Thursday, March 8, 2012

ನೀನೆಷ್ಟು ಧೈರ್ಯವಂತೆ ಕಣಮ್ಮಾ?


ಅಮ್ಮ ಇವತ್ತು ನಿಂಗೆ ಪತ್ರ ಬರೀಲೇಬೇಕು. ಇಂದು ಮಹಿಳಾ ದಿನ. ಬೆಳಿಗೆದ್ದು ಟಿವಿ. ಪತ್ರಿಕೆಗಳನ್ನು ನೋಡಿದೆ. ಸಾಧಕಿ ಮಹಿಳೆಯರ ಗುಣಗಾನ. ಶೋಷಣೆಗಳ ಕಣ್ಣೀರು. ಆದರೆ, ನನಗೆ ನೆನಪಾಗಿದ್ದು ಇವೆಲ್ಲವುಗಳನ್ನು ಮೀರಿ ಬದುಕಿದ ನೀನು. ನನ್ನಮ್ಮ ಎಷ್ಟು ಒಳ್ಳೆಯವಳು, ನನ್ನಮ್ಮ ಎಷ್ಟು ಬುದ್ಧಿವಂತೆ, ಅಕ್ಷರಗಳ ಪರಿಚಯವಿಲ್ಲದಿದ್ದರೂ ಅದೆಷ್ಟು ಜ್ಞಾನವಂತೆ ನನ್ನಮ್ಮ ಅನಿಸ್ತು. ನಿನ್ನ ಬಗ್ಗೆ ಹೆಮ್ಮೆಯಿಂದ ಬೀಗಿದೆ. ಈಗ ನನಗೆ ನೀನಿಲ್ಲದ ಹೊತ್ತು. ಗಂಡನ ಜೊತೆಗೆ ಬದುಕು ಕಟ್ಟಿದ್ದೀನಿ. ಇದು ಪ್ರತಿ ಹೆಣ್ಣು ಮಗಳ ಜೀವನದ ಅನಿವಾರ್ಯತೆ.

ನನಗಿನ್ನೂ ನೆನಪಿದೆ ಅಮ್ಮ. ನನ್ನ ಕಲಿಕೆಗೆ ನೀನೆಷ್ಟು ಕಷ್ಟಪಟ್ಟೆ ಅಂತ. ಅಪ್ಪ ನಮ್ಮ ಬಿಟ್ಟುಹೋದ, ಅಜ್ಜ ಮನೆಯಿಂದಲೇ ಹೊರಹಾಕಿದ. ಒಪ್ಪೊತ್ತಿನ ಅನ್ನಕ್ಕೂ ಪರದಾಡುವ ಸಂದರ್ಭ. ಬರೀ ಬೀಡಿ ಸುರುಟಿ ನನ್ನ ಓದಿಸಿದೆ, ಡಿಗ್ರಿ ಕೊಡಿಸಿದೆ, ಕ್ಲಾಸಿನಲ್ಲಿ ಫಸ್ಟ್ ಬರುವಂತೆ ಮಾಡಿದೆ. ನಾನು ಸ್ಕೂಲಿಗೆ ಹೋಗುತ್ತಿದ್ದಾಗ ಪಕ್ಕದ್ಮನೆಯ ಗೌಡ್ರ ಮನೆಯ ಮಕ್ಕಳ ಬುತ್ತಿಯಲ್ಲಿದ್ದ ರೊಟ್ಟಿ ನನಗೂ ಬೇಕೆಂದು ರಚ್ಚೆ ಹಿಡಿದಾಗ ರೊಟ್ಟಿ ಮಾಡಿಕೊಟ್ಟೆ. ಗೌಡ್ರ ಮಗಳ ಹಕ್ಕಿಗಳ ಚಿತ್ರವಿರುವ ಬಣ್ಣದ ಬ್ಯಾಗ್ ಕೇಳಿದಾಗ ಅದನ್ನೂ ತಂದಿತ್ತೆ. ಮನೆಯಲ್ಲಿ ಓದಲು ಟೇಬಲ್, ಕುರ್ಚಿ ಬೇಕೆಂದಾಗ ಅದನ್ನೂ ಮಾಡಿಸಿಕೊಟ್ಟೆ. ರಜೆ ಕಳೆದು ಸ್ಕೂಲಿಗೆ ಕಳುಹಿಸುವಾಗ ಹೊಸ ಬಟ್ಟೆಗಳನ್ನು ತೊಡಿಸಿ ಶಾಲೆಗೆ ಕಳುಹಿಸಿದೆ. ವಾರದ ಕೊನೆಯಲ್ಲಿ ಐಸ್‌ಕ್ಯಾಂಡಿಗೆ ದುಡ್ಡು ಬೇಕೆಂದಾಗ ನಾಲ್ಕಾಣೆ ಕೊಡಲು ನೀನು ಮರೆಯಲಿಲ್ಲ.

