ಇವತ್ತು ಎಂದಿನಂತೆ ಬೆಳಗು. ಕಿಟಕಿಯಾಚೆ ಇದ್ದ ಪಾರಿಜಾತ ಗಿಡದ ಮೇಲೆ ಸೂರ್ಯನ ಕಿರಣಗಳು ನಳನಳಿಸುತ್ತಿತ್ತು. ಅಮ್ಮ ಎದ್ದು ಬಾಗಿಲು ತೊಳೆದು ರಂಗೋಲಿ ಇಟ್ಟಿದ್ದಳು. ಹಾಲಿನ ಹುಡುಗ, ಪೇಪರ್ ಹುಡುಗ ಆರೂವರೆಗೇ ಬಾಗಿಲು ತಟ್ಟಿದ್ದರು. ಎದುರುಮನೆ ಪುಟಾಣಿ ಶಾಲೆಗೆ ಹೋಗೊಲ್ಲ ಎಂದು ರಚ್ಚೆ ಹಿಡಿಯುತ್ತಿದ್ದ. ಅವನಿಗೆ ಇವತ್ತು ಪ್ರಳಯ ಆಗುತ್ತೆ ಎನ್ನುವ ಭಯ. ವಾಕಿಂಗ್ ಹೋಗುತ್ತಿದ್ದ ಎಂಬತ್ತು ಮೀರಿದ ಅಜ್ಜ-ಅಜ್ಜಿಯರ ಮುಖದಲ್ಲಿ ಮಂದಹಾಸ. ಟೀವಿಯಲ್ಲಿ "ಪ್ರಳಯ ಠುಸ್' ಎಂಬ ಸುದ್ದಿ ದೊಡ್ಡದಾಗಿ ಕಾಣುತ್ತಿತ್ತು. ನೆನಪಿನ ಪೆಟ್ಟಿಗೆಯಲ್ಲಿ 14 ವರ್ಷಗಳ ಹಿಂದಿನ ಘಟನೆ ನಗು ತರಿಸುತ್ತಿತ್ತು.
ನಾನಾಗ ಎಂಟನೇ ತರಗತಿಯಲ್ಲಿ ಓದುತ್ತಿದ್ದೆ. ಆಗ ತರಂಗ ವಾರ ಪತ್ರಿಕೆ 'ಪ್ರಳಯ'ದ ಬಗ್ಗೆ ಮುಖಪುಟ ಸುದ್ದಿ ಮಾಡಿದ್ದು ನೆನಪು. ಶಾಲೆಯ ಹತ್ತಿರವಿದ್ದ ಸೂರಪ್ಪನ ಅಂಗಡಿಯಿಂದ ಆ ತರಂಗ ಖರೀದಿಸಿದ್ದೆ. ಅಕ್ಷರದರಿವು ಇಲ್ಲದ ಅಮ್ಮ ಏನಿರುತ್ತೆ ಪತ್ರಿಕೆಯಲ್ಲಿ ಎಂದು ಕೇಳಿದ್ದಳು. ಪ್ರಳಯ ಆಗುತ್ತೆ ಅಂತೆ...ಅದರ ಬಗ್ಗೆ ಇರುತ್ತೆ ಎಂದಿದ್ದೆ. ಅದನ್ನು ತೆಗೆದುಕೊಂಡಿದ್ದೆ ತಡ ಸರಿಯಾಗಿ ಪಾಠಗಳನ್ನೂ ಕೇಳದೆ ಪಾಠದ ಮಧ್ಯೆ ತರಂಗ ತಿರುವಿ ಹಾಕಿದ್ದೆ. ಹಿಂದಿ ಪಾಠ ಮಾಡುತ್ತಿದ್ದ ಕೊರಗಪ್ಪ ಮೇಷ್ಟ್ರು ಚೋಕ್ ಪೀಸ್ ತಕ್ಕೊಂಡು ನಿಂತಲ್ಲಿಂದಲೇ ನನ್ನ ತಲೆಗೆ ಚೋಕ್ ಪೀಸ್ ಬಿಸಾಡಿ ಕಿವಿಹಿಂಡಿದ್ದರು!. ಆ ದಿನ ಯಾರೂ ಸರಿಯಾಗಿ ಪಾಠ ಕೇಳಲಿಲ್ಲ. ಬರೀ ಪತ್ರಿಕೆ ಓದಿ ಪ್ರಳಯದ ಬಗ್ಗೆ ಮಾತಾಡುವುದು ಅಷ್ಟೇ ಕೆಲಸ. ಇನ್ನೂ ನೆನಪಿದೆ ಆ ಪತ್ರಿಕೆ ಮುಖಪುಟದಲ್ಲಿ ಗೋಳಾಕಾರದ ಭೂಮಿ ಯಾವುದೇ ಗ್ರಹಕ್ಕೆ ಬಡಿದಂತೆ ಅಚ್ಚರಿ, ಭಯವನ್ನು ಸೃಷ್ಟಿಸದ ಪೋಟೋ ಇತ್ತು. ಅದನ್ನು ನೋಡಿ ನೋಡಿ ನಾನು ಬೆವೆತಿದ್ದೆ.
ಮೂತ್ರ ಮಾಡಲೂ ಭಯವಾಗಿತ್ತು!
