ನಾನು ಮಗುವಾಗಿದ್ದಾಗ ನಮ್ಮದು ಅವಿಭಕ್ತ ಕುಟುಂಬ. ಒಂದೇ ಮನೆಯಲ್ಲಿ ಹತ್ತು-ಹದಿನೈದು ಮಂದಿ. ರಾತ್ರಿ ಹೊತ್ತು ದೊಡ್ಡೋರೆಲ್ಲ ಜೊತೆಗೆ ಕುಳಿತು ಊಟ ಮಾಡೋರು. ಮಕ್ಕಳಿಗೆಲ್ಲಾ ಬೇಗ ಊಟ ಹಾಕಿ ಮಲಗಿಸಿಬಿಡೋರು. ಊಟಕ್ಕೆ ಕುಳಿತಾಗ ಮತ್ತು ಊಟದ ಬಳಿಕ ಒಂದಷ್ಟು ಹೊತ್ತು "ಮಕ್ಕಳಿಗೆ ತಿಳಿಯಬಾರದ ವಿಷಯಗಳನ್ನು'' ದೊಡ್ಡೋರೆಲ್ಲ ಮಾತಾಡೋರು. ಆ ಲಿಸ್ಟ್ ನಲ್ಲಿ ದೆವ್ವದ ಕತೆಯೂ ಇತ್ತು. ಮಕ್ಕಳೆಲ್ಲಾ ಮಲಗಿದ ಮೇಲೆ ಅಜ್ಜಿ ಎಲ್ಲರಿಗೂ ಬಡಿಸಿ ದೆವ್ವದ ಕತೆ ಶುರುಮಾಡೋಳು. ನಾವೆಲ್ಲ ಮುಸುಕು ಹೊದ್ದು ಮಲಗುತ್ತಿದ್ದೇವು. ಆದರೆ, ನನಗೆ ನಿದ್ದೆಯೇ ಬರುತ್ತಿರಲಿಲ್ಲ. ಹೊದಿಕೆಯೊಳಗೆ ಕಣ್ಣುಬಿಟ್ಟುಕೊಂಡು ಹಾಗೇ ದೆವ್ವದ ಕತೆಗಳನ್ನು ಕೇಳುತ್ತಿದ್ದೆ. ಆದರೆ, ಹೆಚ್ಚಿನ ಸಮಯದಲ್ಲಿ ಈ ದೆವ್ವದ ಕತೆಗಳು ನನ್ನ ನಿದ್ದೆಯನ್ನು ಕಸಿದುಕೊಂಡಿದ್ದಂತೂ ನಿಜ. ಇದರಲ್ಲಿ ಆಯ್ದ ಮೂರು ಕತೆಗಳು ಇಲ್ಲಿವೆ.
********
ನಮ್ಮಜ್ಜ ತಾಳೆಮರದಿಂದ ಶೇಂದಿ ತೆಗೆಯುತ್ತಿದ್ದ. ಮುಂಜಾನೆಯಿಂದ ಸಂಜೆ ಐದರ ತನಕ ಅಜ್ಜನಿಗೆ ಈ ಕೆಲ್ಸ. ಪ್ರತಿದಿನ ರಜೆ ಹಾಕದೆ ನಿಯತ್ತಾಗಿ ದುಡಿಯೋನು. ಸಂಜೆ ಹೊತ್ತು. ಐದು ಗಂಟೆಗೆ ಸೊಂಟಕ್ಕೆ ಕತ್ತಿ ಕಟ್ಟಿಕೊಂಡು ಅಜ್ಜ ಹೊರಟಿದ್ದ. ಅಜ್ಜಿನೂ ಜೊತೆಗೆ ಹೊರಟಿದ್ಳಂತೆ. ಇನ್ನೇನೋ ಸೂರ್ಯ ಮುಳುಗುವ ಸಮಯ. ಕತ್ತಲಾಗುತ್ತಿತ್ತು...ಅಜ್ಜಿಯನ್ನ ತಾಳೆಮರದ ಕೆಳಗೆ ನಿಲ್ಸಿ ಅಜ್ಜ ಶೇಂದಿ ತೆಗೆಯೋಕೆ ಹತ್ತಿದ್ದ. ಅಜ್ಜಿ ಅಲ್ಲೇ ಪಕ್ಕದಲ್ಲಿದ್ದ ಗೇರು ಮರದ ಕೆಳಗಡೆ ಕುಳಿತಿದ್ದಳಂತೆ. ಎದುರುಗಡೆ ಅಸ್ಪಷ್ಟ ಆಕೃತಿ ಬಂದು ಮಾತಾಡಿಸಿದಂತೆ ಕೇಳಿಸಿತಂತೆ. ಜೊತೆಗೆ, ಜೋರಾಗಿ ಚಪ್ಪಾಳೆ ತಟ್ಟಿತ್ತಿತ್ತು. ಅಜ್ಜಿಗೆ ಗಾಬರಿಯಾಗಿ ಅಜ್ಜನ ಜೋರಾಗಿ ಕೂಗಿದ್ಳಂತೆ. ಅಜ್ಜ ಮರದ ತುದಿಯಿಂದಲೇ ಹೇಳಿದ್ರಂತೆ, " ನಿನಗೆ ಶೇಂದಿ ಕೊಡ್ತೀನಿ. ಸುಮ್ಮನಿದ್ದುಬಿಡು'' ಎಂದು. ಚಪ್ಪಾಳೆ ಸದ್ದು ನಿಂತಿತು. ಅಜ್ಜ ಕೆಳಗಿಳಿದು ಒಂದು ತೆಂಗಿನ ಚಿಪ್ಪಿನಲ್ಲಿ ಶೇಂದಿ ಇಟ್ಟುಬಿಟ್ಟು ಅಜ್ಜಿನ ಕರೆದುಕೊಂಡು ವಾಪಾಸ್ ಆದ್ತಂತೆ.
********
ಅಜ್ಜ ಒಂದು ದಿನ ನಮ್ಮನೆಗೆ ಬರುತ್ತಿದ್ದ. ಅಜ್ಜನಿಗೆ ಹಗಲು ಹೊತ್ತು ಶೇಂದಿ ತೆಗೆಯೋ ಕೆಲ್ಸ. ರಾತ್ರಿ ಹೊತ್ತು ನಮ್ಮನೆಯ ದನ-ಆಡುಗಳನ್ನು ನೋಡಿಕೊಳ್ಳಲು ನಮ್ಮನೆಗೆ ಬರೋನು. ನಮ್ಮಮ್ಮ 11 ಆಡುಗಳು ಮತ್ತು 3 ದನಗಳನ್ನು ಸಾಕಿದ್ದಳು. ಬೆಳಿಗೆದ್ದು ಅವುಗಳ ಕೆಲ್ಸ ಜಾಸ್ತಿ ಇರೋದ್ರಿಂದ ಅಜ್ಜ ರಾತ್ರಿ ನಮ್ಮನೆಗೆ ಬಂದುಬಿಡೋನು. ಒಂದು ದಿನ ಅಜ್ಜ ಬರುವಾಗ ತುಂಬಾ ರಾತ್ರಿಯಾಗಿತ್ತು. ಸಂಜೆ ಹೊತ್ತಿನ ಹುಳಿ ಶೇಂದೀನ ಹೊಟ್ಟೆಗೇರಿಸಿಕೊಂಡು ಸ್ವಲ್ಪ ಟೈಟಾಗೇ ಅಜ್ಜ ರಾತ್ರಿ ಹೊತ್ತು ನಮ್ಮನೆಗೆ ಹೊರಟಿದ್ದ. ದಟ್ಟಕಾಡಿನ ನಡುವೆ ಕಾಲುದಾರಿ. ಬರೀ ಪಾದಗಳನ್ನು ಊರಲಷ್ಟೇ ಜಾಗ. ಸುತ್ತಮುತ್ತ ದೊಡ್ಡ ದೊಡ್ಡ ಮರಗಳು, ಎತ್ತರಕ್ಕೆ ಬೆಳೆದ ಹುಲ್ಲು-ಪೊದೆಗಳು. ಅಜ್ಜ ಬರುತ್ತಿದ್ಧಂತೆ ನಡುದಾರಿಯಲ್ಲಿ ಬೆಳ್ಳಿ ಕೂದಲ, ಬಿಳಿದಾದ ಗಡ್ಡವುಳ್ಳ, ಉದ್ದದ ಮನುಷ್ಯ ಒಬ್ರು ಸಿಕ್ಕಿದ್ರಂತೆ. ಬಿಳಿ ಅಂಗಿಯನ್ನು ಧರಿಸಿದ ಆತ ಅಜ್ಜನ ಜೊತೆ ಎಲ್ಲಿಗೆ ಹೋಗುತ್ತಿದ್ದೀರಿ ಎಂದೆಲ್ಲಾ ವಿಚಾರಿಸಿದಾಗ ಅಜ್ಜ ಕಾಡೊಳಗಿನ ದಾರಿಯಲ್ಲಿ ಒಬ್ಬನೇ ಹೋಗುತ್ತಿದ್ದೇನೆ...ಜೊತೆ ಸಿಕ್ಕಂತಾಯಿತು ಎಂದುಕೊಂಡರಂತೆ. ಅರ್ಧದಾರಿ ತನಕ ಬಂದ ಬಿಳಿ ಅಂಗಿಯ ಮನುಷ್ಯ ಹಿಂದೆ ತಿರುಗಿ ನೋಡಿದರೆ ಇರಲಿಲ್ಲವಂತೆ!.
