Friday, March 29, 2013

ಭಾವಕ್ಕೆ ದಕ್ಕಿದ ಪ್ರಸಂಗಗಳು


ಓಲೆ ಪ್ರೀತಿ
ಕೆ.ಆರ್. ಮಾರ್ಕೆಟ್ ನಿಂದ ಬಸ್ ಹತ್ತಿದೆ. ಹುಡುಗಿಯೊಬ್ಬಳು ಪಕ್ಕದಲ್ಲೇ ಬಂದು ಕುಳಿತಳು. ಒಂದೇ ಸಮನೆ ನನ್ನ ಕಿವಿಗಳನ್ನು ನೋಡುತ್ತಾ ಕುಳಿತಿದ್ದಳು.
ಅವಳು ಇಳಿಯುವ ಮೊದಲು "ಮೇಡಂ ನಿಮ್ಮ ಕಿವಿಯೋಲೆ ತುಂಬಾ ಚೆಂದ ಇದೆ'' ಅಂದಳು. "ಥ್ಯಾಂಕ್ಸ್'' ಅಂದೆ.
"ಏನು ಓದುತ್ತಿದ್ದೀಯಾ?'' ಕೇಳಿದೆ.
"ಪ್ರಥಮ ಪಿಯುಸಿ''
"ಯಾವ ಸ್ಕೂಲ್''
"ಇಲ್ಲೆ ಹತ್ತಿರದ ಕಾಲೇಜು''
"ನಿನ್ನ ಹೆಸರು?''
"ಆಯೆಷಾ'' ಎಂದು ನಕ್ಕಳು.
ಮತ್ತೆ ಅವಳಿಂದಲೇ ಪ್ರಶ್ನೆ "ನೀವು ಎಲ್ಲಿ ತಕ್ಕೊಂಡೀರಿ ಓಲೆನಾ?''
''ಮಲ್ಲೇಶ್ವರಂ ಫುಟ್ ಪಾತ್''
"ಎಷ್ಟು ರೂಪಾಯಿ?''
"ನಲವತ್ತು''
""ವಾಹ್, ಕಡಿಮೆ ರೇಟು. ಬಹಳ ಚೆನ್ನಾಗಿದೆ. ತುಂಬಾ ಚೆಂದ ಕಾಣಿಸುತ್ತೆ'' ಎಂದು ನಗುತ್ತಾ ಇಳಿದುಹೋದಳು. ನನಗೂ ಅವಳ ಕಿವಿಯೋಲೆ ಹೇಗಿದೆ ಎನ್ನುವ ತವಕ...ಆದರೆ, ಅದು ಕಾಣಿಸಲೇ ಇಲ್ಲ. ಏಕೆಂದರೆ,ಅವಳು ಬುರ್ಖಾ ಧರಿಸಿದ್ದಳು!.
***************
ಅವನ ಬೈಟು ಕಾಫಿ
ರಾತ್ರಿ ಎಂಟರ ಹೊತ್ತು. ಅಂದು ನಮಗಿಬ್ಬರಿಗೆ ಜಗಳವಾಗಿತ್ತು. ಇಬ್ಬರೂ ಬಿಡಲಿಲ್ಲ. ಮಾತಿಗೆ-ಮಾತು. ಒಂದು ರೀತಿಯಲ್ಲಿ ಕುರುಕ್ಷೇತ್ರ. ಕೆನ್ನೆ ಮೇಲೆ ಬಿತ್ತು ಅವನ ಕೈ. "ನಮ್ಮಮ್ಮನೂ ನಂಗೆ ಹೊಡೆದಿಲ್ಲ. ನೀನ್ಯಾಕೆ ಕೆನ್ನೆಗೆ ಹೊಡೆದೆ?' ಎಂದು ಅಳುತ್ತಾ ಕೇಳಿದೆ, "ಕೆನ್ನೆಗಲ್ಲದೆ ಇನ್ನೆಲ್ಲಿ ಹೊಡೀಬೇಕು?' ಎಂದ ಆತ. ನನ್ನ ಸಿಟ್ಟು ಇನ್ನಷ್ಟು ಹೆಚ್ಚಿತು. "ನೋಡು ನಿಂಗೆ ಡಿವೋರ್ಸ್ ಕೊಟ್ಟುಬಿಡ್ತೀನಿ...ಬೇಡ ನೀನು ನಂಗೆ'' ಎಂದೆ. ಒಂದರ್ಧ ಗಂಟೆಯಲ್ಲಿ ಹತ್ತು-ಹದಿನೈದು ಸಲ ಡಿವೋರ್ಸ್ ರಿಪೀಟ್ ಆಯ್ತು. ಅದಕ್ಕೆ ಆತ ಹೇಳಿದ. "ಅರೆರೆ, ಈಗ ರಾತ್ರಿ. ಲಾಯರ್ ಗಳು ಇರಲ್ಲಮ್ಮ. ನಾಳೆ ಬೆಳಿಗ್ಗೆ ಡಿವೋರ್ಸ್ ಕೊಡುವಿಯಂತೆ. ಈಗ ನಿದ್ದೆ ಮಾಡು'' ಎಂದ. ಅವನ ಮಾತು ಕೇಳಿ ನಗು ಬಂದರೂ ತೋರಿಸಿಕೊಳ್ಳದೆ, ಹೊದಿಕೆ ಹೊದ್ದು ನಿದ್ದೆಗೆ ಜಾರಿದೆ. ಬೆಳಿಗ್ಗೆ ನಾನು ಎದ್ದಾಗ ಆತ ನನ್ನೆದುರು ಕಾಫಿ ಹಿಡಿದು ನಿಂತಿದ್ದ. "ಡಿವೋರ್ಸ್ ಕೊಡ್ತಿಯಲ್ಲ...ಈವರೆಗೆ ನಿಂಗೆ ಕಾಫಿನೂ ಮಾಡಿಕೊಟ್ಟಿಲ್ಲ. ಅದ್ಕೆ ಇವತ್ತು ಕಾಫಿ ಮಾಡಿದ್ದೀನಿ...ಪ್ಲೀಸ್ ಬೈ ಟು ಕಾಫಿ'' ಎಂದಾಗ ನಗುತ್ತಲೇ ಅಡುಗೆಮನೆಗೆ ಓಡಿದೆ!
***************
ಗಾಳಿಮರದ ವಿಳಾಸ ನಾಪತ್ತೆ
ಆ ಗಾಳಿಮರ ನನಗೆ ಭಾಳ ಇಷ್ಟ. ಏಕಾಂತ ಕಲಿಸಿದ್ದು ಅದೇ ಗಾಳಿಮರ, ಬರೆಯಲು ಕಲಿಸಿದ್ದು ಅದೇ ಗಾಳಿಮರ, ಖುಷಿ-ದುಃಖಗಳಿಗೆ ಸಾಥ್ ನೀಡಿದ್ದು ಅದೇ ಗಾಳಿಮರ. ಬರೋಬ್ಬರಿ ಐದು ವರ್ಷಗಳ ಕಾಲ ಗಾಳಿಮರದೊಂದಿಗೆ ನಂಟು. ಮುಂಜಾವಿನ ಹೊತ್ತು ಬೇಗ ಎದ್ದು ಓದಲು ಕುಳಿತುಕೊಳ್ಳುವುದು ಅದೇ ಗಾಳಿಮರದಡಿ, ಸಂಜೆ ಕಾಲೇಜಿನಿಂದ ಬಂದ ತಕ್ಷಣ ಮತ್ತೆ ಪೆನ್ನು, ಪುಸ್ತಕಗಳ ಜೊತೆ ಕೂರುವುದು ಅದೇ ಗಾಳಿಮರದಡಿ. ಅದೆಷ್ಟೋ ಕವನಗಳು, ಕತೆಗಳು, ಪ್ರೇಮಪತ್ರಗಳು ,..ಎಲ್ಲವನ್ನೂ ಗೀಚಿದ್ದು ಅದೇ ಗಾಳಿಮರದಡಿ. ಮನೆಗೆ, ಸ್ನೇಹಿತರಿಗೆ ಎಲ್ಲರಿಗೂ ಪತ್ರ ಬರೆದಿದ್ದು ಅದೇ ಗಾಳಿಮರದಡಿ. ಅದಿರಲಿ, ಐದು ವರ್ಷಗಳ ಕಾಲ ವರ್ಷಕ್ಕೆರಡು ಬಾರಿ ನಡೆದ ಮಹಾ ಪರೀಕ್ಷೆಗಳಿಗೆ ಓದಿ ಓದಿ ಕಲಿತಿದ್ದು ಅದೇ ಗಾಳಿಮರದಡಿಯಲ್ಲಿ. ಮೊದಲ ಬಾರಿ ಆ ಮರದಡಿಯಲ್ಲಿ ಕುಳಿತು ನಿಟ್ಟುಸಿರುಬಿಟ್ಟಾಗ ಅದಿನ್ನೂ ಸಣ್ಣ ಗಿಡವಾಗಿದ್ದು, ಐದು ವರ್ಷಗಳ ಬಳಿಕ ಅದು ಬಲಿತು ಮರವಾಗಿತ್ತು, ವಿಶಾಲವಾಗಿ ಹರಡಿತ್ತು. ನನ್ನೊಬ್ಬಳಿಗೆ ಮಾತ್ರ ಹಲವಾರು ಮಂದಿಗೆ ನೆರಳು ನೀಡುತ್ತಿತ್ತು. ಮೊನ್ನೆ ಮೊನ್ನೆ ಮತ್ತೆ ಗಾಳಿಮರ ನೋಡಲು ಹೋಗಿದ್ದೆ...ಬರೋಬ್ಬರಿ ಏಳು ವರ್ಷಗಳ ಬಳಿಕ. ಆ ನನ್ನ ಪ್ರೀತಿಯ ಗಾಳಿಮರದ ವಿಳಾಸವೇ ಇರಲಿಲ್ಲ. ಅಲ್ಲೊಂದು ಅಂಗಡಿ ಇತ್ತು. ಅಲ್ಲಿ ಬಂದು ಬೀಡಿ-ಸಿಗರೇಟು ಸೇದುವ, ತರಕಾರಿ, ಅಕ್ಕಿ, ಸಾಮಾನು ಕೊಳ್ಳುವ ಮಂದಿ...ಯಾರಿಗೂ ಗೊತ್ತಿಲ್ಲ ಆ ಗಾಳಿಮರದ ವಿಳಾಸ!

