Thursday, March 19, 2009

ಒಂಟಿತನವೆಂಬುವುದು ಎಂಥ ವಿಚಿತ್ರ ಸಂಗತಿ?

ಒಂದು ಪುಟ್ಟ ಮನೆ. ಒಂದು ಹಾಲ್. ಒಂದು ಬೆಡ್ ರೂಂ. ಒಂದು ಕಿಚನ್. ಒಂದು ಬಾತ್ ರೂಂ. ಹಾಲ್ ನಲ್ಲೊಂದು ಟಿವಿ. ಅಚ್ಚುಕಟ್ಟಾಗಿ ಜೋಡಿಸಿಟ್ಟ ನನ್ನ ಪ್ರೀತಿಯ ಪುಸ್ತಕಗಳು, ರೂಂ.ನಲ್ಲಿ ಗೋದ್ರೇಜ್, ಕಿಚನ್ ನಲ್ಲಿ ಪಾತ್ರೆಗಳು, ತರಕಾರಿ, ಸಾಮಾಗ್ರಿಗಳು ಇನ್ನೇನೇನೋ...
ಎದುರಗಡೆ ಸುಂದರವಾದ ಮನೆ, ಅಲ್ಲಿ ಅಪ್ಪ-ಅಮ್ಮಂದಿರ ಜೊತೆ ಹರಟುತ್ತಾ ಕೂರುವ ಚೆಂದದ ಹುಡುಗ, ಮನೆ ಮುಂದೆ ಆಟಾಡೋ ಪುಟಾಣಿ ಮಕ್ಕಳು, ಪ್ರೀತಿಯಿಂದ ಆಂಟಿ ಎಂದು ಕೂಗುವ ಒಂದೂವರೆ ಚರ್ಷದ ಪಾಪು ಶ್ರೇಯಸ್ಸು.....ಇದು ನಿತ್ಯ ಕಣ್ಣೋಟಗಳು.
ಇದೇನಿದ್ದರೂ ನಾ ಒಂಟಿ ಅನಿಸಿಬಿಡುತ್ತೆ. ಸಂಜೆಯ ತಂಗಾಳಿಗೆ ಮೈಯೊಡ್ಡಿ ನಿಂತರೂ ನಾ ಒಂಟಿ ಅನಿಸುತ್ತೆ. ನನ್ನ ಸಿಟ್ಟಿನಂತೆಯೇ ಒಂಟಿತನವನ್ನೂ ನಾ ತುಂಬಾ ದ್ವೇಷಿಸುತ್ತೇನೆ.

