Monday, April 30, 2012

ನನ್ನ ಕೊಡೆಗೆ ಮೂರನೇ ಮಳೆಗಾಲ

ನನ್ನ ಕೊಡೆಗೆ ಮೂರನೇ ಮಳೆಗಾಲ. ಬೆಂಗಳೂರಿನ ಬಿಸಿಲಿಗೆ ಬಾಡಿ ಬಸಳೆಯಂತೆ ಬಾಗುವ ಕೊಡೆ ಮಂಗಳೂರ ಮಳೆಗೆ ಖುಷಿ-ಖುಷಿಯಿಂದ ಕೆಂದಾವರೆಯಾಗಿದೆ. ಮೆರೂನ್ ಬಣ್ಣದ ಕೊಡೆ ನನ್ನದು. ೨೦೦೯ರ ಫೆಬ್ರುವರಿ ಕೊನೆಯ ವಾರ ಮಲ್ಲೇಶ್ವರಂನ ೮ನೇ ಕ್ರಾಸ್‌ನಲ್ಲಿ ಚೌಕಾಸಿ ಮಾಡಿ ತೆಕೊಂಡಿದ್ದೆ. ಮುನ್ನೂರು ಹೇಳಿದವ ಕೊನೆಗೆ ನೂರರ ಎರಡು, ಐವತ್ತರ ಒಂದು ನೋಟು ಕೊಟ್ಟಾಗ ಸುಮ್ಮನಾಗಿದ್ದ. ವಿಶೇಷ ಅಂದ್ರೆ ಅದು ನನ್ನ ಮದ್ವೆಗೆ ತೆಕೊಂಡ ಕೊಡೆ. ಎರಡು ಮಳೆಗಾಲದಲ್ಲಿ ಈ ಕೊಡೆ ನನಗೆ ಆಸರೆ ನೀಡಿದೆ.
ಮೊನ್ನೆ ಮೊನ್ನೆ ಏಪ್ರಿಲ್ ೨೬. ಮಂಗಳೂರಿಗೆ ಹೋಗಿದ್ದೆ. ಬೆಳ್ಳಂಬೆಳಿಗ್ಗೆಯೇ ಮಳೆಶುರುವಾಗಿತ್ತು. ಕದ್ರಿ ದೇವಾಲಯದ ಹತ್ತಿರದ ಸಣ್ಣ ಬೆಟ್ಟ ಹತ್ತುವಾಗಲೇ ಜೋರು ಮಳೆ ಬರಬೇಕೇ? ನನ್ನ ಮೆರೂನ್ ಕೊಡೆ ಬ್ಯಾಗಿನಿಂದ ಹೊರತೆಗೆದೆ.  ಬೆಂಗಳೂರಿನಲ್ಲಿ ಮಳೆಗಾಲಕ್ಕಿಂತ ಬರೀ ಬಿಸಿಲನ್ನೇ ನೋಡಿದ ನನ್ನ ಕೊಡೆ ಖುಷಿಯಿಂದ ಬಿಡಿಸಿಕೊಂಡಿತ್ತು. ಧಾರಾಕಾರ ಮಳೆ. ನಾನು-ನನ್ನವರು ಇಬ್ಬರಿಗೂ ಕೊಡೆಯ ಆಸರೆ. ಹೊಟೇಲ್ ರೂಮ್‌ನಲ್ಲಿ ಫ್ಯಾನ್ ಗಾಳಿಗೆ ಒಣಗಿಸಿ ಮತ್ತೆ ಮಡಚಿಟ್ಟಿದೆ. ಬೆಂಗಳೂರಿನಲ್ಲಿ ಎರಡು ಮೂರು ದಿನಗಳಿಂದ ಬರೀ ಮೋಡ. ಪುಟ್ಟ ಬ್ಯಾಗ್‌ನೊಳಗೆ ಬೆಚ್ಚಗೆ ಮಲಗಿರುವ ನನ್ನ ಕೊಡೆಗೆ ಮತ್ತೆ ಮತ್ತೆ ಜೋರುಮಳೆಗೆ ಮೈಯೊಡ್ಡುವ ತವಕ

*****


ನಮ್ಮವ್ರ ರೈನ್ ಕೋಟ್!
ಅಪ್ಪ ತಂದು ಕೊಟ್ಟ ರೈನ್‌ಕೋಟ್‌ಗೆ ಇದು ಎರಡನೇ ಮಳೆಗಾಲ. ಆಗೋಮ್ಮೆ-ಈಗೊಮ್ಮೆ ಬೀಳುವ ಬೆಂಗಳೂರ ಮಳೆಗೆ ಈ ಕೋಟ್ ಇನ್ನೂ ಪೂರ್ತಿ ಒದ್ದೆಯಾಗಿಲ್ಲ. ಈ ವರ್ಷವಾದರೂ ಮಳೆಯಲ್ಲಿ ನೆನೆಯುವ ಅದೃಷ್ಟ ರೈನ್‌ಕೋಟ್‌ಗೆ ಸಿಗಬಹುದೇನೋ ಎನ್ನುತ್ತಾರೆ ನಮ್ಮೆಜಮಾಜನ್ರು. ಬೆಳ್ಳಂಬೆಳಿಗ್ಗೆ ಆಕಾಶ ತುಂಬಾ ಕಪ್ಪುಮೋಡ ಮುಸುಕಿದ್ದನ್ನು ನೋಡಿ ಕೂಡಿಟ್ಟ ರೈನ್‌ಕೋಟ್ ಅನ್ನು ಕೊಟ್ಟು ಕಳಿಸಿದ್ದೀನಿ. ಆದರೆ, ದಿನ ಮೂರಾದರೂ ರೈನ್‌ಕೋಟ್ ಒದ್ದೆಯಾಗಿಲ್ಲ.

