ಅಮ್ಮಾ...
ನಂಗೊತ್ತು ನೀ ನನ್ ಮೇಲೆ ಮುನಿಸಿಕೊಂಡಿದ್ದಿಯಂತ. ಇನ್ನು ನಾ ಮನೆಗೆ ಬಂದು ನೀ ನನ್ನ ದರುಶನ ಪಡೆಯುವವರೆಗೂ ನಿನ್ನ ಸಿಟ್ಟು ಕಡಿಮೆಯಾಗಲ್ಲ. ನಿತ್ಯ ಫೋನ್ ಮಾಡಿ ಗೊಣಗುತ್ತೀಯಾ. ಪ್ರೀತಿಯಿಂದ ಬೈತೀಯಾ. ಕೊನೆಗೆ ನೀನೆ ಸೋತಾಗ ದಡಕ್ಕಂತ ಫೋನಿಡ್ತೀಯಾ. ಮತ್ತೆ ಸಂಜೆ ಫೋನ್ ಮಾಡಿ ಪುಟ್ಟಿ ಒಂದೇ ಒಂದ್ಸಲ ಮನೆಗೆ ಬಂದು ಹೋಗು ಅಂತ ಗೋಳಿಡ್ತೀಯಾ. ಮಕ್ಕಳು ಅಂದ್ರೆ ಹಿಂಗೆ ಕಣಮ್ಮ..ಅಮ್ಮ ಅಂದ್ರೆ ನಿನ್ ಥರ ಅಲ್ವಾ? ಮೊನ್ನೆ ನೀ ಪೋನ್ ಮಾಡಿ, "ನೀನೆನು ಎಲೆಕ್ಷನ್ಗೆ ನಿಂತಿದ್ದೀಯೇನೆ? ಬ್ಯುಸಿ ಬ್ಯಸಿ ಅಂತ ಹೇಳಕ್ಕೆ?' ಅಂತ ಗೊಣಗಿದಾಗ ನಿಜವಾಗಲೂ ನನಗೆ ಸಿಟ್ಟು ಬಂದಿಲ್ಲಮ್ಮ, ನಗು ಬಂದು ಜೋರಾಗಿ ನಕ್ಕುಬಿಟ್ಟಿದ್ದೆ.
ಹ್ಲಾಂ..ಅಮ್ಮಾ ನೀ ಚೆನ್ನಾಗಿದ್ದಿಯಲ್ಲಾ? ತಮ್ಮ ಹೇಗಿದ್ದಾನೆ? ಜೋಪಾನವಾಗಿರಕೆ ಹೇಳು. ನನ್ ನೆನೆಕೆಗಳನ್ನು ಅವನಿಗೆ ತಿಳಿಸು. ನಿನ್ನ ಆರೋಗ್ಯ ಹೆಂಗಿದೆ? ಕರೆಕ್ಟಾಗಿ ಮದ್ದು ತಕೋತಿಯಲ್ಲಾ? ದಿನಾ ಗ್ಲುಕೋಸ್ ಕುಡೀತಿಯಲ್ಲಾ. ನಾನಿಲ್ಲಿ ಚೆನ್ನಾಗಿದ್ದೀನಮ್ಮಾ..ಮೂರು ಹೊತ್ತು ತಿಂದುಂಡು ಗುಂಡು ಗುಂಡಾಗಿದ್ದೀನಿ. ನಾನೆಷ್ಟು ದಪ್ಪಗಿದ್ರೂ ಸಣ್ಣ ಸಣ್ಣಗಿದ್ದಿ ಅಂತ ಬಾಯಿ ಬಡಬಡ ಮಾಡ್ತಿಯಲ್ಲಾ..ನೋಡು ಈ ಸಲ ಕನ್ನಡಕ ತರ್ತೀನಿ.!!
