Saturday, April 11, 2009

ನನಗೂ ಅಕ್ಕಾ ಇರ್ತಾ ಇದ್ರೆ..?!

ಹೌದು, ನಂಗೂ ಅಕ್ಕಾ ಇರಬೇಕಿತ್ತು....ಈ ಆಸೆ ಇಂದಲ್ಲ...ನಾನು ಚಡ್ಡಿ ಹಾಕೊಂಡು ತಿರುಗಾಡುವಾಗಲೇ ಇರ್ತಾ ಇತ್ತು. ಆವಾಗಲ್ಲೇ ಅಮ್ಮನ ಜೊತೆ ಜಗಳ ಆಡ್ತಿದ್ದೆ. ಪಕ್ಕದ್ಮನೆ ಜಗ್ಗಣ್ಣನಿಗೆ ಯಶೋಧಕ್ಕ ಇದ್ದಾಳೆ..ನಂಗ್ಯಾಕೆ ಅಕ್ಕ ಇಲ್ಲ ಅನ್ತಾ ಇದ್ದೆ. ಆ ಪಕ್ಕದ್ಮನೆ ಯಶೋಧಕ್ಕ ಯಾವಾಗಲೂ ನಮ್ಮನೆಗೆ ಆಡಕೆ ಬರೋಳು...ಅವರು ಐದು ಜನ ಮಕ್ಕಳು. ಯಶೋಧಕ್ಕ ಎಲ್ಲರಿಗೂ ದೊಡ್ಡಕ್ಕ. ಹಾಗೇ ನಮಗೂ ದೊಡ್ಡ ಯಶೋಧಕ್ಕ. ಅವಳ ತಮ್ಮ-ತಂಗಿಯರನ್ನೆಲ್ಲಾ ಅವಳೇ ನೋಡಿಕೊಳ್ಳುತ್ತಿದ್ದಳು. ಅವರನ್ನು ಸ್ನಾನ ಮಾಡಿಸುವುದು, ಶಾಲೆಗೆ ಹೊರಡಿಸೋದು, ಅವಳೂ ಗಡಿಬಿಡಿಯಿಂದ ಶಾಲೆಗೆ ಹೊರಡೋದು....ಒಟ್ಟಿನಲ್ಲಿ ಅವಳದು ಮನೆಮಂದಿಯ ಉಸ್ತುವಾರಿ. ಆವಾಗೆಲ್ಲ ನಾನು ಅಮ್ಮಂಗೆ ಹೇಳ್ತಾ ಇದ್ದೆ..ಅಮ್ಮ ನಂಗೂ ಅಕ್ಕ ಇರ್ತಾ ಇದ್ರೆ...ನನ್ನ ಸ್ನಾನ ಮಾಡಿಸುವ, ನನಗೆ ಲಂಗ-ಧಾವಣಿ ತೊಡಿಸುವ ಕೂದಲು ಬಾಚಿ ಜಡೆ ಹೆಣೆದು ಮಲ್ಲಿಗೆ ಮುಡಿಸುವ, ಹಣೆಗೆ ಬೊಟ್ಟು ಇಡುವ, ದೇವರೆದುರು ದೀಪ ಹಚ್ಚಿ ದೇವರಿಗೆ ಅಡ್ಡ ಬೀಳು ಎಂದು ಆದೇಶಿಸುವ, ಜಾತ್ರೆಗೆ ಕರೆದುಕೊಂಡು ಹೋಗಿ ಮೀಠಾಯಿ ಕೊಡಿಸುವ, ಸುಮ್ ಸುಮ್ನೆ ಅತ್ತಾಗ ಮುದ್ದು ಮಾಡುವ, ಪಪ್ಪಿ ಕೊಡಿಸುವ ಅಕ್ಕಾ ನಂಗೂ ಬೇಕಿತ್ತು ಎಂದು.

