Monday, March 23, 2009

ತವರೂರ ಮನೆ ನೋಡ ಬಂದೆ...

ಮಲಗು ಚೆಲ್ವಿನ ತೆರೆಯೆ ಮಲಗು ಒಲ್ಮೆಯ ಸಿರಿಯೆ
ಮಲಗು ತೊಟ್ಟಿಲ ಸಿರಿಯೆ ದೇವರಂತೆ
ಮಲಗು ಮುದ್ದಿನ ಗಿಣಿಯೆ ಮಲಗು ಮುತ್ತಿನ ಮಣಿಯೆ
ಮಲಗು ಚಂದಿರನೂರ ಕೂಗುವೆಯಂತೆ ....

ಇಂಪಾದ ಹಾಡು ಕೇಳುತ್ತಿದ್ದಂತೆ ಯಾಕೋ ಥಟ್ಟನೆ ತವರು ನೆನಪಾಯಿತು. ಪ್ರೀತಿಯ ಮಡಿಲಲ್ಲಿ ಜೋಕಾಲಿ ಹಾಡುತ್ತಾ ಹಾಲುಣಿಸಿದ ಅಮ್ಮ ನೆನಪಾದಳು. ನಾ ಅತ್ತರೂ ಕಿರುಚಿದರೂ ದಣಿಯದೆ ಕಂಗಳಲ್ಲಿ ಬೆಳದಿಂಗಳು ಮೂಡಿಸಿದ ತವರು ನೆನಪಾಯಿತು. ತಪ್ಪಿ ನಡೆದ ದಾರಿಯಲ್ಲಿ ಸರಿ ದಾರಿ ತೋರಿಸಿ ಬದುಕ ತುಂಬಾ ಕನಸುಗಳ ಚಿತ್ತಾರ ಮೂಡಿಸಿ ಭವಿಷ್ಯಕ್ಕೆ ಬೆಳಕಿನ ಮುನ್ನುಡಿ ಬರೆದ ನನ್ನವ್ವ ನೆನಪಾದಳು. ಹುಣ್ಣಿಮೆ ರಾತ್ರೀಲಿ ಚಂದಿರನನ್ನು ಕೊಂಡಾಡುತ್ತಾ, ಬೆಳಗು ಇಬ್ಬನಿಯ ನಗುವನ್ನು ತೋರುತ್ತಾ, ಪ್ರೀತಿ, ಮಮತೆ, ತ್ಯಾಗ, ವಾತ್ಸಲ್ಯದ ಪಾಠ ಬೋಧಿಸಿದ ಅಮ್ಮನ ಮಡಿಲು ನೆನಪಾಯಿತು

ಹ್ಲಾಂ..!..ಗೊತ್ತೇ ಆಗಲಿಲ್ಲ.

ಸರಿದೇ ಹೋಗಿತ್ತು ಸಮಯ. ಅವಳಪ್ಪುಗೆಯಲ್ಲಿ ರಚ್ಚೆ ಹಿಡಿಯುತ್ತಾ, ಉಚ್ಚೆ ಒಯ್ಯುತ್ತಾ ಬೆಳೆದ ನನ್ನ ಅಳು, ತರಲೆ ಅಮ್ಮನಿಗೆ ಕಿರಿಕಿರಿ ಎನಿಸುತ್ತಿರಲಿಲ್ಲ. ದಿನವಿಡೀ ಎತ್ತಿ ಆಡಿಸಿದ ಆ ದೇವರ ಕೈಗಳಿಗೆ ನಾ ಭಾರವಾಗುತ್ತಿರಲಿಲ್ಲ. ಎಂಥ ಮಾಯೆ? ಎದ್ದು ನಡೆಯುತ್ತಿದ್ದೆ.. ಪ್ರಪಂಚನಾ ಅಚ್ಚರಿಯಿಂದ ದಿಟ್ಟಿಸುತ್ತಿದ್ದ ನನ್ನ ಕಣ್ಣುಗಳಿಗೆ 'ಪಾಠ' ಹೇಳಿಕೊಡುತ್ತಿತ್ತು ಆ ತವರು. ಬೆಳಗೆದ್ದು ಖುಷಿ ಖುಷಿಯಲ್ಲಿ ಮನೆ ಮುಂದೆ ರಂಗೋಲಿ ಇಡುತ್ತಿದ್ದೆ. . ಆಗವಳು ನನ್ನ ಎತ್ತಿ ಆಡಿಸುತ್ತಿರಲಿಲ್ಲ, ಚಂದಿರನ ತೋರಿಸಿ ಹೊಗಳುತ್ತಿರಲಿಲ್ಲ. ಜೋಕಾಲಿ ಆಡಿಸುತ್ತಿರಲಿಲ್ಲ. ಅವಳೆತ್ತರಕ್ಕೆ ಬೆಳೆದ ನನ್ನ ನೋಡಿ ಅಮ್ಮ ಅದೆಷ್ಟು ಖುಷಿಪಡುತ್ತಿದ್ದಳು. ನನ್ನ ನೋಡುತ್ತಲೇ ಅಣ್ಣನ ಕಿವಿಯಲ್ಲಿ ಅದೇನೋ ಪಿಸುಗುಟ್ಟುತ್ತಿದ್ದಳು. ಆತ ತುಂಟನಗೆ ಬೀರುತ್ತಿದ್ದ. ಅವನ ಕಣ್ಣುಗಳ ತುಂಟತನಕ್ಕೆ ಚಂಗನೆ ಜಿಂಕೆಯಂತೆ ಹಾರಿ ಅವನ ತೋಳು ಸೇರುತ್ತಿದ್ದೆ. ನಾ ಮಗುವಾಗಿರುವಾಗ ಎತ್ತು ಮುದ್ದಾಡುತ್ತಿದ್ದ, ಲಂಗ ಧಾವಣಿ ತೊಡಿಸುತ್ತಿದ್ದ ಅಣ್ಣ ಈವಾಗ ಖುಷಿಯ ನಗು ಚೆಲ್ಲುತ್ತಿದ್ದ. ಅದ ನೋಡಿ ಅಮ್ಮನ ಕಣ್ಣಲ್ಲೂ ಖುಷಿಯ ಮಿನುಗು, ಪ್ರೀತಿಯ ಜಿನುಗು. ಬಾನಿನತ್ತ ನೋಡಿ ಅದೇನೋ ಕೈಜೋಡಿಸಿ ಬೇಡುತ್ತಿದ್ದಳು..ಅವಳದೇ ಭಾಷೆಯಲ್ಲಿ.

ಹ್ಲಾಂ..! ತವರು...