Monday, March 25, 2013

ಗೌಡ್ರ ಬೋರ್ ವೆಲ್ ಮತ್ತು ನಮ್ಮನೆ ಬಾವಿ


ಗೌಡ್ರ ಮನೆಗೆ ಬೋರ್ ವೆಲ್ ಬಂತಂತೆ, ಇನ್ನೇನೋ ಬೇಸಿಗೆ ಬಿರುಸಾಗಿದೆ. ನಮ್ಮ ಬಾವೀಲಿ ನೀರು ಬತ್ತುತ್ತಾನೇ ಇರ್ಲಿಲ್ಲ. ಇನ್ನು ಈ ಮಂದಿ ಬೋರ್ ವೆಲ್ ಹಾಕಿಸಿದ್ರೆ ಅದ್ಯಾರ ಮನೆ ಮುಂದೆ ಬಿಂದಿಗೆ ಹಿಡಿಬೇಕೋ...ಅಮ್ಮ ಗೊಣಗುತ್ತಾ ಜಗುಲಿ ಮೇಲೆ ಕುಳಿತಿದ್ದಳು. ನನಗಿನ್ನೂ ಚಿಕ್ಕ ವಯಸ್ಸು. ಬೋರ್ ವೆಲ್ ಬರುವುದಕ್ಕೂ, ನಮ್ಮನೆ ಬಾವಿ ಬತ್ತೋದಕ್ಕೂ ಅದೆಂಥ ಸಂಬಂಧ ಉಂಟು? ಎಂದು ಕೇಳಿದೆ. "ಉಂಟು..ಸಂಬಂಧ... ನೀರು ಸಿಗೋತನಕ ಕೊರೀತಾರೆ..ಅಂತರ್ಜಲ ಬತ್ತಿಹೋಗುತ್ತೆ. ಆಗ ಸುತ್ತಮುತ್ತಲ ಬಾವಿಗಳ ನೀರು ಬತ್ತುತ್ತೆ' ಎಂದು ಆಕ್ರೋಶದಿಂದ ಹೇಳುತ್ತಿದ್ದಳು ಅಮ್ಮ. ಅಮ್ಮ ಹುಟ್ಟಿದಾಗಿನಿಂದ ನಮ್ಮನೆ ಬಾವಿ ಬತ್ತುವುದನ್ನೇ ನೋಡಿರಲಿಲ್ಲವಂತೆ. ಬರೀ ಆರು ಅಡಿಯಲ್ಲಿ ನೀರು. ವರ್ಷದ ಮೂರು ಕಾಲದಲ್ಲಿಯೂ ನೀರಿಗೆ ಬರವಿಲ್ಲ. ಬೇಸಿಗೆಯಲ್ಲಿ ಕೂಡ ಕುಡಿಯಲು, ದನ-ಕರುಗಳಿಗೆ, ತೆಂಗು-ಕಂಗುಗಳಿಗೆ ನೀರಿನ ಕೊರತೆ ಇರಲಿಲ್ಲ.