**-*-*-*-*-*-*-*-*-*

ಉದ್ದ ಕಾಲಿನ ದೊಡ್ಡ ಕೊಡೆ
ಸ್ಕೂಲ್‌ಗೆ ಹೋಗುತ್ತಿದ್ದಾಗ ಕೊಡೆಗೆ ಮನೆಯಲ್ಲಿ ಕುರುಕ್ಷೇತ್ರವೇ ನಡೆಯುತ್ತಿತ್ತು. ನನ್ನ ಬಣ್ಣದ ಕೊಡೆ ಬೇಕೆಂದು ತಮ್ಮನ ಹಠ. ಬಣ್ಣದ ಕೊಡೆ ಹುಡುಗಿಯರಿಗೆ ಮಾತ್ರ ಎಂಬ ನನ್ನ ತಿಳುವಳಿಕೆಯ ವಾದ.ಕೊನೆಗೆ ತಮ್ಮನದೇ ಕೈ ಮೇಲು. ನಾನು ಅವನ ಉದ್ದ ಕಾಲಿನ ದೊಡ್ಡ ಕೊಡೆ ಹಿಡಿದು ಹೊರಟರೆ, ತಮ್ಮ ಬಣ್ಣದ ಕೊಡೆ ಹಿಡಿದು ನಗುತ್ತಿದ್ದ.  ಬಸ್‌ನಲ್ಲಿ ಹೋಗುವಾಗ ದೊಡ್ಡ ಕೊಡೆ ನೋಡಿ ಕಂಡಕ್ಟರ್ ಕಿರಿ. ಊರುಗೋಲು ತರ ಹಿಡಿದುಕೊಂಡು ರಶ್‌ನಲ್ಲಿ ಬಸ್ ಹತ್ತಿದರೆ ಸಿಕ್ಕ ಸಿಕ್ಕವರಿಗೆಲ್ಲ ಕೊಡೆ ತಾಗುತ್ತಿತ್ತು. ಎಲ್ಲರದೂ ಬೈಗುಳವೇ. ಅದಕ್ಕೆ ಒಂದು ದಿನ ದೊಡ್ಡ ಕೊಡೆಯ ಕಡ್ಡಿ ಮುರಿದು ಅಮ್ಮಂಗೆ ಸುಳ್ಳು ಹೇಳಿದ್ದೆ. ಕೊಡೆಯ ಕಡ್ಡಿ ಮುರಿದಿದೆ. ನನಗೆ ಸ್ವಿಚ್ ಕೊಡೆ ಬೇಕೆಂದು! ಸ್ವಿಚ್ ಕೊಡೆ ಅಂದ್ರೆ ಮಾಮೂಲಿ ಸ್ವಿಚ್ ಒತ್ತಿದರೆ
ಬಿಡಿಸಿಕೊಳ್ಳುವ ಕೊಡೆ. ಅಮ್ಮ ಅದನ್ನೂ ತಂದುಕೊಟ್ಟಿದ್ದಳು. ಇನ್ನೊಂದ್ಸಲ ಅಮ್ಮ ತಾವರೆ ಕೊಡೆ ತಂದಿದ್ದಳು.ತಾವರೆ ಕೊಡೆಯ ಕಡ್ಡಿಗಳು ತಾವರೆ ಆಕಾರಗಳವು. ಮಳೆಗಾಲದಲ್ಲಿ ಮೂರು ಮೈಲಿ ನಡೆದು, ಹೊಲ -ಗದ್ದೆ ದಾಟಿದ್ದು, ತುಂಬಿದ ಹೊಳೆಯಲ್ಲಿ ಭಯಪಡುತ್ತಲೇ ದಡ ಸೇರಿದ್ದು., ಭಾರೀ ಗಾಳಿಗೆ ಕೊಡೆ ಕೈಕೊಟ್ಟಾಗ ಗೆಳೆಯ-ಗೆಳತಿಯರ ಜೊತೆ ಒಂದೇ ಕೊಡೆಯೊಳಗೆ ಹೆಜ್ಜೆ ಹಾಕಿದ್ದು...ಅಬ್ಬಾ! ಮಳೆಗಾಲದ ಕೊಡೆ ನೆನಪು ಅದ್ಭುತ.

Tuesday, April 24, 2012

ಭೂತಾಯಿಗೆ ಕಾಗೆ ಮುಟ್ಟುವುದು!

ಇವತ್ತು ಭೂತಾಯಿಗೆ ಕಾಗೆ ಮುಟ್ಟಿದೆ. ನೀವು ಜಾಸ್ತಿ ಜಗ್ಳ ಆಡಬಾರದು. ಜಗ್ಳ ಆಡಿದ್ರೆ ಭೂಮಿತಾಯಿ ಬೇಜಾರುಪಡ್ಕೊಳ್ತಾಳೆ...ಅಮ್ಮ ಬೆಳ್ಳಂಬೆಳಿಗ್ಗೆ ರೊಟ್ಟಿ ತಟ್ಟುತ್ತಾ ಹೇಳುತ್ತಿದ್ದಳು. ಒಲೆ ಮೇಲೆ ಕಲ್ಲಿನ ಕಾವಲಿಯಲ್ಲಿ ರೊಟ್ಟಿ ಬೇಯಿತ್ತಿತ್ತು. ಮೊದಲ ರೊಟ್ಟಿ ನನಗೇ ಸಲ್ಲಬೇಕೆನ್ನುವುದು ತಮ್ಮನ ವಾದ. ಇದೇ ಸಿಟ್ಟಲ್ಲಿ ಒಲೆಯೊಳಗಿದ್ದ ಕಟ್ಟಿಗೆಯನ್ನು ಹಿಂದೆ-ಮುಂದೆ ಜಾರಿಸುತ್ತಿದ್ದ. ನನಗೆ ಕೊಡೆಂದು ಅಮ್ಮನ ಸೆರಗು ನಾನು ಹಿಡಿದುಕೊಂಡಿದ್ದೆ.