"ಒಂಟಿತನವೆಂಬುವುದು ಎಂಥ ವಿಚಿತ್ರ ಸಂಗತಿ? ಎಂಥ ಭಯಾನಕ ಸಂಗತಿ? ನಾವು ಅದರ ಸಮೀಪ ಸುಳಿಯಲೂ ಬಯಸುವುದಿಲ್ಲ. ಒಂದೊಮ್ಮೆ ಹಾಗೇನಾದರೂ ಆದರೆ ನಾವು ಅದರಿಂದ ದೂರ ಓಡಿಹೋಗುತ್ತೇವೆ. ಒಂಟಿತನದಿಂದ ಪರಾರಿಯಾಗಲು, ಅದನ್ನು ಮುಚ್ಚಿಹಾಕಲು ಏನೆಲ್ಲಾ ಮಾಡುತ್ತೇವೆ?" ಜೆ. ಕೃಷ್ಣಮೂರ್ತಿ ಬರೆದ ಸಾಲುಗಳನ್ನು ಅದೆಷ್ಟು ಬಾರಿ ಓದುತ್ತೇನೋ ನಂಗೇ ಗೊತ್ತಿಲ್ಲ.
ಕಡಲ ಕಿನಾರೆಯ ತಂಪು ವಾತಾವರಣದಲ್ಲಿ ಮರಳ ಮೇಲೆ ಆಡೋ ಆಸೆ. ಬೆಳದಿಂಗಳ ರಾತ್ರೀಲಿ ಮೋಡಗಳ ನಡುವೆ ಕಣ್ಣಮುಚ್ಚಾಲೆಯಾಡುವ ಚಂದಿರನ ಕಣ್ತುಂಬಾ ನೋಡೋ ಆಸೆ. ಸುಂದರವಾಗ ಪುಷ್ಪಗಳಿಂದ ತುಂಬಿರುವ ಉದ್ಯಾನವನದಲ್ಲಿ ಏಕಾಂಗಿಯಾಗಿ ಕುಳಿತು ತಂಪು ಗಾಳಿ ಸೇವಿಸೋ ಆಸೆ. ಸಂಜೆಗತ್ತಲಲ್ಲಿ ಒಬ್ಬಳೇ ವಾಕಿಂಗ್ ಹೋಗುವಾಸೆ. ಇಲ್ಲೇಲ್ಲಾ ನಾ ಏಕಾಂಗಿಯೇ ಇರುತ್ತೇನೆ. ಮನಸ್ಸೆಲ್ಲಾ ಖಾಲಿ ಖಾಲಿ ಅನಿಸಿಬಿಡುತ್ತೆ. ಎಲ್ಲೋ ಮರೆತುಹೋಗಿದ್ದ ನೆನಪುಗಳು ಧುತ್ತನೇ ಮನದಂಗಳದಲ್ಲಿ ಮೂಡಿಬಿಡುತ್ತೆ. ಖುಷಿಪಡಲೆಂದು ಹಾತೊರೆದ ಮನಸ್ಸಿನ್ನು ಒಂಟಿತನ ಕಾಡಿಬಿಡುತ್ತೆ, ಯಾಕೋ ಹೃದಯ ಭಾರ ಅನಿಸಿಬಿಡುತ್ತೆ....ಬೇಡ..ಹೇ ಒಂಟಿತನ ನೀ ದೂರಹೋಗು ಅಂತೀನಿ...ಐ ಹೇಟ್ ಯೂ ಅಂತೀನಿ....
ಮನೆತುಂಬಾ ಮಕ್ಕಳಾಟ, ಇಲ್ಲಾಂದ್ರೆ ಸ್ನೇಹಿತರ ಕೂಟ. ಅಣ್ಣ, ತಮ್ಮಂದಿರ ಜೊತೆ ಜಗಳವಾಡೋದೇ ವಾಸಿ..ಈ ಒಂಟಿತನ ಬೇಡಪ್ಪಾ. ಎಷ್ಟೋ ಬಾರಿ ಒಂಟಿತನ ಎಂದರಾದಗ ಪ್ರೀತಿಯ ಪುಸ್ತಕಗಳೂ ಸಾಥ್ ನೀಡಲಾರವು. ಫೋನಿನಲ್ಲಿ ಗಂಟೆ-ಗಟ್ಟಲೆ ಮಾತನಾಡಿದ ಗೆಳೆಯ/ಗೆಳತಿಯರ ಮಾತುಗಳೂ ಸಾಥ್ ನೀಡುವುದಿಲ್ಲ. ಅದಕ್ಕೆ ಅನ್ನೋದು ಅಲ್ವೇ..ಒಂಟಿ ಒಂಟಿಯಾಗಿರೋದು ಬೋರೇ ಬೋರ್! ಒಂಟಿಯಾಗಿ ಕಡಲ ಕಿನಾರೆಗೆ ಹೋಗಬಾರದು. ಸುಂದರ ಬೆಳದಿಂಗಳಲ್ಲಿ ಕನಸು ಕಾಣೋ ರಿಸ್ಕ ತಕೋಬಾರ್ದು ಅನಿಸಿಬಿಡುತ್ತೆ.

ನಾ ನಿಮ್ ಜೊತೆಗೆ ನಗುನಗುತ್ತಾ ನಲಿಬೇಕು. ನಿಮ್ಮ ಜೊತೆ ಸೇರಿ ಕಡ್ಲೆಕಾಯಿ ಮೆಲ್ಲುತ್ತಿರಬೇಕು. ನಿಮ್ಮ ಫ್ರೀ ಜೋಕುಗಳನ್ನು ಕೇಳಿ ಹೊಟ್ಟೆ ಹಣ್ಣಾಗುವಂತೆ ನಗಬೇಕು. ಪ್ರೀತಿಯ ಅಮ್ಮ, ತಮ್ಮ, ಅಣ್ಣಂದಿರ, ತಂಗಿಯರ ಜೊತೆಗೆ ದಿನಾ ಅವರನ್ನು ನೆರಳಂತೆ ಹಿಂಬಾಲಿಸುತ್ತಿರಬೇಕು. ಅವರ ಜೊತೆಗೇ ಊಟ ಮಾಡಬೇಕು. ಅವರ ಪ್ರೀತಿಯ ಜೋಗುಳ ಲಾಲಿಯಲ್ಲಿ ನಾ ನಿದ್ದೆ ಮಂಪರಿಗೆ ಜಾರಬೇಕು. ಎಲ್ಲೂ ನಾ ಒಂಟಿಯಾಗಿ ಇರಲೇಬಾರದು. ..ಇಲ್ಲ..ಇಲ್ಲ..ಜೀವನಪರ್ಯಂತ ನಾ ಒಂಟಿತನವನ್ನು ತುಂಬಾ ಹೇಟ್ ಮಾಡ್ತೀನಿ....ನಂಗದು ಕೊಂಚವೂ ಇಷ್ಟವಿಲ್ಲ. ಒಂಟಿತನ ಎಂಬುವುದು ಎಂಥ ವಿಚಿತ್ರ ಸಂಗತಿ ಕಣ್ರೀ.

28 comments:

PARAANJAPE K.N. said...