ನಿಜಕ್ಕೂ ಅಕ್ಕಾ ಇದ್ರೆ...ಅಮ್ಮನ ಅರ್ಧ ಜವಾಬ್ದಾರಿ ಇಳಿದಂತೆ. ಅದ್ರಲ್ಲೂ ಹುಡುಗೀಯರಿಗೆ ಅಕ್ಕಾ ಇರ್ಬೇಕು. ಅಮ್ಮನತ್ರ , ಸ್ನೇಹಿತರತ್ರ ಹೇಳಿಕೊಳ್ಳಲಾಗದ ಎಷ್ಟೋ ಬದುಕು-ಭಾವಗಳಿಗೆ ಅಕ್ಕಾ ಕಿವಿಯಾಗಬಹುದು. ಮನೆಯಲ್ಲಿ ಹೇಳಲಾಗದ ಯಾವುದೇ ವಿಚಾರವನ್ನು ಅಕ್ಕನ ಕಿವಿಗೆ ಹಾಕಿಬಿಟ್ಟು..ಅಕ್ಕನ ಹಿಂದೆ ನಿಂತು ನಾವು ಕಿವಿಯಾಗಬಹುದು. ಅಷ್ಟೇ ಅಲ್ಲ, ಮತ್ತೆ ಅಕ್ಕ ತೊಡುತ್ತಿದ್ದ ರಾಶಿ ರಾಶಿ ಬಟ್ಟೆಗಳು ತಂಗಿಯ ಪಾಲಿಗದು ಲಾಭವೇ. ನಾನು ಸಣ್ಣವಳಿರುವಾಗ ನಮ್ಮ ಕ್ಲಾಸಿನ ಕೆಲವು ಹುಡುಗಿಯರು ದಿನಕ್ಕೊಂದು ಬಟ್ಟೆ ಹಾಕೋರು...ಹೊಸತಾ? ಅಂದ್ರೆ ಅದು ಅಕ್ಕಂದು..ಅಕ್ಕನಿಗೆ ಆ ಡ್ರೆಸ್ ಆಗಲ್ಲ..ಅದಕ್ಕೆ ನಂಗೆ ಕೊಟ್ಟಳು ಅನ್ತಾ ಇದ್ರು. ಅಕ್ಕನ ಒಡವೆಗಳನ್ನೆಲ್ಲಾ ಮೈ ತುಂಬಾ ಹಾಕೊಂಡು ಮಿಂಚೋ ಹುಡುಗಿಯರು ಇನ್ನೊಂದೆಡೆ. ಆವಾಗೆಲ್ಲಾ ಛೇ! ನಂಗೂ ಅಕ್ಕಾ ಇರ್ತಾ ಇದ್ರೆ...ಅಂಥ ತುಂಬಾ ಆಸೆಪಟ್ಟಿದ್ದೆ. ಆಮೇಲೆ ಅಕ್ಕನಿಗೆ ಮದುವೆ ಏನಾದ್ರೂ ಇದ್ರೆ..ಮದುವೆ ಮನೆಯಲ್ಲಿ ಮದುವೆ ಬಂದವರ ಕುತೂಹಲವೆಲ್ಲಾ ತಂಗಿ ಮೇಲೆ. ಅದ್ಯಾಕೋ ಗೊತ್ತಿಲ್ಲ...ನಾನು ಹುಟ್ಟಿದಂದಿನಿಂದ ಒಂದೆರಡು ಮದುವೆಗೆ ಹೋಗಿದ್ದೇನೆ. ಅಕ್ಕನಿಗೆ ಮದುವೆ...ಆದ್ರೆ ಮದುಮಗಳಿಗಿಂತ ತಂಗಿಯನ್ನೇ ಜಾಸ್ತಿ ಸಿಂಗಾರ ಮಾಡಿರ್ತಾರೆ. ಅವಳಿಗೂ ಅಕ್ಕನಂತೆ ಸಿಂಗರಿಸಿ ಸೀರೆ ಉಡಿಸ್ತಾರೆ. ಮತ್ತೆ ಎಲ್ಲಿ ಹೋದ್ರೂ ಹಣ್ಣು ಹಣ್ಣು ಅಜ್ಜ-ಅಜ್ಜಿಯರು ಕೂಡ ಮದುಮಗಳನ್ನು ಕೇಳೋ ಬದಲು ವಧುವಿನ ತಂಗಿ ಎಲ್ಲಿ ಅಂತ ಕೇಳ್ತಾರೆ. ನಂಗಿದು ಅಚ್ಚರಿಯಾಗುತ್ತಿತ್ತು. ಮುಂದಿನ ಟಿಕೆಟ್ ತಂಗಿಗೆ ಅಂತಾನೋ? ಯಾಕೋಪ್ಪಾ? ನನಗೂ ಅಕ್ಕಾ ಇರ್ತಾ ಇದ್ರೆ...ನಾನೂ ಅಕ್ಕನ ಮದುವೆಯಲ್ಲಿ 'ಮದುಮಗಳು' ಆಗುತ್ತಿದೆಯಲ್ಲಾ ..ಅಂತ ಅಂದುಕೊಳ್ಳುತ್ತಿದ್ದೆ.