ಅಮ್ಮನ ಮಾತು ಒಗಟು. ಅರೆ! ಕಾಗೆ ಮುಟ್ಟುವುದಕ್ಕೂ, ನಾವು ಜಗ್ಳ ಆಡೋದಕ್ಕೂ ಏನು ಸಂಬಂಧ? ಅಮ್ಮನ ಕೇಳಿಯೇ ಬಿಟ್ಬಿ.

ನೋಡು ಪಕ್ಕದ್ಮನೆ ಲಲಿತಕ್ಕ ಕಾಗೆ ಮುಟ್ಟಿದೆ ಅಂತ ತಿಂಗ್ಳಲ್ಲಿ ಮೂರು ದಿನ ಹೊರಗಡೆ ಕೂರ‍್ತಾಳೆ. ಆಗ ಅವಳಿಗೆ ಅವ್ಳ ಅಮ್ಮ ಏನೂ ಕೆಲ್ಸ ಕೊಡಲ್ಲ. ಮನೆ ಹಿಂದಿನ ಕೋಣೆಯಲ್ಲಿ ಲಲಿತಕ್ಕ ಸುಮ್ಮನೆ ಮಲಗಿರ‍್ತಾಳೆ. ಹಂಗೆ, ಭೂಮಿತಾಯಿಗೂ ಕಾಗೆ ಮುಟ್ಟಿದೆ. ಅವಳಿಗೆ ನೋವು ಕೊಡಬಾರದು, ಸಿಟ್ಟು ಮಾಡಿ ಜಗಳ ಮಾಡಿಕೊಂಡ್ರೆ ಅವಳಿಗೆ ಬೇಜಾರಾಗುತ್ತೆ. ನೀವು ಸುಮ್ಮನಿರಬೇಕು ಎಂದು ಹೇಳುತ್ತಿದ್ದಳು.

‘ಹಾಗಾದ್ರೆ ಲಲಿತಕ್ಕನ ತರ ಭೂತಾಯಿಗೂ ತಿಂಗಳಿಗೊಮ್ಮೆ ಕಾಗೆ ಮುಟ್ಟುತ್ತಾ?’ ತಮ್ಮನ ಮಾತು ಅಮ್ಮನನ್ನು ಪೇಚಿಗೆ ಸಿಲುಕಿಸಿತ್ತು. ‘ಮನುಷ್ಯರು ತಿಂಗಳಿಗೊಮ್ಮೆ, ಭೂತಾಯಿ ವರ್ಷಕ್ಕೊಮ್ಮೆ’ ಎಂದು ಅಷ್ಟೇ ಹೇಳಿ, ನಮ್ಮಿಬ್ಬರಿಗೆ ಬೈದು ಸುಮ್ಮನಾಗಿಸುತ್ತಿದ್ದಳು. ಅಮ್ಮನ ಮಾತು ನಂಬಿದ ನಾವಿಬ್ಬರೂ ಜಗಳವಾಡದೆ ಸುಮ್ಮನಿರುತ್ತಿದ್ದೇವು.