ಧರಿತ್ರಿ,
ಅಪ್ಯಾಯವೆನಿಸುವ ಬರಹ, ಹೌದು, ಒ೦ಟಿತನವೆ೦ಬುದು ಬಲೆ ಬೋರು. ಅದು ತೆರೆಗಳ ಆರ್ಭಟವಿಲ್ಲದ ಸಮುದ್ರದ೦ತೆ, ಹಕ್ಕಿಗಳ ಚಿಲಿಪಿಲಿ ಇಲ್ಲದ ಕಾಡಿನ೦ತೆ ಅಲ್ವೇ ? ಒಮ್ಮೊಮ್ಮೆ ಒ೦ಟಿಯಾಗಿ ಖಾಲಿ ಖಾಲಿಯಾದ ನಿರ್ಮಾನುಷ ಬಸ್ಸಿನಲ್ಲಿ ಓಡಾಡುವುದೂ ಬೋರೆನಿಸುತ್ತದೆ, ಕಿಕ್ಕಿರಿಯುವ ಜನಸ೦ದಣಿಯೂ ಖುಷಿ ಕೊಡುತ್ತದೆ. ತ೦ಗೀ, ನಿನಗೆ ಒ೦ಟಿತನ ಕಾಡದಿರಲಿ, ಉಕ್ಕಿ ಹರಿಯುವ ನದಿಯ೦ತೆ ಜೀವನ್ಮುಖಿಯಾಗಿರು, ನಿನ್ನ ಬಾಳು ಹಸನಾಗಿರಲಿ ಎ೦ದು ಹಾರೈಸುವೆ.

Ittigecement said...

ಧರಿತ್ರಿ...

ಬಳಿಯಲ್ಲಿ ತನ್ನವರಾರೂ ಇಲ್ಲದಿರುವಾಗ..
ಇದ್ದವರು ತನ್ನವರಲ್ಲ ಎನಿಸಿದಾಗ..
ಯಾರೂ ನಮ್ಮ ಭಾವನೆಗೆ.. ಸ್ಪಂದಿಸದೇ ಇರುವಾಗ...

ಒಂಟೀತನ ಕಾಡುತ್ತದೆ....

ಭಾವ, ಖುಷಿ, ಸಂತೋಷ.....
ಮನಸ್ಸಿನ... ಮುಖಗಳು..
ಇದೆ ಅಂದುಕೊಂಡರೆ ಉಂಟು.. ಇಲ್ಲವೆಂದರೆ ಇಲ್ಲ...

ಖುಷಿ, ಸಂತೋಷ, ಒಂಟೀತನ.
ನಮ್ಮ ಮನಸ್ಸಿನ ಭಾವನೆ...

ನಾವು ಕಂಡು ಕೊಳ್ಳಬೇಕು...

ಚಂದದ ಬರಹಕ್ಕೆ ಅಭಿನಂದನೆಗಳು...

ಧರಿತ್ರಿ said...

ಪರಾಂಜಪೆಯಣ್ಣ....
ಪ್ರತಿಕ್ರಿಯೆಗೆ ಧನ್ಯವಾದಗಳು. ಧರಿತ್ರಿಗೆ ಪ್ರೀತಿಯಿಂದ ಬೆನ್ನುತಟ್ಟಿದ್ದಕ್ಕೆ ಕೃತಜ್ಞತೆಗಳು.

ಪ್ರಕಾಶ್ ಸರ್,
ನಮಸ್ತೆ,,ಪ್ರತಿಕ್ರಿಯೆಗೆ ಧನ್ಯವಾದಗಳು.
"ಭಾವ, ಖುಷಿ, ಸಂತೋಷ.....
ಮನಸ್ಸಿನ... ಮುಖಗಳು..
ಇದೆ ಅಂದುಕೊಂಡರೆ ಉಂಟು.. ಇಲ್ಲವೆಂದರೆ ಇಲ್ಲ..." ಇಷ್ಟು ನೇರವಾಗಿ ಇರೋಕೆ ಸಾಧ್ಯನಾ ಅಂತ? ಎಲ್ಲಾ ಸಮಯದಲ್ಲೂ ಮನಸ್ಸಿನ ವಿಹ್ವಲತೆಯನ್ನು ಮೀರಿ ನಿಲ್ಲೋದು ಕಷ್ಟ ಅಲ್ವಾ?
ಪ್ರೀತಿಯಿಂದ,
ಧರಿತ್ರಿ

Umesh Balikai said...

ಧರಿತ್ರೀಯವರೇ,
ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಭೇಟಿ. ಬಂದ ತಕ್ಷಣ ನೋಡಿದ್ದು ಈ ಲೇಖನ. ನನಗೂ ತುಂಬಾ ರಿಲೇಟ್ ಆಗುತ್ತೆ ಅನ್ನಿಸ್ತು. ಮನೆಯಿಂದ ದೂರವಾಗಿ ಸುಮಾರು ಒಂಭತ್ತು ವರ್ಷಗಳಿಂದ ಈ ಕಾಂಕ್ರೀಟ್ ಕಾಡಿನಲ್ಲಿ ಒಬ್ಬಂಟಿಯಾಗಿ ಇದ್ದೇನೆ. ಎಷ್ಟೇ ದೂರ ತಳ್ಳಿದರೂ ಬೆನ್ನು ಬಿಡಲ್ಲ ಅನ್ನುತ್ತೆ ಈ ಒಬ್ಬಂಟಿ ತನ. ಒಂಟಿಯಾಗಿರುವವರಿಗೆ ಮಾತ್ರ ಗೊತ್ತು ಅದರ ಕಷ್ಟ ಏನೆಂದು. ಚಂದದ ಬರಹಕ್ಕೆ ಅಭಿನಂದನೆಗಳು.

