Tuesday, April 21, 2009

ನೋವು-ನಲಿವುಗಳ ಜೊತೆ ನಲಿದಾಡಿಬಿಡು ನನ್ನ ಪುಟ್ಟ ತಮ್ಮಾ...

ನನ್ನನ್ನು ತುಂಬಾ ಪ್ರೀತಿಸುವ ಮುದ್ದಿನ ತಮ್ಮ ಸಂದೇಶನ ಹುಟ್ಟುಹಬ್ಬ ನಾಳೆ. ಅವನಿಗಿನ್ನು 23 ವರುಷ. ಹಾಗಾಗಿ ಭಾಳ ಖುಷಿ. ಉಜಿರೆಯ ಕಾರಿಡಾರ್ ನಿಂದ ಹಿಡಿದು ಬೆಂಗಲೂರಿನ ಪುಟ್ಟ ಮನೆಯೊಳಗೂ ನನ್ನ ಮಡಿಲಲ್ಲಿ ಕಲರವಗುಟ್ಟುವವ ನನ್ನ ತಮ್ಮ. ಅವನು ಒಡಹುಟ್ಟಿದ ತಮ್ಮನಲ್ಲ, ಆದರೆ ಒಡನಾಡಿ ಒಡಹುಟ್ಟಿದವನಾದ. ನಾನು ದ್ವಿತೀಯ ಬಿಎ ಇರುವಾಗ ಅವನು ಮೊದಲ ಬಿಎ. ದೂರದ ಚಿಕ್ಕಮಗಳೂರ ಕಾಫಿ ತೋಟದಿಂದ ಉಜಿರೆಗೆ ಕಲಿಯಲು ಬಂದ ನನ್ನ ಚಿಕ್ಕಮ್ಮನ ಮಗ. ಕ್ಲಾಸಿಲ್ಲದ ಫ್ರೀ ಫಿರೇಡಿನಲ್ಲಿ ನಿತ್ಯ ನನ್ನ ಕ್ಲಾಸಿನಲ್ಲಿ ಕುಳಿತು ನನ್ನ ಜೊತೆ ಹರಟುತ್ತಾ, ದಿನಚರಿಗಳನ್ನು ಒಪ್ಪಿಸುತ್ತಾ, ತಮಾಷೆ ಮಾಡುತ್ತಾ, ಜಡೆ ಎಳೆಯುತ್ತಾ, ಕಿವಿ ಹಿಂಡುತ್ತಾ ಕೊನೆಗೆ ನನ್ನಿಂದ ಬೈಸಿಕೊಂಡು ಹಾಸ್ಟೇಲ್ ಮೂಲೆಯಲ್ಲಿ ಕುಳಿತು ಒಬ್ಬಂಟಿಯಾಗಿ ಬಿಕ್ಕಿ ಬಿಕ್ಕಿ ಅತ್ತವ ನನ್ನ ಪ್ರೀತಿಯ ತಮ್ಮ, ಕಾಲೇಜಿನಲ್ಲಿ ಗಮಕ ತರಗತಿಗೆ ಹೋಗುವಾಗ ಮೇಷ್ಟ್ರು ಹೇಳಿದ್ದು ಅರ್ಥವಾಗದಿದ್ದಾಗ ನನ್ನ ದನಿಗೆ ಸಾಥ್ ನೀಡಿದ್ದು ನನ್ನ ತಮ್ಮ. ಪ್ರತಿ ಹಬ್ಬ ಬಂದಾಗಲೂ ನನಗೆ ಹೋಳಿಗೆ, ಮನೆಯಲ್ಲಿ ಮಾಡಿದ್ದ ತಿಂಡಿಗಳನ್ನು ನಮ್ಮ ಹಾಸ್ಟೇಲಿಗೆ ತಂದುಕೊಡುತ್ತಿದ್ದ. ಕಾಲೇಜು ಬಿಟ್ಟ ತಕ್ಷಣ ನನ್ನ ಹಾಸ್ಟೇಲ್ ತನಕ ಬಿಟ್ಟು ಆಮೇಲೆ ಅವನ ಹಾಸ್ಟೇಲಿಗೆ ಹೋಗುತ್ತಿದ್ದ. ರಜಾ ದಿನದಲ್ಲಿ ಹೊರನಾಡು, ಕಲಶ, ಶೃಂಗೇರಿ, ಚಿಕ್ಕಮಗಳೂರು ಸುತ್ತಿಸಿ, ಅಕ್ಕನಿಗೆ ಚಿಕ್ಕಮಗಳೂರಿನ ಕಾಫಿ ತೋಟಗಳನ್ನು ನೋಡಿ ಖುಷಿಪಡಿಸಿದ್ದ.

