Friday, April 17, 2009

ತುಂತುರು ಮಳೆಯಲ್ಲಿ ನೆನಪುಗಳ ಮೆರವಣಿಗೆ...

ತುಂತುರು ಮಳೆ! ಬೆಂಗಳೂರಿನ ನನ್ನ ಪುಟ್ಟ ಮನೆಯಂಗಳಕ್ಕೆ ವರುಣನ ಸ್ಪರ್ಶ. ನಾ ಹೊಸ ಮನೆಗೆ ಬಂದ ಮೇಲೆ ಇದೇ ಮೊದಲ ಬಾರಿಗೆ ಮಹಡಿ ಮನೆಯಲ್ಲಿ ಕುಳಿತು ತುಂತುರು ಮಳೆಯ ಹರ್ಷವನ್ನು ಸವಿದಿದ್ದೆ. ಅದೇನೋ ಖುಷಿ, ನಿತ್ಯ ಸೆಕೆಯಿಂದ ಮೈಯೆಲ್ಲಾ ಬೇಯುತ್ತಿದ್ದ ನನಗೆ ನಿನ್ನೆ ತಂಪು ಗಾಳಿಯ ಪುಳಕ. ಬೇಗನೆ ಅಡುಗೆ ಮಾಡಿ, ಸ್ನಾನ, ದೇವರಿಗೆ ದೀಪ ಹಚ್ಚಿ..ನನ್ನ ಪುಟ್ಟ ರೂಮಿನ ಕಿಟಕಿ ಬಳಿ ಕುಳಿತರೆ..ನಕ್ಷತ್ರಗಳೇ ಕಾಣದ ಕಪ್ಪನೆಯ ಆಗಸದಿಂದ ತುಂತುರು ಹನಿಗಳು ಜಿಟಿಯುತ್ತಿದ್ದವು. ಎದುರು ಮನೆಯ ಮಕ್ಕಳು ಟೆರೇಸ್ ಮೇಲೆ ಆಡಲು ಹೋಗುತ್ತಿದ್ದಂತೆ ಅವರಮ್ಮ ದೊಡ್ಡ ಸ್ವರದಿಂದ ಪುಟ್ಟ ಕಂದಮ್ಮಗಳಿಗೆ ಗದರುತ್ತಿದ್ದಳು. ಒಂದು ಕ್ಷಣ ಮಹಡಿ ಮೇಲಿಂದ ಕೆಳಗೆ ರಸ್ತೆಗಿಳಿದು..ಮಳೆಯಲ್ಲಿ ತೊಯ್ದು ಬಿಡೋಣ ಅನಿಸಿದ್ರೂ ಮನಸ್ಸೇಕೋ ಬೇಡ ಅಂದಿತ್ತು. ಬಾಗಿಲಲ್ಲಿ ನಿಂತು ಮಳೆಗೆ ಕೈ ಚಾಚಿ ಅಂಗೈಯಲ್ಲಿ ಆ ತುಂತುರು ಹನಿಗಳನ್ನು ಅಂಗೈಯಲ್ಲಿ ಹಿಡಿಯಹೊರಟರೆ. ಥತ್...! ಕೈಯಿಂದ ಜಾರಿಹೋಗಬೇಕೇ ಹನಿಗಳು...?!

ಬದುಕು ಏನಾದರೂ ಬಲುದೂರ ಹೋದರೂ
ಬರಲಾರದಿಂಥ ಬೇರೊಂದು ನೆನಪು
ಏನೆಲ್ಲಾ ಮರೆತರೂ ಯಾರೊಡನೆ ಬೆರೆತರೂ
ಮರುಕಳಿಸುತಿಹುದು ನೂರೊಂದು ನೆನಪು...
ಇಳೆಯಂಗಳದಲ್ಲಿ ಮಳೆರಾಯ ಕಲರವಗುಟ್ಟುತ್ತಿದ್ದರೆ, ನನ್ನೊಳಗಿನ ಭಾವಗಳು ಸರಿದು ಹೋದ ಬದುಕಿನ ಮಗ್ಗುಲಗಳನ್ನು ನೆನಪಿಸಿದವು. ಮಳೆ-ಮನ ಖುಷಿಯಲ್ಲಿ ನೆನಪುಗಳ ಮೆರವಣಿಗೆ, ಸಾಲು ಸಾಲು ನೆನಪುಗಳು..ಎದೆಯಲ್ಲಿ ಅಪ್ಪಿ ಬಚ್ಚಿಟ್ಟುಕೊಳ್ಳಲಾದಷ್ಟು! ಒಂದೆಡೆ ಕರೆಂಟ್ ಕಣ್ಣಾಮುಚ್ಚಾಲೆ..ಯಡಿಯೂರಪ್ಪ ಸರ್ಕಾರಕ್ಕೆ ಶಾಪ ಹಾಕುತ್ತಲೇ ಮೊಬೈಲ್ ಲೈಟ್ ಆನ್ ಮಾಡಿ ಹಾಗೇ ಖಾಲಿ ಹಾಳೆ ಮೇಲೆ ಗೀಚುತ್ತಿದ್ದೆ! ಅದೇ ನೆನಪುಗಳು...
