ಮಲಗು ತೊಟ್ಟಿಲ ಸಿರಿಯೆ ದೇವರಂತೆ
ಮಲಗು ಮುದ್ದಿನ ಗಿಣಿಯೆ ಮಲಗು ಮುತ್ತಿನ ಮಣಿಯೆ
ಮಲಗು ಚಂದಿರನೂರ ಕೂಗುವೆಯಂತೆ ....
ಇಂಪಾದ ಹಾಡು ಕೇಳುತ್ತಿದ್ದಂತೆ ಯಾಕೋ ಥಟ್ಟನೆ ತವರು ನೆನಪಾಯಿತು. ಪ್ರೀತಿಯ ಮಡಿಲಲ್ಲಿ ಜೋಕಾಲಿ ಹಾಡುತ್ತಾ ಹಾಲುಣಿಸಿದ ಅಮ್ಮ ನೆನಪಾದಳು. ನಾ ಅತ್ತರೂ ಕಿರುಚಿದರೂ ದಣಿಯದೆ ಕಂಗಳಲ್ಲಿ ಬೆಳದಿಂಗಳು ಮೂಡಿಸಿದ ತವರು ನೆನಪಾಯಿತು. ತಪ್ಪಿ ನಡೆದ ದಾರಿಯಲ್ಲಿ ಸರಿ ದಾರಿ ತೋರಿಸಿ ಬದುಕ ತುಂಬಾ ಕನಸುಗಳ ಚಿತ್ತಾರ ಮೂಡಿಸಿ ಭವಿಷ್ಯಕ್ಕೆ ಬೆಳಕಿನ ಮುನ್ನುಡಿ ಬರೆದ ನನ್ನವ್ವ ನೆನಪಾದಳು. ಹುಣ್ಣಿಮೆ ರಾತ್ರೀಲಿ ಚಂದಿರನನ್ನು ಕೊಂಡಾಡುತ್ತಾ, ಬೆಳಗು ಇಬ್ಬನಿಯ ನಗುವನ್ನು ತೋರುತ್ತಾ, ಪ್ರೀತಿ, ಮಮತೆ, ತ್ಯಾಗ, ವಾತ್ಸಲ್ಯದ ಪಾಠ ಬೋಧಿಸಿದ ಅಮ್ಮನ ಮಡಿಲು ನೆನಪಾಯಿತು
ಹ್ಲಾಂ..!..ಗೊತ್ತೇ ಆಗಲಿಲ್ಲ.
ಸರಿದೇ ಹೋಗಿತ್ತು ಸಮಯ. ಅವಳಪ್ಪುಗೆಯಲ್ಲಿ ರಚ್ಚೆ ಹಿಡಿಯುತ್ತಾ, ಉಚ್ಚೆ ಒಯ್ಯುತ್ತಾ ಬೆಳೆದ ನನ್ನ ಅಳು, ತರಲೆ ಅಮ್ಮನಿಗೆ ಕಿರಿಕಿರಿ ಎನಿಸುತ್ತಿರಲಿಲ್ಲ. ದಿನವಿಡೀ ಎತ್ತಿ ಆಡಿಸಿದ ಆ ದೇವರ ಕೈಗಳಿಗೆ ನಾ ಭಾರವಾಗುತ್ತಿರಲಿಲ್ಲ. ಎಂಥ ಮಾಯೆ? ಎದ್ದು ನಡೆಯುತ್ತಿದ್ದೆ.. ಪ್ರಪಂಚನಾ ಅಚ್ಚರಿಯಿಂದ ದಿಟ್ಟಿಸುತ್ತಿದ್ದ ನನ್ನ ಕಣ್ಣುಗಳಿಗೆ 'ಪಾಠ' ಹೇಳಿಕೊಡುತ್ತಿತ್ತು ಆ ತವರು. ಬೆಳಗೆದ್ದು ಖುಷಿ ಖುಷಿಯಲ್ಲಿ ಮನೆ ಮುಂದೆ ರಂಗೋಲಿ ಇಡುತ್ತಿದ್ದೆ. . ಆಗವಳು ನನ್ನ ಎತ್ತಿ ಆಡಿಸುತ್ತಿರಲಿಲ್ಲ, ಚಂದಿರನ ತೋರಿಸಿ ಹೊಗಳುತ್ತಿರಲಿಲ್ಲ. ಜೋಕಾಲಿ ಆಡಿಸುತ್ತಿರಲಿಲ್ಲ. ಅವಳೆತ್ತರಕ್ಕೆ ಬೆಳೆದ ನನ್ನ ನೋಡಿ ಅಮ್ಮ ಅದೆಷ್ಟು ಖುಷಿಪಡುತ್ತಿದ್ದಳು. ನನ್ನ ನೋಡುತ್ತಲೇ ಅಣ್ಣನ ಕಿವಿಯಲ್ಲಿ ಅದೇನೋ ಪಿಸುಗುಟ್ಟುತ್ತಿದ್ದಳು. ಆತ ತುಂಟನಗೆ ಬೀರುತ್ತಿದ್ದ. ಅವನ ಕಣ್ಣುಗಳ ತುಂಟತನಕ್ಕೆ ಚಂಗನೆ ಜಿಂಕೆಯಂತೆ ಹಾರಿ ಅವನ ತೋಳು ಸೇರುತ್ತಿದ್ದೆ. ನಾ ಮಗುವಾಗಿರುವಾಗ ಎತ್ತು ಮುದ್ದಾಡುತ್ತಿದ್ದ, ಲಂಗ ಧಾವಣಿ ತೊಡಿಸುತ್ತಿದ್ದ ಅಣ್ಣ ಈವಾಗ ಖುಷಿಯ ನಗು ಚೆಲ್ಲುತ್ತಿದ್ದ. ಅದ ನೋಡಿ ಅಮ್ಮನ ಕಣ್ಣಲ್ಲೂ ಖುಷಿಯ ಮಿನುಗು, ಪ್ರೀತಿಯ ಜಿನುಗು. ಬಾನಿನತ್ತ ನೋಡಿ ಅದೇನೋ ಕೈಜೋಡಿಸಿ ಬೇಡುತ್ತಿದ್ದಳು..ಅವಳದೇ ಭಾಷೆಯಲ್ಲಿ.
ಹ್ಲಾಂ..! ತವರು...
ತವರಿನ ಪ್ರೀತಿಯ ಚಪ್ಪರದಡಿಯಲ್ಲಿ ನಾ ಸಪ್ತಪದಿ ತುಳಿದಿದ್ದೆ. ದಶಕಗಳು ಸರಿದಿವೆ. ಅಮ್ಮನೆತ್ತರಕ್ಕೆ ಬೆಳೆದ ನಾನೂ 'ಅಮ್ಮ'ನಾಗಿದ್ದೆ. ಆದರೆ, ಇದ ಕಂಡು ಖುಷಿ ಪಡಲು ಅಮ್ಮನಿರಲಿಲ್ಲ ಜೊತೆಯಲ್ಲಿ.! ಆದರೆ, ಆಕೆ ಕಲಿಸಿದ ಬದುಕಷ್ಟೇ ಉಳಿದಿತ್ತು. ಮತ್ತೆ ಬಂದಿದ್ದೆ ನಾ ತವರಿಗೆ. ಅಣ್ಣನೊಬ್ಬ ಉಳಿದಿದ್ದ, ಬದುಕಿಗೆ ಜೀವಂತಿಕೆ ಕಟ್ಟಿಕೊಟ್ಟ, ಜೀವನಕ್ಕೆ ಅಪೂರ್ವ ಸೌಂದರ್ಯ ಕಟ್ಟಿಕೊಟ್ಟ, ಖುಷಿಯಲ್ಲಿ ನಕ್ಕು ನಗಿಸಿದ ಆ ತವರು ಕಾಣಲು ಮತ್ತೆ ನಾ ಬಂದಿದ್ದೆ. ಆದರೆ ಅದೇಕೋ ಖಾಲಿ ಖಾಲಿ...ಮನೆಯೆದುರು ನಾ ಇಟ್ಟ ರಂಗೋಲಿ ಮಾಸಿತ್ತು, ಆದರೆ ನೆನಪಷ್ಟೇ ಉಳಿದಿತ್ತು. ಅಮ್ಮನಂತ ಅಣ್ಣನ ತೋಳು ನನ್ನ ಪ್ರೀತಿಗೆ ಹಾತೊರೆದಂತೆ ಕಾಣಲಿಲ್ಲ. ನಕ್ಕು ನಗಿಸಿದ ತುಂಟಾಟ, ಲಗೋರಿಯಾಟ ಆಡಿದ ಅಣ್ಣನ ಮುಖದಲ್ಲಿ ಎಂದಿನ ನಗೆ ಬೆಳಕಿರಲಿಲ್ಲ. ಅತ್ತಿಗೆಯ ಮುಖ ನನ್ನಮ್ಮನಂತೆ ನನ್ನ ಸ್ವಾಗತಿಸಲಿಲ್ಲ. ತನ್ನ ಕೋಣೆಯೊಳಗೆ ಕುಳಿತ ಅಣ್ಣ ಹಾಗೇ ಬಾಗಿಲು ಹಾಕಿದ್ದ. ಮತ್ತೆಂದೂ ತೆರೆಯಲಿಲ್ಲ....ಆದರೆ..ನನ್ನೊಳಗಿನ ಪ್ರಶ್ನೆಗಳಿಗೆ ಅಲ್ಲಿ ಉತ್ತರವಿರಲಿಲ್ಲ..ಯಾಕಂದರೆ ಆತ ನನ್ನ 'ಅಣ್ಣ' ಆಗಿದ್ದ. ಪ್ರೀತಿಯ ತವರಾಗಿದ್ದ. ಮಮತೆಯ ಮಡಿಲಾಗಿದ್ದ.
ಮತ್ತದೇ ಹಾಡು ...ಗುನುಗಿತು...ಮನದೊಳಗೆ..
ತವರೂರ ಮನೆ ನೋಡ ಬಂದೆ...
ತಾಯ ನೆನಪಾಗಿ ಕಣ್ಣೀರ ತಂದೆ...
ಬಾಗಿಲ ಮುಂದೆ ರಂಗೋಲಿ
ಬಾಗಿ ಇಡುತ್ತಿದ್ದೆ ನಾನಾ ತರದಲ್ಲಿ ...
ಮತ್ತೆ ತೆರಳಿದೆ..'ನನ್ನೂರಿಗೆ' ಅಲ್ಲಿ...!!!
ಫೋಟೋ ಕೃಪೆ: http://www.flickr.com/
19 comments:
ಏನಮ್ಮ, ಕಣ್ಣ೦ಚಿನಲ್ಲಿ ನೀರು ಬಾರಿಸುವ ಲೇಖನಗಳನ್ನೇ ಬರೀತಿಯಲ್ಲ. ಬರಹ, ಬರಹದ ಶೈಲಿ ಚೆನ್ನಾಗಿದೆ. ಇದು ವಾಸ್ತವವು ಹೌದು. ಅಮ್ಮನಿಲ್ಲದ ಮೇಲೆ ತವರಲ್ಲಿ ಬಹುತೇಕ ಹೆಣ್ಣುಮಕ್ಕಳಿಗೆ ಆಕರ್ಷಣೆ ಇರುವುದಿಲ್ಲ. ಅತ್ತಿಗೆಗೆ ನಾದಿನಿಯ ಬಗ್ಗೆ ಪ್ರೀತಿ ಮಮಕಾರ ಮೂಡುವುದು ಬಹಳ ವಿರಳ. ಸಹಜವಾಗಿ ಅಣ್ಣನೂ ಹಳೆಯ ನೆನಪುಗಳನ್ನು ಮಮತೆಯ ಸೆಲೆಗಳನ್ನು ಮರೆತಿರು ತ್ತಾನೆ. ಇ೦ದಿನ ವ್ಯಾವಹಾರಿಕ ಜಗತ್ತಿನಲ್ಲಿ ಇದೆಲ್ಲ ಸಾಮಾನ್ಯ ಅಲ್ವೇ ? ಆದ್ರೆ ನಿನ್ನ ಲೇಖನ ಭಾವಪೂರ್ಣವಾಗಿದೆ.