ನಾನು ಡಿಗ್ರಿ ಮುಗಿಸಿ ಕಾಲೇಜಿಂದ ಹೊರನಡೆದಾಗ ಅಕ್ಕಾ ನಾ ನಿನ್ ಜೊತೆಗೇ ಬರ್ತೀನಿ ಎಂದು ಅಮ್ಮನೆದುರು ಮಗು ಗೋಗರದಂತೆ ಬಿಕ್ಕಿ ಬಿಕ್ಕಿ ಅತ್ತಿದ್ದ. "ನನಗಿಂತ ಹೆಚ್ಚಾಗಿ ನಿನ್ನ ಪ್ರೀತಿಸೋರು ಸಿಕ್ಕಾಗಲೂ ನನ್ನ ಮರೆಯಲ್ಲ ತಾನೇ?" ಎಂದು ಆಟೋಗ್ರಾಫ್ ತುಂಬಾ ಗೀಚಿಟ್ಟು ನನ್ನ ಕಣ್ಣುಗಳೂ ಒದ್ದೆಯಾಗುವಂತೆ ಮಾಡಿದ್ದ. ಕಾರಿಂಜ ದೇವಸ್ಥಾನ ಬೆಟ್ಟದ ತುತ್ತತುದಿಗೆ ಹೋಗಿ ನನ್ನ ಜೊತೆ ಫೋಟೋ ತೆಗೆಸಿಕೊಂಡು ನಿಂಗೆ ಬಾವ ಹುಡುಕುತ್ತೀನಿ ಅಂತ ತಮಾಷೆ ಮಾಡುತ್ತಿದ್ದ. ಸಿಕ್ಕವರಿಗೆಲ್ಲಾ ಫೋಟೋ ತೋರಿಸಿ ಇದು ನನ್ನಕ್ಕ ಅಂತ ಹೆಮ್ಮೆಪಡುತ್ತಿದ್ದ. ಅಂತೂ ನಾನು ಬೆಂಗಳೂರಿಗೆ ಬಂದಾಗಲೂ ನಿತ್ಯ ಮೊಬೈಲ್, ಮೆಸೇಜ್ ಗಳೊಂದಿಗೆ ನನ್ನೊಂದಿಗೆ ಕಲರವಗುಟ್ಟುತ್ತಿದ್ದ. ಡಿಗ್ರಿ ಮುದಿದ್ದೇ ತಡ..ಮನೆಯಲ್ಲಿ ಯಾರೂ ಹೇಳಿದ್ರೂ ಅಕ್ಕನ ಜೊತೆಗೇ ಇರ್ತೀನಿ ಅಂತ ಹಠ ಹಿಡಿದು ಬೆಂಗಳೂರಿಗೆ ಬಂದುಬಿಟ್ಟ. ನನ್ನ ಪುಟ್ಟ ಮನೆಯಲ್ಲಿ ನನ್ನ ಮಡಿಲೇ ಸೇರಿಬಿಟ್ಟ.