ನಮ್ಮ ದೊಡ್ಡಮ್ಮನ ಮಗಳು ಒಬ್ಳು ಅಕ್ಕ ಇದ್ಳು. ಆದರೆ ಅವರ ಮನೆ-ನಮ್ಮನೆ ತುಂಬಾ ದೂರ. ಅವಳು ಮದುವೆ ಆಗೋಕೆ ಮೊದಲು ನಮ್ಮನೆಯಲ್ಲಿದ್ದುಕೊಂಡು ನಂಗೆ ಊಟ ಮಾಡಿಸೋದು, ಲಾಲಿ ಹಾಡುತ್ತಿದ್ದಳಂತೆ. ಆದರೆ ಅದೊಂದೂ ನಂಗೆ ನೆನಪಾಗುತ್ತಿಲ್ಲ. ಅವಳ ಮದುವೆ ಆದ ಮೇಲೆ ಅಂತೂ ಆ ಅಕ್ಕನಿಗೆ ಸಂಸಾರ, ಗಂಡ-ಮಕ್ಕಳು. ಮನೆ ಕಡೆ ಬರಲೂ ಪುರುಸೋತ್ತಿಲ್ಲ. ಇರಲಿ ಬಿಡಿ, ಬದುಕಂದ್ರೆ ಹಿಂಗೆ..ನನ್ನ ತುಂಬಾ ಪ್ರೀತಿ ಮಾಡೋ ಅಣ್ಣಂದಿರಿದ್ದಾರೆ, ತಂಗಿ, ತಮ್ಮಂದಿರೂ ಸಿಕ್ಕಿದ್ದಾರೆ. ಒಡಹುಟ್ಟಿದವರಲ್ಲದಿದ್ದರೂ ಒಡನಾಡಿಗಳಾಗಿದ್ದಾರೆ. ಆದರೆ ನನ್ನ ತುಂಬಾ ಪ್ರೀತಿಸುವ, ನಿತ್ಯ ಒಡನಾಡುವ, ನನ್ನ ಭಾವ-ಮಾತುಗಳಿಗೆ ಕಿವಿಯಾಗುವ, ನಿತ್ಯ ನನ್ನದೊಂದಿಗೆ ಹುಸಿಮುನಿಸು, ಪುಟ್ಟದಾಗಿ ಜಗಳ, ಕೋಪ ಆಡುವ, ನನಗೆ ಡ್ರೆಸ್ ಕೊಡಿಸುವ, ಬ್ಯಾಗ್ ಕೊಡಿಸುವ, ಮೆಹಂದಿಯಿಂದ ಅಂಗೈ ಅಲಂಕರಿಸುವ ಅಕ್ಕ ಸಿಕ್ಕೇ ಇಲ್ಲಾಂತ ಮನಸ್ಸು ನೋವಾಗುತ್ತೆ. ನಂಗೂ ಅಕ್ಕಾ ಬೇಕು ಅನಿಸುತ್ತೆ....ಛೇ! ನಾನೇ ಅಕ್ಕ ಆಗಿಬಿಟ್ಟಿದ್ದೀನಿ ಅಲ್ಲಾ...!!




22 comments:

ಮನಸು said...
This comment has been removed by the author.
Anonymous said...

ಅಕ್ಕ ಇದ್ದಿದ್ರೆ ಅಂತ ಅಕ್ಕಂದಿರೂ ಯೋಚಿಸುತ್ತಾರಾ?
ನಾನೂ ಒಂದೊಂದ್ ಸರ್ತಿ ಅಂದ್ಕೋತಿದ್ದೆ.
ಆದ್ರೆ ನಮಗೆ ಬೇಕು ಅಂತ ಅನ್ಸಿದ್ದೆಲ್ಲ ಸಿಗಲ್ಲ ಆಲ್ವಾ?

Mohan Hegade said...

ನಮಸ್ಕಾರ,
ಅಕ್ಕನ ಬಗ್ಗೆ ಚೆಂದದ ಮಾತು. ನಂಗೆ ಅಕ್ಕ, ತಂಗಿಯಾರಿಲ್ಲ. ಆದರೆ ಆಕಸ್ಮಿಕ ಪರಿಚಯ ತಂಗಿಯಾಗಿದ್ದು ಇದೆ. ಬರೆದ ಸಣ್ಣ ಪುಟದಲ್ಲಿಯೇ ಅಕ್ಕನ ಸ್ಥಾನ ಎಂಥದು ಎಂದು ಹೇಳಿದ್ದು ಅಮೋಘ. ಓದಿದ ಆ ಕ್ಷಣ ಒಮ್ಮೆ ಅಕ್ಕ ತಂಗಿ ಸಂಬಂದದ ಬಗ್ಗೆ ನೆನಪುಗಳು ಓಡುತ್ತೆ.
ದನ್ಯರಿ,

ಮನಸು said...

ಧರಿತ್ರಿ,
ನನ್ನ ಅಕ್ಕನ ನೆನಪು ಮಾಡಿಸಿಬಿಟ್ಟಿರಿ, ನನ್ಗೆ ಅಕ್ಕ ಅಂದರೆ ಅಮ್ಮನ ಸಮಾನ, ಸ್ನೇಹಿತೆ ಎಲ್ಲವು, ಎಲ್ಲ ವಿಷಯಗಳು ಅವಳಲ್ಲಿ ವಿನಿಮಯ, ಸಿಹಿ-ಕಹಿ ಮಾತುಗಳು ಏನೇ ಇದ್ದರು... ನಾನು ಈಗ ಅವಳಿಂದ ದೂರ ಇದ್ದೀನಿ ಈ ಅರಬಿ ನಾಡಲ್ಲಿ. ಅವಳ
ಸಿಹಿ ಮಾತು ಮನದಾಳದಲಿದೆ ಅವಳ ನೆನಪು ಹೃದಯದಾಳದಲಿದೆ..ಕೊನೆವರೆಗೂ ಅವಳ ಒಡನಾಟ ಬಯಸುತಿದೆ..
ನಿಮ್ಮ ಲೇಖನಿಗೆ ಹಾಗು ನಿಮಗೆ ತುಂಬು ಹೃದಯದ ಧನ್ಯವಾದಗಳು......ಕಣ್ಣಂಚಿನಲಿ ಹನಿ ಬಂದುಬಿಟ್ಟಿತು ನನ್ನಕ್ಕನ ನೆನೆದು. ಬರುವ ತಿಂಗಳು ಅವಳ ನೋಡುವ ತವಕದಲ್ಲಿದ್ದೇನೆ...

