Sunday, August 23, 2009

ಅಕ್ಕನಿಗೆ ಪ್ರೀತಿಯ ನೆನಪುಗಳು...

ಅಕ್ಕಾ..ನಿನ್ನೆ ಗೌರಿ-ಗಣೇಶ ಹಬ್ಬ. ನಿನ್ನ ತುಂಬಾ ನೆನಪಾಯ್ತು. ಸೂರ್ಯ ಮೂಡೋ ಹೊತ್ತಿಗೆ ಎದ್ದು ಸ್ನಾನ ಮಾಡಿ ದೇವರೆದುರು ದೀಪ ಹಚ್ಚಿ ಆರತಿ ಎತ್ತುವಾಗ ನಿನ್ನ ನೆನಪಾಯ್ತು. ಪಾಯಸ ಮಾಡಿ ಮಾವ, ಅಣ್ಣ, ತಮ್ಮ, ಪಕ್ಕದ್ಮನೆಯ ಪುಟ್ಟ ಮಕ್ಕಳಿಗೆ ಬಡಿಸುವಾಗ ನಿನ್ನ ನೆನಪು ತೀರಾ ಕಾಡಿತ್ತು. ಅಕ್ಕಾ... ಹಬ್ಬ ಬಂದರೆ ಮನೆಮುಂದೆ ಚೆಂದದ ರಂಗೋಲಿ ಇಡೋಕೆ ನೀನಿಲ್ಲ ಅಂದಿತ್ತು ಮನ.

ಅಕ್ಕಾ..ನಿನ್ನೆ ನಾ ಸೀರೆ ಉಟ್ಟಿದ್ದೆ ಗೊತ್ತಾ? ನನ್ನ ಇಷ್ಟದ ಬಣ್ಣ ಮೆರೂನ್ ಕಲರ್ ಸೀರೆ ಉಟ್ಟು, ಕೈ ತುಂಬಾ ಬಳೆ, ತಲೆ ತುಂಬಾ ಮಲ್ಲಿಗೆ ಮುಡಿದಿದ್ದೆ. ಆದರೆ, ನಂಗೆ ನೋಡು ಸೀರೆ ಉಡೋಕೆ ಬರಲ್ಲ..ಅದಕ್ಕೆ ಪಕ್ಕದ್ಮನೆಯ ಆಂಟಿ ಚೆನ್ನಾಗಿ ಸೀರೆ ಉಡಿಸಿದ್ರು ಅಕ್ಕಾ. ನೀನಿರುತ್ತಿದ್ದರೆ ನೋಡು ನೀನೇ ಉಡಿಸುತ್ತಿದ್ದೆಯಲ್ಲಾ? ತಲೆತುಂಬಾ ಹೂವು ಉಟ್ಟು, ಹಣೆಗೊಂದು ಬಿಂದಿಗೆ ಉಟ್ಟು ನೀನೂ ನನ್ನ ಜೊತೆ ಖುಷಿಪಡುತ್ತಿದ್ದೆ ಅಲ್ವಾ? ನನ್ನ ತಂಗಿ ಚೆನ್ನಾಗ್ ಕಾಣ್ತಾಳೆ ಅಂತ ಹೆಮ್ಮೆ ಪಡುತ್ತಿದ್ದೆಯಲ್ಲಾ.

ಅಕ್ಕಾ ನಿನ್ನೆ ದೇವಸ್ಥಾನಕ್ಕೆ ಹೋಗಿದ್ದೆ. ಹಣ್ಣುಕಾಯಿ ಮಾಡಿಸಿ ದೇವರ ಬಳಿಯೂ ನೀನು ಬೇಕೆಂದು ಬೇಡಿಕೊಂಡೆ. ನೀನು ಜೊತೆಗಿರುತ್ತಿದ್ದರೆ ನೀನೂ ನನ್ನ ಜೊತೆ ಬರ್ತಾ ಇದ್ದೆ. ನಿನ್ನ ಪುಟ್ಟ ಮಕ್ಕಳು ನನ್ನ ಮಡಿಲಲ್ಲಿ ಪ್ರೀತಿಯಾಟ ಆಡುತ್ತಿದ್ದವಲ್ಲಾ. ಏನು ಮಾಡೋದು ಹೇಳು...ದೇವರು ನಂಗೆ ನಿನ್ನ ಕೊಡಲೇ ಇಲ್ಲ ನೋಡು. ದೇವರ ಮೇಲೂ ಕೆಟ್ಟ ಸಿಟ್ಟು ಬರುತ್ತೆ...ಎಲ್ಲಾ ಕೊಟ್ಟು ಅಕ್ಕನನ್ನು ನಂಗೆ ಕೊಟ್ಟಿಲ್ಲ ಅನ್ನೋ ಕೊರಗು ನಂದು.

