ಅಂದು ಜಡಿಮಳೆ. ರಸ್ತೆ ಇಕ್ಕೇಲಗಳಲ್ಲಿ ನೀರು ತುಂಬಿ ಹರಿಯುತ್ತಿತ್ತು. ಎಲ್ಲಿ ನೋಡಿದ್ರೂ ಸಾಗರವೇ. ಸಾಗರದ ಮೇಲೆಯೇ ವಾಹನಗಳ ಸವಾರಿ. ನೋಡಿದರೂ ಟ್ರಾಫಿಕ್ ಜಾಮ್. ಬೆಂಗಳೂರಂದ್ರೆ ಇದೇನಾ? ಎಂದು ಅಚ್ಚರಿಯ ಕಣ್ಣುಗಳಿಂದ ದಿಟ್ಟಿಸುತ್ತಿದ್ದ ದಿನಗಳು. ರಾತ್ರಿ ಒಂಬತ್ತೂವರೆ. ನಾ ಕುಳಿತ ಬಸ್ಸು ಟಾ್ರಫಿಕ್ ಜಾಮ್ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಬಸ್ಸಲ್ಲಿ ಕುಳಿತೇ ಬೆಂಗಳೂರು ನೋಡುವ ತವಕ. ಮನೆ ಸೇರಲು ತಡವಾಯಿತು ಎನ್ನುವ ಭಯ ಮನದೊಳಗೆ. ಆದರೇನು ಇಷ್ಟು ಮಂದಿ ಬಸ್ಸಿನಲ್ಲಿದ್ದಾರಲ್ಲ ಎಂಬ ಭಂಡ ಧೈರ್ಯ ಬೇರೆ.
ಅದೇ ಪಕ್ಕದ ದಾರಿಯಲ್ಲಿ ಹಿಂಡು ಹಿಂಡು ಹುಡುಗರು. ಆ ಧಾರಾಕಾರ ಮಳೆಯಲ್ಲಿ ಚೆಂದದ ಹುಡುಗಿಯರು ಅಲ್ಲಲ್ಲಿ ನಿಂತಿದ್ದರು. ಬಿರುಸಿನಿಂದ ಸುರಿವ ಮಳೆಯನ್ನೂ ಲೆಕ್ಕಿಸದೆ! ಹಿಂಡು ಹಿಂಡಾಗಿ ಸಾಗುತ್ತಿದ್ದ ಹುಡುಗರು ಅವರ ಬಳಿಯಲ್ಲಿ ಅದೇನೋ ಮಾತನಾಡಿಕೊಳ್ಳುತ್ತಿದ್ದರು. ಪಿಸುಗುಟ್ಟುತ್ತಿದ್ದರು. ಕೆಲವು ಗಂಡಸರು ಬೈಕ್, ಕಾರು ನಿಲ್ಲಿಸಿ ಮಾತನಾಡಿಕೊಳ್ಳುತ್ತಿದ್ದರು. ಪಕ್ಕದಲ್ಲೇ ಸಾಗುತ್ತಿದ್ದ ಆಟೋ ಚಾಲಕರು ಅವರನ್ನು ಕಂಡು ಛೇಡಿಸುತ್ತಿದ್ದರು. ಆಗಿದ್ದರೂ ಆ ಹುಡುಗಿಯರ ಕಣ್ಣುಗಳು ಭರವಸೆಯಿಂದ ಸುತ್ತಲೂ ದಿಟ್ಟಿಸುತ್ತಿದ್ದರು. ಬಸ್ಸಿನಲ್ಲಿ ಕುಳಿತವರೆಲ್ಲ ಅವರತ್ತ ಅಸಹ್ಯ ದೃಷ್ಟಿಯಿಂದ ನೋಡಿ, ಅಶ್ಲೀಲ ಭಾಷೆಯಿಂದ ಬೈಯುತ್ತಿದ್ದರು ಆ ಹುಡುಗಿಯರನ್ನು, ಅವರ ಬಳಿ ಚೌಕಾಸಿ ಮಾಡುತ್ತಿದ್ದ ಗಂಡುಜೀವಗಳನ್ನಲ್ಲ!