ದಿಢೀರನೆ ಗೌಡ್ರ ಮನೆಗೆ ಬೋರ್ ವೆಲ್ ಬಂದಿದ್ದು ಅಮ್ಮನ ತಲೆ ಚಿಟ್ಟು ಹಿಡಿಸಿತು. "ಹಾಳಾದವು...ಯಾರ ಹೊಟ್ಟೆಗೋ ಕನ್ನ ಹಾಕ್ತಾರೆ'' ಅಂತ ಬೈತಾನೆ ಇದ್ಳು. ಬೋರ್ ವೆಲ್ ಬಂದ ದಿನ ಅಮ್ಮ ನಿದ್ದೆ ಮಾಡಿರಲಿಲ್ಲ. ಗೌಡ್ರ ಬಳಿ ಹೋಗಿ "ನೀವು ಬೋರ್ ವೆಲ್ ಹಾಕಿದ್ರೆ ನಮ್ಮ ಬಾವಿ ಬತ್ತುತ್ತೆ'' ಎಂದು ಹೇಳಕ್ಕಾಗುತ್ತೆ? ಅದೂ ಇಲ್ಲ. ಅಮ್ಮಂಗೆ ಹೇಳಿದೆ "ನಾವು ಇನ್ನೊಂದು ಬಾವಿ ತೋಡೋಣ. ಆಗ ಎರಡು ಬಾವಿಗಳಲ್ಲಿ ನೀರಿರುತ್ತೆ ಅಲ್ವಾ?'' . ಅಮ್ಮಂಗೆ ಸಿಟ್ಟು ಬಂದು "ಸುಮ್ನಿರು..ಮಧ್ಯೆ ಬಾಯಿ ಹಾಕ್ಬೇಡ. ಎಲ್ಲಿ ತೋಡಿದ್ರೂ ಒಂದೇ...ಆದ್ರೆ ರಾಮಣ್ಣ ಜೋಯಿಸರು ಈಗಿರುವ ಬಾವಿ ನೀರನ್ನೇ ಕುಡಿಬೇಕು...'' ಎಂದು ಅದು-ಇದು, ದಿಕ್ಕು-ದಿಸೆ ಅಂತ ಮಾತಾಡತೊಡಗಿದಳು. ಅಮ್ಮನ ಸಾತ್ವಿಕ ಸಿಟ್ಟು ನನಗಾಗ ಅರ್ಥವಾಗಲಿಲ್ಲ.


ಮರುದಿನ ಬೋರ್ ವೆಲ್ ತೋಡುವ ಯಂತ್ರಗಳು ಗೌಡ್ರ ತೋಟಕ್ಕೆ ಬಂದವು. ನಮ್ಮೂರಿಗೆ ಅದೇ ಮೊದಲ ಬೋರ್ ವೆಲ್. ಹಾಗಾಗಿ, ಸುತ್ತಮುತ್ತಲಿನ ಎಲ್ಲರೂ ಬೋರ್ ವೆಲ್ ನೋಡಲು ಬಂದರು. ಮಕ್ಕಳಂತೂ ರಚ್ಚೆ ಹಿಡಿದು ಶಾಲೆಗೆ ಚಕ್ಕರ್ ಹಾಕಿ ಬೋರ್ ವೆಲ್ ತೋಡುವುದನ್ನು ನೋಡಲು ಬಂದಿದ್ದರು. ನಾನೂ ಅಮ್ಮನ ಸಿಟ್ಟನ್ನೂ ಕೇರ್ ಮಾಡದೆ ಗೌಡ್ರ ಮನೆಯತ್ತ ಓಡಿದೆ. ಏನು ಸೌಂಡ್...ಗುರ್...ಬುರ್...ಬೆಳಿಗ್ಗೆಯಿಂದ ಸಂಜೆ ತನಕ ಕೊರೆತಿದ್ದೇ ಕೊರೆದಿದ್ದು...ಒಂದೇ ಸಮನೆ ಅದೆಷ್ಟೋ ಎತ್ತರಕ್ಕೆ ನೀರಿನ ಬುಗ್ಗೆಗಳು ಚಿಮ್ಮತೊಡಗಿದವು. ಗೌಡ್ರ ಮುಖ ಖುಷಿಯಿಂದ ತಾವರೆಯಂತೆ ಅರಳುತ್ತಿತ್ತು.


ನೀರಿನ ಚಿಮ್ಮುವಿನಾಟ ನೋಡಿ ಜಿಂಕೆಯಂತೆ ನೆಗೆಯುತ್ತಾ ಮನೆಗೆ ಬಂದೆ. ಅಮ್ಮನ ಕಣ್ಣುಗಳು ಕೆಂಪಾಗಿ, ಮುಖ ಬಾಡಿಹೋಗಿತ್ತು. ರಾತ್ರಿ ಅನ್ನಕ್ಕೆ ಅಕ್ಕಿ ಬೀಸುತ್ತಾ ಕುಳಿತಿದ್ದಳು. "ಅಮ್ಮಾ ಮಾತಾಡು..'' ಎಂದೆ. "ಬೇಸಿಗೆ, ನಮ್ಮನೆ ಬಾವಿ ಬತ್ತಿದ್ರೆ ಯಾರ ಮನೆಗೆ ಹೋಗಿ ನೀರಿಗಾಗಿ ಬೇಡಲಿ'' ಎನ್ನುತ್ತಾ ದೇವರ ಮನೆಗೆ ಹೋಗಿ ಒಂದು ರೂಪಾಯಿ ನಾಣ್ಯವನ್ನು ಮನೆದೇವರು ಕಲ್ಲುರ್ಟಿಗೆ ಹರಕೆ ಇಟ್ಟು "ಬತ್ತದಿರಲಿ ಬಾವಿ'' ಎಂದಳು.
ಅಮ್ಮ ನಿತ್ಯ ದೀಪ ಹಚ್ಚುವಾಗ ನೀರಿಗಾಗಿ ಬೇಡೋದನ್ನು ಮರೆಯುತ್ತಿರಲಿಲ್ಲ. ಊರ ಸುತ್ತಮುತ್ತ ಇನ್ನೂ ಒಂದೆರಡು ಬೋರ್ ವೆಲ್ ಗಳು ಬಂದವು. ನಮ್ಮನೆ ಬಾವಿ ಬತ್ತತೊಡಗಿತು. ಬೇಸಿಗೆ ಬಂದ ತಕ್ಷಣ ಅಮ್ಮ "ಯಾರ ಮುಂದೆಯೂ ಬಿಂದಿಗೆ ಹಿಡಿದು ಬೇಡಲಾರೆ'' ಎಂದು "ಬಾವಿನ ಇನ್ನಷ್ಟು ಅಗೆಯುವ' ಕೆಲಸ ಮಾಡುತ್ತಾಳೆ...ಈಗಲೂ ಮಾಡುತ್ತಳೇ ಇದ್ದಾಳೆ...ಬರೀ "ಕುಡಿಯುವ ನೀರಿಗಾಗಿ''.