ನಂಗೆ ಯಾವಾಗಲೂ ಸೋಜಿಗ ತರುವ ವಿಷಯವಿದು. ಹುಟ್ಟಿ, ಬೆಳೆದ ತವರುಮನೆಯನ್ನು, ಅಪ್ಪ, ಅಮ್ಮ, ಅಣ್ಣ, ತಮ್ಮ, ಅಕ್ಕ, ತಂಗಿಯರನ್ನು, ಬಾಲ್ಯದ ಸ್ನೇಹಿತೆಯರನ್ನು ಬಿಟ್ಟು ಅದು ಹೇಗೆ ಹೆಣ್ಣು ಮಕ್ಕಳು ಗಂಡನ ಮನೆಯಲ್ಲಿ ಮನೆಯವರಾಗಿ ಹೊಂದಿಕೊಂಡು ಇರುತ್ತಾರೆ ಅಂತ. ತವರುಮನೆ ಅಂದ ತಕ್ಷಣ ಐವತ್ತರ ನನ್ನಮ್ಮನ ಕಣ್ಣಲ್ಲಿ ಈಗಲೂ ಹೊಳಪು ಮೂಡುವದನ್ನು ಗಮನಿಸಿದ್ದೇನೆ. ಈ ಸೆಂಟೀಮೆಂಟನ್ನೇ ಅಲ್ಲವೇ ಎಸ್. ನಾರಾಯಣ್ ತರದವರು ಎನ್ಕ್ಯಾಶ್ ಮಾಡಿಕೊಳ್ಳುವುದು :)
ಸುಂದರ, ಭಾವನಾತ್ಮಕ ಬರಹಕ್ಕೆ ಅಭಿನಂದನೆಗಳು!
ನಿಜ ರೀ,
ಹಾಲುಂಡ ತವರಿನ "ತಾಯಿನೇ ಇಲ್ಲದಂತ ತವರು ಯಾಕ ತಂಗಿ" ಹಾಡು ನೆನಪಾಯಿತು..
ಧನ್ಯವಾದಗಳು
ಧರಿತ್ರಿ,
ತವರು ತಪ್ಪಿದ ಹೆಣ್ಣು ಮಕ್ಕಳ ಮನೋಭಾವನೆಯನ್ನು ಚೆನ್ನಾಗಿ ಚಿತ್ರಿಸಿದ್ದೀರಿ.
ಧರಿತ್ರಿ..
ಭಾವನಾತ್ಮಕವಾಗಿ ಬರೆದಿದ್ದೀರಿ...
ಆಪ್ತವಾಗುತ್ತದೆ...
ಬಾಲ್ಯದಲ್ಲಿ "ತವರು"
ಯೌವನದಲ್ಲಿ "ಅವರು"
ಅವರ, ಇವರ, ನಡುವೆ ತವರ ಸಂಬಂಧ ಹೇಗೆ ನಿಭಾಯಿಸುತ್ತಾರೆ..?
ಮದುವೆಯಾದ ಹೆಣ್ಣುಮಕ್ಕಳನ್ನೇ ಕೇಳಬೇಕು...
ಚಂದದ ಲೇಖನಕ್ಕೆ
ವಂದನೆಗಳು...
