Thursday, April 16, 2009

ನಿನ್ನ ಬಿಟ್ಟು ನಿಸರ್ಗವನ್ನು ಪ್ರೀತಿಸುತ್ತಿದ್ದರೆ..?!!

ಗೆಳತೀ,
ಜಗತ್ತು ವಿಶಾಲ. ಬದುಕು ವಿಶಾಲ. ನಿನ್ನ ಹೃದಯನೂ ಅಷ್ಟೇ ವಿಶಾಲ ಅಂದುಕೊಂಡ ಮುಗ್ಧ ಮನಸ್ಸು ನನ್ನದು. ನಿನ್ನ ಪ್ರೀತಿಯ ತೀರದಲ್ಲಿ ಲಗೋರಿಯಾಟ ಆಡುತ್ತಿದ್ದಾಗ ಧೊಪ್ಪನೆ ದಡಕ್ಕಪ್ಪಳಿಸುತ್ತಿದ್ದ ಆ ಅಲೆಗಳೇಕೋ ಅಲೆಯೆನಿಸಲಿಲ್ಲ, ಪ್ರೀತಿಯ ಸೆಲೆಯೇನೋ ಅಂದುಕೊಂಡೆ. ನೀ ಗೀಚಿದ ನಾಲ್ಕಕ್ಷರಕ್ಕೆ ಜಗತ್ತನ್ನು ಮರೆಸುವ ಶಕ್ತಿ ಇದೆ, ನಿನ್ನ ಮಡಿಲು ನನ್ನ ಖುಷಿ-ದುಃಖಗಳಿಗೆ ಅಮ್ಮನಾಸರೆ ಆಗುತ್ತೆ ಅಂದುಕೊಂಡಿದ್ದೆ. ಗೆಳತೀ, ನೀ ಹಾಗಾಗಲಿಲ್ಲ ಬಿಡು..!

ನೀನಿತ್ತ ಭಾಷೆಗೆ ಸುಗ್ಗಿಯ ಸಂಭ್ರಮವಿತ್ತು. ನಾಳಿನ ಚಿಂತೆಗಳಿಗೆ ಅವಕಾಶವೇ ಇರಲಿಲ್ಲ ಗೆಳತೀ. ನಿನ್ನ ನಗು ಮತ್ತು ಕಣ್ಣುಗಳನ್ನು ನಾ ತುಂಬಾ ಪ್ರೀತಿಸುವೆ, ಖುಷಿಯಲ್ಲಿದ್ದಾಗ ಬೆಳಕು ನೀಡೆಂದು ಪದೇ ಪದೇ ದುಂಬಾಬು ಬೀಳುತ್ತಿದ್ದ ನಿನಗೆ ನಾ ನೀಡಿದ ಬೆಳಕು ಅದೇಕೆ ಅಮಾವಾಸ್ಯೆಯ ಕತ್ತಲೆಯೆನಿಸಿತು? ಅದೇಕೇ ಹುಣ್ಣಿಮೆಯಾಗಲಿಲ್ಲ? ಅದೇಕೇ ನಾ ನಿನ್ನ ಪಾಲಿಗೆ ಬೆಳದಿಂಗಳ ಚಂದಿರನೆನಿಸಲಿಲ್ಲ?! ಅದೇ ನೀನಿಲ್ಲದ ಬದುಕಿನಲ್ಲಿ ಕಪ್ಪನೆಯ ಆಕಾಶದಲ್ಲಿ ಮಿನುಗುವ ನಕ್ಷತ್ರಗಳನ್ನು ಎಣಿಸುತ್ತಾ ಇದೀಗ ಮತ್ತೆ ಮತ್ತೆ ಪ್ರಶ್ನೆಗಳನ್ನು ನನಗೇ ನಾ ಕೇಳಿಕೊಳ್ಳುತ್ತಿದ್ದೇನೆ. "ಮನುಷ್ಯ ಮನುಷ್ಯನಿಗೆ ಮಾಡುವ ಎಲ್ಲಾ ದ್ರೋಹಗಳೂ ಅತ್ಯಾಚಾರಗಳೇ, ನೀ ನನ್ನ ಬಿಟ್ಟು ಹೋಗಲ್ಲ ತಾನೇ? ಭಾಷೆ ಕೊಡು' ಎಂದು ಬೆಳ್ಳಂಬೆಳಿಗ್ಗೆ ಕಡಲ ತಡಿಯಲ್ಲಿ ಇಬ್ಬನಿ ಬೆಳಗನ್ನು ಸವಿಯುತ್ತಾ ನೀ ಕೇಳಿದ ಪ್ರಶ್ನೆ! ಗೆಳತೀ, ನೀ ಮಾಡಿದ ದ್ರೋಹವನ್ನು ನಾ ಏನೆಂದು ಕರೆಯಲಿ? ಅತ್ಯಾಚಾರವೇ? ದ್ರೋಹವೇ? ನಂಬಿಕೆಗೆ ಪೆಟ್ಟೇ?