ತವರಿನ ಪ್ರೀತಿಯ ಚಪ್ಪರದಡಿಯಲ್ಲಿ ನಾ ಸಪ್ತಪದಿ ತುಳಿದಿದ್ದೆ. ದಶಕಗಳು ಸರಿದಿವೆ. ಅಮ್ಮನೆತ್ತರಕ್ಕೆ ಬೆಳೆದ ನಾನೂ 'ಅಮ್ಮ'ನಾಗಿದ್ದೆ. ಆದರೆ, ಇದ ಕಂಡು ಖುಷಿ ಪಡಲು ಅಮ್ಮನಿರಲಿಲ್ಲ ಜೊತೆಯಲ್ಲಿ.! ಆದರೆ, ಆಕೆ ಕಲಿಸಿದ ಬದುಕಷ್ಟೇ ಉಳಿದಿತ್ತು. ಮತ್ತೆ ಬಂದಿದ್ದೆ ನಾ ತವರಿಗೆ. ಅಣ್ಣನೊಬ್ಬ ಉಳಿದಿದ್ದ, ಬದುಕಿಗೆ ಜೀವಂತಿಕೆ ಕಟ್ಟಿಕೊಟ್ಟ, ಜೀವನಕ್ಕೆ ಅಪೂರ್ವ ಸೌಂದರ್ಯ ಕಟ್ಟಿಕೊಟ್ಟ, ಖುಷಿಯಲ್ಲಿ ನಕ್ಕು ನಗಿಸಿದ ಆ ತವರು ಕಾಣಲು ಮತ್ತೆ ನಾ ಬಂದಿದ್ದೆ. ಆದರೆ ಅದೇಕೋ ಖಾಲಿ ಖಾಲಿ...ಮನೆಯೆದುರು ನಾ ಇಟ್ಟ ರಂಗೋಲಿ ಮಾಸಿತ್ತು, ಆದರೆ ನೆನಪಷ್ಟೇ ಉಳಿದಿತ್ತು. ಅಮ್ಮನಂತ ಅಣ್ಣನ ತೋಳು ನನ್ನ ಪ್ರೀತಿಗೆ ಹಾತೊರೆದಂತೆ ಕಾಣಲಿಲ್ಲ. ನಕ್ಕು ನಗಿಸಿದ ತುಂಟಾಟ, ಲಗೋರಿಯಾಟ ಆಡಿದ ಅಣ್ಣನ ಮುಖದಲ್ಲಿ ಎಂದಿನ ನಗೆ ಬೆಳಕಿರಲಿಲ್ಲ. ಅತ್ತಿಗೆಯ ಮುಖ ನನ್ನಮ್ಮನಂತೆ ನನ್ನ ಸ್ವಾಗತಿಸಲಿಲ್ಲ. ತನ್ನ ಕೋಣೆಯೊಳಗೆ ಕುಳಿತ ಅಣ್ಣ ಹಾಗೇ ಬಾಗಿಲು ಹಾಕಿದ್ದ. ಮತ್ತೆಂದೂ ತೆರೆಯಲಿಲ್ಲ....ಆದರೆ..ನನ್ನೊಳಗಿನ ಪ್ರಶ್ನೆಗಳಿಗೆ ಅಲ್ಲಿ ಉತ್ತರವಿರಲಿಲ್ಲ..ಯಾಕಂದರೆ ಆತ ನನ್ನ 'ಅಣ್ಣ' ಆಗಿದ್ದ. ಪ್ರೀತಿಯ ತವರಾಗಿದ್ದ. ಮಮತೆಯ ಮಡಿಲಾಗಿದ್ದ.

ಮತ್ತದೇ ಹಾಡು ...ಗುನುಗಿತು...ಮನದೊಳಗೆ..

ತವರೂರ ಮನೆ ನೋಡ ಬಂದೆ...
ತಾಯ ನೆನಪಾಗಿ ಕಣ್ಣೀರ ತಂದೆ...


ಬಾಗಿಲ ಮುಂದೆ ರಂಗೋಲಿ
ಬಾಗಿ ಇಡುತ್ತಿದ್ದೆ ನಾನಾ ತರದಲ್ಲಿ ...

ಮತ್ತೆ ತೆರಳಿದೆ..'ನನ್ನೂರಿಗೆ' ಅಲ್ಲಿ...!!!

ಫೋಟೋ ಕೃಪೆ: http://www.flickr.com/

Thursday, March 19, 2009

ಒಂಟಿತನವೆಂಬುವುದು ಎಂಥ ವಿಚಿತ್ರ ಸಂಗತಿ?

