ಕಳೆದ ವಾರ ನನ್ನಕ್ಕ ದೊಡ್ಡವಳಾಗಿದ್ದ ಕಥೆ ಹೇಳಿದೆ. ಇಂದು ಅಕ್ಕನೆತ್ತರಕ್ಕೆ ಬೆಳೆದ ನನ್ನ ಕಥೆ ಹೇಳ್ತೀನಿ.
ಅಂದು ನಾನು ಸುಮ್ಮನೆ ನಾಚಿಕೊಂಡ ದಿನ. ಎಲ್ಲರ ನೋಟಗಳು ನನ್ನತ್ತಲೇ ನೋಡುವಾಗ ಅದೇನೋ ಹೊಸ ಅನುಭವ. ಏನೋ ಒಂದು ಹೊಸತನ್ಮು ಪಡೆದುಕೊಂಡ ಹಾಗೇ. ನನ್ನಕ್ಕನಂತೆ ನಾನು ದೊಡ್ಡವಳಾಗಿದ್ದೇನೆಂದು ಅಂದುಕೊಳ್ಳೋದೇ ಅದೇನೋ ಖುಷಿ, ಅವ್ಯಕ್ತವಾದ ಹೆಮ್ಮೆ. ಯಾರಲ್ಲಾದ್ರೂ ಹೇಳಿಕೊಳ್ಳಬೇಕಂದ್ರೂ ಹೇಳಿಕೊಳ್ಳಲಾಗದ ಪುಟ್ಟ ಸಂತೋಷ. ಸ್ಕೂಲಿಗೆ ಚಕ್ಕರ್ ಏಕೆ ಹಾಕಿದ್ದೆಂದರೆ ಸುಮ್ಮನೆ ಜ್ವರವೆಂದು ಪಕ್ಕಾ ಸುಳ್ಳು ಹೇಳಿ ಮೇಷ್ಟ್ರ ಕೈಯಿಂದ ತಪ್ಪಿಸಿಕೊಂಡು ನಕ್ಕುಬಿಟ್ಟಿದ್ದೆ. ನನ್ನಲ್ಲಿ ನನ್ನನ್ನೇ ಕಾಣುವ ಸಂಭ್ರಮ. ಪುಟ್ಟ ಹಕ್ಕಿ ಮರಿಯೊಂದು ರೆಕ್ಕೆ ಬಲಿತು ಗೂಡಿನಿಂದ ಹೊರಬರುವ ಸಂಭ್ರಮದಂತೆ ನನ್ನೊಳಗೊಂದು ಹಬ್ಬದ ವಾತಾವರಣ. ಹೊಸ ಬಟ್ಟೆ, ಹೊಸ ದಿರಿಸು, ಹೊಸ ಗಳಿಗೆ.
ಅಮ್ಮನ ಮುಖದಲ್ಲಿಯೂ ‘ತಾಯ್ತನ’ದ ಮಿರುಗು.
ಆದರೆ, ಅವತ್ತೇನೋ ನನಗೆ ಆ ದಿನ ಹೊಸತಾಗಿತ್ತು. ಆದರೆ, ಅಂದಿನಿಂದ ಇಂದಿನವರೆಗೆ ನನ್ನನ್ನು ಹಿಂಡಿ ಹಿಪ್ಪೆಯಾಗಿಸುವ ಆ ನೋವು ಇದೆಯಲ್ಲಾ,..ಅದನ್ನು ನೆನೆಸಿಕೊಂಡಾಗ ಛೇ! ನಾನು ಹೆಣ್ಣಾಗಿ ಹುಟ್ಟಬಾರದಿತ್ತು ಎಂದನಿಸುತ್ತದೆ. ತಿಂಗಳಲ್ಲಿ ಆ ಒಂದು ದಿನವನ್ನು ನಾನು ತುಂಬಾ ದ್ವೇಷಿಸುತ್ತೇನೆ. ಅಂದು ಅನ್ನ. ನೀರು ಏನೂ ಬೇಡ ಎಂದನಿಸುತ್ತೆ. ಹೆಣ್ಣು ಬದುಕು ನೀಡಿದ ಆ ದೇವರನ್ನು ಅದೆಷ್ಟು ಬಾರಿ ಶಪಿಸಿದ್ದೇನೋ. ದೇವರು ಕಣ್ಣು ಬಿಡಲಿಲ್ಲ. ಪ್ರತಿ ತಿಂಗಳು ಆ ಕೆಟ್ಟ ನೋವು ನನ್ನನ್ನು ಹಿಂಡಿ ಹಿಪ್ಪೆಯಾಗಿಸುತ್ತದೆ. ನನ್ನ ಆ ಸುಂದರ ಕಣ್ಣುಗಳು ರಾತ್ರಿಯಿಡೀ ನಿದ್ದೆಯಿಲ್ಲದೆ ಬಳಲುತ್ತವೆ. ನನ್ನ ಆ ಮುಖ ಯಾವ ಉತ್ಸಾಹವೂ ಇಲ್ಲದೆ ಕಳೆಗುಂದುತ್ತದೆ. ಬೇಡ, ಆ ಅಸಹನೀಯ ನೋವನ್ನು ನನ್ನಿಂದ ಸಹಿಸಲಾಗುವುದಿಲ್ಲ. ಆ ಮೂರು ದಿನಗಳಲ್ಲಿ ಕಂಡಕಂಡವರೊಡನೆ ರೇಗಾಡ್ತೀನಿ. ಸಿಟ್ಟಿನಿಂದ ಮುಖ ಊದಿಸಿಕೊಂಡು ಬಿಡ್ತಿನಿ. ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಅತ್ತೆ-ಮಾವ, ಕೈಹಿಡಿದ ಗಂಡ, ಪ್ರೀತಿಯ ನನ್ನ ಮಕ್ಕಳು...ಯಾರನ್ನು ಕಂಡರೂ ನನಗೆ ಸಿಟ್ಟು, ಅಸಹನೆ. ನನ್ನ ಆಪೀಸ್‌ನ ಆ ಲ್ ಚಯರ್‌ನಲ್ಲಿ ಕುಳಿತು ಅಲ್ಲೇ ಖಿನ್ನಳಾಗ್ತೀನಿ. ನನ್ನ ಪ್ರೀತಿಸುವವರೂ ದ್ವೇಷಿಸುವವರಂತೆ ಕಾಣುತ್ತಾರೆ. ತುಂಬಾ ಸಲ ಅನಿಸಿದೆ; ನಾನು ಹುಡುಗನಾಗುತ್ತಿದ್ದರೆ, ಅದ್ಯಾವ ತೊಂದರೆಗಳೂ ನನಗಿರಲಿಲ್ಲ ಎಂದು!
ಇಷ್ಟೆಲ್ಲಾ ನೋವನ್ನು ಹೊಟ್ಟೆಯೊಳಗೇ ನುಂಗಿಕೊಂಡು ಕಷಾಯ ಮಾಡಿಕೊಂಡು ಕುಡಿಯುವಾಗ ಐದು ವರ್ಷದ ನನ್ನ ಮಗಳು ಬಂದು ಕೇಳುತ್ತಾಳೆ; ಯಾಕಮ್ಮಾ, ಕಷಾಯ ಕುಡಿತೀ ಎಂದು! ಏನನ್ನೂ ಅರಿಯದ ಆ ಮಗಳು ಹೀಗೆ ಕೇಳಿದಾಗ ನನ್ನ ಪಾಡಿಗೆ ನಾನಿರುತ್ತೇನೆ. ಅದ್ಯಾವ ಉತ್ತರಗಳೂ ಸಿಗದೆ ಆ ಪುಟ್ಟ ಮಗು ಬಿಟ್ಟ ಕಣ್ಣುಗಳಿಂದ ಪಿಳಿ ಪಿಳಿ ಎಂದು ನನ್ನ ನೋಡುತ್ತೆ. ಆ ಕ್ಷಣ ನನ್ನಮ್ಮ ನನಗೆ ನೆನಪಾಗುತ್ತಾಳೆ.
ಪ್ರಕಟ: http://hosadigantha.in/epaper.php?date=11-11-2010&name=11-11-2010-13
Wednesday, November 10, 2010
Subscribe to:
Posts (Atom)