ನನ್ನ ಕೆಟ್ಟ ಕೋಪ, ಅಸಹನೆ, ಸಿಡುಕು ಎಲ್ಲಾವನ್ನೂ ಸಹಿಸಿಕೊಂಡು ನನ್ನ ಜೊತೆ ಹೆಜ್ಜೆಹಾಕೋನು ನನ್ನ ತಮ್ಮ. ರಾತ್ರಿ 10 ಗಂಟೆಗೆ ಮನೆ ಸೇರಿದರೂ. "ಮೇಡಮ್ಮೋರೇ ಎದ್ದೇಳ್ತೀರಾ. ಮಿ. ಸಂದೇಶ್ ಬಂದಿದ್ದಾರೆ" ಅಂತೇಳಿ ನನ್ನ ಕೋಣೆಯ ಕಿಟಕಿ ಬಡಿದು ಎಬ್ಬಿಸಿ, ಸ್ವಲ್ಪ ಊಟ ಮಾಡಕ್ಕ..ಅನ್ನುತ್ತಾ ಮತ್ತೊಮ್ಮೆ ಊಟ ಮಾಡಿಸೋನು ನನ್ನ ಮುದ್ದು ತಮ್ಮ. ಬೆಳಿಗ್ಗೆ ಆರು ಗಂಟೆಗೆ ಎದ್ದು ನಾನು ಪಾತ್ರೆಗಳ ಜೊತೆ ಸದ್ದು ಮಾಡುವಾಗ, ದಡಕ್ಕನೆ ಎದ್ದು ನನ್ನ ಜೊತೆ ತರಕಾರಿ ಹಚ್ಚೋಕೆ ಸಾಥ್ ನೀಡೋನು, ನಾನು ಟೀ ಕುಡಿದು ಸ್ಬಾನಕ್ಕೆ ಹೋದಾಗ ಮನೆ ಗುಡಿಸಿ-ಒರೆಸಿ, ಪೂಜೆಗೆ ರೆಡಿ ಮಾಡೋನು ನನ್ನ ತಮ್ಮ. ನಾನು ಬೇಜಾರದಲ್ಲಿದ್ದಾಗ ಕೆದಕಿ ಕೆದಕಿ ಕೇಳಿ ತಲೆಯೆಲ್ಲಾ ತಿಂದು ಸ್ವಲ್ಪ ಬೈಸಿಕೊಂಡು ಆಮೇಲೆ ನನ್ನ ಮನಸ್ಸನ್ನು ತಣ್ಣಗಾಗಿಸೋನು ನನ್ನ ತಮ್ಮ. ನಾ ಬೈದ್ರೆ ಸುಮ್ಮನಾಗಿ, ನನ್ನ ಸಿಟ್ಟೆಲ್ಲಾ ಕರಗಿದ ಮೇಲೆ ನೀನು ಹಾಗೆಲ್ಲಾ ಹೇಳಬಾರದಿತ್ತು ಎಂದು ನನ್ನ ತಪ್ಪನ್ನು ನನಗೇ ಮನದಟ್ಟು ಮಾಡೋನು. ತಿಂಗಳ ಕೊನೆಯಲ್ಲಿ ಬೇಗನೇ ಸಂಬಳ ಕೈಗೆ ಸಿಗದಾಗ...ನನ್ನ ತಲೆಬಿಸಿ ನೋಡಿ..ಅಕ್ಕಾ ಸ್ವಲ್ಪ ದಿನಸಿ ತಕೋಳೋಣ..ಸಂಬಳ ಆದ ಮೇಲೆ ಎಲ್ಲಾ ತಕೋಳೋಣಂತೆ ಎಂದೇಳಿ ತಲೆಬಿಸಿ ಕಡಿಮೆಯಾಗಿಸೋನು ನನ್ನ ತಮ್ಮ. ನಾನು ಹೊಸ ಡ್ರೆಸ್ಸು ತಕೋಳುವಾಗ ಕಲರ್ ಸೆಲೆಕ್ಟ್ ಮಾಡಿ, ಅದನ್ನು ಹಿಂಗೇ ಹೊಲಿಸು, ಅದಕ್ಕೆ ಇಂಥ ಕಿವಿಯೋಲೆ, ಬಳೆ ಹಾಕೆಂದು ದುಂಬಾಲು ಬೀಳೋನು, ಅವನಿಗೆ ವಾರದ ರಜಾದಿನದಂದು ಬೇಗನೆ ಅಡುಗೆ ಎಲ್ಲಾ ರೆಡಿಮಾಡಿ, ನಾನು ಸಂಜೆ ಆಫೀಸ್ ನಿಂದ ಹೊರಟಾಗ ವಾಕಿಂಗ್ ಗೆ ರೆಡಿಯಾಗೋನು, ಮಲ್ಲಿಗೆ ಮತ್ತು ಗುಲಾಬಿ ಹೂವು ತಂದು ನನ್ನ ತಲೆಗೆ ಮುಡಿಸಿ ನನ್ನ ನೋಡಿ ಖುಷಿಪಡೋನು, ನೀನು ಮದುವೆಯಾಗುವ ತನಕ ನಿನ್ನ ಜೊತೆ ಇದ್ದುಬಿಡ್ತೀನಿ...ಆಮೇಲೆ ನಿಮ್ಮನೆ ಪಕ್ಕನೇ ನಂಗೊಂದು ರೂಮ್ ಮಾಡಿ ಕೊಡಕ್ಕಾ ಎಂದು ನಿತ್ಯ ತಮಾಷೆ ಮಾಡೋ ನನ್ನ ಪುಟ್ಟ ತಮ್ಮನನ್ನು ಕಂಡಾಗ ನನ್ನೆಲ್ಲಾ ನೋವುಗಳು ಕರಗಿ, ಮನಸ್ಸು ಖುಷಿಯ ಕಡಲಲ್ಲಿ ತೇಲಿಬಿಡುತ್ತೆ. ನನ್ ಪುಟ್ಟ ಮನೆಯಲ್ಲಿ ಖುಷಿಯ ಸಾಗರವನ್ನೇ ತಂದಿಡುವ ನನ್ನ ತಮ್ಮನ ಸಹನೆ ಕಂಡಾಗ, ಛೇ! ಆ ತಾಳ್ಮೆಯನ್ನು ದೇವರು ನನಗೇಕೆ ಕೊಟ್ಟಿಲ್ಲ ಅನಿಸುತ್ತೆ. ನೋವು-ನಲಿವಿಗೆ ಪ್ರೀತಿಯ ಅಮ್ಮನಾಗಿ, ತಿದ್ದಿ-ತೀಡುವ ಅಕ್ಕರೆಯ ಗೆಳೆಯನಾಗಿ, ಬುದ್ಧಿ ಹೇಳುವ ಅಕ್ಕ-ಅಣ್ಣನಾಗಿರುವ ನನ್ನ ತಮ್ಮನಂದ್ರೆ ಅಮ್ಮನಷ್ಟೇ ನಂಗೆ ಪ್ರೀತಿ.
ಪುಟ್ಟಾ....
ನಿನ್ನೊಳಗೆ ತೂರಿಬರುವ
ಬೆಳಕಿನ ಕಿರಣಗಳನ್ನು ಹಿಡಿದಿಡು....
ಬದುಕಿನ ಎದೆಯಿಂದ ಎದೆಗೆ
ಪ್ರೀತಿಯ ಗಾಳಿ ಸೋಕಿಬಿಡು..
ಎಲ್ಲರ ನೋವು-ನಲಿವುಗಳ ಜೊತೆಯಾಗಿ ನಲಿದುಬಿಡು..ನನ್ನ ತಮ್ಮನಾಗಿ!
ಸವಿಮನದ ಹೊಲದಲ್ಲಿ
ಪ್ರೀತಿ ಪ್ರೇಮ ಸ್ನೇಹಗಳು
ಬೆಳೆದು ನಿಲ್ಲಲಿ, ಸುಗ್ಗಿ ಅರಳಲಿ
ನಿನ್ನ ಬಾಳು ಸದಾ ಹಸಿರಾಗಿರಲಿ..

ಪುಟ್ಟಾ...ನಿನಗಿದೋ ಹುಟ್ಟುಹಬ್ಬದ ಶುಭಾಶಯಗಳು.