Sunday, April 26, 2009

ಕನಸು ಕಲ್ಲಾಗುವ ಮೊದಲು...!!

ಗೆಳೆಯಾ,
ನಿನ್ನ ನೆನಪಾದಾಗ ಅಮಾವಾಸ್ಯೆಯೂ ಹುಣ್ಣಿಮೆಯಂತೆ. ನೀ ನನ್ನೊಳಗೆ ಮಾತಿಗಿಳಿದಾಗ ಸುಡುವ ನೇಸರನೂ ತಂಪು ಸೂಸುವ ಚಂದಿರನಂತೆ. ನಿನ್ನ ಮೌನದ ದನಿ ಎದೆ ತಟ್ಟಿದಾಗ ಭಾವಗಳೂ ಜೀವ ಪಡೆಯುತ್ತವೆ. ಯಾಕೋ ನೀನಿಟ್ಟ ಪ್ರೀತಿಯ ಕಚಗುಳಿ ಮತ್ತೆ ಮತ್ತೆ ಹೃದಯದಲ್ಲಿ ಮಾರ್ದನಿಸುತ್ತದೆ ಗೆಳೆಯಾ. ಅನನ್ಯವಾದ ಬದುಕನ್ನು, ಅಮ್ಮನೆಂಬ ಶ್ರೇಷ್ಠ ಸತ್ಯವನ್ನು ಪ್ರೀತಿತಿಸಲು ಮಾತ್ರ ಅರಿತಿದ್ದ ನಾನು ನಿನ್ನನ್ನೂ ಪ್ರೀತಿಸಲು ಕಲಿತೆ. ನಿನ್ನಲ್ಲೂ ಜೀವನಪ್ರೀತೀನ ಕಂಡೆ. ನಿನ್ನಲ್ಲೂ ಬದುಕಿನ ಪ್ರತಿಬಿಂಬ ಕಂಡೆ. ನಾನಂದುಕೊಂಡಿರಲಿಲ್ಲ ಗೆಳಯಾ...ನೀ ಮೌನದಲ್ಲೇ ಪ್ರೀತಿಯಾಗಿ ನನ್ನೆದೆಯಲ್ಲಿ ಸ್ವಾತಿ ಮುತ್ತಾಗುವೆಂದು!

ಕಳೆದ ಬದುಕಿನ ಹಾದಿಯಲ್ಲಿ ನಂಬಿಕೆಯ ಪುಷ್ಪ ಹರಿಸಿ ನನ್ನೊಡನೆ ಹೆಜ್ಜೆಯಾಗಿದ್ದವನು ನೀನು. ಮನದೊಳಗೆ ಅವಿತಿದ್ದ ಶೋಕವನ್ನೇ ಶ್ಲೋಕವನ್ನಾಗಿಸಿ, ಅಳಲಿನ ಅಲೆಗಳನ್ನೇ ಸವಿಹಾಡಾಗಿಸಿದ ಗೆಳೆಯನೇ, ನಿನ್ನ ಖುಷಿಗೆ ನಾ ಬೆಳಕಾಗಬೇಕಾದರೆ ನಿನ್ನ ದುಃಖದ ಕತ್ತಲಲ್ಲೂ ನಾ ಕರಗಿ ಕಣ್ಣೀರಾಗಬೇಕು. 'ನಿನಗೆ ಬೆಳಕಷ್ಟೇ ನೀಡುತ್ತೇನೆ ಗೆಳತೀ..' ಎನ್ನುತ್ತಾ ದುಃಖವನ್ನೇಲ್ಲಾ ಬದುಕ ಮೇಲೆ ಹೊದ್ದು ಮಲಗುತ್ತೇನೆ ಎನ್ನುವ ಘನ ವ್ಯಕ್ತಿತ್ವ ನಿನ್ನದಾದರೂ ನಿನ್ನ ತುಂಬಾ ಪ್ರೀತಿಸುವ ಗೆಳತಿಯಾಗಿ, ಅಕ್ಕರೆಯ ಸಹೋದರಿಯಾಗಿ, ನೋವು-ನಲಿವಿಗೆ ಅಮ್ಮನಾಗಿ ಮಮತೆಯ ಮಡಿಲಾಗುವ ಅವಕಾಶ ಕೊಡ್ತೀಯಾ ಹೇಳು..?! ಬೆಳದಿಂಗಳ ಮಳೆಗೆ ಮಾತ್ರವಲ್ಲ ಬೆಂಕಿಮಳೆಯ ಕಾಳರಾತ್ರಿಯಲ್ಲೂ ನಿನ್ನ ಜೊತೆ ನಾ ಹೆಜ್ಜೆಯಾಗಬೇಕು. ಕಂಗಳಿಂದ ಜಾರೋ ಹನಿಬಿಂದು ಪಾದತಳಕ್ಕೆ ಬಿದ್ದು ಮಣ್ಣಾಗುವ ಮೊದಲು ಒಂದೇ ಒಂದು ಸಲ ಹೇಳಿಬಿಡು ಗೆಳಯಾ, "ಗೆಳತೀ ನನ್ನ ದುಃಖಕ್ಕೂ ಹೆಗಲಾಗಲೆಂದು..!"

