Monday, March 23, 2009

ತವರೂರ ಮನೆ ನೋಡ ಬಂದೆ...

ಮಲಗು ಚೆಲ್ವಿನ ತೆರೆಯೆ ಮಲಗು ಒಲ್ಮೆಯ ಸಿರಿಯೆ
ಮಲಗು ತೊಟ್ಟಿಲ ಸಿರಿಯೆ ದೇವರಂತೆ
ಮಲಗು ಮುದ್ದಿನ ಗಿಣಿಯೆ ಮಲಗು ಮುತ್ತಿನ ಮಣಿಯೆ
ಮಲಗು ಚಂದಿರನೂರ ಕೂಗುವೆಯಂತೆ ....

ಇಂಪಾದ ಹಾಡು ಕೇಳುತ್ತಿದ್ದಂತೆ ಯಾಕೋ ಥಟ್ಟನೆ ತವರು ನೆನಪಾಯಿತು. ಪ್ರೀತಿಯ ಮಡಿಲಲ್ಲಿ ಜೋಕಾಲಿ ಹಾಡುತ್ತಾ ಹಾಲುಣಿಸಿದ ಅಮ್ಮ ನೆನಪಾದಳು. ನಾ ಅತ್ತರೂ ಕಿರುಚಿದರೂ ದಣಿಯದೆ ಕಂಗಳಲ್ಲಿ ಬೆಳದಿಂಗಳು ಮೂಡಿಸಿದ ತವರು ನೆನಪಾಯಿತು. ತಪ್ಪಿ ನಡೆದ ದಾರಿಯಲ್ಲಿ ಸರಿ ದಾರಿ ತೋರಿಸಿ ಬದುಕ ತುಂಬಾ ಕನಸುಗಳ ಚಿತ್ತಾರ ಮೂಡಿಸಿ ಭವಿಷ್ಯಕ್ಕೆ ಬೆಳಕಿನ ಮುನ್ನುಡಿ ಬರೆದ ನನ್ನವ್ವ ನೆನಪಾದಳು. ಹುಣ್ಣಿಮೆ ರಾತ್ರೀಲಿ ಚಂದಿರನನ್ನು ಕೊಂಡಾಡುತ್ತಾ, ಬೆಳಗು ಇಬ್ಬನಿಯ ನಗುವನ್ನು ತೋರುತ್ತಾ, ಪ್ರೀತಿ, ಮಮತೆ, ತ್ಯಾಗ, ವಾತ್ಸಲ್ಯದ ಪಾಠ ಬೋಧಿಸಿದ ಅಮ್ಮನ ಮಡಿಲು ನೆನಪಾಯಿತು

ಹ್ಲಾಂ..!..ಗೊತ್ತೇ ಆಗಲಿಲ್ಲ.

ಸರಿದೇ ಹೋಗಿತ್ತು ಸಮಯ. ಅವಳಪ್ಪುಗೆಯಲ್ಲಿ ರಚ್ಚೆ ಹಿಡಿಯುತ್ತಾ, ಉಚ್ಚೆ ಒಯ್ಯುತ್ತಾ ಬೆಳೆದ ನನ್ನ ಅಳು, ತರಲೆ ಅಮ್ಮನಿಗೆ ಕಿರಿಕಿರಿ ಎನಿಸುತ್ತಿರಲಿಲ್ಲ. ದಿನವಿಡೀ ಎತ್ತಿ ಆಡಿಸಿದ ಆ ದೇವರ ಕೈಗಳಿಗೆ ನಾ ಭಾರವಾಗುತ್ತಿರಲಿಲ್ಲ. ಎಂಥ ಮಾಯೆ? ಎದ್ದು ನಡೆಯುತ್ತಿದ್ದೆ.. ಪ್ರಪಂಚನಾ ಅಚ್ಚರಿಯಿಂದ ದಿಟ್ಟಿಸುತ್ತಿದ್ದ ನನ್ನ ಕಣ್ಣುಗಳಿಗೆ 'ಪಾಠ' ಹೇಳಿಕೊಡುತ್ತಿತ್ತು ಆ ತವರು. ಬೆಳಗೆದ್ದು ಖುಷಿ ಖುಷಿಯಲ್ಲಿ ಮನೆ ಮುಂದೆ ರಂಗೋಲಿ ಇಡುತ್ತಿದ್ದೆ. . ಆಗವಳು ನನ್ನ ಎತ್ತಿ ಆಡಿಸುತ್ತಿರಲಿಲ್ಲ, ಚಂದಿರನ ತೋರಿಸಿ ಹೊಗಳುತ್ತಿರಲಿಲ್ಲ. ಜೋಕಾಲಿ ಆಡಿಸುತ್ತಿರಲಿಲ್ಲ. ಅವಳೆತ್ತರಕ್ಕೆ ಬೆಳೆದ ನನ್ನ ನೋಡಿ ಅಮ್ಮ ಅದೆಷ್ಟು ಖುಷಿಪಡುತ್ತಿದ್ದಳು. ನನ್ನ ನೋಡುತ್ತಲೇ ಅಣ್ಣನ ಕಿವಿಯಲ್ಲಿ ಅದೇನೋ ಪಿಸುಗುಟ್ಟುತ್ತಿದ್ದಳು. ಆತ ತುಂಟನಗೆ ಬೀರುತ್ತಿದ್ದ. ಅವನ ಕಣ್ಣುಗಳ ತುಂಟತನಕ್ಕೆ ಚಂಗನೆ ಜಿಂಕೆಯಂತೆ ಹಾರಿ ಅವನ ತೋಳು ಸೇರುತ್ತಿದ್ದೆ. ನಾ ಮಗುವಾಗಿರುವಾಗ ಎತ್ತು ಮುದ್ದಾಡುತ್ತಿದ್ದ, ಲಂಗ ಧಾವಣಿ ತೊಡಿಸುತ್ತಿದ್ದ ಅಣ್ಣ ಈವಾಗ ಖುಷಿಯ ನಗು ಚೆಲ್ಲುತ್ತಿದ್ದ. ಅದ ನೋಡಿ ಅಮ್ಮನ ಕಣ್ಣಲ್ಲೂ ಖುಷಿಯ ಮಿನುಗು, ಪ್ರೀತಿಯ ಜಿನುಗು. ಬಾನಿನತ್ತ ನೋಡಿ ಅದೇನೋ ಕೈಜೋಡಿಸಿ ಬೇಡುತ್ತಿದ್ದಳು..ಅವಳದೇ ಭಾಷೆಯಲ್ಲಿ.

