ಓಶೋ ಬರೆದ ಪ್ರೇಮ ಧ್ಯಾನದ ಪಥದಲ್ಲಿ ಪುಸ್ತಕ ಓದುತ್ತಿದ್ದೆ. ಯಾಕೋ ನೆನಪಾಯಿತು. ನಾನು ಧರಿತ್ರಿ ಬ್ಲಾಗ್ ಆರಂಭಿಸುವಾಗ ಮೊದಲು ಬರೆದ ಬರಹ ಒಂಟಿತನದ ಬಗ್ಗೆ ಎಂದು.
ಈ ಪುಸ್ತಕದಲ್ಲಿ 'ಒಂಟಿತನದಿಂದ ಪ್ರೇಮದೆಡೆಗೆ' ಎಂಬ ವಿಷಯದ ಮೇಲೆ ಬರೆಯುತ್ತಾ ಒಂಟಿತನ ಮತ್ತು ಏಕಾಂತ ಕುರಿತು ಬಹಳ ಚೆನ್ನಾಗಿ ಹೇಳಿದ್ದಾರೆ.
"ಮೊದಲು ಏಕಾಂತರಾಗಿ, ಏಕಾಂಗಿಗಳಾಗಿ. ಮೊದಲು ನಿಮ್ಮೊಂದಿಗೆ ನೀವು ಸಂತೋಷಿಸಲು ಆರಂಭಿಸಿ. ಮೊದಲಿಗೆ ನಿಮ್ಮನ್ನು ನೀವು ಪ್ರೀತಿಸಿ. ಎಷ್ಟರಮಟ್ಟಿಗೆ ಎಂದರೆ ನಿಮ್ಮ ಬಳಿ ಯಾರೂ ಬರದಿದ್ದರೂ ಸರಿಯೇ. ಅತ್ಯಂತ ಪ್ರಾಮಾಣಿಕತೆಯಿಂದ ನಿಮ್ಮಲ್ಲೇ ನೀವು ಆನಂದಿತರಾಗಿ. ನಿಮ್ಮ ಬಾಗಿಲನ್ನು ಯಾರೂ ತಟ್ಟದಿದ್ದರೂ ಪರವಾಗಿಲ್ಲ. ಯಾರಾದರೂ ನಿಮ್ಮ ಬಳಿ ಬರಲಿ ಎಂದು ನೀವು ಕಾಯುತ್ತಿರುವುದಿಲ್ಲ. ನೀವು ನಿಮ್ಮ ಮನೆಯಲ್ಲಿರುವಿರಿ. ಹೌದು, ಯಾರಾದರೂ ಬಂದರು ಒಳ್ಳೆಯದೇ. ಪ್ರೀತಿಕರವೇ ಸುಂದರವೇ. ಯಾರೂ ಬರದಿದ್ದರೂ ಒಳ್ಳೆಯದು, ಪ್ರೀತಿಕರವೇ ಸುಂದರವೇ. ತದನಂತರ ನೀವು ಬೇರೆಯವರೊಂದಿಗೆ ಸಂಬಂಧಿತರಾಗಿ, ನೀವೀಗ ಭಿಕ್ಷುಕರಂತೆ ಇರುದಿಲ್ಲ.ರಾಜನಂತಿರುವಿರಿ"
ಈ ಮಾತನ್ನು ಅದೆಷ್ಟು ಬಾರಿ ಓದುತ್ತೇನೋ ನನಗೆ ಗೊತ್ತಿಲ್ಲ. ಅಷ್ಟರಮಟ್ಟಿಗೆ ಈ ಮಾತುಗಳು ನನ್ನ ಆಕರ್ಷಿಸಿವೆ. ಒಬ್ಬಳೇ ಇದ್ದಾಗ ಮನಸ್ಸು ಬೇಜಾರಾದರೆ ತಕ್ಷಣ ಈ ಸಾಲುಗಳನ್ನು ಓದುತ್ತೇನೆ. ಯಾಕೋ ಮನಸ್ಸಿಗೆ ತುಂಬಾ ಖುಷಿಯಾಗುತ್ತೆ, ಮನಸ್ಸು ನಿರಾಳವಾಗುತ್ತೆ. ಎಲ್ಲಾ ಕಾಡುವ ನೆನಪುಗಳು ಬದಿಗೆ ಸರಿದು ಮನಸ್ಸು ಪರಿಶುದ್ಧತೆಯಿಂದ ಸಂಭ್ರಮಿಸುತ್ತೆ. ಅದಕ್ಕೆ ಹೇಳೋದು ಒಳ್ಳೆಯ ಪುಸ್ತಕಗಳು ಆತ್ಮೀಯ ಸ್ನೇಹಿತರಂತೆ ಅಂತ ಅಲ್ವಾ?
ನಾನು ಒಬ್ಬಳೇ ಇರುವುದನ್ನು ತುಂಬಾ ದ್ವೇಷಿಸುತ್ತೇನೆ. ಏಕೆಂದರೆ ನಾವು ಒಬ್ಬರೇ ಕುಳಿತಾಗ ಕಾಡುವ ನೆನಪುಗಳು, ಅಸಂಬದ್ಧ ಚಿಂತೆಗಳು ನಾವು ಇತರರ ಜೊತೆ ಕೂಡಿ ನಲಿದಾಗ ನಮ್ಮನ್ನು ಕಾಡುವುದಿಲ್ಲ. ಇಲ್ಲದ ಟೆನ್ಯನ್ ಕೊಡೋದಿಲ್ಲ. ನಾವು ಖಿನ್ನರಾಗುವುದಿಲ್ಲ. ಅದಕ್ಕೆ ಒಬ್ಬಳೇ ಇರುವಾಗ ಪುಸ್ತಕ ಓದುವುದು ಮತ್ತು ಹಾಡು ಕೇಳುವುದು ಒಂಥರಾ ನಮ್ಮೊಳಗೆ ಹೊಸ ಚೈತನ್ಯ ಮೂಡಿಸುತ್ತೆ.ಉತ್ಸಾಹ ತುಂಬುತ್ತೆ. ಮನಸ್ಸನ್ನು ಖುಷಿಗೊಳಿಸುತ್ತೆ.
ಬಹುಶಃ ಓಶೋ ಹೇಳಿರುವಂತೆ ನಮ್ಮನ್ನು ನಾವು ಪ್ರೀತಿಸುವ ಕಲೆ ಮಾನವನಿಗೆ ತಿಳಿದುಬಿಟ್ಟರೆ, ಪ್ರಪಂಚದಲ್ಲಿ ಮನುಷ್ಯನಷ್ಟು ನೆಮ್ಮದಿ, ಖುಷಿಯಿಂದ ಇರುವ ಜೀವ ಮತ್ತೊಂದಿರಲಾರದು.