ಪ್ರಳಯ ಆಗುವ ದಿನ ನಾನು ಶಾಲೆಗೆ ಹೋಗುವುದಿಲ್ಲ ಎಂದು ನಿರ್ಧರಿಸಿದ್ದೆ. ಆ ದಿನ ಪೂರ್ತಿ ಅಮ್ಮನ ಬಳಿಯೇ ಇರಬೇಕು. ಅಮ್ಮನ ಬಿಟ್ಟು ಆ ಕಡೆ-ಈಕಡೆ ಹೋದಾಗ ಪ್ರಳಯ ಆಗಿಬಿಟ್ಟರೆ ನಾವೆಲ್ಲೋ..ಅಮ್ಮ ಎಲ್ಲೋ ಹೋಗಿಬಿಡ್ತಾಳೆ. ಅಂದು ಅಮ್ಮನ ಬಳಿ ಭರ್ಜರಿ ಅಡುಗೆ ಮಾಡಿಸಿಕೊಂಡು ತಿನ್ನಬೇಕು...ಹೀಗೆ ವಿವಿಧ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೆ. ಪತ್ರಿಕೆಯಲ್ಲಿ ಬಂದಿದ್ದ ಸುದ್ದಿಗಳನ್ನೆಲ್ಲಾ ಅಮ್ಮನಿಗೆ ಯಥಾವತ್ತಾಗಿ ಓದಿ ಹೇಳಿದ್ದೆ. ಆಕಾಶವಾಣಿ ಸುದ್ದಿಯಲ್ಲೂ ಪ್ರಳಯದ ಸುದ್ದಿಗಳು ಬರುತ್ತಿದ್ದವು. ನಮ್ಮ ವಿಜ್ಞಾನ ಮೇಷ್ಟ್ರು ಡಿಸೋಜಾ ಪ್ರಳಯ ಸುಳ್ಳು ಸುದ್ದಿ ಎಂದು ಹೇಳಿದ್ದು ಬಿಟ್ಟರೆ ಇನ್ನಾರು ಧೈರ್ಯ ಹೇಳಲೇ ಇಲ್ಲ.
ಅಂತೂ ಪ್ರಳಯದ ದಿನ ಬಂದೇ ಬಿಟ್ಟಿತ್ತು. ಅಮ್ಮ ರಾತ್ರಿ ಕೋಳಿ ರೊಟ್ಟಿ ಅಡುಗೆ ಮಾಡಿದ್ದಳು. ಭರ್ಜರಿಯಾಗಿ ತಿಂದು ನಾನು-ತಮ್ಮ ಮತ್ತೊಮ್ಮೆ ಪ್ರಳಯದ ಹೇಗಾಗಬಹುದೆಂದು ಊಹಿಸಿಕೊಂಡೆವು. ಪ್ರಳಯ ಆದಾಗ ನೀರೆಲ್ಲ ತುಂಬಿಕೊಂಡು ನಮ್ಮ ಮನೆ ನೀರ ಮೇಲೆ ತೇಲುತ್ತಿರಬಹುದು. ಆಗ ನಾವು ಅಮ್ಮನ ಗಟ್ಟಿಯಾಗಿ ಬಿಗಿಯಾಗಿ ಹಿಡಿದುಕೊಂಡಿರಬೇಕು. ಸಾಯುವಾಗ ಅಮ್ಮನ ಜೊತೆಯೇ ಸಾಯಬೇಕು ಎಂದು ಪರಸ್ಪರ ನಿರ್ಧರಿಸಿಕೊಂಡೆವು. ಅಮ್ಮ ಮಧ್ಯೆ ಮಲಗಿದ್ದಳು. ನಾನು ಮತ್ತು ತಮ್ಮ ಆ ಕಡೆ-ಈ ಕಡೆ ಅವಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಮಲಗಿದ್ದೆವು. ಅಮ್ಮ ಅವಿದ್ಯಾವಂತೆಯಾದರೂ ನಮ್ಮಿಬ್ಬರ ಭಯಕ್ಕೆ ನಗುತ್ತಿದ್ದಳು. ಅದೆಲ್ಲಾ ಸುಳ್ಳು ಎಂದು ಹೇಳುತ್ತಿದ್ದಳು. ಮಲಗಿರುವಾಗಲೇ ಪ್ರಳಯ ಆದ್ರೆ ಗೊತ್ತಾಗೋದಿಲ್ಲ ಅಂತ ನಮ್ಮಿಬ್ಬರ ಲೆಕ್ಜಾಚಾರ. ಆದ್ರೆ, ಮಧ್ಯರಾತ್ರಿ ತನಕ ನಿದ್ದೆನೇ ಬರಲಿಲ್ಲ. ರಾತ್ರಿ ನಮಗೆ ಮೂತ್ರ ಬಂದರೂ ಅಮ್ಮನ ಬಿಟ್ಟು ಎದ್ದು ಹೋಗಲು ಭಯವಾಗಿತ್ತು!.
ಅಂತೂ ಪ್ರಳಯ ಆಗಲೇ ಇಲ್ಲ. ಬೆಳಗಿನ ಐದರ ಹೊತ್ತಿಗೆ ಕೋಳಿ ಕೂಗಿತು. ಎಂದಿನಂತೆ ಸೂರ್ಯ ಬೆಳಗಿನೊಂದಿಗೆ ಸ್ವಾಗತಿಸಿದ್ದ. ನಾವಿಬ್ಬರೂ ಎದ್ದಾಗ ಅಮ್ಮ ರೊಟ್ಟಿ ತಟ್ಟುತ್ತಿದ್ದಳು.