ಬೆಂಗಳೂರಿಂದ ಫೋನಾಯಿಸಿ ಕೇಳಿದ್ರೆ ಹೇಳುತ್ತಾಳೆ "ನಿಮ್ಮೂರಲ್ಲಿ ನೀರು ಉಂಟಾ? ನೋಡು ಮೊನ್ನೆ ಮೊನ್ನೆ ಬಾವಿ ಹೂಳೆತ್ತುವ ಕೆಲಸ ಮಾಡಿಸಿದೆ. ಅರ್ಧ ಅಡಿ ಹೆಚ್ಚು ಗುಂಡಿ ಮಾಡಲಾಗಿದೆ. ಪರ್ವಾಗಿಲ್ಲ ಕುಡಿಯಲು ನೀರು ಸಿಗುತ್ತದೆ. ಆದರೆ, ದನಕರುಗಳಿಗೆ ನೀರು ಸಿಗಲ್ಲ ಎಂದು ಸಾಕುವುದನ್ನೇ ಬಿಟ್ಟಿದ್ದೇನೆ. ತೆಂಗು, ಬಾಳೆ, ಅಡಿಕೆ ಗಿಡಗಳು ಮಾತ್ರ ಬೇಸಿಗೆಯಲ್ಲಿ ಬಾಡಿಹೋಗುತ್ತಿರುವುದನ್ನು ನೋಡಿ ಹೊಟ್ಟೆ ಉರಿಯುತ್ತಿದೆ. ಮನೆದೇವ್ರ ಕೃಪೆ..ಕುಡಿಯೋಕ್ಕಾದ್ರೂ ನೀರು ಸಿಗುತ್ತೆ'' ಎನ್ನುತ್ತಾಳೆ.

Thursday, March 21, 2013

ಅಮೆರಿಕನ್ ಒಬ್ಬನ ಕನಸಿನ ಕಥೆ

ಬೆಳಿಗ್ಗೆ ಹನ್ನೊಂದರ ಸಮಯ. ಪ್ರತಿನಿತ್ಯ ಬರುವ ಬಸ್ ಅಂದು ನಾನು ಬರುವ ಹೊತ್ತಿಗೆ ಹೋಗಿಬಿಟ್ಟಿತು. ಬಸ್ ನಿಲ್ದಾಣದಲ್ಲಿ ಕಾಯುತ್ತಾ ಕುಳಿತಿದ್ದೆ. ಐವತ್ತು ದಾಟಿದ ಮನುಷ್ಯ ಪಕ್ಕದಲ್ಲೇ ಬಂದು ಕುಳಿತ. ತಲೆಕೂದಲು ಬೆಳ್ಳಿಯಂತೆ ಫಳಫಳ ಎಂದು ಹೊಳೆಯುತ್ತಿತ್ತು. ನೋಡಿದ ತಕ್ಷಣ  ಈ ಅಸಾಮಿ ನಮ್ಮ ದೇಶದನಲ್ಲ ಎಂದು ಗೊತ್ತಾಗುತ್ತಿತ್ತು.

ನಾನು ಸುಮ್ಮನಿದ್ದರೂ ಆತನೇ ಮಾತಿಗೆಳೆದ. "ನಾನು ಶಿವಾಜಿನಗರಕ್ಕೆ ಹೋಗಬೇಕು. ಯಾವ ಬಸ್‌ನಲ್ಲಿ ಹೋಗಬಹುದು?'' ಎಂದು ಇಂಗ್ಲಿಷ್‌ನಲ್ಲಿ ಕೇಳಿದ. "ನೀವು ಎರಡು ಬಸ್ ಬದಲಾಯಿಸಬೇಕು. ಇಲ್ಲಿಂದ ನೇರವಾಗಿ ಅಲ್ಲಿಗೆ ಬಸ್ ಇಲ್ಲ'' ಎಂದು
ಅವನಿಗೆ ಬಸ್‌ಗಳ ನಂಬರ್ ಕೂಡ ಕೊಟ್ಟೆ. ಏಳೆಂಟು ಬಸ್ ಗಳ ನಂಬರನ್ನು ಪುಟ್ಟ ಡೈರಿಯಲ್ಲಿ ನೀಟಾಗಿ ಬರೆದಿಟ್ಟುಕೊಂಡ. ಡೈರಿಯನ್ನು ಜೇಬಿಗಿಳಿಸಿಕೊಂಡು "ಥ್ಯಾಂಕ್ಸ್'' ಅಂದು "ಭಾರತೀಯರು ಎಲ್ಲೇ ಹೋದರೂ ಸುಳ್ಳು ಹೇಳಲ್ಲ, ಹೆಮ್ಮೆಯಾಗುತ್ತದೆ'' ಎಂದು ಖುಷಿಯಿಂದ ಹೇಳಿದ.  ಜೊತೆಗೆ ಒಂದು ದಿನ ಮುಂಚೆ ಆತ ದೇವನಹಳ್ಳಿ ವಿಮಾನ ನಿಲ್ದಾಣದಿಂದ ಬರುವಾಗ ದಾರಿ ಗೊತ್ತಾಗದೆ ಪರದಾಡಿದ್ದು, ಆಟೋದವನು ಮಾಡಿದ ಸಹಾಯವನ್ನೂ ನೆನಪಿಸಿಕೊಂಡ.

