Monday, March 25, 2013

ಗೌಡ್ರ ಬೋರ್ ವೆಲ್ ಮತ್ತು ನಮ್ಮನೆ ಬಾವಿ


ಗೌಡ್ರ ಮನೆಗೆ ಬೋರ್ ವೆಲ್ ಬಂತಂತೆ, ಇನ್ನೇನೋ ಬೇಸಿಗೆ ಬಿರುಸಾಗಿದೆ. ನಮ್ಮ ಬಾವೀಲಿ ನೀರು ಬತ್ತುತ್ತಾನೇ ಇರ್ಲಿಲ್ಲ. ಇನ್ನು ಈ ಮಂದಿ ಬೋರ್ ವೆಲ್ ಹಾಕಿಸಿದ್ರೆ ಅದ್ಯಾರ ಮನೆ ಮುಂದೆ ಬಿಂದಿಗೆ ಹಿಡಿಬೇಕೋ...ಅಮ್ಮ ಗೊಣಗುತ್ತಾ ಜಗುಲಿ ಮೇಲೆ ಕುಳಿತಿದ್ದಳು. ನನಗಿನ್ನೂ ಚಿಕ್ಕ ವಯಸ್ಸು. ಬೋರ್ ವೆಲ್ ಬರುವುದಕ್ಕೂ, ನಮ್ಮನೆ ಬಾವಿ ಬತ್ತೋದಕ್ಕೂ ಅದೆಂಥ ಸಂಬಂಧ ಉಂಟು? ಎಂದು ಕೇಳಿದೆ. "ಉಂಟು..ಸಂಬಂಧ... ನೀರು ಸಿಗೋತನಕ ಕೊರೀತಾರೆ..ಅಂತರ್ಜಲ ಬತ್ತಿಹೋಗುತ್ತೆ. ಆಗ ಸುತ್ತಮುತ್ತಲ ಬಾವಿಗಳ ನೀರು ಬತ್ತುತ್ತೆ' ಎಂದು ಆಕ್ರೋಶದಿಂದ ಹೇಳುತ್ತಿದ್ದಳು ಅಮ್ಮ. ಅಮ್ಮ ಹುಟ್ಟಿದಾಗಿನಿಂದ ನಮ್ಮನೆ ಬಾವಿ ಬತ್ತುವುದನ್ನೇ ನೋಡಿರಲಿಲ್ಲವಂತೆ. ಬರೀ ಆರು ಅಡಿಯಲ್ಲಿ ನೀರು. ವರ್ಷದ ಮೂರು ಕಾಲದಲ್ಲಿಯೂ ನೀರಿಗೆ ಬರವಿಲ್ಲ. ಬೇಸಿಗೆಯಲ್ಲಿ ಕೂಡ ಕುಡಿಯಲು, ದನ-ಕರುಗಳಿಗೆ, ತೆಂಗು-ಕಂಗುಗಳಿಗೆ ನೀರಿನ ಕೊರತೆ ಇರಲಿಲ್ಲ.