ಗೆಳತೀ, ನೀ ನನಗೆ ರಾಜಬೀದಿಯಾಗು ಎನ್ನಲಿಲ್ಲ, ನನ್ನ ಪಾಲಿಗೆ ಪುಟ್ ಪಾತ್ ಆಗಿಬಿಡು ಎಂದವ ನಾನು. ನೇಸರನಾಗಿ ಬೆಳಗು ಎಂದಿಲ್ಲ, ಪುಟ್ಟ ನಕ್ಷತ್ರವಾಗಿ ನನ್ನ ಬದುಕಿನಲ್ಲಿ ಬೆಳಗುತ್ತಿರು ಎಂದಿದ್ದೆ. ನಾ ಹೆಣೆದ ಪುಟ್ಟ ಕನಸುಗಳು ಅದೇಕೋ ಬಲಿತು ಹಣ್ಣಾಗುವ ಮೊದಲೇ...?! ಇರುಳ ಕತ್ತಲಿನಲ್ಲಿ ಪುಟ್ಟ ಹಣತೆ ಹಚ್ಚಿಟ್ಟು..ಆತ್ಮದೊಂದಿಗೆ ಮಾತನಾಡಲಷ್ಟೇ ನಾ ಕಲಿತಿದ್ದೆ ಗೆಳತೀ, ದೇಹದೊಂದಿಗಲ್ಲ! ಮನದ ಕನ್ನಡಿಯಲ್ಲಿ ಮುರಿದ ಮನಸ್ಸಿನ ಜಾತ್ರೆಯಲ್ಲಿ ಭಾವವಿಹೀನ ಬಿಂಬಗಳನ್ನು ಕಾಣುತ್ತ ಕುಳಿತ ನನಗೆ ನೀನಿತ್ತ ಭಾಷೆ ಮತ್ತೆ ಮತ್ತೆ ನೆನಪಾಗುತ್ತಿದ್ದೆ. ನೆನಪಿಡು, ಮನದ ಕದ ನಾ ಬಡಿಯಲಿಲ್ಲ ಗೆಳತೀ...ನೀನೇ ಕೈಯಾರೆ ಬಡಿದಿದ್ದೀಯಾ...ನೋಡು ಈಗ ನಿನ್ನ ಕೈಯಾರೆ ಮುಚ್ಚಿಬಿಡುತ್ತಿದ್ದೀಯಾ! "ಎಲ್ಲಾ ಸಮಸ್ಯೆಗಳಿಗೂ ನಮ್ಮ ಸೋಲಿಸಲು ದೈರ್ಯವಿರುವುದಿಲ್ಲ" ಎಂದು ನನ್ನ ಬದುಕಿಗೆ ಭರವಸೆ ತುಂಬಿದ ನೀ ಮಬ್ಬಿಗೆ ಬೆಳಕಾಗಿ, ಎಳೆಬಿಸಿಲಿಗೆ ಬಣ್ಣದ ರಂಗೋಲಿಯಾಗಿ ನೀ ಬರುವ ಕನಸು ಕಂಡಿದ್ದೆ. ಯಾಕೋ ಸುಗ್ಗಿಯ ಸಂಭ್ರಮ ಕೊನೆ ತನಕ ಉಳಿಯಲಿಲ್ಲ. ಕನಿಷ್ಠ ಪಕ್ಷ ನಿನ್ಮ ಪ್ರೇಮ ಬಿಡು, ಜೀವನ ಪ್ರೀತಿಯನ್ನೂ ನೀ ಉಳಿಸಿಕೊಂಡಿಲ್ಲವಲ್ಲಾ ಎನ್ನುವ ಕೊರಗು ನನ್ನದು. ಕಣ್ಣಲ್ಲಿ ನೀರು ತುಂಬಿಕೊಂಡು, ಮುಖದಲ್ಲಿ ಕೃತಕ ನಗುವನ್ನು ಹೊರಸೂಸುವ ಸರದಿ ನನ್ನದು. ಥೂ! ಎಂಥ ದುರಂತ...! ಪ್ರೀತಿಗಾಗಿ ಹಪಹಪಿಕೆ ಸರಿಯಲ್ಲ...ಕಣ್ಣೀರ ಬೆಲೆ ಅರ್ಥವಾಗದವರ ಎದುರು ಕಣ್ಣೀರು ಹಾಕೋದು ತರವಲ್ಲ..ಆದರೆ ಎದೆಯಾಳದಿಂದ ಹೊರಹೊಮ್ಮುವ ದುಃಖದ ಬೇಗೆ, ಕಂಗಳಿಂದ ಹನಿ ಹನಿಯಾಗಿ ಸುರಿಯುತ್ತಿದೆ ನೋಡು...! ಗೆಳತೀ..ಒಂದೇ ಒಂದು ಬಾರಿ ನಿನ್ನ ಆತ್ಮದೊಡನೆ ಕೇಳಿಬಿಡು...ನಾನೂ ಮಾತಿಗಿಳಿದಿದ್ದು ನಿನ್ನ ಆತ್ಮದ ಜೊತೆ ಮಾತ್ರ!