ವರ್ಷದಲ್ಲಿ ಒಂದು ಸಲ ಭೂತಾಯಿಗೆ ಕಾಗೆ ಮುಟ್ಟುತ್ತಿತ್ತು. ಅಮ್ಮ ತುಳಸಿ ಗಿಡದ ಪಕ್ಕದಲ್ಲಿ ಮಸಿಯಿಂದ ಚೌಕ ತರ ಮಾಡಿ, ಅಲ್ಲಿ ಸೀಗೆಕಾಯಿ, ಮಸಿ ತುಂಡು ಇಡುತ್ತಿದ್ದಳು. ನಾಲ್ಕನೇ ದಿನಕ್ಕೆ ಅದೇ ಜಾಗದಲ್ಲಿ ಸೆಗಣಿ ಸಾರಿ, ಬಾಳೆಲೆ ಹಾಕುತ್ತಿದ್ದಳು. ಬಳಿಕ ಅದರ ಮೇಲೆ ಎಣ್ಣೆ, ಅರಿಶಿನ, ಕುಂಕುಮ, ಬಳೆ, ಹೂವುಗಳನ್ನು ಇಟ್ಟು ಭೂಮಿಗೆ ಎಣ್ಣೆ ಬಿಡುತ್ತಿದ್ದಳು. ‘ಭೂಮಿತಾಯಿಯನ್ನು ಸ್ನಾನ ಮಾಡಿಕೊಂಡು ಬಂದಿರ‍್ತಾಳೆ’ ಎನ್ನುವ ಅಮ್ಮ, ಒಂದು ಎಲೆಯಲ್ಲಿ ರೊಟ್ಟಿ, ಸಾರು ಹಾಕಿಡುತ್ತಿದ್ದಳು. ಭೂತಾಯಿ ತಿಂದ ಮೇಲೆ ನಾವು ಅಂಗಳದಲ್ಲೇ ಕುಳಿತು ತಿನ್ನುತ್ತಿದ್ದೆವು.

ತುಳುವಿನಲ್ಲಿ ಪುಯಿಂತೆಲ್(ಮಕರ ಮಾಸ) ತಿಂಗಳಿನ ಕೊನೆಯ ಅಂದ್ರೆ ೨೭, ೨೮, ೨೯ನೇ ದಿನ ಕೆಡ್ಡಸ ಎಂದು ಆಚರಿಸುತ್ತಾರೆ. ಭೂಮಿ ಹೊರಗಾಗಿದ್ದಾಳೆ ಎಂದು ಹೇಳುತ್ತಿದ್ದರು. ಆ ಮೂರು ದಿನವೂ ಭೂಮಿತಾಯಿಗೆ ನೋವಾಗುವ ಯಾವುದೇ ಕೆಲಸಗಳನ್ನು ಅಮ್ಮ ಮಾಡುತ್ತಿರಲಿಲ್ಲ, ತೋಟದ ಕೆಲಸಗಳಿಗೆ ರಜೆ, ಹೊಲ ಗದ್ದೆಗಳಲ್ಲೂ ಹಾರೆ-ಗುದ್ದಲಿಗಳ ಸದ್ದಿಲ್ಲ. ಸಾಮಾನ್ಯವಾಗಿ ಜನವರಿ-ಫೆಬ್ರುವರಿ ತಿಂಗಳಲ್ಲಿ ಈ ಹಬ್ಬ ಬರುತ್ತದೆ. ಇಂದು ಅಮ್ಮನೂ ಕೆಡ್ಡಸ ಮರೆತುಬಿಡ್ತಾರೆ!

Tuesday, April 17, 2012

ಆ ಕೆಂಪು ದೀಪದ ಸಿಗ್ನಲ್‌ನಲ್ಲಿ

ಅಲ್ಲಿ ಕೆಂಪು ಲೈಟ್ ಬಿತ್ತು. ಡ್ರೈವರ್ ಬ್ರೇಕ್ ಹಾಕಿದ. ಬಸ್ ನಿಂತಿತು. ಬಸ್‌ನಲ್ಲಿದ್ದವರೆಲ್ಲಾ ಉಸ್ಸಾಪ್ಪಾ ಎಂದು ನಿಟ್ಟುಸಿರು ಬಿಟ್ಟರು. ಡ್ರೈವರ್ ಮುಖ ಗಂಟಿಕ್ಕಿತು. ಬಸ್‌ನೊಳಗೆ ಉಸಿರುಗಟ್ಟಿಸುವ ವಾತಾವರಣ. ಸೀಟಿನಲ್ಲಿ ಕುಳಿತವರು, ಸೀಟಿಲ್ಲದೆ ನಿಂತವರು ಎಲ್ಲರ ಮುಖದಲ್ಲಿ ದಣಿವಿನ ದನಿ.