ಬರೀ ಕಣ್ಣೀರು ಹಾಕಿಸ್ತೀರಾ ಕಣ್ರೀ ಓದುಗರಿಗೆ... :’(
ತವರೂರು ಅಂದರೆ ಹೆಣ್ಣು ಮಕ್ಕಳಿಗೆ ತುಂಬಾ ಇಷ್ಟ. ಅದಕ್ಕೆ ನೆನೆಸಿಕೊಂಡಾಗಲೆಲ್ಲಾ ಕಂಬನಿ.
ಹೌದು ನಿಮಗೇನು ಮದುವೆಯಾಗಿದೆಯೇ..?
"ತವರಿನ ಪ್ರೀತಿಯ ಚಪ್ಪರದಡಿಯಲ್ಲಿ ನಾ ಸಪ್ತಪದಿ ತುಳಿದಿದ್ದೆ."
ನಿಮಗಾಗಿ ಒಂದು ಶಿಶುವಾಣಿ ಅಂತರ್ವಾಣಿಯಲ್ಲಿ ಕಾಯುತ್ತಿದೆ.
ಖುಷಿಯಿಂದ ಈ ಹೊಸ ಬ್ಲಾಗನ್ನು ನೋಡಲು ಬಂದೆ ಕಣ್ಣಂಚಿನ ನೀರು ಸ್ವಾಗತಿಸಿತು. ಎಷ್ಟು ಟವೆಲ್ ಗಳು ಒದ್ದೆಯಾಗಿದವೋ!
ತಮಾಷೆ ಸಾಕು...
ಈ ರೀತಿಯ ಬರಹ ಕೇವಲ ಧರಿತ್ರಿಯಿಂದ ಮಾತ್ರ ಸಾಧ್ಯ. ಈ ಹೆಸರೂ ಚೆನ್ನಾಗಿದೆ.
ನಿಮ್ಮ ಹಸ್ತಾಕ್ಷರವನ್ನು ನನ್ನ ಬ್ಲಾಗಲ್ಲಿ ಹಾಕ್ತೀರಾ?
ದರಿತ್ರಿ
ಮನ ತಟ್ಟುವ ಹಾಗೆ ಬರೆದಿದ್ದೀರಿ, ತುಂಬ ಚೆನ್ನಾಗಿ ವರ್ಣಿಸಿದ್ದೀರ ನಿಮ್ಮ ಬಾಲ್ಯ ಹಾಗು ತವರುಮನೆ ಸೊಬಗನ್ನು, ಹೆಣ್ಣು ಮಕ್ಕಳಿಗೆ ಮಾತ್ರ ಗೊತ್ತಾಗೋದು ತವರಿನ ಆನಂದ... ಎಲ್ಲಾ ಹೆಣ್ಣುಮಕ್ಕಳು ಅವರದೇ ಅದ ಪ್ರಪಂಚದಲ್ಲಿ ಬೆಳೆದು ಆಡಿ,, ಮದುವೆ ಅದ ಮೇಲೆ,, ಒಂದು ಥರ ಬೇರೇ ಪ್ರಪಂಚ, environment ಗೆ ಹೊಂದಿಕೊಳ್ಳ ಬೇಕು ಅಂದ್ರೆ ಸುಮ್ನೆ ಅಲ್ಲ.. ಅದಕ್ಕೆ ಇರಬೇಕು ತವರಿಗೆ ಇಷ್ಟು ಮಹತ್ವ ಇರೋದು, ಪ್ರತಿ ಸರಿ ಅವರು ತವರಿಗೆ ಹೋಗಬೇಕಾದ್ರೆ ಅಸ್ಟೊಂದು ಸಂಭ್ರಮ ಪಡುವುದು ......