ಅಕ್ಕಾ..ಈ ಬಾರಿ ನಾನು ಹಬ್ಬಕ್ಕೆ ಅಮ್ಮನೂರಿಗೆ ಹೋಗಿಲ್ಲ. ಕೃಷ್ಣಾಷ್ಟಮಿಯ ದಿನವೇ ಹೋಗಿಬಂದೆ. ಅಮ್ಮಾ ಇಂದು ಬೆಳಿಗ್ಗೆ ಫೋನು ಮಾಡಿದ್ರು. ಯಾಕೆ ಗೊತ್ತಾ? ನಾನೂನು ಹುಟ್ಟಿದ್ದು ಗಣೇಶ ಹಬ್ಬದ ದಿನ. ಇವತ್ತು ಅಮ್ಮನೂ ಗಣಪತಿ ದೇವಸ್ತಾನಕ್ಕೆ ಹಣ್ಣುಕಾಯಿ ಹೂವು, ಬೆಲ್ಲ ತಕೊಂಡು ಹೋಗಿ ನನ್ನ ಲೆಕ್ಕದಲ್ಲಿ ಪೂಜೆ ಮಾಡಿಸಿದೆ ಅಂದ್ರು. ಅಮ್ಮಂಗೆ ನನ್ನ ಹುಟ್ಟಿದ ದಿನ ಅಂದ್ರೆ ಅದು ಚೌತಿ ದಿನವೇ ಹೊರತು ಆಗಸ್ಟ್ 2 ಅಂದ್ರೆ ಅವರು ನಂಬೊಲ್ಲ. ಅಮ್ಮ ಓದಿಲ್ಲ ಅಕ್ಕಾ..ಅದಕ್ಕೆ ನೋಡು ಅವರು ಪ್ರತಿ ವರ್ಷ ಚೌತಿಯನ್ನೇ ನೆನಪಿಟ್ಟುಕೊಳ್ಳುತ್ತಾರೆ. ಅಮ್ಮನ ಮುಗ್ಧತೆಗೆ ಮನಸಾರೆ ವಂದಿಸಿದೆ.
ಅಕ್ಕಾ..ಯಾಕೋ ನಿತ್ಯ ಅಂದುಕೊಳ್ಳುತ್ತಿದ್ದೆ ಮನ..

ನನಗೂ, ನನ್ನ ಬದುಕಿನಲ್ಲಿ ಸುಗ್ಗಿಯ ಸಂಭ್ರಮದಿಂದ ಮೆರೆಯೋಕೆ ನೀನಿರಬೇಕಿತ್ತು...
ನನ್ನ ನೀನು, ನಿನ್ನ ನಾನು ತುಂಬಾ ಪ್ರೀತಿಸುವವರಾಗಿರಬೇಕಿತ್ತು...
ಮನದ ಕದ ತೆರೆದು...ಪ್ರೀತಿಯ ಮಳೆಯಲ್ಲಿ ತೋಯಿಸಲು ನೀನಿರಬೇಕಿತ್ತು...
ನನ್ನ ಮೌನ-ಮಾತು, ಹುಸಿಮುನಿಸು, ಮುಂಗೋಪದ ಜೊತೆ ಸಾಥ್ ನೀಡಲು ನೀನಿರಬೇಕಿತ್ತು...
ಅಕ್ಕಾ..ನೀನು ಯಾವಾಗ ಬರ್ತೀಯಾ....ಹೇಳು ಬೇಗ...
ಇಂತೀ ನಿನ್ನ
ತಂಗಿ