‘ನೀನು ಭಾರತಕ್ಕೆ ಏಕೆ ಭೇಟಿ ಮಾಡಿರುವೆ?' ಎಂದು ಕೇಳಿದೆ. ನನ್ನ ಪ್ರಶ್ನೆ ಕೊನೆಯಾಗುವ ಮೊದಲೇ ಆತ ಉತ್ತರ ಹೇಳಲು ಶುರುಮಾಡಿದ್ದ. "ನನ್ನ ಹೆಸರು ಸ್ಯಾಮ್.  ಯುಎಸ್‌ಎನಿಂದ ಬಂದಿದ್ದೇನೆ. ಭಾರತಕ್ಕೆ ಇದೇ ಮೊದಲು ಬಂದಿರುವೆ. ಭಾರತ ಸಾಂಸ್ಕೃತಿಕವಾಗಿ ಬಹಳಷ್ಟು ವೈವಿಧ್ಯ ಇರುವ ದೇಶ ಎಂದು ಕೇಳಿದ್ದೆ. ಇತ್ತೀಚೆಗೆ ಒಂದು ಬಾರಿ ಭಾರತದ ಕನಸು ಬಿತ್ತು. ಅದರಲ್ಲೂ ಬೆಂಗಳೂರು ನಗರಕ್ಕೆ ನಾನು ಬಂದಿಳಿದ ಹಾಗೆ ಕನಸು ಬಿತ್ತು. ಹಾಗಾಗಿ, ನನಗೆ ಇಲ್ಲಿಗೆ ಬಂದು ನೋಡಲೇಬೇಕು ಎಂದು ಡಿಸೈಡ್ ಮಾಡಿದೆ'' ಎಂದು ಬಹಳ ಖುಷಿಯಿಂದ ನಗುನಗುತ್ತಲೇ ಹೇಳಿಕೊಂಡ. ನನಗೆ ಅಚ್ಚರಿಯಾಯಿತು. ಕೇವಲ ''ಒಂದು ಕನಸಿನಿಂದಾಗಿ'' ಆತ ಅದೆಷ್ಟೋ ಡಾಲರ್ ಖರ್ಚು ಮಾಡಿ ಭಾರತವನ್ನು ನೋಡಲು ಬಂದ!.  ನಾಳಿನ ಬಗ್ಗೆ ಯೋಚನೆ ಮಾಡದೆ ಈ ಕ್ಷಣದ ಜೀವನವನ್ನು ಖುಷಿಯಿಂದ ಕಳೆಯುವುದೆಂದರೆ ಇದೇನಾ ಅನಿಸಿತ್ತು. ಸಣ್ಣದೊಂದು ನಗುವಿನೊಂದಿಗೆ ಆತನಿಗೆ ಮನಸ್ಸಿನಲ್ಲೇ ಸಲಾಂ ಎಂದೆ

ಕದ್ದು ಕೇಳಿದ ದೆವ್ವದ ಕತೆಗಳು


ನಾನು ಮಗುವಾಗಿದ್ದಾಗ ನಮ್ಮದು ಅವಿಭಕ್ತ ಕುಟುಂಬ. ಒಂದೇ ಮನೆಯಲ್ಲಿ ಹತ್ತು-ಹದಿನೈದು ಮಂದಿ. ರಾತ್ರಿ ಹೊತ್ತು ದೊಡ್ಡೋರೆಲ್ಲ ಜೊತೆಗೆ ಕುಳಿತು ಊಟ ಮಾಡೋರು. ಮಕ್ಕಳಿಗೆಲ್ಲಾ ಬೇಗ ಊಟ ಹಾಕಿ ಮಲಗಿಸಿಬಿಡೋರು. ಊಟಕ್ಕೆ ಕುಳಿತಾಗ ಮತ್ತು ಊಟದ ಬಳಿಕ ಒಂದಷ್ಟು ಹೊತ್ತು "ಮಕ್ಕಳಿಗೆ ತಿಳಿಯಬಾರದ ವಿಷಯಗಳನ್ನು'' ದೊಡ್ಡೋರೆಲ್ಲ ಮಾತಾಡೋರು. ಆ ಲಿಸ್ಟ್ ನಲ್ಲಿ ದೆವ್ವದ ಕತೆಯೂ ಇತ್ತು. ಮಕ್ಕಳೆಲ್ಲಾ ಮಲಗಿದ ಮೇಲೆ ಅಜ್ಜಿ ಎಲ್ಲರಿಗೂ ಬಡಿಸಿ ದೆವ್ವದ ಕತೆ ಶುರುಮಾಡೋಳು. ನಾವೆಲ್ಲ ಮುಸುಕು ಹೊದ್ದು ಮಲಗುತ್ತಿದ್ದೇವು. ಆದರೆ, ನನಗೆ ನಿದ್ದೆಯೇ ಬರುತ್ತಿರಲಿಲ್ಲ. ಹೊದಿಕೆಯೊಳಗೆ ಕಣ್ಣುಬಿಟ್ಟುಕೊಂಡು ಹಾಗೇ ದೆವ್ವದ ಕತೆಗಳನ್ನು ಕೇಳುತ್ತಿದ್ದೆ. ಆದರೆ, ಹೆಚ್ಚಿನ ಸಮಯದಲ್ಲಿ ಈ ದೆವ್ವದ ಕತೆಗಳು ನನ್ನ ನಿದ್ದೆಯನ್ನು ಕಸಿದುಕೊಂಡಿದ್ದಂತೂ ನಿಜ. ಇದರಲ್ಲಿ ಆಯ್ದ ಮೂರು ಕತೆಗಳು ಇಲ್ಲಿವೆ.

