"ನಿದ್ದೆ ಬಾರದ ಕಣ್ಣ ಮೇಲೆ ಕೈಯ ಮುಗಿವೆ, ಚುಂಬಿಸು ಒಮ್ಮೆ..." ಎಂಬ ಹಾಡನ್ನು ನಿನ್ನೆ ನೀ ಫೊನಿನಲ್ಲಿ ಉಲಿದಾಗ ಯಾಕೋ ನಾನೊಮ್ಮೆ ಮೌನಿಯಾದೆ. ನನ್ನ ಮೌನದ ಹಿಂದಿರುವ ಅನಂತ ಚುಂಬನವನ್ನು ನೀ ಕಾಣಲೇ ಇಲ್ಲ ಗೆಳತೀ, ಅಣು ಅಣುವಿನಲ್ಲಿ ದೇವರನ್ನ ಕಂಡ ನನಗೆ, ನನ್ನ ಹೃದಯದಲಿ ಮಾತ್ರ ನೀ ಯಾಕೆ ಆವರಿಸಿರುವೆಯೆಂದು ಇನ್ನೂ ತಿಳಿದಿಲ್ಲ. ಧಮನಿಗಳು ನಿನ್ನ ತಪೋವನದ ಸುತ್ತ ಹರಿಯುವ ಜೀವ ನದಿಗಳಂತೆ ಅನಿಸುತ್ತಿವೆ. ನೆನಪಾದಾಗಲೆಲ್ಲಾ ಹುಣ್ಣಿಮೆಯೆಂದೆನುವ ನೀ, ನನ್ನಂತರಂಗದಲಿರುವ ಅಮವಾಸ್ಯೆಯ ಕತ್ತಲೆಯ ಆಳವನ್ನರಿಯದೆಯೆ ಪ್ರೀತಿಸಿರುವೆ. ಚಂದಿರ ಸೂಸುವ ತಂಪನ್ನು ಮಾತ್ರ ಅನುಭವಿಸಿರುವ ನೀನು, ಮಂಜಿನಾವೃತವಾದ ನನ್ನಂತರಂಗದ ಚಳಿಯನ್ನು ಸಹಿಸುವೆಯಾ? ಹೇಳು ಗೆಳತೀ, ನನ್ನ ಮೌನವನ್ನೇ ನಿನ್ನೆದೆಯ ಸ್ವಾತಿ ಮುತ್ತಾಗಿಸಲು ಹೊರಟಿರುವ ನಿನಗೆ, ನನ್ನ ನಿಶೆ ತುಂಬಿದ ಜೀವನದ ಪರಿಚಯವಿದೆಯೇ?
ನಿನ್ನ ಹೃದಯದ ಏಳಗಲದಲ್ಲಿ ತಲೆಯಿಟ್ಟು ಮಲಗುವ ಅದೃಷ್ಟವಿಲ್ಲದವನು ನಾನು ಗೆಳತೀ. ದಾರಿಯಲಿ ಬಿದ್ದಾಗ ಎದ್ದು ನಿಲಿಸುವ ನಿನ್ನ ಪ್ರೀತಿಯ ಮುಂದೆ ನಾ ಕೈಕಟ್ಟಿ ನಿಂತಿರುವೆ, ನನಗೆ ಮಾತುಗಳಿಲ್ಲ, ಮೌನವಷ್ಟೇ ಗೊತ್ತು. ನೀ ಕೊಟ್ಟ ಅಮ್ಮನ ವಾತ್ಸಲ್ಯ, ಅಕ್ಕನ ಮಮತೆ, ಒಲವಿನ ಗೆಳತಿಯಾಗಿ ಅಕ್ಕರೆಯ ಜೀವನ ಪ್ರೀತಿಗೆ ನಾ ಋಣಿ ಎಂದಷ್ಟೇ ಹೇಳಬಲ್ಲೆ. ನನಗೆ ತಿರುಗಿ ಕೊಡಲು ನನ್ನ ಕೈಯಲ್ಲಿ ಬಂಗಾರದ ಮೂಗುತಿ ಇಲ್ಲ, ಮಲ್ಲಿಗೆಯ ಹಾಸಿಗೆಯಿಲ್ಲ, ಮೊಸರನ್ನದ ಕನಸೂ ಇಲ್ಲ. ನಿನ್ನ ಕನಸ ನನಸಾಗಿಸುವ ಕಸುಬೂ ಇಲ್ಲ. ಸಾಧ್ಯವಿಲ್ಲದ ಕನಸುಗಳ ಕಟ್ಟಿ ಒಂಟಿಯಾಗುವ ನಿನ್ನ, ಹತ್ತಿರದಿಂದ ಸಂತೈಸುವ ಅವಕಾಶವಿದ್ದರೂ, ಮತ್ತೆಲ್ಲಿ ನನ್ನ ಎದೆಗೊರಗಿ ಮತ್ತೊಂದು ಕನಸ ಕಾಣುವೆಯಾ ಎಂಬ ಭಯ ನನ್ನೊಳಗೆ ಆವರಿಸಿಬಿಟ್ಟಿದೆ. ನಿನ್ನ ಬಿಟ್ಟು ಬೇರೆ ಯಾರೇ ನನಗೆ ಬದುಕಿನಾಸರೆ ಆದರೂ ಒಂಟಿಯೆಂದು ನಾನರಿವೆ. ಒಂಟಿ ಜೀವನ ನನ್ನ ವಿಧಿ ಬರಹ ಅಂದುಕೊಳ್ಳುವೆ ಗೆಳತೀ. ಹೃದಯ ತುಂಬಾ ಆವರಿಸಿರುವ ನಿನ್ನ ಬಿಟ್ಟು ಒಂಟಿತನವನ್ನೂ ಪ್ರೀತಿಸಲು ನಾನೊಲ್ಲೆ ಗೆಳತೀ. 'ನನ್ನ ದುಃಖಕ್ಕೆ ಹೆಗಲಾಗೆಂದು' ನಾ ಹೇಳಲಿಲ್ಲ ನಿಜ. ಆದರೆ, ನಿನ್ನ ನೋಡಿದ ಮೇಲೆ, ನಿನ್ನ ಜೀವನ ಪ್ರೀತಿಯ ಕಂಡ ಮೇಲೆ ನಾ ಕಣ್ಣೀರಾಗಲಿಲ್ಲ. ಕತ್ತಲನ್ನು ಮೆಟ್ಟಿ ನಿಂತು ಬೆಳಕನ್ನು ಕಾಣುವ ಪಾಠ ಹೇಳಿದವಳು ನೀನು. ನೀನೂ ನನ್ನ ಪಾಲಿಗೊಂದು ಬೆಳಕಿನ ಗುರು ಅಲ್ವಾ?
ಬೇಸರಿಸದಿರು ಗೆಳತೀ...ನಿನ್ನ ಗುಲಾಬಿ ಹೃದಯದ ಕದ ತೆರೆದು ಒಮ್ಮೆ ಇಣುಕಿ ನೋಡು. ನಾ ನಲ್ಲೇ ನೆಲೆಸಿರುವೆ.
ನಿನ್ನ ಪ್ರೇಮದ ಪರಿಯ
ಇತಿ,
ನಿನ್ನವನು