ಒಂದು ಪುಟ್ಟ ಮನೆ. ಒಂದು ಹಾಲ್. ಒಂದು ಬೆಡ್ ರೂಂ. ಒಂದು ಕಿಚನ್. ಒಂದು ಬಾತ್ ರೂಂ. ಹಾಲ್ ನಲ್ಲೊಂದು ಟಿವಿ. ಅಚ್ಚುಕಟ್ಟಾಗಿ ಜೋಡಿಸಿಟ್ಟ ನನ್ನ ಪ್ರೀತಿಯ ಪುಸ್ತಕಗಳು, ರೂಂ.ನಲ್ಲಿ ಗೋದ್ರೇಜ್, ಕಿಚನ್ ನಲ್ಲಿ ಪಾತ್ರೆಗಳು, ತರಕಾರಿ, ಸಾಮಾಗ್ರಿಗಳು ಇನ್ನೇನೇನೋ...
ಎದುರಗಡೆ ಸುಂದರವಾದ ಮನೆ, ಅಲ್ಲಿ ಅಪ್ಪ-ಅಮ್ಮಂದಿರ ಜೊತೆ ಹರಟುತ್ತಾ ಕೂರುವ ಚೆಂದದ ಹುಡುಗ, ಮನೆ ಮುಂದೆ ಆಟಾಡೋ ಪುಟಾಣಿ ಮಕ್ಕಳು, ಪ್ರೀತಿಯಿಂದ ಆಂಟಿ ಎಂದು ಕೂಗುವ ಒಂದೂವರೆ ಚರ್ಷದ ಪಾಪು ಶ್ರೇಯಸ್ಸು.....ಇದು ನಿತ್ಯ ಕಣ್ಣೋಟಗಳು.
ಇದೇನಿದ್ದರೂ ನಾ ಒಂಟಿ ಅನಿಸಿಬಿಡುತ್ತೆ. ಸಂಜೆಯ ತಂಗಾಳಿಗೆ ಮೈಯೊಡ್ಡಿ ನಿಂತರೂ ನಾ ಒಂಟಿ ಅನಿಸುತ್ತೆ. ನನ್ನ ಸಿಟ್ಟಿನಂತೆಯೇ ಒಂಟಿತನವನ್ನೂ ನಾ ತುಂಬಾ ದ್ವೇಷಿಸುತ್ತೇನೆ.

