ಅಜ್ಜನನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ತಂದಿದ್ದರು. ಪುಟ್ಟ ವಯಸ್ಸಿನ ನಾನು ಸಾವಿಗೆ ಭಯಪಟ್ಟಿದ್ದೆ. ಸಾವಿಗೆ ಅಳಬೇಕು ಅನ್ನೋದು ನನಗೆ ಗೊತ್ತಿತ್ತು. ನನ್ನ ಪ್ರೀತಿಯ ಅಜ್ಜ ಬಿಟ್ಟುಹೋದರೆ ಮತ್ತೆ ಬರೊಲ್ಲ ಅನ್ನೋದು ನನಗೆ ಗೊತ್ತಿತ್ತು. ಆಗಿನ್ನೂ ಕಾರಂತರ ಕಿಸಾಗೋತಮಿಯ ಕಥೆ ಓದದ ಮನಸ್ಸು ನನ್ನದು.
ಹೊಟ್ಟೆಪಾಡಿಗೆ ಕಾಳುಮೆಣಸು ಕೊಯ್ಯಲು ಹೋದ ಅಜ್ಜ, ಮರದ ತುದಿಯಿಂದ ಕೆಳಬಿದ್ದು ಪ್ರಾಣ ಕಳೆದುಕೊಂಡಿದ್ದ. ಅಜ್ಜನ ಉಳಿಸಕೆ ಒಂದು ವಾರ ಆಸ್ಪತ್ರೆಯಲ್ಲಿ ಹೋರಾಡಿದರೂ ಅಜ್ಜನ ಸಾವು ತಡೆಯಲಾಗಲಿಲ್ಲ. ಆದರೆ, ಆ ಒಂದು ವಾರ ಮನೆ ದುಃಖದ ಕಡಲಾಗಿತ್ತು. ಅಜ್ಜಿ, ಅಮ್ಮ, ದೊಡ್ಡಮ್ಮ,ಚಿಕ್ಕಮ್ಮ ಅಳು ಮುಗಿಲುಮುಟ್ಟಿತು. ಅಜ್ಜನ ತಿಥಿ ಮುಗಿದು ತಿಂಗಳು ಕಳೆದರೂ ಮನೆಯಲ್ಲಿ
ಅಳು ನಿಲ್ಲಲಿಲ್ಲ. ನಾನೂ ಅತ್ತಿದ್ದೆ....ಯಾರೂ ತಡೆಯಲಾಗದ ಅಳುವನ್ನು!
ನಾನು ಡಿಗ್ರಿ ಓದುವಾಗ ಮೇಷ್ಟ್ರು ಹೇಳಿದ್ರು: ನಿಜವಾದ ದುಃಖ ನೋಡಬೇಕಾದ್ರೆ ಸಾವಿನ ಮನೆಗೆ ಹೋಗಬೇಕು ಎಂದು! ಆಗ
ನನ್ನಜ್ಜ ಸುಟ್ಟು ಬೂದಿಯಾದ ದಿನ ನೆನಪಾಗಿತ್ತು. ಇಡೀ ಬಂಧುಬಳಗ ಅತ್ತು ಅತ್ತು ಬಸವಳಿದ ದಿನ ನೆನಪಾಗಿತ್ತು.