Guruprasad said...

ದರಿತ್ರಿ,
ನಮ್ಮ ಮನಸಿಗೆ ಅನ್ನಿಸದೇ ಇರೋದು ಯಾವುದು ಇದೆ ಹೇಳಿ ,, ಒಂದೊಂದು ಪರಿಸ್ಥಿತಿ ನಲ್ಲಿ ಒಂದೊಂದು ಬಗೆಯ ಬಯಕೆ ಬೇಡಿಕೆ ಇರುತ್ತೆ... ಆದರೆ ಏನ್ ಮಾಡೋದು,,, ನಾವು ಅಂದುಕೊಂದ್ದಿದ್ದೆಲ್ಲ ಸಿಗೋದಿಲ್ಲ ಅಲ್ವ ನಮ್ ಲೈಫ್ ನಲ್ಲಿ .... ಇದ್ದಿದ್ರಲ್ಲೇ enjoye ಮಾಡಿಕೊಂಡು ಹೋಗಬೇಕು ಅಸ್ಟೇ...
ಅಕ್ಕನ ಬಗ್ಗೆ ಲೇಖನ ತುಂಬ ಚೆನ್ನಾಗಿ ಇದೆ,, ಬರಿ ಹುಡುಗಿಯರಿಗೆ ಮಾತ್ರ ಅಲ್ಲ.. ಹುಡುಗರಿಗೂ ಅಕ್ಕ ಇದ್ದಾರೆ ಎಸ್ಟೋ ಚೆನ್ನಾಗಿ ಇರುತ್ತೆ,, ಬೇಕಾದ ಕಡೆ ತಿದ್ದಿ ತೀಡಿ ಬುದ್ದಿ ಹೇಳೋ ಅಕ್ಕ ನಮಗೂ ಬೇಕು ಅಂತ ಅನ್ನಿಸುದ್ದುಂಟು....
ಆದರೆ ನನ್ ಮಾತ್ರ ಈ ವಿಚಾರದಲ್ಲಿ unlucky .... ಯಾಕೆ ಅಂದ್ರೆ.. ನನ್ನ ಹಿಂದೆ ಮುಂದೆ ಯಾರು ಇಲ್ಲ... ಒಂಟಿ ಪಿಚಾಚಿ ಯಾಗಿ ಬೆಳೆದೆ.. ಕೆಲವೊಮ್ಮೆ ನಂಗು ಯಾರದ್ರು ಜೋತೆನಲ್ಲಿ ಇರಬೇಕಾಗಿತ್ತು ಅಂತ ಒಬ್ಬನೇ ಬೇಜಾರ್ ಮಾಡ್ಕೊಂಡ್ ಅತ್ತಿದೇನೆ ಸಹ.... ಮತ್ತೆ ಇದನ್ನು ನೆನಪಿಸಿದಿರಿ....ಥ್ಯಾಂಕ್ಸ್..... :-(
At last ಅಕ್ಕನ ಬಗ್ಗೆ ಹೇಳಿರುವ ಎಲ್ಲ ಜವಾಬ್ದಾರಿಯುತ comments ಚೆನ್ನಾಗಿದೇ.... Good ಹೀಗೆ ಮುಂದುವರಿಸಿ......

ಗುರು

ಮಲ್ಲಿಕಾರ್ಜುನ.ಡಿ.ಜಿ. said...

ಕಡೆಯ ವಾಕ್ಯ ಇಷ್ಟವಾಯ್ತು. ನಾನೇ ಅಕ್ಕನಾಗಿದ್ದೇನಲ್ವಾ? ಅಂತ. ಈಗ ಅಕ್ಕನಿಂದ ಬಯಸಿದ್ದೆಲ್ಲವನ್ನೂ ತಮ್ಮಂದಿರಿಗೆ ಕೊಡಿಸಬೇಕಲ್ವಾ? Good Luck.

ಶರಶ್ಚಂದ್ರ ಕಲ್ಮನೆ said...