ಧರಿತ್ರಿ said...

ಉಮೇಶ್...
ನನ್ನ ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ವಂದನೆಗಳು. ಹೌದು..ಒಂಟಿತನ ಯಾರಿಗೂ ಇಷ್ಟವಾಗೊಲ್ಲ ಅಲ್ವಾ? ಅದಕ್ಕೆ ನಾ ಪದೇ ಪದೇ ಐ ಹೇಟ್ ಅಂತೀನಿ...
ಮತ್ತೆ ಬನ್ನಿ...
-ಧರಿತ್ರಿ

Chevar said...

ಒಂಟಿತನದ ಬರಹ ಇಷ್ಟವಾಯಿತು.ಧರಿತ್ರಿ ಆರಂಭದಿಂದಲೇ ಸಂಚಲನದ ಮೋಡಿ ಮಾಡಿದೆ.ಕರಾವಳಿಯವರೆಂದು ತಿಳಿದು ಸಂತಸ ಆಯಿತು.ಆಂಡ ಈರೆನ ಊರುದ ಬಗ್ಗೆ ದಾಲಾ ಮಾಹಿತಿ ಇಜ್ಜಿ.ಒಂಚೂರು ತೆರಿಪಾವರಾ?
-ಚೇವಾರ್

ಧರಿತ್ರಿ said...

ಧರಿತ್ರಿಗೆ ಪ್ರತಿಕ್ರಿಯೆ ಮಾಡಿದ್ದಕ್ಕೆ ಧನ್ಯವಾದಗಳು ಚೇವಾರ್
ಹೀಗೇ ಬರುತ್ತಿರಿ,...
ಊರುದ ಪುದರ್...ಪಂಡ್ ದ್ ದಾದವೋಡು...ನನ ಒರ ಪನ್ಕಾ.
ಸೊಲ್ಮೆಲು
-ಧರಿತ್ರಿ

ಗಿರೀಶ್ ರಾವ್, ಎಚ್ (ಜೋಗಿ) said...

dear Dharithri,

You write crisp and warm. But remember,
1. loneliness is a bliss.
2. You are less alone, when you are alone.

-jogi

ಧರಿತ್ರಿ said...

ಜೋಗಿ ಸರ್..ನಮಸ್ತೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್. ಆಗಾಗ ಬರುತ್ತಿರಿ, ಬೆನ್ನು ತಟ್ಟುತ್ತೀರಿ. ನಂಗ್ಯಾಕೋ ಈ ಒಂಟಿತನ, ಏಕಾಂಗಿತನ ತೀರ ಬೋರ್ ಅನಿಸಿಬಿಡುತ್ತೆ ಸರ್.
-ಧರಿತ್ರಿ

ಅಂತರ್ವಾಣಿ said...

ಧರಿತ್ರಿ,

ನಿಮ್ಮ ಮೊದಲ ಲೇಖನದಲ್ಲೇ ತೋರಿಸಿದ್ದೀರಿ ಎಂತಹ ಬರಹಗಾರ್ತಿ ಅಂತ. ಮುಂದುವರೆಸಿ.

ಕೆಲವು ಸಂದರ್ಭಗಳಲ್ಲಿ ಒಂಟಿತನದ ಅವಶ್ಯಕತೆ ಬೇಕಿರುತ್ತದೆ ನಮಗೆ. ಆದರೆ ಸದಾ ಅಲ್ಲ ಅಂತ ನನ್ನ ಅಭಿಪ್ರಾಯ.

ಶಿವಪ್ರಕಾಶ್ said...

ಧರಿತ್ರಿ ಅವರೇ,
ನನಗೆ ಒಂಟಿತನವೂ ಇಷ್ಟ..
ಯಾಕೆಂದರೆ ನಾನು ಒಂಟಿಯಾಗಿರುವಾಗಲೇ ತಾನೇ ಸಮಯ ಸಿಗೋದು, ನನ್ನ ನೆನಪಿನ ಪುಟವನೊಮ್ಮೆ ತಿರುಗಿ ನೋಡಲು...
ನೆನಪುಗಳು ತುಂಬಿರಲು ಇ ಮನದಲಿ, ನಾ ಹೇಗೆ ಒಂಟಿಯಾಗಿರಲು ಸಾಧ್ಯ ?
ಹಾಗೆಂದ ಮಾತ್ರಕ್ಕೆ ನಾ ಏಕಾಂಗಿಯಲ್ಲ....
ಎಲ್ಲರ ಜೊತೆ ಇರುವುದು ಕೂಡಾ ಬಹಳ ಇಷ್ಟ..

ಮಿಥುನ ಕೊಡೆತ್ತೂರು said...

ಕೆಲವೊಮ್ಮೆ ಒಂಟಿತನವೂ ಆಪ್ಯಾಯ

ಮಿಥುನ ಕೊಡೆತ್ತೂರು said...