ಆರು ತಿಂಗಳ ಹಿಂದೆ ಮಾವ ಗತಿಸಿದರು. ಮಡಿಲಲ್ಲಿ ಮಗಳಂತೆ ಪ್ರೀತಿಯ ಉಯ್ಯಾಲೆಯಲ್ಲಿ ತೂಗಿದ ಮಾವ. ನಾನು ಕಚೇರಿಯಲ್ಲಿದ್ದೆ. ಮನೆಯಿಂದ ನಮ್ಮವ್ರ ಫೋನ್, ಅಪ್ಪ ಹೋಗಿಬಿಟ್ರು! ಅರ್ಜಂಟ್ ಮೀಟಿಂಗ್‌ನಲ್ಲಿದ್ದೆ. ಒಂದು ಕ್ಷಣ ಕಣ್ಣು ರೆಪ್ಪೆ ತಟಸ್ಥವಾಯಿತು. ಮಾತಿಗೂ ದನಿ ಬರಲಿಲ್ಲ. ಮೀಟಿಂಗ್ ಮುಗ್ಸಿ ಐದೇ ನಿಮಿಷದಲ್ಲಿ ಮನೆಯಲ್ಲಿದ್ದೆ. ಅತ್ತೆ, ನಮ್ಮೆಜಮಾನ್ರು ಮೌನವಾಗಿದ್ದರು. ನನ್ನ ಕಣ್ಣಂಚಿನಲ್ಲಿ ಪುಟ್ಟ ಹನಿಬಿಂದು ಕೆಳಗೆ ಬಿತ್ತು. ದೊಡ್ಡ ಪೆಟ್ಟಿಗೆಯಲ್ಲಿ ತುಂಬಿಸಿ ಮಾಮನ ಬೆಳಗಿನ ತನಕ ಹಾಗೇ ಇಡಲಾಯಿತು. ಸಂಬಂಧಿಕರೆಲ್ಲರೂ ಬಂದರು. ಯಾರೂ ಗೋಳೋ ಅಳಲಿಲ್ಲ.
ಮೊನ್ನೆ ಇನ್ನೊಂದು ಸಾವಿನ ಮನೆಗೆ ಹೋದೆ. ಅಲ್ಲಿ ಅಳೋರೇ ಕಾಣಲಿಲ್ಲ. ಮಗನನ್ನು ಕಳೆದುಕೊಂಡ ಅಮ್ಮ, ಮಗನ ದೇಹದ ಬಳಿ ನಿಂತು ಮೌನವಾಗಿದ್ದರು. ಪತ್ನಿಯ ದುಃಖದ ಕಣ್ಣೀರು ಬತ್ತಿಹೋಗಿತ್ತು. ಅಪ್ಪನ ಕಳೆದುಕೊಂಡ ಏಕೈಕ ಮಗಳೂ ವಿದೇಶದಿಂದ ಬರಲೊಲ್ಲೆ ಎಂದಳು. ನನಗನಿಸಿದ್ದು ಇಷ್ಟೇ: ಸಾವಿನ ಮನೆಯಲ್ಲಿ ಕಣ್ಣೀರೇ ಕಾಣಿಸಲಿಲ್ಲ, ಬಹುಶಃ ಕಿಸಾಗೋತಮಿಯ ಕಥೆ ಎಲ್ಲರಿಗೂ ಅರ್ಥವಾಗಿರಬೇಕೆಂದು! ಹಾಗಂತ, ಸಾವಿನ ಮನೆಯಲ್ಲಿ ಕಣ್ಣೀರು ಇಲ್ಲವೆಂದಲ್ಲ. ಹುಟ್ಟು, ಸಾವು,ನೋವು ಎಲ್ಲದಕ್ಕೂ ಸ್ಪಂದಿಸುವ ಮಾನವನ ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ ಸಣ್ಣ ಬದಲಾವಣೆ. ಸಾವನ್ನೂ ಸವಾಲಾಗಿ ಸ್ವೀಕರಿಸುವ ಮನದ ಗಟ್ಟಿತನವೇ? ಸಾವು ಸಾಮಾನ್ಯವೇ? ಯಾವ ಪ್ರಶ್ನೆಗಳು ಮೂಡಿದರೂ ಅಲ್ಲಿ ನಮ್ಮ-ನಮ್ಮ ಮನಸ್ಸೇ ಉತ್ತರ. ಮನಸ್ಸು ಮೌನವಾಗಿದ್ದಾಗ ಹೀಗೊಂದು ಸ್ವಗತ!