Wednesday, April 29, 2009

ನಿನ್ನ ಪ್ರೇಮದ ಪರಿಯ ನಾನರಿಯೆ...

ಒಲವಿನ ಗೆಳತೀ,
"ನಿದ್ದೆ ಬಾರದ ಕಣ್ಣ ಮೇಲೆ ಕೈಯ ಮುಗಿವೆ, ಚುಂಬಿಸು ಒಮ್ಮೆ..." ಎಂಬ ಹಾಡನ್ನು ನಿನ್ನೆ ನೀ ಫೊನಿನಲ್ಲಿ ಉಲಿದಾಗ ಯಾಕೋ ನಾನೊಮ್ಮೆ ಮೌನಿಯಾದೆ. ನನ್ನ ಮೌನದ ಹಿಂದಿರುವ ಅನಂತ ಚುಂಬನವನ್ನು ನೀ ಕಾಣಲೇ ಇಲ್ಲ ಗೆಳತೀ, ಅಣು ಅಣುವಿನಲ್ಲಿ ದೇವರನ್ನ ಕಂಡ ನನಗೆ, ನನ್ನ ಹೃದಯದಲಿ ಮಾತ್ರ ನೀ ಯಾಕೆ ಆವರಿಸಿರುವೆಯೆಂದು ಇನ್ನೂ ತಿಳಿದಿಲ್ಲ. ಧಮನಿಗಳು ನಿನ್ನ ತಪೋವನದ ಸುತ್ತ ಹರಿಯುವ ಜೀವ ನದಿಗಳಂತೆ ಅನಿಸುತ್ತಿವೆ. ನೆನಪಾದಾಗಲೆಲ್ಲಾ ಹುಣ್ಣಿಮೆಯೆಂದೆನುವ ನೀ, ನನ್ನಂತರಂಗದಲಿರುವ ಅಮವಾಸ್ಯೆಯ ಕತ್ತಲೆಯ ಆಳವನ್ನರಿಯದೆಯೆ ಪ್ರೀತಿಸಿರುವೆ. ಚಂದಿರ ಸೂಸುವ ತಂಪನ್ನು ಮಾತ್ರ ಅನುಭವಿಸಿರುವ ನೀನು, ಮಂಜಿನಾವೃತವಾದ ನನ್ನಂತರಂಗದ ಚಳಿಯನ್ನು ಸಹಿಸುವೆಯಾ? ಹೇಳು ಗೆಳತೀ, ನನ್ನ ಮೌನವನ್ನೇ ನಿನ್ನೆದೆಯ ಸ್ವಾತಿ ಮುತ್ತಾಗಿಸಲು ಹೊರಟಿರುವ ನಿನಗೆ, ನನ್ನ ನಿಶೆ ತುಂಬಿದ ಜೀವನದ ಪರಿಚಯವಿದೆಯೇ?

ನಿನ್ನ ಹೃದಯದ ಏಳಗಲದಲ್ಲಿ ತಲೆಯಿಟ್ಟು ಮಲಗುವ ಅದೃಷ್ಟವಿಲ್ಲದವನು ನಾನು ಗೆಳತೀ. ದಾರಿಯಲಿ ಬಿದ್ದಾಗ ಎದ್ದು ನಿಲಿಸುವ ನಿನ್ನ ಪ್ರೀತಿಯ ಮುಂದೆ ನಾ ಕೈಕಟ್ಟಿ ನಿಂತಿರುವೆ, ನನಗೆ ಮಾತುಗಳಿಲ್ಲ, ಮೌನವಷ್ಟೇ ಗೊತ್ತು. ನೀ ಕೊಟ್ಟ ಅಮ್ಮನ ವಾತ್ಸಲ್ಯ, ಅಕ್ಕನ ಮಮತೆ, ಒಲವಿನ ಗೆಳತಿಯಾಗಿ ಅಕ್ಕರೆಯ ಜೀವನ ಪ್ರೀತಿಗೆ ನಾ ಋಣಿ ಎಂದಷ್ಟೇ ಹೇಳಬಲ್ಲೆ. ನನಗೆ ತಿರುಗಿ ಕೊಡಲು ನನ್ನ ಕೈಯಲ್ಲಿ ಬಂಗಾರದ ಮೂಗುತಿ ಇಲ್ಲ, ಮಲ್ಲಿಗೆಯ ಹಾಸಿಗೆಯಿಲ್ಲ, ಮೊಸರನ್ನದ ಕನಸೂ ಇಲ್ಲ. ನಿನ್ನ ಕನಸ ನನಸಾಗಿಸುವ ಕಸುಬೂ ಇಲ್ಲ. ಸಾಧ್ಯವಿಲ್ಲದ ಕನಸುಗಳ ಕಟ್ಟಿ ಒಂಟಿಯಾಗುವ ನಿನ್ನ, ಹತ್ತಿರದಿಂದ ಸಂತೈಸುವ ಅವಕಾಶವಿದ್ದರೂ, ಮತ್ತೆಲ್ಲಿ ನನ್ನ ಎದೆಗೊರಗಿ ಮತ್ತೊಂದು ಕನಸ ಕಾಣುವೆಯಾ ಎಂಬ ಭಯ ನನ್ನೊಳಗೆ ಆವರಿಸಿಬಿಟ್ಟಿದೆ. ನಿನ್ನ ಬಿಟ್ಟು ಬೇರೆ ಯಾರೇ ನನಗೆ ಬದುಕಿನಾಸರೆ ಆದರೂ ಒಂಟಿಯೆಂದು ನಾನರಿವೆ. ಒಂಟಿ ಜೀವನ ನನ್ನ ವಿಧಿ ಬರಹ ಅಂದುಕೊಳ್ಳುವೆ ಗೆಳತೀ. ಹೃದಯ ತುಂಬಾ ಆವರಿಸಿರುವ ನಿನ್ನ ಬಿಟ್ಟು ಒಂಟಿತನವನ್ನೂ ಪ್ರೀತಿಸಲು ನಾನೊಲ್ಲೆ ಗೆಳತೀ. 'ನನ್ನ ದುಃಖಕ್ಕೆ ಹೆಗಲಾಗೆಂದು' ನಾ ಹೇಳಲಿಲ್ಲ ನಿಜ. ಆದರೆ, ನಿನ್ನ ನೋಡಿದ ಮೇಲೆ, ನಿನ್ನ ಜೀವನ ಪ್ರೀತಿಯ ಕಂಡ ಮೇಲೆ ನಾ ಕಣ್ಣೀರಾಗಲಿಲ್ಲ. ಕತ್ತಲನ್ನು ಮೆಟ್ಟಿ ನಿಂತು ಬೆಳಕನ್ನು ಕಾಣುವ ಪಾಠ ಹೇಳಿದವಳು ನೀನು. ನೀನೂ ನನ್ನ ಪಾಲಿಗೊಂದು ಬೆಳಕಿನ ಗುರು ಅಲ್ವಾ?

ನನ್ನ ಸುತ್ತಮುತ್ತಲಿನ ಜನ ದೇಶ ಭಾಷೆ ಕಲಿಯುವುದು ಭರವಸೆಯ ಹೊಂಗಿರಣವಲ್ಲ, ಹೌದು ಗೆಳತೀ, ನನ್ನ ನಗುವಿಗೆ, ಪ್ರೀತಿಗೆ ