Saturday, April 11, 2009

ನನಗೂ ಅಕ್ಕಾ ಇರ್ತಾ ಇದ್ರೆ..?!

ಹೌದು, ನಂಗೂ ಅಕ್ಕಾ ಇರಬೇಕಿತ್ತು....ಈ ಆಸೆ ಇಂದಲ್ಲ...ನಾನು ಚಡ್ಡಿ ಹಾಕೊಂಡು ತಿರುಗಾಡುವಾಗಲೇ ಇರ್ತಾ ಇತ್ತು. ಆವಾಗಲ್ಲೇ ಅಮ್ಮನ ಜೊತೆ ಜಗಳ ಆಡ್ತಿದ್ದೆ. ಪಕ್ಕದ್ಮನೆ ಜಗ್ಗಣ್ಣನಿಗೆ ಯಶೋಧಕ್ಕ ಇದ್ದಾಳೆ..ನಂಗ್ಯಾಕೆ ಅಕ್ಕ ಇಲ್ಲ ಅನ್ತಾ ಇದ್ದೆ. ಆ ಪಕ್ಕದ್ಮನೆ ಯಶೋಧಕ್ಕ ಯಾವಾಗಲೂ ನಮ್ಮನೆಗೆ ಆಡಕೆ ಬರೋಳು...ಅವರು ಐದು ಜನ ಮಕ್ಕಳು. ಯಶೋಧಕ್ಕ ಎಲ್ಲರಿಗೂ ದೊಡ್ಡಕ್ಕ. ಹಾಗೇ ನಮಗೂ ದೊಡ್ಡ ಯಶೋಧಕ್ಕ. ಅವಳ ತಮ್ಮ-ತಂಗಿಯರನ್ನೆಲ್ಲಾ ಅವಳೇ ನೋಡಿಕೊಳ್ಳುತ್ತಿದ್ದಳು. ಅವರನ್ನು ಸ್ನಾನ ಮಾಡಿಸುವುದು, ಶಾಲೆಗೆ ಹೊರಡಿಸೋದು, ಅವಳೂ ಗಡಿಬಿಡಿಯಿಂದ ಶಾಲೆಗೆ ಹೊರಡೋದು....ಒಟ್ಟಿನಲ್ಲಿ ಅವಳದು ಮನೆಮಂದಿಯ ಉಸ್ತುವಾರಿ. ಆವಾಗೆಲ್ಲ ನಾನು ಅಮ್ಮಂಗೆ ಹೇಳ್ತಾ ಇದ್ದೆ..ಅಮ್ಮ ನಂಗೂ ಅಕ್ಕ ಇರ್ತಾ ಇದ್ರೆ...ನನ್ನ ಸ್ನಾನ ಮಾಡಿಸುವ, ನನಗೆ ಲಂಗ-ಧಾವಣಿ ತೊಡಿಸುವ ಕೂದಲು ಬಾಚಿ ಜಡೆ ಹೆಣೆದು ಮಲ್ಲಿಗೆ ಮುಡಿಸುವ, ಹಣೆಗೆ ಬೊಟ್ಟು ಇಡುವ, ದೇವರೆದುರು ದೀಪ ಹಚ್ಚಿ ದೇವರಿಗೆ ಅಡ್ಡ ಬೀಳು ಎಂದು ಆದೇಶಿಸುವ, ಜಾತ್ರೆಗೆ ಕರೆದುಕೊಂಡು ಹೋಗಿ ಮೀಠಾಯಿ ಕೊಡಿಸುವ, ಸುಮ್ ಸುಮ್ನೆ ಅತ್ತಾಗ ಮುದ್ದು ಮಾಡುವ, ಪಪ್ಪಿ ಕೊಡಿಸುವ ಅಕ್ಕಾ ನಂಗೂ ಬೇಕಿತ್ತು ಎಂದು.

ನಿಜಕ್ಕೂ ಅಕ್ಕಾ ಇದ್ರೆ...ಅಮ್ಮನ ಅರ್ಧ ಜವಾಬ್ದಾರಿ ಇಳಿದಂತೆ. ಅದ್ರಲ್ಲೂ ಹುಡುಗೀಯರಿಗೆ ಅಕ್ಕಾ ಇರ್ಬೇಕು. ಅಮ್ಮನತ್ರ , ಸ್ನೇಹಿತರತ್ರ ಹೇಳಿಕೊಳ್ಳಲಾಗದ ಎಷ್ಟೋ ಬದುಕು-ಭಾವಗಳಿಗೆ ಅಕ್ಕಾ ಕಿವಿಯಾಗಬಹುದು. ಮನೆಯಲ್ಲಿ ಹೇಳಲಾಗದ ಯಾವುದೇ ವಿಚಾರವನ್ನು ಅಕ್ಕನ ಕಿವಿಗೆ ಹಾಕಿಬಿಟ್ಟು..ಅಕ್ಕನ ಹಿಂದೆ ನಿಂತು ನಾವು ಕಿವಿಯಾಗಬಹುದು. ಅಷ್ಟೇ ಅಲ್ಲ, ಮತ್ತೆ ಅಕ್ಕ ತೊಡುತ್ತಿದ್ದ ರಾಶಿ ರಾಶಿ ಬಟ್ಟೆಗಳು ತಂಗಿಯ ಪಾಲಿಗದು ಲಾಭವೇ. ನಾನು ಸಣ್ಣವಳಿರುವಾಗ ನಮ್ಮ ಕ್ಲಾಸಿನ ಕೆಲವು ಹುಡುಗಿಯರು ದಿನಕ್ಕೊಂದು ಬಟ್ಟೆ ಹಾಕೋರು...ಹೊಸತಾ? ಅಂದ್ರೆ ಅದು ಅಕ್ಕಂದು..ಅಕ್ಕನಿಗೆ ಆ ಡ್ರೆಸ್ ಆಗಲ್ಲ..ಅದಕ್ಕೆ ನಂಗೆ ಕೊಟ್ಟಳು ಅನ್ತಾ ಇದ್ರು. ಅಕ್ಕನ ಒಡವೆಗಳನ್ನೆಲ್ಲಾ ಮೈ ತುಂಬಾ ಹಾಕೊಂಡು ಮಿಂಚೋ ಹುಡುಗಿಯರು ಇನ್ನೊಂದೆಡೆ. ಆವಾಗೆಲ್ಲಾ ಛೇ! ನಂಗೂ ಅಕ್ಕಾ ಇರ್ತಾ ಇದ್ರೆ...ಅಂಥ ತುಂಬಾ ಆಸೆಪಟ್ಟಿದ್ದೆ. ಆಮೇಲೆ ಅಕ್ಕನಿಗೆ ಮದುವೆ ಏನಾದ್ರೂ ಇದ್ರೆ..ಮದುವೆ ಮನೆಯಲ್ಲಿ ಮದುವೆ ಬಂದವರ ಕುತೂಹಲವೆಲ್ಲಾ ತಂಗಿ ಮೇಲೆ. ಅದ್ಯಾಕೋ ಗೊತ್ತಿಲ್ಲ...ನಾನು ಹುಟ್ಟಿದಂದಿನಿಂದ ಒಂದೆರಡು ಮದುವೆಗೆ ಹೋಗಿದ್ದೇನೆ. ಅಕ್ಕನಿಗೆ ಮದುವೆ...ಆದ್ರೆ ಮದುಮಗಳಿಗಿಂತ ತಂಗಿಯನ್ನೇ ಜಾಸ್ತಿ ಸಿಂಗಾರ ಮಾಡಿರ್ತಾರೆ. ಅವಳಿಗೂ ಅಕ್ಕನಂತೆ ಸಿಂಗರಿಸಿ ಸೀರೆ ಉಡಿಸ್ತಾರೆ. ಮತ್ತೆ ಎಲ್ಲಿ ಹೋದ್ರೂ ಹಣ್ಣು ಹಣ್ಣು ಅಜ್ಜ-ಅಜ್ಜಿಯರು ಕೂಡ ಮದುಮಗಳನ್ನು ಕೇಳೋ ಬದಲು ವಧುವಿನ ತಂಗಿ ಎಲ್ಲಿ ಅಂತ ಕೇಳ್ತಾರೆ. ನಂಗಿದು ಅಚ್ಚರಿಯಾಗುತ್ತಿತ್ತು. ಮುಂದಿನ ಟಿಕೆಟ್ ತಂಗಿಗೆ ಅಂತಾನೋ? ಯಾಕೋಪ್ಪಾ? ನನಗೂ ಅಕ್ಕಾ ಇರ್ತಾ ಇದ್ರೆ...ನಾನೂ ಅಕ್ಕನ ಮದುವೆಯಲ್ಲಿ 'ಮದುಮಗಳು' ಆಗುತ್ತಿದೆಯಲ್ಲಾ ..ಅಂತ ಅಂದುಕೊಳ್ಳುತ್ತಿದ್ದೆ.