ಹೃದಯ ತುಂಬಾ ದುಗುಡ-ಕಾರ್ಮೋಡವನ್ನು ಹೊತ್ತು 'ಮರೆತುಬಿಡು' ಎನ್ನುವಷ್ಟು ಸುಲಭವಲ್ಲ ಪ್ರೀತಿ-ಭಾವದ ಬಂಧನ. ನಿನ್ನ ಹುಣ್ಣಿಮೆ ನಗುವಿಗೆ, ಪ್ರೀತಿಯ ಕಚಗುಳಿಗೆ ಸಂಸ್ಕೃತಿ-ಕಟ್ಟಳೆಗಳ ಹಂಗಿರಲಿಲ್ಲ. ಸುತ್ತಮುತ್ತಲ ಜನ ದೇಶ ಭಾಷೆ ಕಲಿಯಬಹುದು..ಎನ್ನುವುದು ಭರವಸೆಯ ಹೊಂಗಿರಣವಲ್ಲ ಗೆಳೆಯಾ. 'ತೆರೆದಿದೆ ಮನೆ ಓ ಬಾ ಗೆಳತೀ..' ಎಂದು ಕೈಬೀಸಿ ಕರೆದು ಧಡ್ ! ಎಂದು ಮನದ ಕದ ಮುಚ್ಚದಿರು. ಅಂತರಂಗದ ಬಾಗಿಲು ತೆರೆದುಬಿಡು...ಪ್ರೀತಿಯ ಗಾಳಿ ಒಳಕ್ಕೆ ಹರಿದುಬಿಡಲಿ. ಬಣ್ಣ ತುಂಬಿಬಿಡು..ನೆನಪುಗಳಿಗೆ, ಪ್ರತಿ ರಾತ್ರಿಯ ಕನಸುಗಳಿಗೆ..ಜೀವನ ರಂಗೋಲಿಗೆ! ತಡವೇಕೆ..ಕಾಲ ಕಲಿಸುವ ಬದುಕಿಗೆ ನೀನ್ಯಾಕೆ ಬಂಧಿಯಾಗುತ್ತೀಯಾ ಹೇಳು? ಮನತುಂಬಿ ನಕ್ಕು ಬಿಡು..ಚಂದಿರನೂ ನಸು ನಾಚುವಂತೆ, ಅರಳುವ ಜಾಜಿಯೂ ಹುಸಿಮುನಿಸು ತೋರುವಂತೆ! ಅನನ್ಯ ಬದುಕಿನಲ್ಲಿ ಸ್ವಚ್ಚಂದ ಹಕ್ಕಿಯಾಗಿ ಆಕಾಶಕ್ಕೆ ಹಾರೋ ಆಡಂಬರತೆ ಬೇಡ..ನಮ್ಮದೇ ಬಿದಿರ ಹುಲ್ಲಿನ ಗುಡಿಸಲಿನಲ್ಲಿ ಪ್ರೀತಿಯ ಗೂಡು ಕಟ್ಟಿ ಕಲರವಗುಟ್ಟೋಣ. ಮೊಂಬತ್ತಿಯಡಿಯಲ್ಲೇ ಜೀವನಪ್ರೀತಿಯ ಅನುಭೂತಿ ಪಡೆಯೋಣ. ನಿನ್ನ ಬದುಕಿನಾಗಸದಲ್ಲಿ ಪುಟ್ಟ ನಕ್ಷತ್ರವಾಗೋ ಅವಕಾಶ ಕೊಡ್ತೀಯಾ ಹೇಳು ಗೆಳೆಯಾ....ಕನಸು ಕಲ್ಲಾಗುವ ಮೊದಲು..!!ಇಂತೀ,
ನಿನ್ನವಳೇ