ಧರಿತ್ರಿ,
ಎಲ್ಲರಿಗೂ ಜೀವನದ ಯಾವುದೊ ಒಂದು ಹಂತದಲ್ಲಿ ತನಗೆ ತಮ್ಮ, ಅಣ್ಣ, ಅಕ್ಕ, ಅಥವಾ ತಂಗಿ ಇರಬೇಕಿತ್ತು ಎಂದೆನಿಸುತ್ತದೆ. ಮನುಷ್ಯನ ಮನಸ್ಸೇ ಹೀಗೆ... "ಇರುವುದೆಲ್ಲವ ಬಿಟ್ಟು ಇರದದೆಡೆಗೆ ತುಡಿವುದೇ ಜೀವನ". ನಿಮ್ಮನ್ನು ಪ್ರೀತಿಸಲು, ಕಾಳಜಿಯಿಂದ ನೋಡಿಕೊಳ್ಳಲು, ನಿಮ್ಮನ್ನು ಮಿಸ್ ಮಾಡಿಕೊಳ್ಳುವವರನ್ನು ನೆನಸಿಕೊಂಡು ಇರದವರನ್ನು ಮರೆತುಬಿಡಿ :)

ಶರಶ್ಚಂದ್ರ ಕಲ್ಮನೆ

PARAANJAPE K.N. said...

ಧರಿತ್ರಿ,
ಅಕ್ಕ ಇರ್ತಾ ಇದ್ರೆ ಏನೇನು ಮಾಡುತ್ತಿದ್ದಳು ಅ೦ತ ಮನಸ್ಸಿನಲ್ಲಿಯೇ ಮ೦ಡಿಗೆ ಮೇಯುವ ಒ೦ದು ಆಪ್ತ ಬರಹದ ಮೂಲಕ ಓದುಗರು ಮರೆತು ಹೋಗಿರಬಹುದಾದ 'ಅಕ್ಕ' ನೆ೦ಬ ಅಕ್ಕರೆಯ ಜೀವವನ್ನು ಮತ್ತೆ ನೆನಪಿಸುವ೦ತೆ ಮಾಡಿದ್ದೀರಿ.ಚೆನ್ನಾಗಿದೆ.

Sushrutha Dodderi said...

ನಿಮ್ದೊಳ್ಳೇ ಕಥೆ! ನಂಗೆ ಅಕ್ಕ-ತಂಗಿ-ಅಣ್ಣ-ತಮ್ಮ ಯಾರೂ ಇಲ್ಲ. ನಾ ಎಲ್ಲಿಗ್ರೀ ಹೋಗ್ಲಿ? :x

ಗಿರಿ said...

Cool...

u have written very well about akka. Marvelous concepts r in the small article. Great style of writing..

thanks,
giri

ಶಿವಪ್ರಕಾಶ್ said...

ಧರಿತ್ರಿ ಅವರೇ,
ನನಗೆ ಅಕ್ಕ ಇಲ್ಲ, ಆದರೆ ನನಗೆ ಇದುವರೆಗೂ ಆ ಯೋಚನೆ ಬಂದಿಲ್ಲ. ಬರೋದು ಇಲ್ಲ ಅನ್ಸುತ್ತೆ.
ಆದ್ರೆ, ನನಗೆ ಒಬ್ಬ ತಮ್ಮ, ಒಬ್ಬ ತಂಗಿ ಇದಾಳೆ.
ನನಗೆ ನನ್ನ ತಮ್ಮ ಅಂದ್ರೆ ತುಂಬಾ ಇಷ್ಟ.
ಅವನು ನನಗೆ ಅಣ್ಣನ ಥರ.
ಎಲ್ಲರಂತಲ್ಲ ನನ್ನ ತಮ್ಮ... ಅವನ ಬಗ್ಗೆ ಒಂದು ಲೇಖನ ಬರೆದೆ ಹೇಳಬೇಕು :)

ಮುಂದಿನ ಜನ್ಮದಲ್ಲಿ ನಿಮಗೆ ಅಕ್ಕ ಸಿಗಲಿ... :)
ಒಳ್ಳೆಯ ಲೇಖನಕ್ಕೆ ಧನ್ಯವಾದಗಳು...

ಜಲನಯನ said...