ಗುರು
ಧರಿತ್ರಿ,
ನೀನು ಕೋಪಿಸಿಕೊಳ್ಳಲ್ಲ ಅಂದ್ರೆ ನನ್ನದೊಂದು ಮಾತು. ನೀನು ಈ ರೀತಿ ಅಳಿಸುವುದನ್ನು ಬಿಟ್ಟು, ಮನಃಫೂರ್ವಕವಾಗಿ ನಗಿಸುವ ಬರಹ ಯಾವಾಗ ಹಾಕುತ್ತೀಯಾ....ಸುಮ್ಮನೇ ತಮಾಷೆಗೆ ಕೇಳಿದೆ....
ಬರಹ ಓದಿದಾಗ ನನ್ನ ಬಾಲ್ಯವೂ ನೆನಪಾಯಿತು....ಅದರೆ ಹೆಣ್ಣುಮಕ್ಕಳಷ್ಟು ಚೆಂದವಿರುವುದಿಲ್ಲವಲ್ಲ ನಮ್ಮದು....ನಿಮ್ಮದೆಲ್ಲಾ ಯುಗಾದಿಗೆ ಬಿಟ್ಟ ರಂಗೋಲಿಯ ಹಾಗೆ...ಸುಂದರ....ತವರು ಮನೆಯ ಬಾಲ್ಯದ ನೆನಪು..
ಯುಗಾದಿ ಮರುದಿನ ನೆಂಟರೆಲ್ಲಾ ಹೋಗಿ...ಸಂಪೂರ್ಣ ಅಳಿಸಿಹೋಗಿರದ...ಅಂದಗೆಟ್ಟ ರಂಗೋಲಿ...ಮದುವೆಯಾಗಿ ಹೊರಬಂದ ಹೆಣ್ಣುಮಕ್ಕಳು ನಂತರ ನೆನೆಸಿಕೊಂಡ ತವರಿನ ನೆನಪು....
ಧನ್ಯವಾದಗಳು....
ನಿಮ್ಮ ಚೆಂದನೆಯ ಬರಹ ನನ್ನ ತುಂಭಾ ಹಿಡಿಸಿತು
ಬಿಡುವು ಮಾಡಿಕೊಂಡು ನಿಮ್ಮ ಎಲ್ಲಾ ಲೇಖನಗಳನ್ನು ಓದುತ್ತೆನೆ
ತುಂಭಾ ಚೆನ್ನಾಗಿ ಬರೆಯುತ್ತಿರಾ
ಓಳ್ಳೆಯದಾಗಲಿ
ಅಮ್ಮನೆತ್ತರಕ್ಕೆ ಬೆಳೆದ ನಾನೂ 'ಅಮ್ಮ'ನಾಗಿದ್ದೆ. ಆದರೆ, ಇದ ಕಂಡು ಖುಷಿ ಪಡಲು ಅಮ್ಮನಿರಲಿಲ್ಲ ಜೊತೆಯಲ್ಲಿ.!
ಇಂಥ ಸಾಲುಗಳು ಬರೆಯಲು ಬ್ಲಾಗ್ ಲೋಕಕ್ಕೆ ಕಾಲಿಟ್ರಾ ಧರಿತ್ರಿ :)
ಧರಿತ್ರಿ,
ಈ ಬರಹದ ಬಗ್ಗೆ ಬರೆಯಲು ಶಬ್ದಗಳಿಲ್ಲ, ಇದನ್ನು ಓದಿದ ಮೇಲೆ ಬರಿಯ ಮೌನ ಆವರಿಸಿದೆ ಮನವನ್ನು.
ಮನೋಜ್ಞ ಬರಹ... ತುಂಬಾನೇ ಇಷ್ಟವಾಯಿತು.