ಹೊರಗಿನ ಗಾಳಿ ಬೇಕನಿಸಿತು. ಕೊಂಚ ಮುಖ ಹೊರಹಾಕಿದೆ. ಪಕ್ಕದಲ್ಲಿದ್ದ ಕಾಂಪೌಂಡಿನಲ್ಲಿ ಮೈಸೂರ್ ಪ್ಯಾಲೇಸ್ ಚಿತ್ರ. ಸುಂದರವಾಗಿ ಬಿಡಿಸಿದ ಕಲಾವಿದನಿಗೊಂದು ಮನಸ್ಸಲ್ಲೇ ಶಹಭಾಷ್ ಹೇಳಿದೆ. ನೋಡು ನೋಡುತ್ತಿದ್ದಂತೆ ನಲವತ್ತು ದಾಟಿದ ಗಂಡಸೊಬ್ಬ ಬಂದು ಅದೇ ಕಾಂಪೌಂಡ್ ಮೇಲೆ ಉಚ್ಚೆ ಹೊಯ್ದ! ಇದೇ ಕಲೆಗೆ ಬಿಬಿಎಂಪಿ ಕೋಟಿ-ಕೋಟಿ ಖರ್ಚು ಮಾಡಿದೆ. ವ್ಯವಸ್ಥೆಯ ಕಾಳಜಿಯ ಹೊರುವವರಾರು? ಪ್ರಶ್ನೆಗಿನ್ನೂಉತ್ತರ ಸಿಕ್ಕಿಲ್ಲ.

ಯೋಚನೆಗಳು ತಲೆಕೊರೆಯುತ್ತಿರುವಾಗಲೇ ಮುಖದೆದುರೇ ಟಪ್! ಚಪ್ಪಾಳೆ ಬಿತ್ತು. ಕಂಡಕ್ಟರ್ ಕೊಟ್ಟ ಎರಡು ರೂಪಾಯಿ ಪಾವಳಿಯನ್ನು ಮಂಗಳಮುಖಿಯ ಕೈಗೆ ಹಾಕಿ ನಿಟ್ಟುಸಿರು ಬಿಟ್ಟೆ. ಅಲ್ಲೇ ಇದ್ದ ಹೆಲ್ಮೆಟ್ ಹಾಕಿದ ಚೆಂದದ ಹುಡುಗನ ಬೆನ್ನಿಗೊಂದು ಗುದ್ದಿ ಕೈಯೊಡ್ಡಿದಳು. ಪುಡಿಗಾಸು ಹಾಕಿದ. ಕೆನ್ನೆಗೊಂದು ಮುತ್ತಿಟ್ಟು ಮುಂದೆ ಸಾಗಿದಳು.
ದಪ್ಪ ಕನ್ನಡ ಇಟ್ಟಿದ್ದ ನುಡವಯಸ್ಕನೊಬ್ಬ ಚಿಲ್ರೆಗಾಗಿ ಎಸಿ ಕಾರಿನ ಬಾಗಿಲು ತಟ್ಟಿದರೆ, ಆತ ಬಾಗಿಲೇ ತೆಗೆಯದೆ ನಕ್ಕು ಸುಮ್ಮನಾದ. ಪಕ್ಕದಲ್ಲೇ ನಿಂತಿದ್ದ ಬೈಕ್‌ನಲ್ಲಿ ಕುಳಿತ ಯುವಕನೊಬ್ಬ ತನ್ನ ಹಿಂದೆ ಕುಳಿತ ಯುವತಿಯ ಕೈ ಅದುಮಿದ. ಅವಳು ನಾಚಿ ನಗೆಮಲ್ಲಿಗೆ ಚೆಲ್ಲಿದಳು. ಮುಂದೆ ನೋಡಿದೆ, ಬಿರುಬಿಸಿಲಿನಲ್ಲಿ ಟ್ರಾಫಿಕ್ ಪೊಲೀಸ್ ಸೋತುಹೋಗಿದ್ದ.
ಕಣ್ಣ ರೆಪ್ಪೆ ಮೇಲಿಂದ ದಣಿವಿನ ಬೆವರು ಇಳಿಯುತ್ತಿತ್ತು!

