Thursday, October 4, 2012

ಅಮ್ಮನಿಗೆ ವಯಸ್ಸಾಗುತ್ತಿದೆ...




ಕಣ್ಣುಗಳು ಆಳಕ್ಕೆ ಇಳಿದಿದ್ದವು. ಕೆನ್ನೆಗಳೂ ಕಾಣಲಿಲ್ಲ, ಕೆನ್ನೆ ಮೇಲಿದ್ದ ಗುಳಿಯೂ ಮಾಯವಾಗಿತ್ತು. ವೀಳ್ಯದೆಲೆ ತಿಂದು ಬಾಯಿ ಕೆಂಬಣ್ಣಕ್ಕೆ ತಿರುಗಿತ್ತು. ಹಲ್ಲುಗಳೂ ಇರಲಿಲ್ಲ. ಬೊಕ್ಕು ಬಾಯಿ ಅಗಲಿಸಿ ನಕ್ಕಾಗ ಮಗುವಿನಂತೆ ಕಂಡಳು. ಮಕ್ಕಳು ಬಿಟ್ಟರೆ ಇನ್ಯಾವ ನೆನಪುಗಳೂ ಅವಳಿಗಿಲ್ಲ. ಒಂದೊಂದು ಸಲ ಮಗುವಿನಂತೆ ರಚ್ಚೆ ಹಿಡಿಯುತ್ತಾಳೆ, ಇನ್ನೊಂದು ಸಲ ಗಂಭೀರವಾಗಿ ಜಗಲಿ ಮೇಲೆ ಕುಳಿತು ತನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾಳೆ.

ಊರಿನ ಸೋಮನ ಅಮ್ಮಂಗೆ ವಿಧವಾ ವೇತನ, ಆಶ್ರಯ ಯೋಜನೆ ಜಾರಿಯಾಗಬೇಕಾದರೆ ಗ್ರಾಮ ಪಂಚಾಯ್ತಿಯಿಂದ ಹಿಡಿದು ತಾಲೂಕು ಕಚೇರಿ, ತಹಶೀಲ್ದಾರ್ ಅಂತ ಸುತ್ತಾಡಿದ್ದು ಅವಳೇ. ಊರಿನ ಹೆಂಗಳೆಯರ ಮಧ್ಯದಲ್ಲಿ ನಾಯಕಿಯಾಗಿ ಮೆರೆದವಳು ಅವಳೇ. ಅವರ ಸಮಸ್ಯೆ, ದೂರು-ದುಮ್ಮಾನಗಳನ್ನು ತಂದು ಹರವಿದರೆ ಅದಕ್ಕೆ ಪರಿಹಾರ ಸೂಚಿಸುವವಳು ಅವಳೇ. ಐದು ಎಕರೆ ಜಮೀನಿನಲ್ಲಿ ತೆಂಗು-ಕಂಗು, ಬಾಳೆಗಳನ್ನು ನೆಟ್ಟು ನಿತ್ಯ ಅವುಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದಳು. ಮುಂಜಾವು ಹೊತ್ತಿಗೇ ಎದ್ದು ದನಕರುಗಳನ್ನು ತೊಳೆದು, ಹಾಲು ಕರೆದು, ಗಂಜಿ ಕುಡಿದು ತೋಟಕ್ಕೆ ಹೋದರೆ ಸೂರ್ಯ ಮೇಲೇರುವ ಹೊತ್ತಿಗೆ ವಾಪಸ್ ಬರುತ್ತಿದ್ದಳು. ಅನ್ನ-ಹಸಿವು, ನೀರಡಿಕೆಗಳ ಗುಂಗಿಲ್ಲದೆ ತನ್ನ ಕೆಲಸದಲ್ಲೇ ದೇವರನ್ನು ಕಂಡವಳು ಅವಳು. ಕೂಲಿ-ನಾಲಿಗೆ ಹೋಗುವುದು ಅವಮಾನವೆಂದು ಬಗೆದು ತನ್ನ ತೋಟವನ್ನೇ ನಂದನವನ ಆಗಿಸಿ, ಬಟ್ಟಲು ಅನ್ನ ಸಂಪಾದಿಸಿದವಳು.

ಗಂಡ ಬಿಟ್ಟು ಇನ್ನೊಬ್ಬಳ ತೆಕ್ಕೆ ಸೇರಿದಾಗ ಅತ್ತು-ಕರೆದು ರಂಪ ಮಾಡಿ ಹೋದದ್ದು ಹೋಯಿತು, ಮಕ್ಕಳ ನಗುವಿನಲ್ಲೇ ನನ್ನ ಸುಖವಿದೆ ಎಂದುಕೊಂಡವಳು. ಮಗ ಹೊಸ ಕೊಡೆ, ಹೊಸ ಬಟ್ಟೆ ಬೇಕೆಂದಾಗ ಕಿವಿಯೋಲೆ ಅಡವಿಟ್ಟು ಬಣ್ಣದ ಕೊಡೆ ತಂದವಳು. ಪ್ರತಿಷ್ಠಿತ ಕಾಲೇಜಿನಲ್ಲಿ ಮಕ್ಕಳಿಗೆ ಸೀಟು ಸಿಗಬೇಕೆಂದು ತಿಂಗಳುಗಟ್ಟಲೆ ಬಿರುಬಿಸಿಲಿಗೂ ನಡೆದರೂ ದಣಿವಾಗದವಳು. ಅಕ್ಷರಗಳ ಅರಿವಿಲ್ಲದೆಯೇ ಕಾನೂನು, ಲೋಕಜ್ಞಾನ ಪಡೆದವಳು.

ಅಮ್ಮಾ..ಎಂದಾಗ "ಮಗಳೇ' ಎನ್ನುವ ಪುಟ್ಟ ನಗು ಮುಖದಲ್ಲಿ. ನಮಗೆ ಎಲ್ಲವನ್ನೂ ಅರ್ಥಮಾಡಿಸಿದ ಅವಳಿಗೆ ಇಂದು ಏನೂ ಅರ್ಥವಾಗುವುದಿಲ್ಲ. ನೆನಪುಗಳು ಮಾಸಿಹೋಗುತ್ತಿವೆ. ಉಂಡಿದ್ದು, ನಕ್ಕಿದ್ದು, ಮಾತಾಡಿದ್ದು ಎಲ್ಲವೂ ಅರೆಕ್ಷಣದ ನೆನಪುಗಳು. ವಯಸ್ಸನ್ನು ಹಿಡಿದು ನಿಲ್ಲಿಸೋಣ ಅಂದ್ರೆ ಅದೂ ಕೈಲಾಗುತ್ತಿಲ್ಲ. ಅಮ್ಮ ವಯಸ್ಸಿನೊಂದಿಗೆ ನಡೆಯುತ್ತಿದ್ದಾಳೆ.