ಅಮ್ಮಾ ಬೆಳ್ಳಂಬೆಳಿಗ್ಗೆ ಆಫೀಸು, ಸೂರ್ಯ ಮುಳುಗಿದ ಮೇಲೆ ಮನೆ ಸೇರುವುದು, ಒಂದಷ್ಟು ಅನ್ನ-ಸಾರು ಮಾಡುವುದು, ಒಂದಷ್ಟು ಹೊತ್ತು ಟಿವಿ ಜೊತೆ ಮಾತನಾಡುವುದು ಅಷ್ಟೇ ಕಣಮ್ಮ. ನಮ್ಮೂರ ಬತ್ತದ ಹೊಳೆ, ಹಸಿರು ತೋಟ, ಸಾಲು-ಸಾಲು ಮರಗಿಡಗಳು, ಹಳ್ಳಿ ಮನೆಗಳು, ಕರುಗಳ ಅಂಬಾ, ಕನಕಾಂಬರ ಬಳ್ಳಿಯ ಸೊಬಗು, ಕುರಿಮಂದೆ, ಕಥೆ ಹೇಳುವ ಅಜ್ಜಿ, ಕಳ್ಳು ತೆಗೆಯುವ ಅಜ್ಜ ಯಾರೂ ಕಾಣೋಕೆ ಸಿಗ್ತಿಲ್ಲಮ್ಮ. ಆದ್ರೂ ಈ ಬೆಂಗ್ಳೂರು ತುಂಬಾ ಜನ್ರ ಹಸಿದ ಹೊಟ್ಟೆಗೆ ಅನ್ನ ನೀಡುತ್ತೆ. ಏನೋ ಒಂಥರಾ ಖುಷಿ ಕೊಡುತ್ತೆ. ನನ್ ಪುಟ್ಟ ರೂಮೊಳಗೆ ನಾನೂ ಖುಷಿಪಡ್ತೀನಮ್ಮ.
ಆಮೇಲೆ ನಮ್ಮ ಮನೆ ಓನರ್ರು ಅಕ್ಕ ತುಂಬಾ ಒಳ್ಳೆಯವರಮ್ಮ. ನಂಗೆ ಒಂದು ಒಳ್ಳೆ ಅಕ್ಕ ಸಿಕ್ಕಂಗೆ ಆಗಿದೆ. ಮೊನ್ನೆ ನಂಗೆ ಜ್ವರ ಬಂದಿತ್ತು ಅಂದ್ನಲ್ಲಾ..ನನ್ನ ತುಂಬಾ ಚೆನ್ನಾಗ್ ನೋಡಿಕೊಂಡ್ರಮ್ಮ. ಏನೇನೋ ಕಶಾಯ ಮಾಡಿಕೊಟ್ರು...ಥೇಟ್ ನಿನ್ನ ಥರಾನೇ..ಹೊಟ್ಟೆ ಫುಲ್ ಆದ್ರೂ ಮತ್ತೆ ಮತ್ತೆ ತಿನ್ನು ಅನ್ನುತ್ತಾ ತುರುಕೋದು! ಅಲ್ಲಿ-ಇಲ್ಲಿ ಸುತ್ತಾಡೋಕೆ ಹೋದ್ರೆ, ಶಾಪಿಂಗ್ ಹೋದ್ರೆ ನನ್ನ ಕರ್ಕೊಂಡು ಹೋಗ್ತಾರಮ್ಮಾ. ಪೂಜೆಗೆಂದು ಮನೆಗೆ ತಂದ ಮಲ್ಲಿಗೆಯಲ್ಲಿ ನನಗೂ ಒಂದು ಮೊಳ ಮುಡಿಸಿ ಮಲ್ಲಿಗೆಯಂತೆ ಘಮ್ ಅಂತ ನಗ್ತಾರೆ ಅಮ್ಮಾ.
ಅಮ್ಮಾ..ಹೇಳಿದ್ನಲ್ಲಾ ಮುಂದಿನ ತಿಂಗಳು ಊರಿಗೆ ಬರ್ತೀನಂತ. ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಹಾಕಿದ್ದಿಯಲ್ಲಾ..ಒಂದಷ್ಟು ಅಕ್ಕಿ ರೊಟ್ಟಿ, ಹಲಸಿನ ಹಪ್ಪಳ ರೆಡಿ ಮಾಡಿಡಮ್ಮಾ. ಈ ಬೆಂಗ್ಳೂರು ಮಳೆಗೆ ಮೆಲ್ಲೋಕೆ ಭಾಳ ಖುಷಿ ಆಗುತ್ತೆ. ಮತ್ತೆ ನನ್ನ ಇಷ್ಟದ ನೀರು ದೋಸೆ ಮಾಡಕೆ ಬೆಳ್ತಕ್ಕಿ, ಹತ್ತು ಕೆಜಿ ಕುಚಲಕ್ಕಿನೂ ತಂದಿಡಕೆ ತಮ್ಮಂಗೆ ಹೇಳು. ವಾಪಾಸ್ ಬರುವಾಗ ತಕೊಬಂದ್ರೆ ಒಂದು ತಿಂಗಳು ಚಿಂತೆಯಿಲ್ಲ. ನಂಗೊತ್ತು ಇದೆಲ್ಲಾ ರೆಡಿ ಮಾಡಿಯೇ ನಿತ್ಯ ಸುಪ್ರಭಾತ ಹಾಡ್ತೀಯಂತ.