********
ನಮ್ಮಜ್ಜ ತಾಳೆಮರದಿಂದ ಶೇಂದಿ ತೆಗೆಯುತ್ತಿದ್ದ. ಮುಂಜಾನೆಯಿಂದ ಸಂಜೆ ಐದರ ತನಕ ಅಜ್ಜನಿಗೆ ಈ ಕೆಲ್ಸ. ಪ್ರತಿದಿನ ರಜೆ ಹಾಕದೆ ನಿಯತ್ತಾಗಿ ದುಡಿಯೋನು. ಸಂಜೆ ಹೊತ್ತು. ಐದು ಗಂಟೆಗೆ ಸೊಂಟಕ್ಕೆ ಕತ್ತಿ ಕಟ್ಟಿಕೊಂಡು ಅಜ್ಜ ಹೊರಟಿದ್ದ. ಅಜ್ಜಿನೂ ಜೊತೆಗೆ ಹೊರಟಿದ್ಳಂತೆ. ಇನ್ನೇನೋ ಸೂರ್ಯ ಮುಳುಗುವ ಸಮಯ. ಕತ್ತಲಾಗುತ್ತಿತ್ತು...ಅಜ್ಜಿಯನ್ನ ತಾಳೆಮರದ ಕೆಳಗೆ ನಿಲ್ಸಿ ಅಜ್ಜ ಶೇಂದಿ ತೆಗೆಯೋಕೆ ಹತ್ತಿದ್ದ. ಅಜ್ಜಿ ಅಲ್ಲೇ ಪಕ್ಕದಲ್ಲಿದ್ದ ಗೇರು ಮರದ ಕೆಳಗಡೆ ಕುಳಿತಿದ್ದಳಂತೆ. ಎದುರುಗಡೆ ಅಸ್ಪಷ್ಟ ಆಕೃತಿ ಬಂದು ಮಾತಾಡಿಸಿದಂತೆ ಕೇಳಿಸಿತಂತೆ. ಜೊತೆಗೆ, ಜೋರಾಗಿ ಚಪ್ಪಾಳೆ ತಟ್ಟಿತ್ತಿತ್ತು. ಅಜ್ಜಿಗೆ ಗಾಬರಿಯಾಗಿ ಅಜ್ಜನ ಜೋರಾಗಿ ಕೂಗಿದ್ಳಂತೆ. ಅಜ್ಜ ಮರದ ತುದಿಯಿಂದಲೇ ಹೇಳಿದ್ರಂತೆ, " ನಿನಗೆ ಶೇಂದಿ ಕೊಡ್ತೀನಿ. ಸುಮ್ಮನಿದ್ದುಬಿಡು'' ಎಂದು. ಚಪ್ಪಾಳೆ ಸದ್ದು ನಿಂತಿತು. ಅಜ್ಜ ಕೆಳಗಿಳಿದು ಒಂದು ತೆಂಗಿನ ಚಿಪ್ಪಿನಲ್ಲಿ ಶೇಂದಿ ಇಟ್ಟುಬಿಟ್ಟು ಅಜ್ಜಿನ ಕರೆದುಕೊಂಡು ವಾಪಾಸ್ ಆದ್ತಂತೆ.

********
ಅಜ್ಜ ಒಂದು ದಿನ ನಮ್ಮನೆಗೆ ಬರುತ್ತಿದ್ದ. ಅಜ್ಜನಿಗೆ ಹಗಲು ಹೊತ್ತು ಶೇಂದಿ ತೆಗೆಯೋ ಕೆಲ್ಸ. ರಾತ್ರಿ ಹೊತ್ತು ನಮ್ಮನೆಯ ದನ-ಆಡುಗಳನ್ನು ನೋಡಿಕೊಳ್ಳಲು ನಮ್ಮನೆಗೆ ಬರೋನು. ನಮ್ಮಮ್ಮ 11 ಆಡುಗಳು ಮತ್ತು 3 ದನಗಳನ್ನು ಸಾಕಿದ್ದಳು. ಬೆಳಿಗೆದ್ದು ಅವುಗಳ ಕೆಲ್ಸ ಜಾಸ್ತಿ ಇರೋದ್ರಿಂದ ಅಜ್ಜ ರಾತ್ರಿ ನಮ್ಮನೆಗೆ ಬಂದುಬಿಡೋನು. ಒಂದು ದಿನ ಅಜ್ಜ ಬರುವಾಗ ತುಂಬಾ ರಾತ್ರಿಯಾಗಿತ್ತು.  ಸಂಜೆ ಹೊತ್ತಿನ ಹುಳಿ ಶೇಂದೀನ ಹೊಟ್ಟೆಗೇರಿಸಿಕೊಂಡು ಸ್ವಲ್ಪ ಟೈಟಾಗೇ ಅಜ್ಜ ರಾತ್ರಿ ಹೊತ್ತು ನಮ್ಮನೆಗೆ ಹೊರಟಿದ್ದ. ದಟ್ಟಕಾಡಿನ ನಡುವೆ ಕಾಲುದಾರಿ. ಬರೀ ಪಾದಗಳನ್ನು ಊರಲಷ್ಟೇ ಜಾಗ. ಸುತ್ತಮುತ್ತ ದೊಡ್ಡ ದೊಡ್ಡ ಮರಗಳು, ಎತ್ತರಕ್ಕೆ ಬೆಳೆದ ಹುಲ್ಲು-ಪೊದೆಗಳು. ಅಜ್ಜ ಬರುತ್ತಿದ್ಧಂತೆ ನಡುದಾರಿಯಲ್ಲಿ ಬೆಳ್ಳಿ ಕೂದಲ, ಬಿಳಿದಾದ ಗಡ್ಡವುಳ್ಳ, ಉದ್ದದ ಮನುಷ್ಯ ಒಬ್ರು ಸಿಕ್ಕಿದ್ರಂತೆ. ಬಿಳಿ ಅಂಗಿಯನ್ನು ಧರಿಸಿದ ಆತ ಅಜ್ಜನ ಜೊತೆ ಎಲ್ಲಿಗೆ ಹೋಗುತ್ತಿದ್ದೀರಿ ಎಂದೆಲ್ಲಾ ವಿಚಾರಿಸಿದಾಗ ಅಜ್ಜ ಕಾಡೊಳಗಿನ ದಾರಿಯಲ್ಲಿ ಒಬ್ಬನೇ ಹೋಗುತ್ತಿದ್ದೇನೆ...ಜೊತೆ ಸಿಕ್ಕಂತಾಯಿತು ಎಂದುಕೊಂಡರಂತೆ. ಅರ್ಧದಾರಿ ತನಕ ಬಂದ ಬಿಳಿ ಅಂಗಿಯ ಮನುಷ್ಯ ಹಿಂದೆ ತಿರುಗಿ ನೋಡಿದರೆ ಇರಲಿಲ್ಲವಂತೆ!.