ಮತ್ತೆ ಹಸಿರು ಲೈಟ್. ಬಸ್ ಮುಂದೆ ಸಾಗಿತು. ಬಸ್‌ನಲ್ಲಿ ಸೀಟಿಲ್ಲದೆ ನಿಂತವರು, ಕಚೇರಿಗೆ ಹೊರಟ ಏಳು ತುಂಬಿದ ಯುವತಿ, ಆಫೀಸ್‌ಗೆ ಲೇಟಾಯ್ತು ಬಾಸ್ ಕೈಯಲ್ಲಿ ಬೈಸಿಕೊಳ್ಳಬೇಕೆಂದು ಕುಳಿತಲ್ಲೇ ಚಡಪಡಿಸುವ ಕೆಲವರು, ಮೊದಲ ಕ್ಲಾಸ್ ಮಿಸ್ ಆಯ್ತು, ಮ್ಯಾಥ್ಸ್ ಮೇಷ್ಟ್ರ ಬೈಗುಳಕ್ಕೆ ರೆಡಿಯಾಗೋಣ ಎಂದು ಪೋಲಿ ಜೋಕು ಬಿಡುವ ಕಾಲೇಜು ಹುಡುಗ್ರು..ಎಲ್ಲರಿಗೂ ಬದುಕಿನ ಅನಿವಾರ್ಯತೆ!

ಮತ್ತದೇ, ಕೆಂಪು ಲೈಟ್. ಡ್ರೈವರ್ ಗಂಟಿಕ್ಕಿದ ಮುಖದೊಂದಿಗೆ ಬಸ್ ನಿಲ್ಲಿಸಿದ. ಕಂಡಕ್ಟರ್ ಬೆಂಗ್ಳೂರಿಗೆ ಹಿಡಿಶಾಪ ಹಾಕ್ದ. ಪಕ್ಕದಲ್ಲಿ ನಿಂತಿದ್ದ ಬಸ್‌ನಿಂದ ಅಜ್ಜಿಯೊಬ್ಬಳು ಕತ್ತು ಉದ್ದ ಮಾಡಿ ಉಫ್ ಎಂದು ವೀಳ್ಯದೆಲೆ ಜಗಿದು ಉಗಿದಳು. ಬೈಕ್‌ನಲ್ಲಿದ್ದ ಹೆಲ್ಮೆಟ್‌ಧಾರಿ ಹುಡುಗ ತಲೆ ಮೇಲೆ ಬಿತ್ತು. ತೆಳುಮೀಸೆಯ ಆ ಹುಡುಗ ಅಜ್ಜಿಗೆ ಹಿಡಿಶಾಪ ಹಾಕಿ ತಾನೇ ಸೋತ! ಅಷ್ಟೊತ್ತಿಗೆ ಲೇಡಿಸ್ ಸೀಟಿನಲ್ಲಿ ಕುಳಿತು ದರ್ಬಾರ್ ತೋರಿಸಿದ್ದ ಪುರುಷನಿಗೊಬ್ಬನಿಗೆ ಮಂಗಳಾರತಿ ಆಗುತ್ತಿತು. ೧೪ ಸಿಗ್ನಲ್‌ಗಳನ್ನು ದಾಟಿ ಆಫೀಸ್‌ಗೆ ತಲುಪುವಷ್ಟರಲ್ಲಿ ಬದುಕಿನ ವಿವಿಧ ಮುಖಗಳಿಗೆ ನಾನು ಸಾಕ್ಷಿಯಾಗಿದ್ದೆ.