ಪರೀಕ್ಷೆ ಮಾರ್ಕ್ಸ್ ಕಾರ್ಡಿಗೆ ಸೈನ್ ಹಾಕೋಕೆ ಹೇಳಿದಾಗ ಶಾಲೆಗೇ ಬಂದು ಹೆಬ್ಬೆಟ್ಟು ಒತ್ತಿದೆ. ಅರ್ಥವಾಗದನ್ನು ಮೇಷ್ಟ್ರ ಬಳಿ ಕೇಳಿ ತಿಳ್ಕೊಂಡೆ. ಸ್ಕೂಲ್ ಡೇ ದಿನ ನನ್ನ ಜೊತೆಗೆ ಬಂದು ವೇದಿಕೆ ಮುಂದೆ ಕುಳಿತೆ. ವೇದಿಕೆಯಲ್ಲಿ ಮಿಂಚುತ್ತಿದ್ದ ನನ್ನ ನೋಡಿ ಹೆಮ್ಮೆಪಟ್ಟೆ. ಬಹುಮಾನಗಳು ಸಿಕ್ಕಾಗ ಎದ್ದು ನಿಂತು ಚಪ್ಪಾಳೆ ತಟ್ಟಿದೆ. ಇನ್ನೂ ಒಂದು ತಮಾಷೆ ಎಂದರೆ, ಆರಂಭದಲ್ಲಿ ಸ್ಕೂಲ್‌ಗೆ ಹೋಗಲು ಭಯಪಡುತ್ತಿದ್ದ ನನ್ನ ಜೊತೆ ನೀನು ಸ್ಕೂಲ್‌ಗೆ ಬಂದು ಕೂರುತ್ತಿದ್ದಿ ಅಲ್ವಾ? ಎಂಥ ಒಳ್ಳೆಯ ಅಮ್ಮ ನೀನು?

ನನಗಿನ್ನೂ ನೆನಪಿದೆ ಅಮ್ಮ. ನಿನಗೆ ಓದು ಬರದಿದ್ದರೂ, ಚಿತ್ರಗಳನ್ನು ನೋಡಿಯೇ ಪಾಠ ಹೇಳುತ್ತಿದ್ದೆ. ಕಥೆ ಹೇಳುತ್ತಿದ್ದೆ.. ಅದ್ಹೆಂಗೇ ಮಗ್ಗಿ ಹೇಳುತ್ತಿದ್ದೆ ನನಗೇ ಅಚ್ಚರಿ. ನನ್ನಮ್ಮ ಅಕ್ಷರ ಗೊತ್ತಿಲ್ಲದ ವಿದ್ಯಾವಂತೆ ಅಂತ ಹೆಮ್ಮೆಪಡುತ್ತಿದ್ದೇನೆ. ಹೋದಲೆಲ್ಲಾ ಹೆಬ್ಬೆಟ್ಟು ಒತ್ತುತ್ತಿದ್ದ ನಿನಗೆ ಸಹಿ ಮಾಡೋಕೆ ನಾನು ಕಲಿಸಿದ್ದೆ. ಒಂದೇ ದಿನದಲ್ಲಿ ಸಹಿ ಹಾಕಲು ಕಲಿತ ನಿನ್ನ ಬುದ್ದಿಮತ್ತೆಗೆ ಸಲಾಂ ಅಮ್ಮ. ಕಾನೂನು ಕಟ್ಟಳೆ, ಜಮೀನು ವ್ಯವಹಾರ, ತೋಟದ ಕೆಲ್ಸ ಎಲ್ಲವನ್ನೂ ನೀಟಾಗಿ ಮಾಡೋ ನಿನ್ನ ಜ್ಞಾನ ಯಾರಿಗೇನು ಕಡಿಮೆ?

ನನ್ನಪ್ಪ ನಮ್ಮ ಬಿಟ್ಟುಹೋದಾಗ ನನಗಿನ್ನೂ ಎರಡು ವರ್ಷ. ದಟ್ಟಕಾಡಿನ ಮಧ್ಯೆ ಮುಳಿಹುಲ್ಲಿನ ಮನೆಯಿತ್ತು. ಸುತ್ತಮುತ್ತ ಮನೆಗಳಿಲ್ಲ. ಮನೆಗೆ ಬಿದಿರ ಬಾಗಿಲು. ಮಳೆಗಾಲದಲ್ಲಿ ಹಾವುಗಳ ಕಾಟ. ರಾತ್ರಿಯಿಡೀ ಚಿಮಿಣಿ ದೀಪ ಹಚ್ಚಿಕೊಂಡು ಬೆಳಕಿನೆದುರು ಮೌನವಾಗಿ ನನ್ನ ಎದೆಗವಚಿಕೊಂಡು ಕೂರುತ್ತಿದ್ದೆ . ಆಗ ಅಜ್ಜ-ಅಜ್ಜಿ ನೆರವಾಗಲಿಲ್ಲ. ಸಂಬಂಧಿಕರ ಕರೆ ಇರಲಿಲ್ಲ. ಸಮಾಧಾನ ಹೇಳಬೇಕಾದ ನನ್ನ ಕಣ್ಣುಗಳಷ್ಟೇ ಮಾತನಾಡುತ್ತಿದ್ದವು. ಜಗತ್ತಿನ ಅರಿವೂ ನನಗಿರಲಿಲ್ಲ. ಆ ಪುಟ್ಟ ಗುಡಿಸಲಿನಲ್ಲೇ ಎಂಥ ಅದ್ಭುತವಾದ ಬದುಕು ಕಟ್ಟಿದೆ ನೀನು?

ಕಷ್ಟಗಳು ಬಂದಾಗ ಇನ್ನೊಬ್ಬರ ಮನೆಯೆದುರು ಹೋಗಿ ಗೋಳೋ ಎಂದು ಅಳಲಿಲ್ಲ ನೀನು. ಕೆಲಸ ಕೊಡಿ ಎಂದು ಬೇಡಲಿಲ್ಲ ನೀನು. ಅಸಹಾಯಕಳಾಗಿ ಕೈ ಕಟ್ಟಿ ಕುಳಿತಿಲ್ಲ ನೀನು. ಬದುಕು ನೀಡದ ಅಪ್ಪ-ಅಮ್ಮನಿಗೆ, ಗಂಡನಿಗೂ ಬೈಯಲಿಲ್ಲ ನೀನು. ಬದಲಾಗಿ ಬೀಡಿ ಸುರುಟಿದೆ, ಹಸುಗಳನ್ನು ಸಾಕಿದೆ, ಆಡುಗಳನ್ನು ಸಾಕಿದೆ, ಎಮ್ಮೆಗಳನ್ನು ಸಾಕಿ ಹಾಲು ಕರೆದು ಕೈ ತುಂಬಾ ನೋಟು ಎಣಿಸಿದೆ. ತೆಂಗಿನಗಿಡ, ಅಡಿಕೆ ಗಿಡ, ಬಾಳೆ ಗಿಡ, ಕರಿಮೆಣಸು ಬೆಳೆದೆ. ಜೋಳ ಬಿತ್ತಿದೆ. ನಿನ್ನ ಕೈತೋಟದಲ್ಲೇ ಕೃಷಿಯ ಅರಮನೆ ಕಟ್ಟಿ ನನ್ನ ಬೆಳೆಸಿದೆ. ಪುಟ್ಟದಾದ ಮನೆ ಕಟ್ಟಿ ಸೂರು ಮಾಡಿಕೊಂಡೆ. ಎಂಥ ಧೈರ್ಯವಂತೆ ಅಮ್ಮ ನೀನು? ಪ್ರತಿ ಸಲ ನಿನ್ನ ಬಗ್ಗೆ ಬರೀತೀನಿ, ಹೇಳ್ಕೋತೀನಿ. ನೀನು ಬರೆದು ಮುಗಿಯದ ಕಾವ್ಯ, ನಿರಂತರವಾಗಿ ಹರಿಯೋ ತೊರೆ. ಇವತ್ತಿಗೆ ಇಷ್ಟು ಸಾಕು. ಪತ್ರ ಓದಿ ಒಂದೇ ಒಂದ್ಸಲ ಬಾಯಿ ಅಗಲಿಸಿ ಜೋರಾಗಿ ನಕ್ಕುಬಿಡು ಕೇಳಿಸಿಕೊಳ್ತಿನಿ

