ಅಂದು ಅಪ್ಪ ತುಂಬಾ ಕಾಡಿದ. ಒಂದೂವರೆ ವರ್ಷದಲ್ಲಿ ನನ್ನಲ್ಲಿ ಪ್ರೀತಿಯ ಸೌಧವನ್ನೇ ಕಟ್ಟಿದ ಅಪ್ಪ. ಕಳೆದ ವರ್ಷ ಇದೇ ದಿನ ಅಪ್ಪನ ಕಾಲು ಮುಟ್ಟಿ ನಮಸ್ಕರಿಸಿದ್ದೆ. ಅಪ್ಪ ಹರಸಿದ್ದ: ಮಗಳೇ, ಬರುವ ವರ್ಷ ಮೊಮ್ಮಗು ಬರಲೆಂದು. ಬಂದು ಬಿಡುತ್ತೆ ಅಪ್ಪ...ಕಾಯ್ತಾ ಇರು ಎಂದು ಸುಳ್ಳು ಹೇಳಿದ್ದೆ. ನನ್ನ ಸುಳ್ಳುಗಳನ್ನೂ ಸತ್ಯವೆಂದು ನಂಬಿದ್ದ ಮುಗ್ಧ ಅಪ್ಪ.
ಒಂದ್ಸಲ ತಿರುಪತಿಗೆ ಹೋಗಿದ್ವಿ. ಸರತಿ ಸಾಲಿನಲ್ಲೇ ನಿಂತರೆ ಗಡಗಡ ನಡುಗುತ್ತಿದ್ದ ಅಪ್ಪನಿಗೆ ಎದುರುಬಾಗಿಲಲ್ಲೇ ದೇವರ ದರ್ಶನಕ್ಕೆ ಅನುಮತಿ ಸಿಕ್ತು. ದೇವರೆದುರು ಕೈ ಮುಗಿದು ನಿಂತ ಅಪ್ಪನ ಕಣ್ಣಲ್ಲಿ ಕಣ್ಣೀರು ಜಿನುಗುತ್ತಿತ್ತು. ಎಪ್ಪತ್ತೈದು ದಾಟಿದ ಅಪ್ಪನಿಗೆ ಸಾವಿನ ಖಚಿತತೆ ಗೊತ್ತಿತ್ತೇ? ಅನುಮಾನಿಸಿತು ಮನ. ಲಡ್ಡು ತೆಗೆದುಕೊಂಡು ಹೊರಬಂದ ಅಪ್ಪನ
ಬಳಿ ಕೇಳಿದೆ?: ಏನ್ ಬೇಡ್ಕೊಂಡೆ ದೇವ್ರರಲ್ಲಿ? ಏನು ಕೊಟ್ಟ ದೇವರು? ಎಂದು. ಅಪ್ಪ ನಗುತ್ತಲೇ ಹೇಳಿದ: ಮಗಳ ಮಡಿಲ ತುಂಬಲಿ ಎಂದು ಕೇಳಿದೆ. ದೇವ್ರು ಲಡ್ಡುಕೊಟ್ಟಿದ್ದಾನೆ. ಅದನ್ನು ಭಕ್ತಿಯಿಂದ ಸೇವಿಸು ಎಂದ. ಹೌದೇನು ಅಪ್ಪ? ತುಂಬುತ್ತೆ ಬಿಡಪ್ಪಾ, ಪದೇ ಪದೇ ಮೊಮ್ಮಗು ಪುರಾಣ ಆಡಿದ್ರೆ ಮಾತೇ ಆಡಲ್ಲ ಎಂದು ಗದರಿ ಸುಮ್ಮನಾದೆ. ಅಪ್ಪನ ಮುಖದಲ್ಲಿ ತುಸು ಬೇಜಾರು.