********
ನಮ್ಮನೆ ಊರುವುದು ಪುತ್ತೂರಿನ ಪುಟ್ಟ ಹಳ್ಳಿ. ರಸ್ತೆ ಇಲ್ಲದೆ ದಟ್ಟ ಕಾಡುಗಳ ನಡುವೆ ನಿಂತ ಆ ಹಳ್ಳಿಗೆ ಕರೆಂಟು ಬಂದಿದ್ದು ಏಳೆಂಟು ತಿಂಗಳ ಹಿಂದೆ. ರಾತ್ರಿ ಹೊತ್ತು ಹೊರಗಡೆ ಬರಲೂ ಭಯ. ಅಂಥಾದ್ರಲ್ಲಿ ದಿನಾ ಏಳು ಗಂಟೆಯ ಹೊತ್ತಿಗೆ ಒಂದು ಹಕ್ಕಿ ಕೂಗಲು ಶುರುಮಾಡುತ್ತೆ. 9.30 ತನಕ ಅದು ಕೂಗುತ್ತಲೇ ಇರುತ್ತೆ. ನಮ್ಮಜ್ಜಿ ಮತ್ತು ಅಜ್ಜನ ಲೆಕ್ಕದಲ್ಲಿ ಅದು ಯಾರದೋ ಪ್ರೇತ.  ನಾನಾಗ ಇನ್ನೂ ಸ್ಕೂಲ್ ಹತ್ತದ ಮಗು. ನಮ್ಮಜ್ಜನ ಬಳಿ ಗನ್ ಇತ್ತು. ಸಮಯ ಸಿಕ್ಕಾಗೆಲ್ಲಾ ಅಜ್ಜ ಗನ್ ಬೆನ್ನಿಗೇರಿಸಿಕೊಂಡು ಹೋಗುತ್ತಿದ್ದ. ಈ ಹಕ್ಕಿ ಕೂಗಾಟಕ್ಕೆ ಅಜ್ಜಿ ದಿನಾ ರಗಳೆ ತೆಗೆಯೋಳು. ಒಂದು ದಿನ ಅಜ್ಜ ಗನ್ ಬೆನ್ನಿಗೇರಿಸಿಕೊಂಡು ಹಕ್ಕಿನ ಶಿಕಾರಿ ಮಾಡಲು ಹೊರಟೇ ಬಿಟ್ಟ. ಅಜ್ಜ ಐದಾರು ಸಲ ಹೊಡೆದರೂ ಹಕ್ಕಿ ಸಿಗಲೇ ಇಲ್ಲ. ಅದು ಕೂಗ್ತಾನೆ ಇತ್ತು. "ಕೈಗೆ ಸಿಗದ ದೆವ್ವ'' ಎಂದುಕೊಂಡು ನಮ್ಮಜ್ಜ ಸುಮ್ಮನಾಗಿದ್ದ.

Sunday, March 3, 2013

ನೀಳಜಡೆಗೆ ಎರಡುಮೊಳ ಮಲ್ಲಿಗೆ


ಸಾಕು ಕಣೇ...ದೃಷ್ಟಿ ತಾಗುತ್ತೆ. ನಾಳೆ ಮುಡ್ಕೊಂಡು ಹೋಗುವಿಯಂತೆ ಅಮ್ಮ ಹೇಳಿದಾಗ ನನ್ನ ಗುಂಡು ಗುಂಡು ದಪ್ಪಾಗಿದ್ದ ಮುಖ ಇನ್ನಷ್ಟು ದಪ್ಪಗಾಗಿ ಟೊಮೆಟೋ ಬಣ್ಣಕ್ಕೆ ತಿರುಗುತ್ತಿತ್ತು. ಹೂವ ಅಂದ್ರೆ ಪ್ರಾಣ, ಹೂವ ಅಂದ್ರೆ ಖುಷಿ, ಹೂವ ಅಂದ್ರೆ ಚೆಂದ. ಹೂವ ಅಂದ್ರೆ ಸುವಾಸನೆ. ಹೂವ ಅಂದ್ರೆ ಪ್ರೀತಿ, ಹೂವ ಅಂದ್ರೆ ಹುಡುಗಿ, ಹೂವ ಅಂದ್ರೆ ಹಬ್ಬ....ಹೀಗೆ ಹೂವ ಅಂದ್ರೆ ನನ್ನ ದೃಷ್ಟೀಲಿ ಎಲ್ಲವೂ. ಸೊಂಟದಿಂದ ಕೆಳಗೆ ಬರೋ ಜಡೆಗೆ ಮುಡಿದರೆ ಅವತ್ತು ಮನಸ್ಸಿನೊಳಗೆ ಒಂದು ರೀತಿಯ ಖುಷಿ. ಅಮ್ಮ ಮೊಳಮಲ್ಲಿಗೆ ಸಾಕು ಕಣೇ...ಜಾಸ್ತಿ ಇಟ್ರೆ ಬೇರೆ ಹುಡುಗೀರಿಗೆ ಆಸೆಯಾಗಲ್ವೇನೋ? ಏನಾದ್ರೂ ಫಂಕ್ಷನ್ ಇದ್ರೆ ಮುಡ್ಕೊಂಡು ಹೋಗು ಅಂದ್ರೆ ಹುಸಿಮುನಿಸಿನಿಂದ ಕಣ್ಣು ಕೆಂಪಾಗುತ್ತಿತ್ತು. ಅದಕ್ಕೆ ಅಮ್ಮ ಅಷ್ಟೂದ್ದ ನೀಳ ಜಡೆಗೆ ಮಲ್ಲಿಗೆ ಮುಡಿಸಿ, ಮುಡಿಯ ಬುಡದಲ್ಲಿ ಕೆಂಪು ಗುಲಾಬಿ ಸಿಕ್ಕಿಸುವಳು. ನಮ್ಮೂರ ಮಂಗಳೂರ ಮಲ್ಲಿಗೆ ಸ್ವಲ್ಪ ಮುಡಿದರೆ ಸಾಕು ಮೈಲುಗಟ್ಟಲೆ ದೂರದವರೆಗೆ ಘಮ ಎನ್ನುತ್ತಿತ್ತು.

ಸೋಮವಾರ ಪುತ್ತೂರ ಸಂತೆ. ಪ್ರತಿ ಸಂತೆಗೆ ಅಮ್ಮ ಹಾಜರು. ವಾರದ ತರಕಾರಿ ಸಾಮಾನುಗಳೆಲ್ಲಾ ಒಮ್ಮೆಲೇ ತರೋಳು. ಜೊತೆಗೆ ಮಲ್ಲಿಗೆ.ಮಂಗಳವಾರ ಮಲ್ಲಿಗೆ ಮುಡಿಯೋ ಖುಷಿ. ಕ್ಲಾಸಿನಲ್ಲಿ ಅದೆಷ್ಟೋ ಹುಡುಗೀರು ನನ್ನ ಜಡೆ, ಮಲ್ಲಿಗೆ ನೋಡಿ ಆಸೆಪಡೋರೇ ಏನೋ. ನನ್ನೊಳಗೆ ಮಲ್ಲಿಗೆ ಮುಡಿದ ಖುಷಿ. ಕ್ಲಾಸಿನಲ್ಲಿ ಬೆಂಚಿಯಲ್ಲಿ ಕುಳಿತರೆ ಒಂದೆ ಒರಗುತ್ತಿರಲಿಲ್ಲ. ಎಲ್ಲಾದ್ರೂ ಮಲ್ಲಿಗೆ ಹಾಳಾದ್ರೆ!!. ಇಡೀ ದಿನ ಬೆನ್ನು ನೆಟ್ಟಗಾಗಿಸಿಕೊಂಡು ಕುಳಿತು ಸಂಜೆ ಹೊತ್ತಿಗೆ ನೋವು.