ಧರಿತ್ರಿ, ಕೆಲವೊಂದು ಮನಸಿನಾಳದ ತುಮುಲಗಳು ಆಗಾಗ್ಗೆ ಕಾಡುತ್ತವೆಂಬುದು ಎಲ್ಲರಿಗೂ ಅನುಭವಕ್ಕೆ ಬಂದಿರುವ ವಿಷಯ. ಇದನ್ನು ಸರಳವಾಗಿ ಬ್ಲಾಗಿಸಿದ್ದೀರಿ. Nice.
ನನ್ನ ಮಗಳು (ಈಗ ಅವಳು ೯ ವಸಂತಗಳನ್ನು ಕಂಡಿದ್ದಾಳೆ) ಆಗಾಗ್ಗೆ ಕೇಳುತ್ತಿದ್ದಳು..ನನಗೆ ಅಕ್ಕನೋ...ಅಣ್ಣನೋ ಯಾಕಿಲ್ಲ ಅಂತ...? ಕುವೈಟಿನಲ್ಲಿ ಬಂದು ನೆಲಸಿದಮೇಲೆ ನನ್ನ ತಮ್ಮಂದಿರ, ತಂಗಿಯರ ಮತ್ತಿತರ ಸಂಬಂಧಿಗಳ ಮಕ್ಕಳ ಒಡನಾಟ ಇವಳಿಗೆ ಇಲ್ಲದಂತಾಗಿರುವುದರಿಂದ ಅವಳ ಅನ್ನಿಸಿಕೆ ಸಹಜವೆನಿಸಿತು. ಬದುಕಿನ ಅನಿವಾರ್ಯತೆಗಳ ಕಾರಣ ಕೊಡುವುದಕ್ಕೆ ಇದು ತಕ್ಕ ಸಮಯವಲ್ಲ ಮತ್ತು ಇದು ಅವಳಿಗೆ ಅರ್ಥೈಸುವ ವಯಸ್ಸೂ ಅಲ್ಲ ಅಂತ ಹೇಗೂ ವಿಷಯ ಮರೆಸುವಲ್ಲಿ ಈ ವರೆಗೂ ಸಫಲರಾಗಿದ್ದೇವೆ...ನಿಮ್ಮ ಬ್ಲಾಗಿನಲ್ಲಿ ತಿಳಿಸಿರುವಂತೆ ಮುಂದೊಂದು ದಿನ ಅವಳಿಗೂ ಹೀಗೆ ಅನಿಸಬಹುದು.....
ಮೆದುಳಿಗೆ ಒಳ್ಳೇ ಆಹಾರ....

ಧರಿತ್ರಿ said...

@ಪ್ರೀತಿಯ ಜ್ಯೋತಿ...ಬ್ಲಾಗ್ ಮೆಚ್ಚಿದ್ದಕ್ಕೆ ಧನ್ಯವಾದಗಳು. ಆಗಾಗ ಬರ್ತಾ ಇರಿ. ಹೌದು, 'ಬಯಸಿದ್ದೆಲ್ಲಾ ಸಿಗದು ಬಾಳಲಿ..."!

@ಮೋಹನ್ ಸರ್..ನಮಸ್ತೆ. ನನ್ನ ಪುಟ್ಟ ಲೇಖನವನ್ನು ಅಷ್ಟೇ ಖುಷಿಯಿಂದ ಓದಿ ಅಕ್ಕನ ಬಗ್ಗೆ ಮೆಲುಕು ಹಾಕಿದ್ದಕ್ಕೆ ಧನ್ಯವಾದಗಳು.

@ಮನಸ್ಸು...ಬರುವ ತಿಂಗಳು ಅಕ್ಕನ ನೋಡೋ ಕುತೂಹಲದಲ್ಲಿದ್ದೀರಾ?! ಭೇಷ್..ಅಕ್ಕ ಬಂದಾಗಿನ ಖುಷಿಯನ್ನು ಆಮೇಲೆ ಬ್ಲಾಗಿನಲ್ಲಿ ನಮಗೂ ಉಣಬಡಿಸಿ. ಧನ್ಯವಾದಗಳು.

@ಮಲ್ಲಿಯಣ್ಣ..ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ತಮ್ಮನಿಗೆ ಏನು ಬೇಕೋ ಅದನ್ನು ಕೊಡಿಸ್ತಾ ಇರ್ತೀನಿ. ನೀವೀಗ ತಂಗಿಗೆ ಪಾರ್ಟಿ ಕೊಡಿಸೋದು ಬಾಕಿ ಇದೆ. ಯಾವಾಗ ಕೊಡಿಸ್ರೀರಾ. ಮಾತು ತಪ್ಪಿದರೆ...?!

@ಶುಶ್ರುತಣ್ಣ..ಏನಪ್ಪಾ ನಿನ್ ಕಿರಿಕಿರಿ?! ಏನಾದ್ರೂ ಕೊಡಿಸೋದಿದ್ರೆ ನಂಗೆ ಕೊಡಿಸಿಬಿಡು. ಒಳ್ಳೆ ಅಣ್ಣ ಅಲ್ವಾ? ನೀನು

@ಪರಾಂಜಪೆಯಣ್ಣ..ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ನೀವೂ ಅಕ್ಕನನ್ನು ನೆನೆಸಿಕೊಂಡ್ರಾ?!

@ಗಿರಿ ಸರ್...ಧರಿತ್ರಿಗೆ ಸ್ವಾಗತ. ನೀವೂ ಅಕ್ಕನ ಬಗ್ಗೆ ಬರೆದ ಲೇಖನ ನಿನ್ನೆ ಓದಿದ್ದೆನೆ. ತುಂಬಾ ಚೆನ್ನಾಗಿತ್ತು. ನನ್ ತಮ್ಮನೂ ನಿಮ್ ಥರನೇ ನಂಗೆ ತಂದಿರೋ ಪೆಟ್ ಕೋಟ್ ಹಾಕ್ತಾ ಇದ್ದ.