(ಫೋಟೋ: ಗೂಗಲ್‌ನಲ್ಲಿ ಹುಡುಕಿದಾಗ ಸಿಕ್ಕಿದ್ದು!!)

10 comments:

ಮನಸು said...

ಚಿತ್ರ ಲೇಖನ ತುಂಬಾ ಆಪ್ತವಾಗಿದೆ...... ನಿನ್ನಮ್ಮ ನಿನ್ನ ಮೇಲೆ ಕಟ್ಟಿರುವ ಕನಸನ್ನೆಲ್ಲಾ ನನಸು ಮಾಡು..
ಅಮ್ಮನಿಗೆ ಮತ್ತು ನಿನಗೆ ನನ್ನಿಂದ ಮಹಿಳಾ ದಿನದ ಶುಭಾಶಯಗಳು

ಸುಮ said...

ಓದಿ ಮನ ತುಂಬಿ ಬಂತು. ಅಂತಹ ಅಮ್ಮನಿಗೊಂದು ಸಲಾಂ .

Uma Bhat said...

ಅಮ್ಮ ಅಂದರೆ ಅಮ್ಮಾ ಅಷ್ಟೇ. ಅದಕಿನ್ನಾವ ಹೋಲಿಕೆಯೂ ಇಲ್ಲಾ...........

ಅನಿಲ ಬಿ.ಯು. said...

ಲೇಖನ ತುಂಬಾ ಚೆನ್ನಾಗಿದೆ.ಈ ಲೇಖನ ಓದುವಾಗ ಮೊದಲಿನ ನೆನಪು ಹಾಗೆ ಹಾಯ್ದು ಹೋಯ್ತು.

ಅನಿಲ said...

ಲೇಖನ ಓದುವಾಗ ಹಾಗೆ ಮೊದಲಿನ ನೆನಪು ಕಣ್ಣುಮುಂದೆ ಬಂದು ಹೋಯ್ತು.

Sulatha Shetty said...

Thumbha chennagide Chitrakka:)

Sulatha Shetty said...

Thumbha chennagide Chitrakka:)

ಚುಕ್ಕಿ said...

ಅಮ್ಮನ ಪ್ರೀತಿ ಅಂದ್ರೆ ಹಾಗೇನೆ ಅಲ್ವಾ ಅಕ್ಕ...

ತೇಜಸ್ವಿನಿ ಹೆಗಡೆ said...

Really She is great! You are really Lucky Chitra :)

minchulli said...

ನಿಜ ಚಿತ್ರಾ.. ಅಮ್ಮ ಅಂದ್ರೆ...
ಬರೆದು ಮುಗಿಯದ ಕಾವ್ಯ, ನಿರಂತರವಾಗಿ ಹರಿಯೋ ತೊರೆ... ಚಂದದ ಬರಹ