ನಮ್ಮ ದೊಡ್ಡಮ್ಮನ ಮಗಳು ಒಬ್ಳು ಅಕ್ಕ ಇದ್ಳು. ಆದರೆ ಅವರ ಮನೆ-ನಮ್ಮನೆ ತುಂಬಾ ದೂರ. ಅವಳು ಮದುವೆ ಆಗೋಕೆ ಮೊದಲು ನಮ್ಮನೆಯಲ್ಲಿದ್ದುಕೊಂಡು ನಂಗೆ ಊಟ ಮಾಡಿಸೋದು, ಲಾಲಿ ಹಾಡುತ್ತಿದ್ದಳಂತೆ. ಆದರೆ ಅದೊಂದೂ ನಂಗೆ ನೆನಪಾಗುತ್ತಿಲ್ಲ. ಅವಳ ಮದುವೆ ಆದ ಮೇಲೆ ಅಂತೂ ಆ ಅಕ್ಕನಿಗೆ ಸಂಸಾರ, ಗಂಡ-ಮಕ್ಕಳು. ಮನೆ ಕಡೆ ಬರಲೂ ಪುರುಸೋತ್ತಿಲ್ಲ. ಇರಲಿ ಬಿಡಿ, ಬದುಕಂದ್ರೆ ಹಿಂಗೆ..ನನ್ನ ತುಂಬಾ ಪ್ರೀತಿ ಮಾಡೋ ಅಣ್ಣಂದಿರಿದ್ದಾರೆ, ತಂಗಿ, ತಮ್ಮಂದಿರೂ ಸಿಕ್ಕಿದ್ದಾರೆ. ಒಡಹುಟ್ಟಿದವರಲ್ಲದಿದ್ದರೂ ಒಡನಾಡಿಗಳಾಗಿದ್ದಾರೆ. ಆದರೆ ನನ್ನ ತುಂಬಾ ಪ್ರೀತಿಸುವ, ನಿತ್ಯ ಒಡನಾಡುವ, ನನ್ನ ಭಾವ-ಮಾತುಗಳಿಗೆ ಕಿವಿಯಾಗುವ, ನಿತ್ಯ ನನ್ನದೊಂದಿಗೆ ಹುಸಿಮುನಿಸು, ಪುಟ್ಟದಾಗಿ ಜಗಳ, ಕೋಪ ಆಡುವ, ನನಗೆ ಡ್ರೆಸ್ ಕೊಡಿಸುವ, ಬ್ಯಾಗ್ ಕೊಡಿಸುವ, ಮೆಹಂದಿಯಿಂದ ಅಂಗೈ ಅಲಂಕರಿಸುವ ಅಕ್ಕ ಸಿಕ್ಕೇ ಇಲ್ಲಾಂತ ಮನಸ್ಸು ನೋವಾಗುತ್ತೆ. ನಂಗೂ ಅಕ್ಕಾ ಬೇಕು ಅನಿಸುತ್ತೆ....ಛೇ! ನಾನೇ ಅಕ್ಕ ಆಗಿಬಿಟ್ಟಿದ್ದೀನಿ ಅಲ್ಲಾ...!!