ಎಲ್ಲರಿಗೂ ಧನ್ಯವಾದಗಳು.

-ಧರಿತ್ರಿ

ಧರಿತ್ರಿ said...

@ಗುರು ಸರ್..ಬರಹ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ನಿನ್ನ ಪ್ರತಿಕ್ರಿಯೆ ಓದುತ್ತಿದ್ದಂತೆ ಮತ್ತೆ ನೆನಪಾಯಿತು "ಏನಾದರೂ ಆಗಲೀ ಮುಂದೆ ಸಾಗು ನೀ..ಬಯಸಿದ್ದೆಲ್ಲಾ ಸಿಗದು ಬಾಳಲಿ" ಹೌದು, ನಾವು ಯಾವ ಸಂಬಂಧ ಬೇಕು ಅಂತ ಹಪಹಪಿಸುತ್ತೇವೋ ಅದು ಸಿಗಲ್ಲ. ಇದು ಜೀವನದ ನೈಜ ಮುಖವಲ್ಲವೇ? ಹಿಂದೆ-ಮುಂದೆ ಯಾರೂ ಇಲ್ಲ..ಒಂಟಿ ಪಿಶಾಚಿಯಾಗಿ ಬೆಳೆದೆ ಅಂದುಕೋಬೇಡಿ...ಯಾರೂ ಇಲ್ಲ ಎನ್ನುವ ಖಾಲಿ ಭಾವ ನಮ್ಮನ್ನು ಆವರಿಸಿಬಿಟ್ರೋ ಎಲ್ಲೋ ಯಾರೋ ನಮ್ಮ ಜೊತೆಗಿರ್ತಾರೆ. ಇರಲಿ ಬಿಡಿ, ನಾನೂ ನಿಮ್ಮ ಥರನೇ ಅಂದುಕೊಂಡು ಇಲ್ಲಿ ಬಂದು ಹಂಚಿಬಿಟ್ಟೆ..ಖುಷಿಯಾಗಿಬಿಡ್ತು...ಹಗುರಾಗಿಬಿಡ್ತು ಮನಸ್ಸು.

@ಶರತ್...ನೀವಂದಿದ್ದು ನಿಜ. ಆಗಾಗ ಬರ್ತಾ ಇರಿ.

@ಜಲನಯನ...ಬರಹ ಮೆಚ್ಚಿದ್ದಕ್ಕೆ, ಮಗಳ ಕುರಿತು ಒಂದಿಷ್ಟು ಹಂಚಿಕೊಂಡದ್ದಕ್ಕೆ ಧನ್ಯವಾದಗಳು. ಪುಟ್ಟ ಮಕ್ಕಳ ಪ್ರಶ್ನೆಗೆ ಉತ್ತರಿಸೋದು ಭಾಳ ಕಷ್ಟ ಅಲ್ಲವೇ?

@ಶಿವಪ್ರಕಾಶ್..ಎಲ್ಲರಂತಲ್ಲ ನಿಮ್ಮ ತಮ್ಮ ಅಂತ ಬೇಗನೇ ಬರೆಯಿರಿ..ಕಾಯ್ತಾ ಇರ್ತೀವಿ.

-ಧನ್ಯವಾದಗಳು.
ಧರಿತ್ರಿ

shivu.k said...

ಧರಿತ್ರಿ...

ಅಕ್ಕನ ಬಗ್ಗೆ ಒಂದು ಸುಂದರ ಭಾವಾನಾತ್ಮಕ ಲೇಖನ...

ತಮ್ಮನಾಗಿ ನನ್ನಕ್ಕನ ಜೊತೆ ಚೆನ್ನಾಗಿ enjoy ಮಾಡಿದ್ದೇನೆ....
ಮುಂದುವರಿಯಲಿ ಮತ್ತಷ್ಟು ಭಾವಾನಾತ್ಮಕ ಲೇಖನಗಳು...
ಶಿವು.ಕೆ ARPS.

ಗಿರಿ said...
This comment has been removed by a blog administrator.
Ittigecement said...

ಧರಿತ್ರಿ....

ನೀವು ಬಯಸುವಂಥ ಅಕ್ಕ ನನಗಿದ್ದಾರೆ...

ನಾನು ಬರೆದ
"ಮಿಲ್ತಿ.. ಹೈ.. ಜಿಂದಗೀ ಮೇ..
ಮೊಹಬ್ಬತ್ ಕಭೀ.. ಕಭೀ.. ಓದಿ"

ನನ್ನಕ್ಕ ಇಂದಿಗೂ ನನ್ನ ಬೆಸ್ತ್ ಫ಼್ರಿಎನ್ದ್, ಅಮ್ಮ.., ಎಲ್ಲವೂ ಹೌದು...

