ಬೆಳಗೆದ್ದು ಸ್ನಾನ ಮಾಡುವ ಸೋಪು ಮೈಯನ್ನು ಬೆಳ್ಳಗಾಗಿಸುತ್ತೆ ಎನ್ನುವುದು ಒಂದು ಸಣ್ಣ ಭರವಸೆ , ನಿಜ ಗೊತ್ತು; ಎಷ್ಟೇ ತಿಕ್ಕಿದರೂ ಮೈಗೆ ಅಂಟಿ ಬಂತ ಬಣ್ಣ ಪೇರ್ಮನೆಂಟ್ ! ಹಲ್ಲುಜ್ಜುವ ಪೇಸ್ಟ್ ಖಂಡಿತಾ ಹಲ್ಲನ್ನು ಬೆಳ್ಳಗಾಗಿಸುವುದಿಲ್ಲ ಎಂಬುದು ಸತ್ಯ, ಆದರೂ ಸ್ವಲ್ಪ ಬೆಳ್ಳಗೆ ಕಾಣುತ್ತಿದೆ ಅನ್ನುವುದು ನಮ್ಮ ಸಣ್ಣ ನಂಬಿಕೆ !! ಬದುಕಿನ ಭರವಸೆ ಬೆಳ್ಳಂಬೆಳಿಗ್ಗೆ ಅಲ್ಲಿಂದಲೇ ಶುರುವಾಗೋದು , ಇಂದು ಗಂಡ ಮನೆಗೆ ಕುಡಿದು ಬರಲಾರ ಎಂಬ ಹೆಂಡತಿಯ ಭರವಸೆ , ಇನ್ನು ಸ್ವಲ್ಪೇ-ಸ್ವಲ್ಪ ದಿನ ನನಗೂ ಮದುವೆ ಆಗೇ ಆಗುತ್ತೆ, ನಾಳೆ ನನ್ನನ್ನು ನೋಡ ಬರುವ ಹುಡುಗ ನನ್ನನ್ನು ಒಪ್ಪೇ-ಒಪ್ಪುತ್ತಾನೆ ಎಂಬ ಭರವಸೆ ಹೊತ್ತ 30 ದಾಟಿದ ಯುವತಿ, ಎಂದಾದರೂ ಒಂದು ದಿನ ಆಕೆ ನನ್ನನ್ನು ಇಷ್ಟ ಪಟ್ಟಾಳು ಎಂಬ ಹುಡುಗನ ಸಣ್ಣ ಆಶಾ ಕಿರಣ. ಭರವಸೆಯ ಭಾವಗಳೇ ಹಾಗೆ ನಾವು ಬಿಟ್ಟರು ಅದು ನಮ್ಮನ್ನು ಬಿಡಲಾರವು. "ಭರವಸೆ ಬದುಕಿನ ಪ್ರೀತಿ".. ಬಹುಷಃ ನಾವು ಹುಟ್ಟುವ ಮೊದಲೇ ಬದುಕಿನ ಭರವಸೆಗಳು ನಮಗಾಗಿ ಹುಟ್ಟಿರುತ್ತವೆಯೇನೂ. ಅಡಿಗರು ಅದಕ್ಕೆ ಹೇಳಿರಬೇಕು " ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು ಕರಗೀತು ಮುಗಿಲ ಬಳಗಾ...''
ಹಿಂದಿ ಗೀತಕಾರ ಶೈಲೇಂದ್ರ ಒಂದು ಕಡೆ ಹೀಗೆ ಬರೆಯುತ್ತಾರೆ: " ತು ಜ್ಹಿಂದಾ ಹೈ, ತೋ ಜ್ಹಿಂದಗಿ ಕಿ ಜೀತ್ ಪೆ ಯಕೀನ್ ಕರ್, ಅಗರ್ ಕಹಿ ಹೈ ಸ್ವರ್ಗ್ ತೋ ಉತರ್ ಲಾ ಜಮೀನ್ ಪರ್, ಯೆ ಗಮ್ ಕೆ ಔರ್ ಚಾರ್ ದಿನ್ ಸಿತಮ್ ಕೆ ಔರ್ ಚಾರ್ ದಿನ್ , ಯೆ ದಿನ್ ಭಿ ಜಾಯೆಂಗೆ ಗುಜ್ಹರ್, ಗುಜ್ಹರ್ ಗಯೇ ಹಜ್ಹಾರ್ ದಿನ್"
ನಿಜ ಸಾವಿರಾರು ದಿನಗಳು ಈಗಾಗಲೇ ಕಳೆದು ಹೋಗಿದೆ, ಈಗಿರುವ ಅಳಲು, ಖೇದ, ವೈರ ನಾಚಿಕೆ, ದೋಷ, ಕುಂದು ಕಳೆಯಲೇಬೇಕು. ಯೆ ದಿನ್ ಭಿ ಜಾಯೆಂಗೆ ಗುಜ್ಹರ್. ಈ ಭರವಸೆಯೇ ಹೀಗೆ. ರೆಕ್ಕೆ ಬಿಚ್ಚಿ ಹೃದಯದ ಟೊಂಗೆಯಲ್ಲಿ ಕೂತು ಯಾವ ಪದಗಳಿಲ್ಲದೆ ತನ್ನದೇ ಶೃತಿಯಲ್ಲಿ ನಿರಂತರ ಹಾಡುತ್ತಿರುತ್ತದೆ. ಪರಧಿಯುಳ್ಳ ನಿರಾಸೆಗಳನ್ನು ಬದುಕು ಸ್ವೀಕರಿಸಲೇ ಬೇಕಾಗುತ್ತದೆ , ಆದರೆ ಅನಂತ ಭರವಸೆ, ನಂಬಿಕೆ ಬದುಕಿನ safety vault.