********
ನಮ್ಮನೆ ಊರುವುದು ಪುತ್ತೂರಿನ ಪುಟ್ಟ ಹಳ್ಳಿ. ರಸ್ತೆ ಇಲ್ಲದೆ ದಟ್ಟ ಕಾಡುಗಳ ನಡುವೆ ನಿಂತ ಆ ಹಳ್ಳಿಗೆ ಕರೆಂಟು ಬಂದಿದ್ದು ಏಳೆಂಟು ತಿಂಗಳ ಹಿಂದೆ. ರಾತ್ರಿ ಹೊತ್ತು ಹೊರಗಡೆ ಬರಲೂ ಭಯ. ಅಂಥಾದ್ರಲ್ಲಿ ದಿನಾ ಏಳು ಗಂಟೆಯ ಹೊತ್ತಿಗೆ ಒಂದು ಹಕ್ಕಿ ಕೂಗಲು ಶುರುಮಾಡುತ್ತೆ. 9.30 ತನಕ ಅದು ಕೂಗುತ್ತಲೇ ಇರುತ್ತೆ. ನಮ್ಮಜ್ಜಿ ಮತ್ತು ಅಜ್ಜನ ಲೆಕ್ಕದಲ್ಲಿ ಅದು ಯಾರದೋ ಪ್ರೇತ. ನಾನಾಗ ಇನ್ನೂ ಸ್ಕೂಲ್ ಹತ್ತದ ಮಗು. ನಮ್ಮಜ್ಜನ ಬಳಿ ಗನ್ ಇತ್ತು. ಸಮಯ ಸಿಕ್ಕಾಗೆಲ್ಲಾ ಅಜ್ಜ ಗನ್ ಬೆನ್ನಿಗೇರಿಸಿಕೊಂಡು ಹೋಗುತ್ತಿದ್ದ. ಈ ಹಕ್ಕಿ ಕೂಗಾಟಕ್ಕೆ ಅಜ್ಜಿ ದಿನಾ ರಗಳೆ ತೆಗೆಯೋಳು. ಒಂದು ದಿನ ಅಜ್ಜ ಗನ್ ಬೆನ್ನಿಗೇರಿಸಿಕೊಂಡು ಹಕ್ಕಿನ ಶಿಕಾರಿ ಮಾಡಲು ಹೊರಟೇ ಬಿಟ್ಟ. ಅಜ್ಜ ಐದಾರು ಸಲ ಹೊಡೆದರೂ ಹಕ್ಕಿ ಸಿಗಲೇ ಇಲ್ಲ. ಅದು ಕೂಗ್ತಾನೆ ಇತ್ತು. "ಕೈಗೆ ಸಿಗದ ದೆವ್ವ'' ಎಂದುಕೊಂಡು ನಮ್ಮಜ್ಜ ಸುಮ್ಮನಾಗಿದ್ದ.
1 comment:
ಅಬ್ಬಾ! ಓದುತ್ತಿದ್ದಂತೆ ಮೈ ನಡುಗಿತು!
Post a Comment