"ಒಂಟಿತನವೆಂಬುವುದು ಎಂಥ ವಿಚಿತ್ರ ಸಂಗತಿ? ಎಂಥ ಭಯಾನಕ ಸಂಗತಿ? ನಾವು ಅದರ ಸಮೀಪ ಸುಳಿಯಲೂ ಬಯಸುವುದಿಲ್ಲ. ಒಂದೊಮ್ಮೆ ಹಾಗೇನಾದರೂ ಆದರೆ ನಾವು ಅದರಿಂದ ದೂರ ಓಡಿಹೋಗುತ್ತೇವೆ. ಒಂಟಿತನದಿಂದ ಪರಾರಿಯಾಗಲು, ಅದನ್ನು ಮುಚ್ಚಿಹಾಕಲು ಏನೆಲ್ಲಾ ಮಾಡುತ್ತೇವೆ?" ಜೆ. ಕೃಷ್ಣಮೂರ್ತಿ ಬರೆದ ಸಾಲುಗಳನ್ನು ಅದೆಷ್ಟು ಬಾರಿ ಓದುತ್ತೇನೋ ನಂಗೇ ಗೊತ್ತಿಲ್ಲ.
ಕಡಲ ಕಿನಾರೆಯ ತಂಪು ವಾತಾವರಣದಲ್ಲಿ ಮರಳ ಮೇಲೆ ಆಡೋ ಆಸೆ. ಬೆಳದಿಂಗಳ ರಾತ್ರೀಲಿ ಮೋಡಗಳ ನಡುವೆ ಕಣ್ಣಮುಚ್ಚಾಲೆಯಾಡುವ ಚಂದಿರನ ಕಣ್ತುಂಬಾ ನೋಡೋ ಆಸೆ. ಸುಂದರವಾಗ ಪುಷ್ಪಗಳಿಂದ ತುಂಬಿರುವ ಉದ್ಯಾನವನದಲ್ಲಿ ಏಕಾಂಗಿಯಾಗಿ ಕುಳಿತು ತಂಪು ಗಾಳಿ ಸೇವಿಸೋ ಆಸೆ. ಸಂಜೆಗತ್ತಲಲ್ಲಿ ಒಬ್ಬಳೇ ವಾಕಿಂಗ್ ಹೋಗುವಾಸೆ. ಇಲ್ಲೇಲ್ಲಾ ನಾ ಏಕಾಂಗಿಯೇ ಇರುತ್ತೇನೆ. ಮನಸ್ಸೆಲ್ಲಾ ಖಾಲಿ ಖಾಲಿ ಅನಿಸಿಬಿಡುತ್ತೆ. ಎಲ್ಲೋ ಮರೆತುಹೋಗಿದ್ದ ನೆನಪುಗಳು ಧುತ್ತನೇ ಮನದಂಗಳದಲ್ಲಿ ಮೂಡಿಬಿಡುತ್ತೆ. ಖುಷಿಪಡಲೆಂದು ಹಾತೊರೆದ ಮನಸ್ಸಿನ್ನು ಒಂಟಿತನ ಕಾಡಿಬಿಡುತ್ತೆ, ಯಾಕೋ ಹೃದಯ ಭಾರ ಅನಿಸಿಬಿಡುತ್ತೆ....ಬೇಡ..ಹೇ ಒಂಟಿತನ ನೀ ದೂರಹೋಗು ಅಂತೀನಿ...ಐ ಹೇಟ್ ಯೂ ಅಂತೀನಿ....
ಮನೆತುಂಬಾ ಮಕ್ಕಳಾಟ, ಇಲ್ಲಾಂದ್ರೆ ಸ್ನೇಹಿತರ ಕೂಟ. ಅಣ್ಣ, ತಮ್ಮಂದಿರ ಜೊತೆ ಜಗಳವಾಡೋದೇ ವಾಸಿ..ಈ ಒಂಟಿತನ ಬೇಡಪ್ಪಾ. ಎಷ್ಟೋ ಬಾರಿ ಒಂಟಿತನ ಎಂದರಾದಗ ಪ್ರೀತಿಯ ಪುಸ್ತಕಗಳೂ ಸಾಥ್ ನೀಡಲಾರವು. ಫೋನಿನಲ್ಲಿ ಗಂಟೆ-ಗಟ್ಟಲೆ ಮಾತನಾಡಿದ ಗೆಳೆಯ/ಗೆಳತಿಯರ ಮಾತುಗಳೂ ಸಾಥ್ ನೀಡುವುದಿಲ್ಲ. ಅದಕ್ಕೆ ಅನ್ನೋದು ಅಲ್ವೇ..ಒಂಟಿ ಒಂಟಿಯಾಗಿರೋದು ಬೋರೇ ಬೋರ್! ಒಂಟಿಯಾಗಿ ಕಡಲ ಕಿನಾರೆಗೆ ಹೋಗಬಾರದು. ಸುಂದರ ಬೆಳದಿಂಗಳಲ್ಲಿ ಕನಸು ಕಾಣೋ ರಿಸ್ಕ ತಕೋಬಾರ್ದು ಅನಿಸಿಬಿಡುತ್ತೆ.

ನಾ ನಿಮ್ ಜೊತೆಗೆ ನಗುನಗುತ್ತಾ ನಲಿಬೇಕು. ನಿಮ್ಮ ಜೊತೆ ಸೇರಿ ಕಡ್ಲೆಕಾಯಿ ಮೆಲ್ಲುತ್ತಿರಬೇಕು. ನಿಮ್ಮ ಫ್ರೀ ಜೋಕುಗಳನ್ನು ಕೇಳಿ ಹೊಟ್ಟೆ ಹಣ್ಣಾಗುವಂತೆ ನಗಬೇಕು. ಪ್ರೀತಿಯ ಅಮ್ಮ, ತಮ್ಮ, ಅಣ್ಣಂದಿರ, ತಂಗಿಯರ ಜೊತೆಗೆ ದಿನಾ ಅವರನ್ನು ನೆರಳಂತೆ ಹಿಂಬಾಲಿಸುತ್ತಿರಬೇಕು. ಅವರ ಜೊತೆಗೇ ಊಟ ಮಾಡಬೇಕು. ಅವರ ಪ್ರೀತಿಯ ಜೋಗುಳ ಲಾಲಿಯಲ್ಲಿ ನಾ ನಿದ್ದೆ ಮಂಪರಿಗೆ ಜಾರಬೇಕು. ಎಲ್ಲೂ ನಾ ಒಂಟಿಯಾಗಿ ಇರಲೇಬಾರದು. ..ಇಲ್ಲ..ಇಲ್ಲ..ಜೀವನಪರ್ಯಂತ ನಾ ಒಂಟಿತನವನ್ನು ತುಂಬಾ ಹೇಟ್ ಮಾಡ್ತೀನಿ....ನಂಗದು ಕೊಂಚವೂ ಇಷ್ಟವಿಲ್ಲ. ಒಂಟಿತನ ಎಂಬುವುದು ಎಂಥ ವಿಚಿತ್ರ ಸಂಗತಿ ಕಣ್ರೀ.

