Sunday, April 5, 2009

ಸಂಗೀತ ಅಮ್ಮನಂತೆ..?!

ಸಂಗೀತ ಅಮ್ಮನಂತೆ..
ಕೈ ಕೊಟ್ಟು ಹೋದ ಗೆಳೆಯ-ಗೆಳತಿಯ ನೆನಪು ಕಾಡಿದಾಗ, ಆಫೀಸ್ ನಲ್ಲಿ ಬಾಸ್ ಕಿರಿಕಿರಿ ಮಾಡಿದಾಗ, ಸ್ಕೂಲ್ ನಲ್ಲಿ ಟೀಚರ್ ಬೈದಾಗ, ನಿಮ್ಮ ಆತ್ಮೀಯ ಸ್ನೇಹಿತರು ಮಾತು ಬಿಟ್ಟಾಗ, ಅಮ್ಮನತ್ತ ಹುಸಿಮುನಿಸು ತೋರಿ ಕೋಪದಿಂದ ಫೋನ್ ಕುಕ್ಕಿ ಮತ್ತೆ ಮನಸ್ಸು ಭಾರವಾದಗ, ಜೊತೆಗಿದ್ದ ಆಪ್ತರು ಜೀವನಪರ್ಯಂತ ದೂರವಾಗೋ ಸನ್ನಿವೇಶ ಎದುರಾದರೆ, ಜೀವನದ ಜಂಜಾಟಗಳಿಂದ ಬದುಕು ಭಾರವೆನಿಸಿದಾಗ, ಸಂಬಂಧಗಳ ಕೊಂಡಿ ಕಳಚಿ ಹೃದಯ ಚಿರ್ರೆಂದು ನೋವಿಂದ ಚೀರಿದಾಗ, ಯಾರಲ್ಲೂ ಹೇಳಿಕೊಳ್ಳಲಾಗದ ಅವ್ಯಕ್ತ ದುಃಖಭಾವ ನಿಮ್ಮ ನಿರಂತರ ಕಾಡಿದಾಗ....ನನಗೆ ಸಂಗೀತ ಅಮ್ಮನಂತೆ ಅನಿಸುತ್ತೆ..ಒಂದಲ್ಲ..ಎರಡಲ್ಲ..ಎಷ್ಟೋ ಬಾರಿ ನನಗೆ ಹೀಗನಿಸಿದ್ದುಂಟು. ಅಮ್ಮನಪ್ಪುಗೆಯ ಹಿತ, ಖುಷಿ, ನೆಮ್ಮದಿ ನೀಡಿದುಂಟು.

ಹೌದು..ಮತ್ತೆ ಹೇಳ್ತೀನಿ ಸಂಗೀತ ಅಮ್ಮನಂತೆ. ಪ್ರೀತಿಯ ಮಡಿಲಾಗುತ್ತೆ. ಮಮತೆಯ ಸಂತೈಸುವ ಒಡಲಾಗುತ್ತೆ. ಅಕ್ಕರೆಯಿಂದ ಲಾಲಿ ಹಾಡುತ್ತೆ. ನಿದ್ದೆ ಬಾರದ ಕಣ್ಣುಗಳಿಗೆ ಜೋಜೋ ಹಾಡಿ ತಟ್ಟಿ ನಿದ್ದೆ ಬರಿಸುತ್ತೆ. ಹಸಿವಿನಿಂದ ಅಳೋ ಮಗುವಂತ ಮನಸ್ಸಿಗೆ ಹಾಲುಣಿಸುತ್ತೆ. ಪ್ರೀತಿಯ ಬಂಧನದಲ್ಲಿ ಬಿಗಿದಪ್ಪು ನಮ್ಮ ಹೃದಯ ಹಗುರಾಗಿಸುತ್ತೆ. ಸಾಹಿತ್ಯ, ಭಾಷೆ, ಲಯ, ಮಾಧುರ್ಯ ಎಲ್ಲವನ್ನೂ ಮೀರಿದ ಅವ್ಯಕ್ತವಾದ ಖುಷಿಯ ಗಳಿಗೆಯೊಂದನ್ನು ಸುಮಧುರ ಹಾಡೊಂದು ನಮಗೆ ನೀಡುತ್ತೆ.

ನಂಗೆ ಹಾಡು ಬರೆಯಕೆ ಬರಲ್ಲ. ಲಯ, ತಾಳ ಇದಾವುದೂ ತಿಳಿದಿಲ್ಲ. ಆದರೆ ಒಂದು ಸುಂದರ ಕವಿತೆಯನ್ನು ಮನಸ್ಸು ಸಂತೋಷದಿಂದ ಅನುಭವಿಸುತ್ತೆ. ಸುಮಧುರ ಇಂಪು ಗೀತೆಯ ಅನನ್ಯ ಅನುಭೂತಿಗೆ ಹೃದಯ ಮನಸ್ಸು ಕಿವಿಯಾಗುತ್ತೆ. ಒಂದಷ್ಟು ಹೊತ್ತು..ಒಂದಷ್ಟು ಕ್ಷಣ ನಾನಲ್ಲಿ ನನಗೆ ಗೊತ್ತಿಲ್ಲದೆಯೇ ಕಳೆದುಹೋಗುತ್ತೇನೆ. ಕುವೆಂಪು, ಬೇಂದ್ರ ಅಜ್ಜ, ಕೆ ಎಸ್ ಎನ್, ಅಡಿಗರ ಪ್ರೀತಿ, ಜೀವನದ ಕುರಿತಾದ ಸುಂದರ ಕವಿತೆಗಳು ನಮ್ಮ ಬದುಕಿನಲ್ಲೂ ಮಾತಿಗಿಳಿದಂತೆ ಭಾಸವಾಗುತ್ತದೆ. ಮನಸ್ಸು ಮಲ್ಲ್ಲಿಯಾಗುತ್ತದೆ. ಹೃದಯ ಆರ್ದೃ ಗೊಳ್ಳುತ್ತೆ. ಬದುಕೆಲ್ಲಾ ನಾದಮಯ ಅನಿಸಿಬಿಡುತ್ತೆ.