ದಿಢೀರನೆ ಗೌಡ್ರ ಮನೆಗೆ ಬೋರ್ ವೆಲ್ ಬಂದಿದ್ದು ಅಮ್ಮನ ತಲೆ ಚಿಟ್ಟು ಹಿಡಿಸಿತು. "ಹಾಳಾದವು...ಯಾರ ಹೊಟ್ಟೆಗೋ ಕನ್ನ ಹಾಕ್ತಾರೆ'' ಅಂತ ಬೈತಾನೆ ಇದ್ಳು. ಬೋರ್ ವೆಲ್ ಬಂದ ದಿನ ಅಮ್ಮ ನಿದ್ದೆ ಮಾಡಿರಲಿಲ್ಲ. ಗೌಡ್ರ ಬಳಿ ಹೋಗಿ "ನೀವು ಬೋರ್ ವೆಲ್ ಹಾಕಿದ್ರೆ ನಮ್ಮ ಬಾವಿ ಬತ್ತುತ್ತೆ'' ಎಂದು ಹೇಳಕ್ಕಾಗುತ್ತೆ? ಅದೂ ಇಲ್ಲ. ಅಮ್ಮಂಗೆ ಹೇಳಿದೆ "ನಾವು ಇನ್ನೊಂದು ಬಾವಿ ತೋಡೋಣ. ಆಗ ಎರಡು ಬಾವಿಗಳಲ್ಲಿ ನೀರಿರುತ್ತೆ ಅಲ್ವಾ?'' . ಅಮ್ಮಂಗೆ ಸಿಟ್ಟು ಬಂದು "ಸುಮ್ನಿರು..ಮಧ್ಯೆ ಬಾಯಿ ಹಾಕ್ಬೇಡ. ಎಲ್ಲಿ ತೋಡಿದ್ರೂ ಒಂದೇ...ಆದ್ರೆ ರಾಮಣ್ಣ ಜೋಯಿಸರು ಈಗಿರುವ ಬಾವಿ ನೀರನ್ನೇ ಕುಡಿಬೇಕು...'' ಎಂದು ಅದು-ಇದು, ದಿಕ್ಕು-ದಿಸೆ ಅಂತ ಮಾತಾಡತೊಡಗಿದಳು. ಅಮ್ಮನ ಸಾತ್ವಿಕ ಸಿಟ್ಟು ನನಗಾಗ ಅರ್ಥವಾಗಲಿಲ್ಲ.


ಮರುದಿನ ಬೋರ್ ವೆಲ್ ತೋಡುವ ಯಂತ್ರಗಳು ಗೌಡ್ರ ತೋಟಕ್ಕೆ ಬಂದವು. ನಮ್ಮೂರಿಗೆ ಅದೇ ಮೊದಲ ಬೋರ್ ವೆಲ್. ಹಾಗಾಗಿ, ಸುತ್ತಮುತ್ತಲಿನ ಎಲ್ಲರೂ ಬೋರ್ ವೆಲ್ ನೋಡಲು ಬಂದರು. ಮಕ್ಕಳಂತೂ ರಚ್ಚೆ ಹಿಡಿದು ಶಾಲೆಗೆ ಚಕ್ಕರ್ ಹಾಕಿ ಬೋರ್ ವೆಲ್ ತೋಡುವುದನ್ನು ನೋಡಲು ಬಂದಿದ್ದರು. ನಾನೂ ಅಮ್ಮನ ಸಿಟ್ಟನ್ನೂ ಕೇರ್ ಮಾಡದೆ ಗೌಡ್ರ ಮನೆಯತ್ತ ಓಡಿದೆ. ಏನು ಸೌಂಡ್...ಗುರ್...ಬುರ್...ಬೆಳಿಗ್ಗೆಯಿಂದ ಸಂಜೆ ತನಕ ಕೊರೆತಿದ್ದೇ ಕೊರೆದಿದ್ದು...ಒಂದೇ ಸಮನೆ ಅದೆಷ್ಟೋ ಎತ್ತರಕ್ಕೆ ನೀರಿನ ಬುಗ್ಗೆಗಳು ಚಿಮ್ಮತೊಡಗಿದವು. ಗೌಡ್ರ ಮುಖ ಖುಷಿಯಿಂದ ತಾವರೆಯಂತೆ ಅರಳುತ್ತಿತ್ತು.