ಅಮ್ಮ ನಮ್ಮನೆ ಪಕ್ಕದ್ಮನೆಗೆ ಹೊಸಬರು ಬಾಡಿಗೆಗೆ ಬಂದಿದ್ದಾರೆ. ಅಲ್ಲೊಂದು ಪುಟ್ಟ ಪಾಪು ಇದೆ. ನೋಡಕ್ಕು ಮುದ್ದು ಮುದ್ದಾಗಿದೆ. ಆದ್ರೆ ರಾತ್ರಿ ಇಡೀ ಅಳೋ ಆ ಪಾಪು ನಮ್ಮ ನಿದ್ದೆನೂ ಕೆಡಿಸುತ್ತೆ. ಯವಾಗಲೂ ನೀ ನಂಗೆ ಹೇಳ್ತಿದ್ದಿಯಲ್ಲಾ, ನೀ ಬರೇ ಅಳುಮುಂಚಿ ನಿದ್ದೆ ಮಾಡಕ್ಕೂ ಬಿಡ್ತಿರಲಿಲ್ಲ ಅಂತ. ಆ ಮಗು ಅತ್ತು ರಂಪಾಟ ಮಾಡುವಾಗ ನೀ ಹೇಳಿದ ಮಾತು ನೆನಪಾಗಿ ಛೇ! ನಾನೆಷ್ಟು ಅಮ್ಮಂಗೆ ಕಾಟ ಕೊಟ್ಟಿದ್ದೀನಿ ಅನಿಸುತ್ತೆ ..ಹ್ಹಿಹ್ಹಿ!!!
ಅಮ್ಮಾ..ಈ ಪತ್ರ ನೋಡಿಯಾದರೂ ನೀ ನನ್ನ ಜೊತೆ ಟೂ ಬಿಡಲ್ಲ ಅಂದುಕೋತೀನಿ. ಸಿಟ್ಟು ಕಡಿಮೆಯಾಗಿದೆಯಲ್ಲಾ...! ಹ್ಲಾಂ..ಖುಷಿಯೋ ಖುಷಿ. ಮುಂದಿನ ತಿಂಗಳು ಹುಣ್ಣಿಮೆ ದಿನ ಬಂದು ಬಿಡ್ತೀನಿ. ಆ ತಂಪು ಬೆಳದಿಂಗಳಲ್ಲಿ ನಮ್ಮನೆ ಎದುರು ಇರುವ ಕಲ್ಲುಬೆಂಚಿಯ ಮೇಲೆ ಒಂದಷ್ಟು ಹೊತ್ತು ಹರಟೋಣ ..ಸಿಟ್ ಮಾಡಿಕೊಳ್ಳೋಣ..ಜಗಳ ಆಡೋಣ..ನಿನ್ನಿಂದ ಬೈಸಿಕೋತೀನಿ. ಅದಕ್ಕಿಂತ ಹೆಚ್ಚಾಗಿ ನಿನನ್ನ ಮಡಿಲಲ್ಲಿ ಹುದುಗಿ ಮೊಗೆದಷ್ಟು ಬತ್ತದ ಪ್ರೀತಿನ ನನ್ನೊಳಗೆ ತುಂಬುಕೊಳ್ಳೋಕೆ ಬರ್ತಾ ಇದ್ದೀನಮ್ಮಾ. ಸದ್ಯಕ್ಕೆ ವಿರಾಮ..
ಇಂತೀ
ನಿನ್ನ ಪುಟ್ಟಿ