ಸುನಾಮಿಯಂತೆ ಥಟ್ಟನೆ ಬಂದಪ್ಪಳಿಸುವ ಅಮ್ಮನ ನೆನಪು, ಅಮ್ಮನ ಲಾಲಿ ನೆನಪು, ಎದೆಯಾಳದಲ್ಲಿ ಗುಬ್ಬಚ್ಚಿಯಂತೆ ಅವಿತಿದ್ದ ನೆನಪು, ಅಮ್ಮನೂರಿನ ಹಸಿರೆಲೆಗಳ ಹಳ್ಳಿ ನೆನಪು, ಮತ್ತೆ ಮತ್ತೆ ಮನದಲ್ಲಿ ಮೆರವಣಿಗೆ ಮಾಡುವ ಸುಂದರ ಕುಮಾರಧಾರ ನೇತ್ರಾವತಿ ನೆನಪು, ಅಣ್ಣ-ತಮ್ಮನ ನೆನಪು, ಬದುಕುಳಿಯದ ಅಜ್ಜ-ಅಜ್ಜಿಯ ನೆನಪು, ಬಿಟ್ಟು ಹೋದ ಅಪ್ಪನ ನೆನಪು, ನಮ್ಮ ಪುಟ್ಟ ಕರು ಅಪ್ಪಿಯ ನೆನಪು, ಕಳೆದುಹೋದ ಗೆಳತಿಯ ನೆನಪು...ಕಾಡಿದಾಗ ನಾ ಸುಮಧುರ ಹಾಡುಗಳಿಗೆ ಕಿವಿಯಾಗುತ್ತೇನೆ.

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೇ
ಮಲಗು ಚೆಲ್ವಿನ ತೆರೆಯೆ ಮಲಗು ಒಲ್ಮೆಯ ಸಿರಿಯೆ
ಮಲಗು ತೊಟ್ಟಿಲ ಸಿರಿಯೆ ದೇವರಂತೆ
ಮಲಗು ಮುದ್ದಿನ ಗಿಣಿಯೆ ಮಲಗು ಮುತ್ತಿನ ಮಣಿಯೆ
ಮಲಗು ಚಂದಿರನೂರ ಕೂಗುವೆಯಂತೆ ....

ಹಾಡು ಕೇಳಿದರೆ ಸಾಕು ಅಮ್ಮ ಬಂದು ತೊಡೆ ಮೇಲೆ ಮಲಗಿಸಿ ತಟ್ಟಿ ಲಾಲಿ ಹಾಡಿದಂತಾಗುತ್ತೆ. ನನ್ನ ಕೋಣೆಯ ಕಿಟಕಿ ಸಂದಿನಿಂದ ಕಾಣುವ ಚಂದಿರಿನ ಮುಖ ನೋಡುತ್ತಲೇ ನಾ ಅರಿವಿಲ್ಲದೆ ನಿದ್ದೆ ಬಾರದ ಕಣ್ಣುಗಳು ನಿದ್ದೆಯ ಮಂಪರಿಗೆ ಜಾರುತ್ತವೆ.
ಏನೂ ಬೇಡ..ಮನಸ್ಸು ಸರಿ ಇಲ್ಲ..ನಂಗೇನೂ ಮಾಡಕ್ಕಾಗಲ್ಲ ಎಂದು ಮನಸ್ಸು ರಾಗ ಎಳೆಯುವಾಗಲೇ ಕನ್ನಡದ ಒಳ್ಳೆಯ ಕವಿತೆಗಳ ಇಂಪನ್ನು ಅನುಭವಿಸಿ. ನಿಮ್ಮ ಮನಸ್ಸಿಗೆ ಖುಷಿಯಾಗದಿದ್ದರೆ ಮತ್ತೆ ಹೇಳಿ!

ಕೊನೆಗೆ,
ನಿಮ್ಮ ಖುಷಿಗೆ ಗೋಪಾಲಕೃಷ್ಣ ಅಡಿಗರ 'ಮಹಾಪೂರ' ಕವನದ ಸಾಲುಗಳು...
ಅಮೃತವಾಹಿನಿಯೊಂದು ಹರಿಯುತಿದೆ ಮಾನವನ
ಎದೆಯಿಂದಲೆದೆಗೆ ಸತತ.........
ಇಂದೆಲ್ಲ ನಾಳೆ ಹೊಸ ಭಾನು ಬಗೆ ತೆರೆದೀತು...
ಕರಗೀತು ಮುಗಿಲ ಬಳಗಾ....
ಇಂದೆಲ್ಲ ನಾಳೆ ಹೊಸ ಭಾನು ಬಗೆ ತೆರೆದೀತು...
ಕರಗೀತು ಮುಗಿಲ ಬಳಗಾ....
ಬಂದೀತು ಸೊಗೆಯ ಮಳೆ..
ತುಂಬೀತು ಎದೆಯ ಹೊಳೆ...
ಬಂದೀತು ಸೊಗೆಯ ಮಳೆ..
ತುಂಬೀತು ಎದೆಯ ಹೊಳೆ...
ತೊಳೆದೀತು ಒಳಗು ಹೊರಗಾ...


ಹೌದು..ಸಂಗೀತ ಅಮ್ಮನಂತೆ...?!!