ಬಹುಶಃ ಮನುಷ್ಯ-ಮನುಷ್ಯ ಸಂಬಂಧಗಳಿಗಿಂತಲೂ ಕೆಲವೊಮ್ಮೆ ಪ್ರಾಣಿ-ಮನುಷ್ಯರ ಸಂಬಂಧ ಗಾಢವಾಗಿರುತ್ತೆ, ನಿಷ್ಕಲ್ಮಶ, ಪ್ರಾಮಾಣಿಕವಾಗಿರುತ್ತೆ. ನಮ್ಮನೆಯ ಕರು, ನಮ್ಮನೆಯ ಪ್ರೀತಿಯ ಬೆಕ್ಕು, ನಾಯಿಮರೀನ ನಾವು ನಮ್ಮನೆ ಮಕ್ಕಳ ಥರ ನೋಡಿಕೊಳ್ಳ್ತೀವಿ. ಅವುಗಳೂ ಅಷ್ಟೇ..ನಮ್ಮ ಮೇಲೆ ಅವು ತೋರಿಸುವ ನಿಷ್ಕಲ್ಮಶ ಪ್ರೀತಿನ ಕಂಡಾಗ ನಮ್ಮ ಮನೆ-ಮನಸ್ಸು ತುಂಬಿಬಿಡುತ್ತೆ. ಒಂದು ಕ್ಷಣ ಅವುಗಳು ನಮ್ಮೆದುರು ಇಲ್ಲಾದಾಗ ಅವುಗಳಿಗಾಗಿ ನಮ್ಮ ಕಣ್ಣುಗಳು ಹುಡುಕಾಡುತ್ತವೆ. ಅದರಲ್ಲೂ ನಾಯಿಯನ್ನು ಅತ್ಯಂತ ಕೃತಜ್ಞ ಪ್ರಾಣಿ ಅಂತಾರೆ. ಎಷ್ಟೋ ವರುಷಗಳ ಹಿಂದೆ ನಾವು ಒಂದು ನಾಯಿಗೆ ರೊಟ್ಟಿ ತುಂಡನ್ನು ಹಾಕಿದ್ರೆ ಅದು ಜೀವನವೀಡೀ ನಮ್ಮ ನೋಡಿದಾಗ ಬಾಲ ಅಲ್ಲಾಡಿಸಿ, ಕಿವಿ ನಿಮಿರಿಸಿ ಪ್ರೀತಿ ವ್ಯಕ್ತಪಡಿಸುತ್ತೆ.
ನಾನು ಶಾಲೆಗೆ ಹೋಗೋ ಸಮಯದಲ್ಲಿ ನಮ್ಮನೆಯಲ್ಲಿ ಒಂದು ನಾಯಿ ಇತ್ತು. ಸಕತ್ತ್ ಡುಮ್ಮ ನಾಯಿ...ಗುಂಡು-ಗುಂಡಾಗಿ ನೋಡಕ್ಕೂ ತುಂಬಾ ಸುಂದರವಾಗಿತ್ತು. ಅದಕ್ಕೆ ನನ್ನ ತಮ್ಮ 'ದೊಲ್ಲ' ಅಂತ ಹೆಸರಿಟ್ಟಿದ್ದ. ಅದಕ್ಕೂ ಮಲಗೋಕೆ ಚೆಂದದ ದಿಂಬು ಎಲ್ಲಾ ರೆಡಿಮಾಡಿದ್ದ ನನ್ನ ತಮ್ಮ. ರಾತ್ರಿ ತಮ್ಮನಿಗೆ ನಿದ್ದೆ ಬರೋ ತನಕ ಅದು ನಮ್ಮ ಜೊತೆನೇ ನಿದ್ದೆ ಮಾಡುತ್ತಿತ್ತು. ಆಮೇಲೆ ಎದ್ದು ಹೋಗಿ ಜಗಲಿಯಲ್ಲಿ ಮನೆ ಕಾಯುತ್ತಿತ್ತು. ನಾವು ಶಾಲೆಗೆ ಹೋಗುವಾಗ ಅರ್ಧದಾರಿ ತನಕ ನಮ್ಮ ಜೊತೆಗೆ ಬರೋ ದೊಲ್ಲ, ಆಮೇಲೆ ಸಂಜೆಯೂ ನಾವು ಶಾಲೆ ಬಿಡುವ ಹೊತ್ತಿಗೆ ಮನೆ ಗೇಟ್ ಎದುರು ಕುಳಿತು ಕಾಯುತ್ತಿತ್ತು. ನಾವು ಬರೊದೇ ತಡ..ನಮ್ಮ ಜೊತೆ ಅದಕ್ಕೂ ಏನಾದ್ರೂ ತಿನ್ನಬೇಕು..ಇಲ್ಲಾಂದ್ರೆ ನಮ್ಮ ಮೈಮೇಲ್ಲ ಹಾರಿ ಕಚ್ಚೋ ಕೆಲಸ ಮಾಡುತ್ತಿತ್ತು. ನನ್ನ ತಮ್ಮನಿಗಂತೂ ದೊಲ್ಲ ಅಂದ್ರೆ ನಮಗೆಲ್ಲರಿಗಿಂತಲೂ ಹೆಚ್ಚು ಪ್ರೀತಿ.