ಮೊನ್ನೆ ಮೊನ್ನೆ ಯಾವುದೋ ಬರಹ ಓದುತ್ತಿದ್ದೆ. ಕುಸುಮಾ ಶಾನಭಾಗ ಅವರು ಬರೆದ ‘ಕಾಯಕ ಕಾರ್ಪಣ್ಯ’ ಪುಸ್ತಕದ ಕುರಿತು ಅಲ್ಲಿ ಪ್ರಸ್ತಾಪಿಸಲಾಗಿತ್ತು. ಆ ಕ್ಷಣ ಬೆಂಗಳೂರಿಗೆ ಬಂದ ಆರಂಭದಲ್ಲಿ ನಾ ಕಂಡ ಈ ದೃಶ್ಯಗಳು ಕಣ್ಣಮುಂದೆ ಮತ್ತೊಮ್ಮೆತೇಲಿಬಂದವು.
ಅಬ್ಬಾ! ನನ್ನೊಳಗೆ ಹುಟ್ಟಿದ ‘ಬದುಕೆಷ್ಟು ಕ್ರೂರ?’ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಎಂ.ಜಿ. ರೋಡ್, ಮುಂಬೈನ ಕಾಮಾಟಿಪುರ, ಪುಣೆಯ ಬುಧವಾರ ಪೇಟೆ ಕೂಡ ಉತ್ತರ ನೀಡಲಿಲ್ಲ!! ಆ ಬಗ್ಗೆ ಬಹಳಷ್ಟು ಓದಿದ್ದೆ, ಕೇಳಿದ್ದೆ. ಕೇಳಿದಾಗಲೆಲ್ಲ ಅಚ್ಚರಿಯ ಕಣ್ಣುಗಳಿಂದ ದಿಟ್ಟಿಸುತ್ತಿದ್ದೆ. ಆದರೆ, ಅಂದು ನಾ ಕಂಡ ದೃಶ್ಯವನ್ನು ನೆನೆಸಿಕೊಂಡಾಗ ನಮ್ಮ ಇಡೀ ವ್ಯವಸ್ಥೆಯ ಮೇಲೆಯೇ ಕೆಟ್ಟ ಸಿಟ್ಟು ಬಂದುಬಿಡುತ್ತದೆ.
ಹೌದು, ಮಾತೆಯರ ಕುರಿತಾಗಿ ಗೌರವದ ಮಾತುಗಳನಾಡುತ್ತೇವೆ. ಆದರೆ ಇನ್ನೊಂದೆಡೆ ಅವಳನ್ನು ಕಂಡು ಹೀಯಾಳಿಸುತ್ತೇವೆ. ಅವಳ ಆಂತರ್ಯವನ್ನು, ಅವಳ ಬದುಕನ್ನು ಕಂಡರಿಯಲು ಹೋಗುವುದಿಲ್ಲ. ಅಂದು ಬಸ್ಸಿನಲ್ಲಿ ಕುಳಿತವರೆಲ್ಲ ವ್ಯಂಗ್ಯವಾಗಿ ನಗುತ್ತಿದ್ದರೆ, ಆ ಒಂದು ಹುಡುಗಿಯ ಸುತ್ತ ಕನಿಷ್ಠ ನಾಲ್ಕೈದು ಹುಡುಗರು ಚೌಕಾಸಿ ಮಾಡುತ್ತಿದ್ದರು. ಅವಳೊಬ್ಬಳ ಬದುಕು ನಾಲ್ಕೈದು ಮಂದಿಯನ್ನು ಬಲಿತೆಗೆದುಕೊಳ್ಳುತ್ತಿತ್ತೇನೋ! ಎಂಬ ಭಾವ ಮನದೊಳಗೆ. ಥತ್, ಇದು ಬದುಕಿನ ವಿರೂಪವೇ? ಅವಳ ತಪ್ಪೇ? ಅಥವಾ ವ್ಯವಸ್ಥೆಯ ತಪ್ಪೇ? ಉತ್ತರ ಸಿಗಲೇ ಇಲ್ಲ.
Wednesday, December 23, 2009
Subscribe to:
Posts (Atom)