ನನ್ನೊಂದಿಗೆ ಮಾತನಾಡುವ, ನನ್ನೊಂದಿಗೆ ಒಡನಾಡುವ, ನನ್ನ ಮೌನ-ಮಾತುಗಳನ್ನು ಹಂಚಿಕೊಳ್ಳುವ, ನನ್ನೆದೆಯಲ್ಲಿ ಪ್ರೀತಿ ಬೆಳಕು ವಿಶ್ವಾಸಗಳನ್ನು ತುಂಬುವ ಗೆಳತಿಯಾಗ್ತೀಯಾ ಅಂದುಕೊಂಡೆ. ಆದರೆ ಹಾಗಾಗಿಲ್ಲ ಬಿಡು, ಯಾಕೋ ನೆನಪಾಗುತ್ತಿದೆ, ಭೈರಪ್ಪ ಅವರ ದೂರಸರಿದರು ಕಾದಂಬರಿಯಲ್ಲಿ ಬರುವ "ಮನುಷ್ಯರನ್ನು ಪ್ರೀತಿಸುವುದಕ್ಕಿಂತ ನಿಸರ್ಗವನ್ನು ಪ್ರೀತಿಸುವುದರಲ್ಲಿ ನಿರಾಶೆಗೆ ಒಳಗಾಗುವ ಭೀತಿ ಕಡಿಮೆ" ಎಂಬ ಮಾತು. ಈವಾಗ ಇದು ನಿಜವೆನಿಸುತ್ತೆ. ಜುಳು ಜುಳು ಎಂದು ಹರಿಯೋ ನದಿ, ದಡಕ್ಕಪ್ಪಳಿಸುವ ಅಲೆ, ಪ್ರಶಾಂತ ಸಾಗರ, ಸಕಲ ಜೀವಕೋಟಿಗಳಿಗೂ ಆಸರೆ ನೀಡಿದ ಭೂಮಿ, ಸುರಿಯುವ ಮಳೆ, ಬೀಸುವ ಗಾಳಿ, ಮೌನವಾಗಿ ಬಿದ್ದಿರುವ ಕಲ್ಲು, ಹಸುರು ಮರಗಿಡಗಳು, ಚಿಲಿಪಿಲಿ ಕಲರವಗುಟ್ಟುವ ಹಕ್ಕಿಗಳು, ನೀಲ ಆಕಾಶ, ಚಲಿಸುವ ಮೋಡಗಳು, ಮನಕ್ಕೆ ಖುಷಿಕೊಡುವ ಹೂವುಗಳು...ಇವುಗಳನ್ನು ನಿನಗಿಂತ ಹೆಚ್ಚು ಪ್ರೀತಿಸ್ತಾ ಇದ್ರೆ ಬಹುಶಃ ನನ್ ಕಣ್ಣಲ್ಲಿ ಹನಿಬಿಂದುವಿಗೂ ಅವಕಾಶ ಇರಲಿಲ್ಲ ಎನಿಸುತ್ತೆ ಗೆಳತೀ!
ಇಂತೀ,
-ಗೆಳೆಯನಾಗಿದ್ದವ!


(ಈ ಪತ್ರ ಬರೆದಿದ್ದು ದಿನಾಂಕ 17.04.2009 ರಂದು. ಅಂದೇ ರಾತ್ರಿ ಲಗೋರಿಯಾಟದ ರಾಜೇಶ್ (http://manadapisumaathu.blogspot.com/) ಇದಕ್ಕೆ ಪ್ರತ್ಯುತ್ತರವಾಗಿ ತುಂಬಾ ಸುಂದರವಾದ ಪ್ರೇಮಪತ್ರ ಬರೆದಿದ್ದಾರೆ. ಅದೂ ಹುಡುಗಿಯಾಗಿ...! ಇದು ನಮ್ಮಿಬ್ಬರ ಬರಹದ ಸಮರ ಅಲ್ಲ...ಅವರಿಗೆ ನಾನು ಹುಡುಗನಾಗಿ ಬರೆದ ಪತ್ರ ಓದಿದ ಮೇಲೆ ಹುಡುಗಿಯಾಗಿ, ಹುಡುಗಿಯ ಮನದ ತುಮುಲಗಳನ್ನು ಕಲ್ಪಿಸಿಕೊಂಡು ಭಾವನೆಗಳನ್ನು ಅಕ್ಷರರೂಪಕ್ಕೆ ಇಳಿಸಿದ್ದಾರೆ. ನೀವೂ ಓದಿ. ರಾಜೇಶ್ ತುಂಬಾ ಚೆನ್ನಾಗಿ ಬರೆದಿದ್ದಕ್ಕೆ ಧನ್ಯವಾದಗಳು)