ಅದೊಂದು ಗುರುವಾರ. ಅಪ್ಪ ಸಾಯಿಬಾಬಾ ಮಂದಿರಕ್ಕೆ ಹೋಗಿಬಂದಿದ್ದ. ಸಾಯಿ ಮಂದಿರದಿಂದ ದೊಡ್ಡ ಡಬ್ಬದಲ್ಲಿ ಪ್ರಸಾದ ತಂದಿದ್ದ. ಏನಪ್ಪಾ ದೊಡ್ಡ ಡಬ್ಬದಲ್ಲಿ ಪ್ರಸಾದ ತಂದೆ? ದೇವರಿಗೇನಾದ್ರೂ ಇನ್ಲುಪುವೆನ್ಸ್ ಮಾಡಿಬಿಟ್ಟೆಯಾ? ಎಂದೆ. ಅದಕ್ಕವನು, ಸುಮ್ಮೆ ತಿನ್ನು, ಹೇಳಿದ್ರೆ ನೀನು ಕೋಪಿಸಿಕೊಳ್ತಿ. ಸುಮ್ಮೆ ಭಕ್ತಿಯಿಂದ ತಿನ್ನು ಅಂದ. ಗಬಗಬನೆ ತಿಂದೆ. ಅಪ್ಪನ ಮುಖದಲ್ಲಿ ಸಂತೃಪ್ತಿಯ ನಗು.
ಕತ್ತಲು-ಬೆಳಕು ಕಣ್ಣೆದುರೇ ಸರಿದುಹೋಯಿತು. ಬದುಕು ಬಂಡಿಯಲ್ಲಿ ಅಪ್ಪ ಮೊಮ್ಮಗುವಿನ ನಿರೀಕ್ಷೆಯಲ್ಲಿದ್ದ. ಪ್ರತಿ ಶುಕ್ರವಾರ ಲಕ್ಷ್ಮಿಗೆ ಪೂಜೆ ಮಾಡುವಾಗಲೂ, ತುಳಸಿ ಗಿಡಕ್ಕೆ ನೀರು ಹಾಕುವಾಗಲೂ ಅಪ್ಪನಿಗೆ ಮೊಮ್ಮಗುವಿನ ಕನವರಿಕೆ. ಕೈ-ಕಾಲುಗಳಲ್ಲಿ ಬಲವಿಲ್ಲದಿದ್ದರೂ, ಸಿಕ್ಕ-ಸಿಕ್ಕ ಕಲ್ಲು ದೇವರುಗಳೆದುರು ನಿಂತು ಅಪ್ಪ ಮೊಮ್ಮಗು ಬೇಡಿದ್ದ. ಅವನಿಗೇನು ಗೊತ್ತು? ದೇವರು ಮಗು ಕೊಡಲ್ಲವೆಂದು?
ಮೊನ್ನೆ ಮೊನ್ನೆ ನಮ್ಮ ಮದುವೆಗೆ ಎರಡು ವರ್ಷ. ಕಳೆದ ವರ್ಷ ದೇವರ ಮನೆಯಲ್ಲಿ ಅಪ್ಪ-ಅಮ್ಮ ಇಬ್ಬರೂ ನಿಂತು ಅಕ್ಷತೆ ಹಾಕಿ ಹರಸಿದ್ದರು. ಈ ಬಾರಿ ಅಮ್ಮ ಒಬ್ಬಳೇ ಇದ್ದಳು!. ವರಾಂಡದಲ್ಲಿದ್ದ ಅಪ್ಪನ ಫೋಟೋಗೋ ಮಲ್ಲಿಗೆ ಹಾರ ಹಾಕಿ ನಮಸ್ಕರಿಸಿದೆ. ನನ್ನ ಕಣ್ಣುಗಳು ಒದ್ದೆಯಾದವು. ಅಪ್ಪ ತುಟಿಬಿಚ್ಚಲಿಲ್ಲ, ಮೊಮ್ಮಗು ಎಲ್ಲಿ ಎಂದು ಕೇಳಲಿಲ್ಲ. ಕಪ್ಪಗಿನ ದಪ್ಪ ಕನ್ನಡದೊಳಗಿನಿಂದ ನನ್ನ ನೋಡಿದ. ಅಪ್ಪ ಕೋಪಿಸಿಕೊಂಡಿರಬೇಕೆಂದು ನಾನೂ ಮಾತಿಲ್ಲದೆ ಸುಮ್ಮನಾದೆ.