ಕೆಲವೊಮ್ಮೆ ಒಂಟಿತನವೂ ಆಪ್ಯಾಯ

ಧರಿತ್ರಿ said...

@ಜಯಶಂಕರ್, ಶಿವಪ್ರಕಾಶ್, ಮಿಥುನ...ಪುರುಸೋತ್ತು ಮಾಡಿಕೊಂಡು ಧರಿತ್ರಿಯತ್ತ ಬಂದಿದ್ದಕ್ಕೆ ವಂದನೆಗಳು.ಯಾಕೋ ಬಹುತೇಕರಿಗೆ ಒಂಟಿತನ, ಏಕಾಂಗಿತನ ಿಷ್ಟಪಡುತ್ತಾರೆ..ಆದ್ರೆ ನಾ ನೋ....ನಂಗೆ ಎಲ್ರ ಜೊತೆಗೇ ನಲೀತಾ ಇರೋದೇ ಇಷ್ಟ
-ಪ್ರೀತಿಯಿಂದ,
ಧರಿತ್ರಿ

sunaath said...

ಧರಿತ್ರಿ,
ಇಷ್ಟು ಜನ ನಿಮ್ಮ ಜೊತೆಗಿದ್ದೀವಿ; ಹೇಗೆ ಒಂಟಿಯಾಗ್ತೀರಿ?
ಬರಹ ಭಾವಪೂರ್ಣವಾಗಿದೆ.

ಆಲಾಪಿನಿ said...

ಏನೇ ಮಾರಾಯ್ತಿ? ಒಂಟಿತನ ಅಂತೆಲ್ಲ ಮಾತಾಡ್ತಿದಿಯಾ.ಹಂಗೆಲ್ಲ ಅನ್ಬಾರದು. ಸರಿನಾ? ಗುಡ್‌ಗರ್ಲ್‌

Guruprasad said...

ಹಾಯ್ ಧರಿತ್ರಿ .
ತುಂಬ ಚೆನ್ನಾಗಿ ಇದೆ ನಿಮ್ಮ ಒಂಟಿ ತನದ ಲೇಖನ . ನೀವು ಹೇಳಿದ ಹಾಗೆ ಒಂಟಿತನ ಅನ್ನೋದು ನಿಜವಾಗ್ಲೂ ಬೋರ್, ಆದರೆ ಕೆಲವೊಮ್ಮೆ ತುಂಬ ಬೇಜಾರ್ ಆಗಿದ್ದಾಗ ಈ ಒಂಟಿತನವೇ ನಮಗೆ ಸಾಥ್ ಕೊಡೋದು ಅಲ್ವ.. ಹಾಗಂತ ಯಾವಾಗಲು ಒಂಟಿಯಾಗಿ ಇರೋಕೆ ಆಗೋಲ್ಲ. ಒಡಹುಟ್ಟಿದವರ ಜೊತೆಗಿನ ಒಡನಾಟ, ಗೆಳೆಯ ಗೆಳೆತಿಯರ ಜೊತೆಗಿನ ಓಡಾಟ ಎಲ್ಲವೂ ಬೇಕು,, ಹಾಗೆ ಕೆಲವೊಮ್ಮೆ ಒಂಟಿತನವೂ ನಮ್ಮ ಸಂಗಾತಿ ಆಗಿರುತ್ತೆ.. ಇದೆ ಅಲ್ವೇ life.

ಗುರು

sunaath said...

ಧರಿತ್ರಿ,
Bloggerಗಳ ದೊಡ್ಡ ಬಳಗವೇ ನಿಮ್ಮ ಜೊತೆಗಿರುವಾಗ, ಒಂಟಿತನ ಎಲ್ಲಿಯದು?

Rajesh Manjunath - ರಾಜೇಶ್ ಮಂಜುನಾಥ್ said...

ಧರಿತ್ರಿ,
ಒಂಟಿತನ ಮಿತವಾಗಿದ್ದರೆ ಅಬ್ಬ ಎಂದೆನಿಸಿ ಬಿಡುವಷ್ಟು ಸೊಗಸಂತೆ ಎಂದು ಎಲ್ಲೋ ಓದಿದ ನೆನಪು, ಅತಿಯಾದರೆ ಅಮೃತವು ವಿಷ.
ಬದುಕಿನ ಹಾದಿಯಲ್ಲಿ ಎಂದಿಗೂ ಒಂಟಿತನ ನಿನಗೇ ಎದುರಾಗದೆ ಇರಲಿ ಎಂಬುದೇ ನನ್ನ ಹಾರೈಕೆ ಕೂಡ, ಬರಹ ಮನಸ್ಸನ್ನು ತಾಕುತ್ತದೆ, ಮತ್ತೊಂದು ಕ್ಷಣ ಓದುಗನನ್ನು ನಿಲ್ಲಿಸಿ ಚಿಂತೆಗೆ ಹಚ್ಚಿ ಬಿಡುತ್ತದೆ.

shivu.k said...

