ಇನ್ನೇನೋ ಎರಡು ವಾರ. ಯುಗಾದಿ ಬಂದಿದೆ. ಈ ಬಾರಿ ನನಗೆ ಡಬಲ್ ಖುಷಿ. ಏಕಂದ್ರೆ ಮಗ್ಳು ಮನೆಗೆ ಬರ್ತಾಳೆ. ನೀನು ಬಂದೇ ಬರ್ತಿ ಅನ್ನೋ ಗಟ್ಟಿ ಗ್ಯಾರಂಟಿ. ಕಳೆದ ಸಲ್ಸ ಆಫೀಸ್ ಕೆಲ್ಸದ ನೆಪ ಹೇಳಿ ತಪ್ಪಿಸಿಕೊಂಡಿದ್ದೆ. ಮುಂದಿನ ದೀಪಾವಳಿಗೂ ನೀನು ಬರಲೇ ಇಲ್ಲ. ಈ ಬಾರಿ ನಿನಗೆ ವಿನಾಯ್ತಿ ಇಲ್ಲ. ನೋಡು ಮಗಳೇ, ಈ ಬಾರಿ ನೀನು ಬರಲೇಬೇಕು. ಮನೆಯಲ್ಲಿ ಅಪ್ಪಿ ಕರು ಹಾಕಿದ್ದಾಳೆ.
ಹಾಗಾಗಿ, ಹಾಲು, ಮಜ್ಜಿಗೆ, ಮೊಸರಿಗೆ ಚಿಂತೆಯಿಲ್ಲ. ಕರು ತುಂಬಾ ಮುದ್ದಾಗಿದೆ. ಈಗ ತಿಂಗಳು ತುಂಬಿದೆ. ಅಪ್ಪಿ ದಿನಕ್ಕೆ ಮೂರು ಲೀಟರ್ ಹಾಲು ಕೊಡ್ತಾಳೆ. ಸಂಜೆ ಕರುವಿಗೆ ಹೆಚ್ಚು ಹಾಲು ಬಿಡ್ತೀನಿ. ಕರುವಿಗೆ ಅಮ್ಮಿ ಅಂದ ಹೆಸರಿಟ್ಟಿದ್ದೀನಿ. ಈ ಬಾರಿ ಅಪ್ಪಿ-ಅಮ್ಮಿಯ ಪೂಜೆನ ನಿನ್ನ ಕೈಯಿಂದಲೇ ಮಾಡಿಸ್ತೀನಿ. ಅದನ್ನು ನೋಡಿದಾಗ ನಿನ್ನ ಪ್ರೀತಿಯ ಅಕ್ಕತ್ತಿ ನೆನಪಾಗ್ತಾಳೆ. ಅಕ್ಕತ್ತಿನೂ ಹಾಗೇ ಮುದ್ದಾಗಿದ್ಳು, ನೀನು ಅವಳ ಜೊತೆಗೇ ಮಲಗೋಕೆ ರಚ್ಚೆ ಹಿಡಿಯುತ್ತಿದ್ದೆ.
ಮಗಳೇ, ನೀನು ಬರುವುದೇ ಬೆಟ್ಟದಷ್ಟು ಖುಷಿ ನನಗೆ. ನಾಲ್ಕು ದಿನ ರಜೆ ಹಾಕಿ ಬಂದುಬಿಡು.ಅಳಿಯನನ್ನೂ ಕರ‍್ಕೊಂಡು ಬಾ. ಬೇಸಿಗೆ ಬಂದ್ರೂ, ನಮ್ಮೂರಲ್ಲಿ ಸೆಖೆ ಇಲ್ಲ. ಬಾವಿ ತುಂಬಿಕೊಂಡಿದೆ. ಮನೆಯ ಅಂಗಳದಲ್ಲಿ ಇನ್ನೊಂದಷ್ಟು ಹೂಗಿಡಗಳನ್ನು ತಂದು ಹಾಕಿದ್ದೀನಿ. ಸೇವಂತಿಗೆ, ಗುಲಾಬಿ ಹೂವು ಬಿಟ್ಟಿದೆ. ವಾಪಸ್ ಹೋಗುವಾಗ ಮುಡಿತುಂಬಾ ಹೂವ ಮುಡ್ಕೊಂಡು ಹೋಗು. ಸಣ್ಣವಳಿರುವಾಗ ನಿನ್ನ ಉದ್ದದ ಜಡೆಗೆ ಅದೆಷ್ಟು ಹೂವು ಮುಡಿಸಿದ್ನೋ. ಈಗ ನಿನ್ನ ಚೋಟುದ್ದ ಜಡೆ ನೋಡುವಾಗ ಕೆಟ್ಟ ಸಿಟ್ಟು ಬಂದುಬಿಡುತ್ತೆ ನೋಡು. ಇರಲಿ ಬಿಡು, ನಿಮ್ಮ ಪ್ಯಾಟೆ ಸ್ಟೈಲು ನಿಂಗೆ.