ಆಗ ಏಳನೇ ತರಗತಿಯಲ್ಲಿದ್ದೆ. ಶೇಷಪ್ಪ ಮೇಷ್ಟ್ರು ನಮಗೆ ಹೆಡ್ ಮೇಷ್ಟ್ರು. ಜಡೆಗಿಂತ ಉದ್ದ ಮಲ್ಲಿಗೆ ಮುಡಿದ ನನಗೆ ಕೇಳಿದ್ದರು."ಮಲ್ಲಿಗೆ ಅಂದ್ರೆ ಇಷ್ಟನಾ? ನಿಂಗೆ ಮಲ್ಲಿಗೆ ಅಂಥ ಹೆಸರಿಡೋಣ' ಅಂತ. ಕೆನ್ನೆ ಕೆಂಪಗಾಗಿಸಿಕೊಂಡು ಬಗ್ಗಿ ಕುಳಿತಿದ್ದೆ. ಹುಡುಗರೆಲ್ಲಾ "ಮಲ್ಲಿಗೆ..'' ಎಂದಿದ್ದು ಕೇಳಿಸಿತ್ತು.

ಏಳನೇ ತರಗತಿಯ ವಿದಾಯಕೂಟ. ಎಲ್ಲರಿಗೂ ಫೋಟೋ ತೆಗೆಸುವ ಖುಷಿ. ಅಂದು ಅಮ್ಮ ನನಗೆ ಎರಡು ಜಡೆ ಹಾಕಿದ್ದಳು. ಹಸಿರು ಚೂಡಿದಾರ. ಎರಡು ಜಡೆ, ಅದು ಎದೆಯಿಂದ ಕೆಳ ಬರುತ್ತಿತ್ತು. ಆ ಎರಡೂ ಜಡೆಗೆ ಎರಡೆರಡು ಮೊಳಮಲ್ಲಿಗೆ. ಮಲ್ಲಿಗೆ ಮೊಳ ಜಾರದಂತೆ ಐದಾರು ಕ್ಲಿಪ್ಗಗಳನ್ನು ಹಾಕಿದ್ದಳು. ಸಂಜೆ ಹೊತ್ತಿನಲ್ಲಿ ನಡೆದ ಫೋಟೋ ತೆಗೆಯುವ ಕಾರ್ಯಕ್ರಮದಲ್ಲಿ ನನ್ನೆರಡು ಜಡೆಗಳಿಗೇ ಕ್ಯಾಮರಾ ಕಣ್ಣು!. ಎರಡು ಜಡೆಗಳನ್ನು ಎದುರುಗಡೆ ಹಾಕಿಕೊಂಡು ಅದೆಷ್ಟು ಸಲ ಕ್ಲಿಕ್ ಕ್ಲಿಕ್. ಹೈಸ್ಕೂಲ್ ಮುಗಿಯುವ ಹೊತ್ತಿಗೆ ಪುತ್ತೂರು ಮಲ್ಲಿಗೆ ಮಾರುಕಟ್ಟೆಗೆ ಅಮ್ಮ ಚಿರಪರಿಚಿತಳಾಗಿದ್ದಳು. ಪ್ರತಿ ಸೋಮವಾರ ಅಮ್ಮ ಅಲ್ಲಿ ಹೋದ ತಕ್ಷಣ 'ಮಗಳಿಗೆ ಮಲ್ಲಿಗೆ ಬೇಕೇ?' ಎಂದು ಕೇಳಿ ಹಸಿಬಾಳೆಯಲ್ಲಿ ಮಲ್ಲಿಗೆ ಸುತ್ತಿ ಕೊಡೋರು.

ಡಿಗ್ರಿ ಮುಗ್ಸಿ ಬೆಂಗಳೂರಿಗೆ ಬಂದಾಯಿತು. ಇಲ್ಲಿ ಮಂಗಳೂರು ಮಲ್ಲಿಗೆಯ ಘಮ ಇಲ್ಲ. ನನ್ನ ಜಡೆಯೂ ಕಿರಿದಾಗಿದೆ. ಮೋಟುದ್ದ ಜಡೆಗೆ ಶುಕ್ರವಾರದಂದು ಅತ್ತೆಮ್ಮ ಪೂಜೆ ಮಾಡಿ ಪ್ರಸಾದವೆಂದು ಬೆರಳಷ್ಟು ಉದ್ದದ ಮಲ್ಲಿಗೆ ಮಾಲೆ ಕೊಡುತ್ತಾಳೆ. ಪುಟ್ಟ ಪುಟ್ಟ ಕೂದಲುಗಳನ್ನು ಬಿಗಿಹಿಡಿದು ಕ್ಲಿಪ್ ಹಾಕಿ, ಅರ್ಧ ಗಂಟೆ ತಲೆಯಲ್ಲಿ ಮಲ್ಲಿಗೆಯ ಘಮ. ಆಫೀಸ್ ಗೆ ಹೊರಟಾಗ ಅದನ್ನು ಕಿತ್ತು ಹಾಸಿಗೆ ಮೇಲೆ ಹಾಕಿಬಿಟ್ಟು ಹೊರಡ್ತೀನಿ. ಸಂಜೆ ಮನೆ ಸೇರುವ ಹೊತ್ತಿಗೆ ಅದು ಬಾಡಿಹೋಗಿ ನರಳುತ್ತಿರುತ್ತೆ.

ಮಲ್ಲಿಗೆಯ ಮೇಲೆ ಇನ್ನೂ ಪ್ರೀತಿ ಇದೆ. ಮನೆಮುಂದೆ ಮಲ್ಲಿಗೆ ಗಿಡ ಹಸುರಾಗಿದೆ. ಬೆಳಗೆದ್ದು ನೀರುಣಿಸ್ತೀನಿ. ಆಗಾಗ ಹಸಿರೆಲೆಗಳ ನಡುವೆ ಮೊಸರು ಚೆಲ್ಲಿದಂತೆ ಗುಂಡುಮಲ್ಲಿಗೆ ಅರಳುತ್ತೆ. ಮನಸಿನಲ್ಲಿ ಸಣ್ಣದೊಂದು ಖುಷಿ, ಜಡೆಯಿಲ್ಲದಿದ್ದರೂ, ಮನೆಯಂಗಳದಲ್ಲಿ ಮಲ್ಲಿಗೆಯ ಘಮ ಅರಳಿದೆಯೆಂದು.