ಧರಿತ್ರಿ,

ಒಂಟಿತನದ ಬಗ್ಗೆ ತುಂಬಾ ಒಳ್ಳೇ ಲೇಖನ....ಮನಮುಟ್ಟುತ್ತದೆ...

ಅದರೆ ನನಗಿಲ್ಲಿ ಒಂಟಿತನವನ್ನು "ಏಕಾಂತ " ಅಂದುಕೊಂಡರೆ, ಆ ರೀತಿ ಮೈಂಟ್ ಸೆಟ್ ಮಾಡಿಕೊಂಡರೆ....ಅದ್ಬುತವಾದುದನ್ನು ಸಾಧಿಸಬಹುದು ಅನ್ನಿಸುತ್ತೆ...

ಹೇಗೆಂದರೆ....ನಿನ್ನ ರೂಮಿನ....ಎಲ್ಲಾ ವಸ್ತುಗಳ ಜೊತೆ ಮಾತಾಡಿದರೆ...ಅವುಗಳನ್ನು ಹೇಗಿದೆಯೋ ಹಾಗೆ ಸ್ವೀಕರಿಸಿದರೆ...

ಕಿಚನ್ ಒಂದು ಆಂಗನವಾಡಿಯಂತೆ.. ಪಾತ್ರೆಗಳು ಅದರೊಳಗಿನ ನರ್ಸರಿ ಮಕ್ಕಳಂತೆ,
ಪುಸ್ತಕಗಳು ತಿದ್ದಿ, ತೀಡಿ ನಗಿಸೋ..ಆಳಿಸೋ ಗೆಳೆಯರಂತೆ, ಗೋದ್ರೆಜ್ ನಿನ್ನ ಎಲ್ಲಾ ಪ್ರೀತಿ ಪ್ರೇಮಗಳ, ಮತ್ತು ನಿನಗಾಗಿ ಕೂಡಿಡುವ ಅಮ್ಮನಂತೆ, ಟಿ.ವಿ ಕೊರೆಯುವ ತಮ್ಮನಂತೆ, ಬಾತ್ ರೂಂ ಪ್ರೀತಿಯಿಂದ ಮೈತೊಳೆಯುವ ಅಕ್ಕನಂತೆ, ಎದುರುಮನೆಯವರು ಹುಣ್ಣಿಮೆಯಂತೆ, ಅವರ ಮಗು ಬೋನಸ್ಸಾಗಿ ಬರುವ ಹಬ್ಬದಂತೆ....ಪಾರ್ಕಿನಲ್ಲಿ ಒಡಾಡುವಾಗ ನಿನಗಿಂತ ಎತ್ತರವಾದ ಮರಗಳು ಅಣ್ಣಂದಿರಂತೆ.....ಹೀಗೆ ಒಮ್ಮೆ ಯೋಚಿಸಿನೋಡು...! ನಿನಗೆ ಖಂಡಿತ ಒಂಟಿತನ ಕಾಡೋಲ್ಲ...ಅದಕ್ಕೆ ಬದಲಾಗಿ ನೀನೆ ಒಂದು ಅದ್ಬುತ ಲೇಖನವನ್ನೇ ಬರೆದುಬಿಡುತ್ತೀಯ.. ಬೇರೇನೋ ಸಾಧಿಸುತ್ತೀಯ..ಕೊನೇ ಪಕ್ಷ ಇವೆಲ್ಲವುಗಳ ಯಾವಾಗಲೂ ಸಂತೋಷದಿಂದ ಇರುತ್ತೀಯ....ಅಲ್ಲವೇ....ಹಾಗಂತ ಏಕಾಂತವೂ ಹೆಚ್ಚಾಗಿರಬಾರದು....ಅದು ಕೂಡ ಒಂದು ರಾತ್ರಿಯಷ್ಟೆ ಇರಬೇಕು ಮತ್ತೆ ಹಗಲಾಗಿ...ನಾವು ಎಲ್ಲರ ಜೊತೆ ಸೇರಿ..ಮಜಾ ಮಾಡಬೇಕು....ಇದು ಬೇಸರವಾದಾಗ ಮತ್ತೆ ರಾತ್ರಿ ಬೇಕು....ಈ ರೀತಿ ನನ್ನದು ಆಡ್ಡದಾರಿಯ ಹೆಡ್ಡನಂತ ಮಾತು ಏನಂತೀಯಾ.....

Greeshma said...

ಹೌದು, ಒಂಟಿ ಆಗಿರೋದು ಬೇಜಾರು.ಜನ ಬೇಕು ಜೊತೆಗೆ.ಆದರೆ ಯಾವಾಗಲೂ ಒಬ್ರಲ್ಲಾ ಒಬ್ರು ಇದ್ದರೂ ಕಿರಿ ಕಿರಿ.
ಆಗಾಗ ಒಂಟಿ ಆಗಿರೋದು ಒಳ್ಳೇದು. ನಮಗೆ ಅಂತ ಒಂದಿಷ್ಟು ಸಮಯ ಸಿಗಬೇಕು. ನೆನಪಿನ ಅಂಗಳದಲ್ಲಿ ಓಡಾಡೋಕೆ, ಕನಸು ಕಾಣೋಕೆ, ತಿದ್ದಿಕೊಳ್ಳೋಕೆ, ಬೆಳೆಯೋಕೆ , ಹಾಡೋಕೆ, ಕುಣಿಯೋಕೆ....