ನಮ್ಮ ಹಳೆಮನೆ ಎದುರುಗಡೆ ಇದ್ದ ವಿಶಾಲವಾದ ಹಲಸಿನ ಮರ..ಅದರ ತುಂಬಾ ಹಲಸಿನಕಾಯಿಗಳ ಗೊಂಚಲು, ಊರಿನವರೆಲ್ಲಾ ಆ ಹಲಸಿನ ಹಣ್ಣುಗಳನ್ನು ಕೊಯ್ದು ತಂತಮ್ಮ ಮನೆಗೆ ಕೊಂಡೋಗುತ್ತಿದ್ದುದು, ನೆರೆಮನೆಯ ಗೋಪಾಲ ನಮ್ಮ ಕೆರೆಗೆ ಗಾಳ ಹಾಕಲು ಬರುತ್ತಿದ್ದು, ನಿತ್ಯ ನಮ್ಮನೆಗೆ ಬಂದು ಮದ್ದು ಅರೆದು ಕೊಡುತ್ತಿದ್ದ ಸೀತಮ್ಮಜ್ಜಿ, ಶೇಂದಿ ಇಳಿಸುತ್ತಿದ್ದ ನಮ್ಮಜ್ಜ ನಮಗೂ ಒಂದು ಚಮಚ ಶೇಂದಿ ಕುಡಿಸಿ ನಮ್ಮ ತಲೆಗೂ ಅಮಲಿನ ರುಚಿ ಹತ್ತಿಸಿದ್ದು, ಪಕ್ಕದ್ಮನೆ ಸೋಮುನ ಸೈಕಲ್ ಟಯರನ್ನೇ ಕದ್ದಿರುವ, ನನಗೆ ತಂದ ಡ್ರೆಸ್ ಗಳೇ ಬೇಕೆಂದು ರಚ್ಚೆ ಹಿಡಿಯುತ್ತಿದ್ದ ನನ್ನ ತಮ್ಮ, ಚಿಕ್ಕದಿರುವಾಗ ನಾನು ನೆರಳು ನೋಡಿದ್ರೆ ವಿಪರೀತ ಹೆದರಿಕೊಳ್ಳುತ್ತಿದ್ದುದು, ಸಂಸ್ಕೃತಿ-ಸದಾಚಾರಗಳಿಗೆ ಪ್ರೀತಿಯನ್ನೇ ಬಲಿಯಾಗಿಸಿದ ನಮ್ಮೂರಿನ ರಾಮು, ಮೂಲೆ ಸೇರಿದ ನನ್ನ ಪ್ರೀತಿಯ ರೇಡಿಯೋ.. ಹೀಗೆ ಸಾಲು ಸಾಲು ನೆನಪುಗಳು ಮನದ ಕದ ತಟ್ಟುತ್ತಿದ್ದವು. \ಕಳೆದು ಹೋದ ಗೆಳೆಯ/ಗೆಳತಿಯ ನೆನಪುಗಳು ಮಾತ್ರ ಯಾಕೋ ತುಂತುರು ಮಳೆಹನಿಯಂತೆ ಕಂಗಳಲ್ಲಿ ಜಿಟಿಯುತ್ತಿದ್ದವು..