ಧರಿತ್ರಿ,
ತಾಯಿ-ತವರು-ಮಮತೆ-ಕರುಣೆ,ಅಬ್ಬಾ ಊಹಿಸಲು ಅಸಾಧ್ಯ ಹೆಣ್ಣಿಗೆ ತಾಯಿಲ್ಲದ ತವರು ಹೇಗಿರುತ್ತದೆ ಅ೦ತ.ನನ್ನ ಅತ್ತೆಯವರು ಸಹ ವಿಧಿವಶವಾಗಿದ್ದಾರೆ,ನನ್ನ ಶ್ರೀಮತಿಯ ತವರು ನೆನಪಾದಾಗಲೆಲ್ಲಾ ಆಕೆ ಅನುಭವಿಸುವ ನೋವನ್ನ ನಾನು ಕಣ್ಣಾರೆ ಕ೦ಡಿರುವೆ.ತಾಯಿಲ್ಲದೆ ಆ ತವರನ್ನ ಆಕೆ ಅಗಾಗೆ ನೆನಪಿಸಿಕೊ೦ಡು ದೇವರಿಗೆ ಶಾಪ ಹಾಕ್ತಾಳೆ..ದೇವರೇ ನೀನೆಷ್ಟು ಕೆಟ್ಟವನು ದೇವರ೦ತ ಅಮ್ಮಾನನ್ನ ನನ್ನಿ೦ದ ಕಿತ್ತುಕೊ೦ಡೆ ಅ೦ತಾಳೆ.
ನಿಮ್ಮ ಭಾವನೆ,ಭಾಷೆ ಚೆನ್ನಾಗಿದೆ.
ಧರಿತ್ರಿ,
ತಾಯಿ-ತವರು-ಮಮತೆ-ಕರುಣೆ,ಅಬ್ಬಾ ಊಹಿಸಲು ಅಸಾಧ್ಯ ಹೆಣ್ಣಿಗೆ ತಾಯಿಲ್ಲದ ತವರು ಹೇಗಿರುತ್ತದೆ ಅ೦ತ.ನನ್ನ ಅತ್ತೆಯವರು ಸಹ ವಿಧಿವಶವಾಗಿದ್ದಾರೆ,ನನ್ನ ಶ್ರೀಮತಿಯ ತವರು ನೆನಪಾದಾಗಲೆಲ್ಲಾ ಆಕೆ ಅನುಭವಿಸುವ ನೋವನ್ನ ನಾನು ಕಣ್ಣಾರೆ ಕ೦ಡಿರುವೆ.ತಾಯಿಲ್ಲದೆ ಆ ತವರನ್ನ ಆಕೆ ಅಗಾಗೆ ನೆನಪಿಸಿಕೊ೦ಡು ದೇವರಿಗೆ ಶಾಪ ಹಾಕ್ತಾಳೆ..ದೇವರೇ ನೀನೆಷ್ಟು ಕೆಟ್ಟವನು ದೇವರ೦ತ ಅಮ್ಮಾನನ್ನ ನನ್ನಿ೦ದ ಕಿತ್ತುಕೊ೦ಡೆ ಅ೦ತಾಳೆ.
ನಿಮ್ಮ ಭಾವನೆ,ಭಾಷೆ ಚೆನ್ನಾಗಿದೆ.
ಪರಾಂಜಪೆಯಣ್ಣ, ಶಿವಣ್ಣ, ಮಲ್ಲಿಯಣ್ಣ, ವಿಕಾಸ್, ನಮಸ್ಕಾರ...
ಭಾನುವಾರ ಒಂದು ಸಂಜೆ ಬರೇ ಜಾನಪದ ಹಾಡುಗಳನ್ನು ಕೇಳುತ್ತಾ ಕಳೆದಿದ್ದೆ. ಅದರಲ್ಲಿ ತವರೂರ ಮನೆ ನೋಡ ಬಂದೆ ಮತ್ತು ಮದುವೆಯಾಗಿ ಒಂದು ವರುಷದಾಂಗ ನನ್ನ ಮಗ ದೂರ ಆದ..ಹಾಡುಗಳನ್ನು ಕೇಳುತ್ತಿದ್ದಂತೆ ಥಟ್ಟನೆ ಮೇಲಿನ ಲೇಖನ ಮೂಡಿತು. ಯಾರ ಕಣ್ಣಲ್ಲೂ ನೀರು ತರಿಸುವ ಉದ್ದೇಶ ನನ್ನದಾಗಿರಲಿಲ್ಲ..ಆದರೆ ಆ ಹಾಡು ಕೇಳುತ್ತಾ ನಾನೂ ಕಣ್ಣೀರಾಗಿದ್ದೆ.
ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆಗಳಿಗೆ ಧನ್ಯವಾದಗಳು. ಹೀಗೇ ಬರುತ್ತಿರಿ.
ಶಿವಪ್ರಕಾಶ್, ಉಮೇಶ್, ಗುರು ಸರ್, ಸುನಾಥ್ ಸರ್, ರಾಜೇಶ್, ಹರೀಶ್ ಸರ್, ಪ್ರತಿಕ್ರಿಯೆಗೆ ಧನ್ಯವಾದಗಳು. ತವರು ಅಂದ್ರೆ ಹಾಗೇ ಹೆಣ್ಣುಮಕ್ಕಳಿಗೆ ಅಮ್ಮನ ಮಡಿಲು ಇದ್ದ ಹಾಗಂತೆ.
@ಪ್ರಕಾಶ್ ಸರ್..ಅವರ, ಇವರ, ನಡುವೆ ತವರ ಸಂಬಂಧ ಹೇಗೆ ನಿಭಾಯಿಸುತ್ತಾರೆ? ಅದೇ ನಂಗೂ ಗೊತ್ತಾಗಿಲ್ಲ..ನನ್ ಮದುವೆ ಆದ ಮೇಲೆ ಖಂಡಿತ ನಿಮಗೆ ತಿಳಿಸ್ತೀನಿ ಸರೀನಾ?
@ಅಂತರ್ವಾಣಿ...ನಮಸ್ಕಾರ. ನಿಮಗೆ ಗೊತ್ತೇ ಇದೆಯಲ್ಲ..ನಾನಿನ್ನೂ ಸಪ್ತಪದಿ ತುಳಿದಿಲ್ಲ ಅಂತ. ನಿಮ್ ಶಿಶುವಾಣೀನ ಓದುವೆ.
@ಅಹರ್ನಿಶಿ..ಬದುಕು ತೀರಾ ಘೋರ ಅನಿಸಿಬಿಡುತ್ತೆ. ತಾಯಿಯಿಲ್ಲದ ತವರನ್ನು ನೆನೆಸಿಕೊಳ್ಳೊದು ಖಂಡಿತಾ ಕಷ್ಟ..
ಮತ್ತೊಮ್ಮೆ ನಿಮಗೆಲ್ಲಾ ಧನ್ಯವಾದಗಳು. ಬರುತ್ತೀರಿ.
-ಧರಿತ್ರಿ
ಧರಿತ್ರಿ,
ತವರನ್ನು ನೆನೆದು ಕಣ್ಣಂಚು ಒದ್ದೆಯಾಗಿಸದ ಹೆಣ್ಣೆ ಬಹುಶಃ ಈ ದೇಶದಲ್ಲಿಲ್ಲ! ಮನಮುಟ್ಟುವ ಬರಹ. ಇಷ್ಟವಾಯಿತು.
ಇದು ತು೦ಬಾ ಚೆನ್ನಾಗಿತ್ತು. ನನ್ನ ಅಕ್ಕ೦ದಿರು ಮದುವೆಯಾದ ಮೇಲೆ ತವರಿಗೆ ಬ೦ದರೆ ನಮಗೆಲ್ಲಾ ಏನೋ ಸ೦ಭ್ರಮ. ಆ ಕ್ಷಣಗಳು ಮತ್ತೆ ನೆನಪಾದವು.
ತುಂಬಾ ಮನಸ್ಸಿಗೆ ಹತ್ತಿರವಾದ ಲೇಖನ ಅನ್ನಿಸ್ತು
Post a Comment