Wednesday, March 18, 2009

ಧರಿತ್ರಿ ನನ್ನ ಕನಸು..

ನಾನು ಧರಿತ್ರಿ..
ಕರಾವಳಿಯ ಪುಟ್ಟ ಹಳ್ಳಿ ನನ್ನೂರು. ಬದುಕು, ಅಮ್ಮ, ಪ್ರೀತಿ ಅಂದ್ರೆ ಅಕ್ಕರೆ ಜಾಸ್ತಿ. ಬದುಕಂದ್ರೆ ತುಂಬಾನೇ ಪ್ರೀತಿಸ್ತೀನಿ..ಪ್ರೀತಿಸುವುದೆಂದರೆ ಅದು ಬದುಕಂತೀನಿ. ಧರಿತ್ರಿ ನನ್ನ ಭಾವದಲೆಗಳಿಗೆ ವೇದಿಕೆಯಾಗಲಿದ್ದಾಳೆ. ನಿಮ್ ಥರ ನನ್ನದೂ ಒಂದು ಬ್ಲಾಗ್. ಧರಿತ್ರಿ ನನ್ನ ಅದಮ್ಯ ಕನಸು. ಸದಾ ಏನಾದ್ರೂ ಬರೀಬೇಕು ಅನ್ನೋದು ನನ್ ಮನಸ್ಸಿನ ತುಡಿತ. ಬರವಣಿಗೆ ಅನ್ನೋದು ನಿಂತ ನೀರಾಗಬಾರದು..ಅದಕ್ಕೆ ಈ ಧರಿತ್ರಿ ಆಸರೆಯಾಗುತ್ತಾಳೆ ಅನ್ನೋ ನಂಬಿಕೆ. ನಿಮ್ಮ ಪ್ರೋತ್ಸಾಹ, ಬೆನ್ನು ತಟ್ಟೋದು, ಕೆಟ್ಟದು ಅನಿಸಿದ್ರೆ ಥೂ! ಎಂದು ಉಗಿದ್ರೂ ನಾ ಸಹಿಸಬಲ್ಲೆ..ತಪ್ಪಾದ ಹೆಜ್ಜೆಗಳನ್ನು ತಿದ್ದಿ ಮತ್ತೆ ಸರಿಪಡಿಸಿಕೊಳ್ಳಬಲ್ಲೆ.
ಭಾವನೆ, ಬದುಕು, ನೆನಪುಗಳ ಕನವರಿಕೆ, ಕನಸು, ಅನುಭವದ ಪಿಸುಮಾತುಗಳು, ಸಿಹಿ-ಕಹಿ ನುಡಿಗಳು ಎಲ್ಲವೂ ಈ ಧರಿತ್ರಿಯಲ್ಲಿ ನಿರಂತರ ಚೆಲ್ಲಿಬಿಡ್ತೀನಿ. ಖಂಡಿತ ಪುರುಸೋತ್ತು ಮಾಡಿಕೊಂಡು ಓದುತ್ತೀರಲ್ಲಾ..
ಇಂತೀ, ನಿಮ್ಮ
ಧರಿತ್ರಿ