ನೀರಿನ ಚಿಮ್ಮುವಿನಾಟ ನೋಡಿ ಜಿಂಕೆಯಂತೆ ನೆಗೆಯುತ್ತಾ ಮನೆಗೆ ಬಂದೆ. ಅಮ್ಮನ ಕಣ್ಣುಗಳು ಕೆಂಪಾಗಿ, ಮುಖ ಬಾಡಿಹೋಗಿತ್ತು. ರಾತ್ರಿ ಅನ್ನಕ್ಕೆ ಅಕ್ಕಿ ಬೀಸುತ್ತಾ ಕುಳಿತಿದ್ದಳು. "ಅಮ್ಮಾ ಮಾತಾಡು..'' ಎಂದೆ. "ಬೇಸಿಗೆ, ನಮ್ಮನೆ ಬಾವಿ ಬತ್ತಿದ್ರೆ ಯಾರ ಮನೆಗೆ ಹೋಗಿ ನೀರಿಗಾಗಿ ಬೇಡಲಿ'' ಎನ್ನುತ್ತಾ ದೇವರ ಮನೆಗೆ ಹೋಗಿ ಒಂದು ರೂಪಾಯಿ ನಾಣ್ಯವನ್ನು ಮನೆದೇವರು ಕಲ್ಲುರ್ಟಿಗೆ ಹರಕೆ ಇಟ್ಟು "ಬತ್ತದಿರಲಿ ಬಾವಿ'' ಎಂದಳು.
ಅಮ್ಮ ನಿತ್ಯ ದೀಪ ಹಚ್ಚುವಾಗ ನೀರಿಗಾಗಿ ಬೇಡೋದನ್ನು ಮರೆಯುತ್ತಿರಲಿಲ್ಲ. ಊರ ಸುತ್ತಮುತ್ತ ಇನ್ನೂ ಒಂದೆರಡು ಬೋರ್ ವೆಲ್ ಗಳು ಬಂದವು. ನಮ್ಮನೆ ಬಾವಿ ಬತ್ತತೊಡಗಿತು. ಬೇಸಿಗೆ ಬಂದ ತಕ್ಷಣ ಅಮ್ಮ "ಯಾರ ಮುಂದೆಯೂ ಬಿಂದಿಗೆ ಹಿಡಿದು ಬೇಡಲಾರೆ'' ಎಂದು "ಬಾವಿನ ಇನ್ನಷ್ಟು ಅಗೆಯುವ' ಕೆಲಸ ಮಾಡುತ್ತಾಳೆ...ಈಗಲೂ ಮಾಡುತ್ತಳೇ ಇದ್ದಾಳೆ...ಬರೀ "ಕುಡಿಯುವ ನೀರಿಗಾಗಿ''.


ಬೆಂಗಳೂರಿಂದ ಫೋನಾಯಿಸಿ ಕೇಳಿದ್ರೆ ಹೇಳುತ್ತಾಳೆ "ನಿಮ್ಮೂರಲ್ಲಿ ನೀರು ಉಂಟಾ? ನೋಡು ಮೊನ್ನೆ ಮೊನ್ನೆ ಬಾವಿ ಹೂಳೆತ್ತುವ ಕೆಲಸ ಮಾಡಿಸಿದೆ. ಅರ್ಧ ಅಡಿ ಹೆಚ್ಚು ಗುಂಡಿ ಮಾಡಲಾಗಿದೆ. ಪರ್ವಾಗಿಲ್ಲ ಕುಡಿಯಲು ನೀರು ಸಿಗುತ್ತದೆ. ಆದರೆ, ದನಕರುಗಳಿಗೆ ನೀರು ಸಿಗಲ್ಲ ಎಂದು ಸಾಕುವುದನ್ನೇ ಬಿಟ್ಟಿದ್ದೇನೆ. ತೆಂಗು, ಬಾಳೆ, ಅಡಿಕೆ ಗಿಡಗಳು ಮಾತ್ರ ಬೇಸಿಗೆಯಲ್ಲಿ ಬಾಡಿಹೋಗುತ್ತಿರುವುದನ್ನು ನೋಡಿ ಹೊಟ್ಟೆ ಉರಿಯುತ್ತಿದೆ. ಮನೆದೇವ್ರ ಕೃಪೆ..ಕುಡಿಯೋಕ್ಕಾದ್ರೂ ನೀರು ಸಿಗುತ್ತೆ'' ಎನ್ನುತ್ತಾಳೆ.