ನಡುವೆ ನಮ್ಮ ಬಾವ ನೆನಪಾದ್ರು. ಆಗಿನ್ನೂ ನಾ ಸಣ್ಣ ಮಗು..ಅಮ್ಮನಷ್ಟೇ ಗೊತ್ತು. ನಮ್ಮನೆಯಿಂದ ಅತ್ತೆ ಮನೆಗೆ ಹೋಗಬೇಕಾದ್ರೆ ಕುಮಾರಧಾರ ನದಿ ದಾಟಿ ಹೋಗಬೇಕು. ರಸ್ತೆಗಳಿಲ್ಲ, ಬಸ್ಸು-ಜೀಪಿಗಳಿಲ್ಲ. ಬೇಸಿಗೆಯಲ್ಲಿ ಕುಮಾರಧಾರ ಬತ್ತಿಹೋಗುತ್ತೆ..ನದಿಯನ್ನು ಹಾಗೇ ದಾಟಬಹುದು..ಅಲ್ಲಿ ಜುಳು ಜುಳು ಸದ್ದುಗಳಿಲ್ಲ, ನೀರಿನ ಆರ್ಭಟದ ಹರಿವಿಲ್ಲ. ಅತ್ತೆ ಮನೆಗೆ ಹೋಗಬೇಕಾದ್ರೆ ಬಾವ ನನ್ನ ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದು. ಬೇಗ ದೊಡ್ಡವಳಾಗು ನಿನ್ನ ನಾನೇ ಮದುವೆ ಆಗ್ತೀನಿ ಅಂತ ನೆಂಟರೆದುರು ತಮಾಷೆ ಮಾಡುತ್ತಿದ್ದ ಬಾವ ಈಗ ಮೂರು ಮಕ್ಕಳ ತಂದೆಯಾಗಿದ್ದು ನೆನಪಾಗಿ ತುಂತುರು ಮಳೆಯನ್ನು ನೋಡುತ್ತಲೇ ನನ್ನಷ್ಟಕ್ಕೆ ನಕ್ಕುಬಿಟ್ಟಿದ್ದೆ. ಮೂರನೇ ಕ್ಲಾಸಿನಲ್ಲಿರುವಾಗ ನನ್ನ ಕಡ್ಡಿ ಕದ್ದ ಕುಶಲ, ಸುಮ್ ಸುಮ್ಮನೆ ಹೊಡೆಯುತ್ತಿದ್ದ ಬೇಬಿ ಟೀಚರ್, ಹೊಟ್ಟೆ ನೋವೆಂದು ಕ್ಲಾಸಿಗೆ ಚಕ್ಕರ್ ಹಾಕುತ್ತಿದ್ದ ಕುಸುಮಾಧರ, ಸ್ಟಡಿ ಪಿರೇಡಿನಲ್ಲಿ ಮಾತನಾಡಿದ್ದೇನೆಂದು ಹೆಸರು ಬರೆದು ಕೊಟ್ಟು ಹೆಡ್ ಮಾಸ್ತರ ಕೈಯಿಂದ ಪೆಟ್ಟು ತಿನ್ನಿಸಿದ ಕ್ಲಾಸ್ ಲೀಡರ್ ಸುಂದರ, ಊರ ಜಾತ್ರೆಯಿಂದ ಸಕ್ಕರೆ ಮೀಠಾಯಿ ತಂದುಕೊಡುತ್ತಿದ್ದ ಪ್ರಕಾಶ, ಮಂಗಳ ವಾರಪತ್ರಿಕೆ ಮಧ್ಯೆ ಪ್ರೇಮ ಪತ್ರ ಬರೆದು ಕಳಿಸಿದ ತರ್ಲೆ ಗೆಳೆಯ, ಡುಂಡಿರಾಜ್ ಕವನಗಳನ್ನು ಕ್ಲಾಸಿನಲ್ಲಿ ಹೇಳುತ್ತಾ, ತಾನೇ ಬರೆದಿದ್ದು ಎಂದು ಸುಳ್ಳು ಹೇಳುತ್ತಿದ್ದ ಹಾಸನದಿಂದ ಬಂದಿರುವ ಹಿಂದಿ ಮೇಷ್ಟ್ರು, ರಕ್ಷಾಬಂಧನ ದಿನದಂದು 60 ವರ್ಷದ ಗಣಪತಿ ಮೇಷ್ಟ್ರಿಗೆ ರಾಖಿ ಕಟ್ಟಿದ ಕ್ಲಾಸಿನ ಮಹಾ ಜೋಕರ್ ಸದಾನಂದ...ಹೀಗೆ ಮನದಲ್ಲಿ ನೆನಪುಗಳ ಮೆರವಣಿಗೆ. ಕಿಟಕಿಯಾಚೆ ಇಣುಕಿದರೆ ತುಂತುರು ಮಳೆ ಹುಯ್ಯುತ್ತಲೇ ಇತ್ತು...
ಏನೋ ಒಂದು ತೊರೆದ ಹಾಗೇ
ಯಾವುದೋ ಒಂದು ಪಡೆದ ಹಾಗೇ
ಅಮ್ಮನ ಮಡಿಲ ಅಪ್ಪಿದ ಹಾಗೆ
ಕಣ್ಣಂಚಿನಲ್ಲಿ ಕಣ್ಣೀರ ನೆನಪು......

ಫೋಟೋ: ಎನ್.ಕೆ.ಎಸ್.