ಆದರೆ ಆ ದೊಲ್ಲ ಬದುಕಿದ್ದು ಎರಡನೇ ವರುಷ. ನಮ್ಮನೆಯ ಪಕ್ಕದ್ಮನೆಯ ನಾಯಿ ಅದಕ್ಕೆ ಕಚ್ಚಿ ಹೊಟ್ಟೆಗೆ ಗಾಯವಾಗಿತ್ತು. ಹಾಗಾಗಿ ತುಂಬಾ ದಿನ ಅದು ಮಲಗಿದ್ದಲ್ಲೇ ಇತ್ತು..ತಮ್ಮ ಆರೈಕೆ ಮಾಡ್ತಾ ಇದ್ದ. ಮತ್ತೆ ಎದ್ದು ನಡೆಯಲಾರಂಭಿಸಿದರೂ ತೀರ ಓಡಾಟ ಕಷ್ಟವಾಗುತ್ತಿತ್ತು. ಕೊನೆಗೊಂದು ದಿನ ನಾವು ಶಾಲೆಯಿಂದ ಬರುವಾಗ ದೊಲ್ಲ ಇರಲಿಲ್ಲ..ಎಲ್ಲಿ ಹುಡುಕಿದ್ರೂ ಸಿಕ್ಕಿರಲಿಲ್ಲ. ಒಂದು ದಿನ ಕಳೆದ ಮೇಲೆ ನಮ್ಮ ತೋಟದ ಬದಿಯಲ್ಲಿ ನಮ್ಮ ದೊಲ್ಲ ಚಿಕ್ಕ ಪೊದೆಗೆ ಸಿಕ್ಕಹಾಕೊಂಡು ಹೆಣವಾಗಿದ್ದ. ನನ್ನ ತಮ್ಮ 'ಅಮ್ಮ ನೀನೇ ಕೊಂದಿದ್ದು ನನ್ನ ದೊಲ್ಲನ..ನನ್ನನ್ನೂ ಕೊಂದುಬಿಡು' ಅಂತ ಅಳುತ್ತನೇ ಇದ್ದ. ಎರಡು ದಿವಸ ಊಟ ಮಾಡದೆ ಕುಳಿತಿದ್ದ. ಆದ್ರೂ ಅದನ್ನು ಹೂತ ಜಾಗದಲ್ಲಿ ಮತ್ತೆ ಮತ್ತೆ ಹೋಗಿ ಅಳುತ್ತಿದ್ದ. ವರುಷ ಅದೆಷ್ಟು ಸರಿದರೂ ದೊಲ್ಲನ ನೆನಪು ಬದುಕಾಗೇ ಇದೆ.
ನಿನ್ನೆ ಶ್ರೀ ಪೀಲು ಬಗ್ಗೆ ಹೇಳಿದಾಗ..ದೊಲ್ಲನೂ ನೆನಪಾದ..ಕಣ್ತುಂಬಿ ಬಂತು. ಕೆಲವೊಮ್ಮೆ ಮನುಷ್ಯ-ಮನುಷ್ಯ ನಡುವಿನ ಬಾಂಧವ್ಯ, ಪ್ರೀತಿನ ಕಂಡಾಗ ಮೂಕ ಪ್ರಾಣಿಯ ಪ್ರೀತಿಯೇ ಶ್ರೇಷ್ಠ ಅನಿಸುತ್ತೆ. ಈ ಪ್ರೀತಿ ಕನ್ನಡಿಯಂತೆ ಒಡೆಯಲ್ಲ, ನೋವು ಕೊಡಲ್ಲ, ಮನಸ್ಸು ಚುಚ್ಚೊಲ್ಲ, ಒಮ್ಮೊಮ್ಮೆ ಹೃದಯ ಭಾರವಾಗಿಸಲ್ಲ..ಪರಿಪರಿಯಾಗಿ ನಮ್ಮ ಕಾಡುತ್ತೆ, ಸಿಹಿನೆನಪಾಗುತ್ತೆ, ಬದುಕಿನ ಶ್ರೇಷ್ಠ ಘಟ್ಟದಲ್ಲಿ ನಿಂತು ನಮ್ಮನ್ನು ಗೌರವಿಸುತ್ತೆ ...ಏನಂತೀರಿ?