಥಾನಕ್ಕೆ ಬ್ರಹ್ಮಕಲೋಶೋತ್ಸವ ಆಗಿ, ಆ ವರ್ಷವೇ ಜಾತ್ರೆ ಪ್ರಾರಂಭವಾಗಿದ್ದು. ಆವಾಗ ಅಮ್ಮ ನನಗೆ ಹಸಿರು ಚೂಡಿದಾರ ತಂದಿದ್ರು. ಅಲ್ಲಿಯವರೆಗೆ ನಾ ಚೂಡಿ ಹಾಕಿರಲೇ ಇಲ್ಲ! ಅದೇ ಮೊದಲು..ಊರ ಜಾತ್ರೆಯಂದು ಅಮ್ಮ ತಂದ ಕಡು ಹಸಿರು ಚೂಡಿಯನ್ನು ಧರಿಸಿ ಮಿರ ಮಿರ ಮಿನುಗಿದ್ದೆ. ಎರಡು ಜಡೆ ಹಾಕಿ ಅಮ್ಮ ತಲೆ ತುಂಬಾ ಮಂಗಳೂರು ಮಲ್ಲಿಗೆ ಮುಡಿಸಿದ್ರು. ಭಾಳ ಖುಷಿ ನನಗೆ. ಅಜ್ಜಿ ಜೊತೆ ಜಾತ್ರೆಗೆ ಹೋಗಿ, ಜಾತ್ರೆ, ದೇವರು, ಜನರನ್ನು ನೋಡೋದಕ್ಕಿಂತ ನನ್ನ ಹೊಸ ಚೂಡಿದಾರವನ್ನು ಮತ್ತೆ ಮತ್ತೆ ನೋಡಿಕೊಳ್ಳುವುದರಲ್ಲೇ ಮೈಮರೆತಿದ್ದೆ. ಎಲ್ಲಿ ಪಿನ್ ಹಾಕಿದ್ದ ವೇಲ್ ಜಾರುತ್ತೋ, ಪ್ಯಾಂಟ್ ನಲ್ಲಿ ಮಣ್ಣಾಗುತ್ತೋ ಅಂತ ಪ್ಯಾಂಟನ್ನು ಒಂದು ಕಡೆಯಿಂದ ಎತ್ತಿಕೊಂಡು ನಡೆಯುತ್ತಿದ್ದ ನನ್ನ ನೋಡಿ ಮನೆಯಲ್ಲಿ ಎಲ್ರೂ ನಗುತ್ತಿದ್ದರು. ಆ ಚೂಡಿದಾರ ಎಷ್ಟು ಇಷ್ಟವಾಗಿತ್ತು ಅಂದ್ರೆ ಏಳನೇ ಕ್ಲಾಸಿನಲ್ಲಿ ಫೋಟೋ ಸೆಶನ್ ಗೂ ಅದೇ ಚೂಡಿದಾರ ಧರಿಸಿದ ಹುಚ್ಚಿ ನಾನು!