ಮತ್ತೆ ಅಕ್ಕನ ನೆನಪಿಸಿದ್ದಕ್ಕೆ
ಧನ್ಯವಾದಗಳು...

ಬದುಕಿನ ಬಾಂಧವ್ಯಗಳನ್ನು ನೆನಪಿಸಿ..
ಬೆಸೆಯುವ ಲೇಖನ...

ಖುಷಿಯಾಗುತ್ತದೆ ನಿಮ್ಮ ಬರಹಗಳು...

ವಿನುತ said...

ನನ್ನ ತ೦ಗಿಯರೂ ಹೀಗೆ ಅನ್ಕೊ೦ಡ್ರೆ ಸಾರ್ಥಕ ನನ್ನ ಬಾಳು.
ನಿಮ್ಮ ಕಥೆನೇ ನ೦ದೂ ಕೂಡ. ನನಗೂ ಅಕ್ಕ ಇದ್ದಿದ್ದರೆ? !

ಸಾಗರದಾಚೆಯ ಇಂಚರ said...

ಧರಿತ್ರಿ,
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಆಲ್ವಾ, ನಮಗೆ ಇಲ್ಲದೆ ಇದ್ದದ್ದು ಬೇಕು ಅನ್ನಿಸೋದು ಸಹಜ, ಅದೇ ಜೀವನದ ಸತ್ಯ ಕೂಡಾ. ಅದರಲ್ಲೇ ಬದುಕಬೇಕು, ನಿಮ್ಮ ಲೇಖನ ಮನ ಮುಟ್ಟುವಂತಿದೆ..

Rajesh Manjunath - ರಾಜೇಶ್ ಮಂಜುನಾಥ್ said...

ಧರಿತ್ರಿ,
ಅಕ್ಕ ಇದ್ದಿದ್ರೆ ಅಂತ ತುಂಬಾ ಸಾರಿ ಯೋಚಿಸಿದ್ದೇನೆ. ತಮ್ಮ-ತಂಗಿಯರಿಗೆ ಅಣ್ಣನಾಗಿ ನನ್ನ ಜವಬ್ದಾರಿ ಯೋಚಿಸಿದಾಗ ನನಗೊಬ್ಬಳು ಅಕ್ಕ ಇರಬೇಕಿತ್ತು ಅಂತ ಅನ್ಸುತ್ತೆ.

ಹರೀಶ ಮಾಂಬಾಡಿ said...

‘ಫಿಲ್ಟರ್’ :) ಇಲ್ಲದೇ ನೇರವಾಗಿ ನಿಮ್ಮ ಭಾವನೆಗಳನ್ನು ಹಂಚಿಕೊಂಡಿದ್ದೀರಿ.

ಇನ್ನು ಮುಂದಿನ ಜನರೇಶನ್ ಅಕ್ಕ, ಅಣ್ಣ, ತಮ್ಮ, ತಂಗಿ ಎಂಬ ಶಬ್ದಗಳನ್ನು ಬರೆಹರೂಪದಲ್ಲೇ ಕಾಣಬೇಕು... ಎಲ್ಲಾ ಮನೆಗಳಲ್ಲಿ ಒಂದು, ತಪ್ಪಿದರೆ ಎರಡಲ್ವಾ?

ಧರಿತ್ರಿ said...

@ಶಿವಣ್ಣ ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.

@ಪ್ರಕಾಶ್ ಸರ್..ಬರಹ ಮೆಚ್ಚಿ, ಮತ್ತೊಮ್ಮೆ ನಿಮ್ಮಕ್ಕನನ್ನು ನೆನೆಸಿಕೊಂಡಿದ್ದೀರಾ..ಧನ್ಯವಾದಗಳು. ಬರ್ತಾ ಇರಿ...ನಿಮ್ಮ ಬರಹ ಓದುವೆ. ಈ ಪ್ರೀತಿಯ ಸಂಬಂಧಗಳೇ ಹೀಗೇ ಅಲ್ವೇ?

@ವಿನುತ ನಮಸ್ತೆ..ಅಕ್ಕಾ ಬೇಕಿತ್ತು!! ಅಂತ ಅನಿಸುವಾಗ ಮನಸ್ಸು ಭಾರವಾಗುತ್ತೆ ಅಲ್ವೇ?

@ಗುರುಮೂರ್ತಿ ಸರ್..ನಿಮ್ಮ ಪ್ರೋತ್ಸಾಹ ಸದಾ ಇರಲಿ

@ರಾಜೇಶ್..ಆಗಾಗ ಬರ್ತಾ ಇರಿ. ಏನು ಮಾಡೋದು ಅಂದುಕೊಳ್ಳೋದು ಯಾವುದೂ ಸಿಗಲ್ಲ ಅಲ್ವಾ?

@ಹರೀಶ್ ಸರ್...ಧನ್ಯವಾದಗಳು.

-ಪ್ರೀತಿಯಿಂದ
ಧರಿತ್ರಿ