ಸುಧೇಶ್ ಶೆಟ್ಟಿ said...

ಧರಿತ್ರಿಯವರೇ...

ಎಷ್ಟು ಅಪ್ಯಾಯಮಾನವಾಗಿ ಬರೆದ್ದಿದ್ದೀರಾ... ನೀವು ಹೇಳಿದ್ದು ನಿಜ...

ಒ೦ಟಿತನವಿರಬಾರದು... ಏಕಾ೦ತವಿರಬೇಕು... ಏಕಾ೦ತಕ್ಕೂ ಒ೦ಟಿತನಕ್ಕೂ ಎಷ್ಟು ವ್ಯತ್ಯಾಸವಿದೆ ಅಲ್ವಾ?

ಇದೇ ರೀತಿ ಸು೦ದರ ಲೇಖನಗಳನ್ನು ಬರೆಯುತ್ತಿರಿ...

- ಅನುಭೂತಿ....

ಶಾಂತಲಾ ಭಂಡಿ (ಸನ್ನಿಧಿ) said...

ಧರಿತ್ರಿ ಅವರೆ...
ನಿಮ್ಮ ಬರಹಗಳು ಗರಿಗರಿಯಾಗಿ ಮನಕೆ ಬೆಚ್ಚನೆ ಎನಿಸುವ ಹಾಗೆ. ನನಗೆ ಈ ಒಂಟಿತನ ಅಂದರೆ, ಏಕಾಂಗಿಯಾಗಿರುವುದು ಹಲವುಬಾರಿ ತುಂಬ ಖುಷಿ. ಅದರಲ್ಲಿ ಪರಮಸುಖವಿದೆ ಎಂದು ನಂಬಿದವಳು ನಾನು. ಹಾಗೆಯೇ ಒಂಟಿತನದಲ್ಲಿ ಒಂಟಿತನದ ಸುಶ್ರಾವ್ಯವನಾಲಿಸುವುದು ಅತ್ಯಂತ ಸುಖ ಅಂದುಕೊಂಡಿದ್ದೇನೆ.
ಒಂಟಿತನವನ್ನು ನೀವು ದ್ವೇಷಿಸುತ್ತೇನೆ ಅನ್ನುತ್ತಲೇ ಅದನ್ನಿಲ್ಲಿ ಪ್ರೀತಿಸಿದ ಆ ಬಗೆ ತುಂಬ ಇಷ್ಟವಾಯಿತು. ನಿಮ್ಮ ಹೊಸ ಬ್ಲಾಗಿಗೆ ಶುಭಾಶಯಗಳು. ಬರೆಯುತ್ತಿರಿ.

ಧರಿತ್ರಿ said...

@ಸುನಾಥ್ ಸರ್..
ಹೌದು, ನಿಮ್ಮ ಪ್ರೀತಿ, ವಿಶ್ವಾಸ, ಪ್ರೋತ್ಸಾಹದ ಜೊತೆಗೆ ಬ್ಲಾಗರ್ ಗಳ ದೊಡ್ಡ ಗುಂಪೇ ನನ್ನ ಜೊತೆಗಿದೆ. ಅದಕ್ಕಾಗಿ ಧನ್ಯವಾದಗಳು.

@ಆಲಾಪಿನಿ, ರಾಜೇಶ್....ನಿನ್ನ ಪ್ರೀತಿಗೆ ನಾನೇನ ಕೊಡಲಿ? ಬರ್ತಾ ಇರು..

@ಗುರು, ಗ್ರೀಷ್ಮಾ..ಬರಹ ಮೆಚ್ಚಿದ್ದಕ್ಕೆ ತುಂಬಾ ಥ್ಯಾಂಕ್ಸ್. ಗ್ರೀಷ್ಮಾ...ನಿಮ್ಮ ಬರವಣಿಗೆ ಶೈಲಿಯೂ ಚೆನ್ನಾಗಿದೆ ಕಣ್ರೀ.

@ಸುಧೇಶ್..ಬರಹ ಓದಿದ್ದಕ್ಕೆ ಥ್ಯಾಂಕ್ಸ್ . ಮತ್ತೆ ಬನ್ನಿ..ನೀವೂ ಬರಿತಾ ಇರಿ.

@ಶಾಂತಲಾ ಮೇಡಂ..ನಮಸ್ಕಾರ.ಧರಿತ್ರಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ಒಂಟಿತನದಲ್ಲಿ ಕೆಲವೊಮ್ಮೆ ಸುಖ ಇದೆ ಅಂದುಕೊಂಡರೂ, ನಂಗೆ ಯಾಕೋ ತುಂಬಾ ಬೋರ್ ಅನಿಸುತ್ತೆ ಕಣ್ರೀ. ಇರಲಿ ನಿಮ್ಮೆಲ್ಲರ ಅಭಿಪ್ರಾಯದಂತೆ ಒಂಟಿತನವನ್ನೂ ಪ್ರೀತಿಸಾಕೆ ಕಲೀತೀನಿ.