ಹ್ಲಾಂ..! ತವರು...

ತವರಿನ ಪ್ರೀತಿಯ ಚಪ್ಪರದಡಿಯಲ್ಲಿ ನಾ ಸಪ್ತಪದಿ ತುಳಿದಿದ್ದೆ. ದಶಕಗಳು ಸರಿದಿವೆ. ಅಮ್ಮನೆತ್ತರಕ್ಕೆ ಬೆಳೆದ ನಾನೂ 'ಅಮ್ಮ'ನಾಗಿದ್ದೆ. ಆದರೆ, ಇದ ಕಂಡು ಖುಷಿ ಪಡಲು ಅಮ್ಮನಿರಲಿಲ್ಲ ಜೊತೆಯಲ್ಲಿ.! ಆದರೆ, ಆಕೆ ಕಲಿಸಿದ ಬದುಕಷ್ಟೇ ಉಳಿದಿತ್ತು. ಮತ್ತೆ ಬಂದಿದ್ದೆ ನಾ ತವರಿಗೆ. ಅಣ್ಣನೊಬ್ಬ ಉಳಿದಿದ್ದ, ಬದುಕಿಗೆ ಜೀವಂತಿಕೆ ಕಟ್ಟಿಕೊಟ್ಟ, ಜೀವನಕ್ಕೆ ಅಪೂರ್ವ ಸೌಂದರ್ಯ ಕಟ್ಟಿಕೊಟ್ಟ, ಖುಷಿಯಲ್ಲಿ ನಕ್ಕು ನಗಿಸಿದ ಆ ತವರು ಕಾಣಲು ಮತ್ತೆ ನಾ ಬಂದಿದ್ದೆ. ಆದರೆ ಅದೇಕೋ ಖಾಲಿ ಖಾಲಿ...ಮನೆಯೆದುರು ನಾ ಇಟ್ಟ ರಂಗೋಲಿ ಮಾಸಿತ್ತು, ಆದರೆ ನೆನಪಷ್ಟೇ ಉಳಿದಿತ್ತು. ಅಮ್ಮನಂತ ಅಣ್ಣನ ತೋಳು ನನ್ನ ಪ್ರೀತಿಗೆ ಹಾತೊರೆದಂತೆ ಕಾಣಲಿಲ್ಲ. ನಕ್ಕು ನಗಿಸಿದ ತುಂಟಾಟ, ಲಗೋರಿಯಾಟ ಆಡಿದ ಅಣ್ಣನ ಮುಖದಲ್ಲಿ ಎಂದಿನ ನಗೆ ಬೆಳಕಿರಲಿಲ್ಲ. ಅತ್ತಿಗೆಯ ಮುಖ ನನ್ನಮ್ಮನಂತೆ ನನ್ನ ಸ್ವಾಗತಿಸಲಿಲ್ಲ. ತನ್ನ ಕೋಣೆಯೊಳಗೆ ಕುಳಿತ ಅಣ್ಣ ಹಾಗೇ ಬಾಗಿಲು ಹಾಕಿದ್ದ. ಮತ್ತೆಂದೂ ತೆರೆಯಲಿಲ್ಲ....ಆದರೆ..ನನ್ನೊಳಗಿನ ಪ್ರಶ್ನೆಗಳಿಗೆ ಅಲ್ಲಿ ಉತ್ತರವಿರಲಿಲ್ಲ..ಯಾಕಂದರೆ ಆತ ನನ್ನ 'ಅಣ್ಣ' ಆಗಿದ್ದ. ಪ್ರೀತಿಯ ತವರಾಗಿದ್ದ. ಮಮತೆಯ ಮಡಿಲಾಗಿದ್ದ.

ಮತ್ತದೇ ಹಾಡು ...ಗುನುಗಿತು...ಮನದೊಳಗೆ..

ತವರೂರ ಮನೆ ನೋಡ ಬಂದೆ...
ತಾಯ ನೆನಪಾಗಿ ಕಣ್ಣೀರ ತಂದೆ...


ಬಾಗಿಲ ಮುಂದೆ ರಂಗೋಲಿ
ಬಾಗಿ ಇಡುತ್ತಿದ್ದೆ ನಾನಾ ತರದಲ್ಲಿ ...

ಮತ್ತೆ ತೆರಳಿದೆ..'ನನ್ನೂರಿಗೆ' ಅಲ್ಲಿ...!!!

ಫೋಟೋ ಕೃಪೆ: http://www.flickr.com/