ಮತ್ತೆ ಊರ ಜಾತ್ರೆ ಬಂದಾಗಲೆಲ್ಲಾ ಹೊಸ ಡ್ರೆಸ್ಸು ತೆಗೆದುಕೊಡುತ್ತಿದ್ದರು. ಊರ ಜಾತ್ರೆ ನಮಗೆ ಅಮ್ಮನ ಬಳಿ ಹೊಸ ಡ್ರೆಸ್ಸು ತೆಗೆಸಿಕೊಡು ಎಂದು ರಚ್ಚೆ ಹಿಡಿಯಲು ಒಳ್ಳೆ ಅವಕಾಶ. ಡ್ರೆಸ್ಸು ತೆಗೆಸಿಕೊಡದಿದ್ರೆ ನಾವು ಜಾತ್ರೆಗೇ ಬರಲ್ಲ ಅಂತ ಜಗಳವಾಡೋ ನಮಗೆ ಡ್ರೆಸ್ಸು ತೆಗೆಸಿಕೊಡದೆ ಅನ್ಯ ಮಾರ್ಗಗಳೇ ಇರಲಿಲ್ಲ! ಯಾಕಂದ್ರೆ ಜಾತ್ರೆ ಬಂತೆಂದರೆ ಊರಿನ ಮಕ್ಕಳೆಲ್ಲಾ ಹೊಸ ಡ್ರೆಸ್ಸು ಹಾಕೋರು. ಜಾತ್ರೆಗೆ ಹೋದರೆ ಐಸ್ ಕ್ರೀಂ ತಿನ್ನಲೇಬೇಕು...ಮನೆಯಿಂದ ಹೊರಟಾಗಲೇ ಸಿಕ್ಕವರಲೆಲ್ಲಾ ಐಸ್ ಕ್ರೀಂ ಕೊಡಿಸ್ತೀರಾ ಮಾಮ...ಎನ್ನುತ್ತಾ ಐಸ್ ಕ್ರೀಂ ತೆಗೆದುಕೊಡೋರ ಹಿಂದೆ ಓಡೋ ಚಾಳಿ ನನ್ನದು. ಆಮೇಲೆ ಬಲೂನ್ ನನ್ನ ಫೇವರಿಟ್.

ಇಂದಿಗೆ ಜಾತ್ರೆಗೆ ಹೋಗದೆ ಏಳೆಂಟು ವರ್ಷಗಳಾಗಿದೆ. ಹತ್ತನೇ ಕ್ಲಾಸು ಮುಗಿದ ಮೇಲೆ ಜಾತ್ರೆ ನೋಡೋ, ಜಾತ್ರೆಯಲ್ಲಿ ಹೊಸ ಡ್ರೆಸ್ಸು ಹಾಕಿ ಮಿರುಗೋ ಅವಕಾಶನೇ ಸಿಕ್ಕಿಲ್ಲ. ಆದ್ರೂ ನಮ್ಮೂರ ಜಾತ್ರೆ ನೆನಪಾಗುತ್ತೆ. ಜಾತ್ರೆಗೆ ಬಿಡದೆ ಕರೆದೊಯ್ಯುವ ಅಜ್ಜಿ ನೆನಪಾಗುತ್ತಾಳೆ. ಜಾತ್ರೆಯ ಬಲೂನ್, ಐಸ್ ಕ್ರೀಂ ನೆನಪಾಗುತ್ತೆ. ಒಂದು ಸಲ ನನ್ನ ಚಪ್ಪಲಿ ಯಾರಿಗೋ ಬಲಿಯಾಗಿದ್ದು ನೆನಪಾಗುತ್ತೆ. ತಲೆತುಂಬಾ ಮುಡಿದ ಮಲ್ಲಿಗೆ ಪರಿಮಳ, ಕಾಲ್ಗೆಜ್ಜೆ, ಬಳೆಯ ಕಿಣಿಕಿಣಿ ನಿನಾದ, ಪಂಜಕಜ್ಜಾಯ ತಿನ್ನೋ ಆಸೆಯಿಂದ ಭಟ್ರ ಬಳಿ ಹೋಗಿ ಎರಡೆರಡು ಸಲ ದಕ್ಷಿಣೆ ಹಾಕಿದ್ದು ನೆನಪಾಗುತ್ತೆ. ಏನ ಮಾಡಲೀ..ಬೆಂಗಳೂರಿನ ಬದುಕ ಸುಂದರವಾಗಿ ಕಾಣುತ್ತೆ ಆದ್ರೆ ಮನಸ್ಸು ಮಾತ್ರ ನನ್ನ ಜಾತ್ರೆನ, ನನ್ನ ಹಸಿರ ಹಳ್ಳೀನ ಮಿಸ್ ಮಾಡ್ಕೋತಾ ಇದ್ದೀನಿ ಅನ್ನುತ್ತೆ. ಏನೋ ಬರೆಯಕೆ ವಿಷ್ಯ ಸಿಗ್ಲಿಲ್ಲ..ನಮ್ಮೂರ ಜಾತ್ರೆ ನೆನಪಾತು. ಒಪ್ಕೋತೀರಲ್ಲಾ...?!