ಇಂತೀ..
ಧರಿತ್ರಿ

ಧರಿತ್ರಿ said...

ಶಿವಣ್ಣ..ಎಷ್ಟೊಂದು ಚೆನ್ನಾಗಿ ಬರೆದಿದ್ದೀರಾ. ನಿಜವಾಗ್ಲೂ ಗ್ರೇಟ್. ಇವತ್ತೇ ಒಂಟಿತನವನ್ನು ನಾನೆಷ್ಟು ಪ್ರೀತಿಸ್ತೀನಿ ಗೊತ್ತಾ? ಎಂಬ ಶೀರ್ಷಿಕೆಯಲ್ಲಿ ಹೊಸ ಲೇಖನಕ್ಕೆ ರೆಡಿಯಾಗುತ್ತಿದ್ದೇನೆ. "ಕಿಚನ್ ಒಂದು ಆಂಗನವಾಡಿಯಂತೆ.. ಪಾತ್ರೆಗಳು ಅದರೊಳಗಿನ ನರ್ಸರಿ ಮಕ್ಕಳಂತೆ,
ಪುಸ್ತಕಗಳು ತಿದ್ದಿ, ತೀಡಿ ನಗಿಸೋ..ಆಳಿಸೋ ಗೆಳೆಯರಂತೆ, ಗೋದ್ರೆಜ್ ನಿನ್ನ ಎಲ್ಲಾ ಪ್ರೀತಿ ಪ್ರೇಮಗಳ, ಮತ್ತು ನಿನಗಾಗಿ ಕೂಡಿಡುವ ಅಮ್ಮನಂತೆ, ಟಿ.ವಿ ಕೊರೆಯುವ ತಮ್ಮನಂತೆ, ಬಾತ್ ರೂಂ ಪ್ರೀತಿಯಿಂದ ಮೈತೊಳೆಯುವ ಅಕ್ಕನಂತೆ, ಎದುರುಮನೆಯವರು ಹುಣ್ಣಿಮೆಯಂತೆ, ಅವರ ಮಗು ಬೋನಸ್ಸಾಗಿ ಬರುವ ಹಬ್ಬದಂತೆ....ಪಾರ್ಕಿನಲ್ಲಿ ಒಡಾಡುವಾಗ ನಿನಗಿಂತ ಎತ್ತರವಾದ ಮರಗಳು ಅಣ್ಣಂದಿರಂತೆ.....ಹೀಗೆ ಒಮ್ಮೆ ಯೋಚಿಸಿನೋಡು...! ನಿನಗೆ ಖಂಡಿತ ಒಂಟಿತನ ಕಾಡೋಲ್ಲ.." ಈ ಸಾಲುಗಳು ನನಗೆ ತುಂಬಾ ಇಷ್ಟವಾದುವು. ನಿಮ್ಮ ಹೆಡ್ಡನಂತೆ ಅಂತೆ ಅನಿಸಿಲ್ಲ..ಪ್ರೀತಿಯ ಅಣ್ಣನೊಬ್ಬ ಬಳಿಯಲ್ಲಿ ಕೂತು ತಂಗಿಗೆ ಸಾಂತ್ವಾನ ಹೇಳಿದಂತಾಯಿತು. ತುಂಬಾ ಥ್ಯಾಂಕ್ಸ್ ಅಣ್ಣ..ನೀವು ಮತ್ತು ಶಾಂತಲಾ ಮತ್ತೊಂದು ಲೇಖನಕ್ಕೆ ತಮ್ಮ ಪ್ರತಿಕ್ರಿಯೆ ಮೂಲಕ ಮುನ್ನುಡಿ ಬರೆದಿರಿ.
-ನಿಮ್ಮ
ಧರಿತ್ರಿ

ರಾಕೇಶ್ ಕುಮಾರ್ ಕಮ್ಮಜೆ said...

ಚೆನ್ನಾಗಿ ಬರೆಯುತ್ತಿದ್ದೀರಿ. ಖುಷಿ ಕೊಡುತ್ತವೆ ಬರಹಗಳು...

ರಾಕೇಶ್ ಕುಮಾರ್ ಕಮ್ಮಜೆ said...

ಚೆನ್ನಾಗಿ ಬರೆಯುತ್ತಿದ್ದೀರಿ. ಖುಷಿ ಕೊಡುತ್ತವೆ ಬರಹಗಳು...

Sudi said...

ನಿಜಾ ಹೇಳ್ಬೇಕಂದ್ರೆ ಈ ಜೀವನ ಬರೆ ಒಂಟಿತನದೆಡೆಯೇ ಕರೆದೊಯ್ಯುತ್ತೆ .... ನಿಮ್ಮ ಮೊದಲ ಲೇಖನ ಹೇಳುತ್ತೆ ಅದೆಷ್ಟು ಒಂಟಿತನದಲ್ಲಿ ಬೆಂದಿದ್ದೀರ ಅಂತಾ..
-ಸುಧಿ