ಮನೆ, ಹಟ್ಟಿ ಸ್ವಚ್ಛ ಮಾಡ್ಬೇಕು, ಅಟ್ಟದಲ್ಲಿ ವರ್ಷವಿಡೀ ತುಂಬಿದ ಕಸ...ಎಲ್ಲವನ್ನೂ ಸ್ವಚ್ಛಮಾಡ್ಬೇಕು. ಈಗ್ಲೇ ಕೆಲ್ಸಗಳು ಆರಂಭವಾಗಿದೆ. ಅಂಗಳಕ್ಕೆ ಸಗಣಿ ಸಾರೋಕೆ ಪಕ್ಕದ್ಮನೆಯ ಸೀತಕ್ಕ ಮೂರು ದಿನ ಮೊದಲೇ ಬರುತ್ತಾಳೆ. ನಿನ್ ತಮ್ಮಂಗೆ ಹೊಲ, ತೋಟದ ಕೆಲ್ಸ ವಹಿಸಿಬಿಟ್ಟಿದ್ದೀನಿ. ಅವನಿಗೆ ಒಂಚೂರು ಪುರುಸೋತ್ತು ಇಲ್ಲ. ಈ ಬಾರಿ ವಿಶೇಷ ಅಂದ್ರೆ ಸೊಸೆ ಮನೆಗೆ ಬಂದಿದ್ದಾಳೆ. ನನ್ನ ಕೆಲ್ಸಗಳಿಗೆ ಅವಳ ಸಾಥ್ ಇದ್ದೇ ಇದೆ.
ನಿಂಗೆ ಈಗ್ಲೆ ಎರಡು ರೇಷ್ಮೆ ಸೀರೆ ತಂದಿಟ್ಟಿದ್ದೀನಿ ಕಣೇ. ನೀನು ಬಿಳಿ ಬಣ್ಣಕ್ಕೆ ಒಪ್ಪುವ ಆಕಾಶ ನೀಲಿ ಹಾಗೂ ಹಸಿರು ಬಣ್ಣದ ಸೀರೆಗಳು. ಅದಕ್ಕೆ ಚಿನ್ನದ ಬಣ್ಣದ ಬಾರ್ಡರ್. ಮಿರಮಿರನೆ ಮಿನುಗುವ ಸೆರಗು. ನೀನು ಉಟ್ಟರೆ ಥೇಟ್ ಮದುಮಗಳಂತೆ ಕಾಣ್ತಿ ನೋಡು. ನೀನು ಮನೆಯಲ್ಲೇ ಆ ಸೀರೆ ಉಡ್ಬೇಕೆಂದು ರವಿಕೆ ಕೂಡ ಹೊಲಿಸಿಟ್ಟಿದ್ದೀನಿ. ಇನ್ನೊಂದು ಜೊತೆ ಚಿನ್ನದ ಬಳೆ ಮಾಡಿಟ್ಟಿದ್ದೀನಿ. ಬೇಗನೇ ಬಂದುಬಿಡು ಮಗಳೇ. ಜೊತೆಗೆ ನಿನಗೆ ಏನು ಬೇಕು ಅದೆಲ್ಲಾ ಮಾಡಿಟ್ಟಿದ್ದೀನಿ. ಕಳೆದ ವರ್ಷದ ಜೇನುತುಪ್ಪ, ಹಪ್ಪಳ, ಉಪ್ಪಿನಕಾಯಿ ಇನ್ನೂ ಹಾಗೇ ಇದೆ. ತಕ್ಕೊಂಡು ಹೋಗ್ತೀವಿಯಂತೆ. ಅಂದಹಾಗೆ, ಪತ್ರ ನೋಡಿ ಸಿಡಾಸಿಡಾ ಅನ್ಬೇಡ. ಈ ಬಾರಿ ನೀನು ಬರ‍್ಲೇಬೇಕು. ಮುಗಿಸ್ತೀನಿ, ಪತ್ರ ಬರಿ.
(ಫೋಟೋ: ಗೂಗಲ್‌ನಲ್ಲಿ ಹುಡುಕಿದಾಗ ಸಿಕ್ಕಿದ್ದು!!)
4 comments:
hogi baa tangi... amma astu preeti inda karitare. nice letter.. don;t miss this Ugadi ok.!!
ಚಿತ್ರಾ,
ನಿಮ್ಮ ಲೇಖನದಲ್ಲಿ ತಾಯಿಯ ಹೃದಯದ ಕರೆ ತುಂಬಿ ಹರಿದಿದೆ. ಈ ಯುಗಾದಿಗೆ ನೀವು ಎಲ್ಲಿ ಹೋಗುತ್ತೀರಿ ಎನ್ನುವದು ಗೊತ್ತಾಯ್ತು!
ಅಮ್ಮನ ಹಾರೈಕೆ ಆಶಯ...ಆಕಾಂಕ್ಷೆ...ಎಲ್ಲಾ...ಮಗಳು ತನ್ನಳಿಮಯ್ಯ ಬಂದಾಗ ಎಷ್ಟು ಸಂಭ್ರಮಪಡಬಹುದು ಅಂತ ನಾನು ಊಹಿಸಬಲ್ಲೆ...ಉಗಾದಿ ಶುಭಾಶಯಗಳು...
Chitra,
Sida Sida yaakri..?? eshtondu preetiya kareyole..:) Hogbanni..Yaanlaa yugadi timedu oorudulle...kudlag bale :)
Post a Comment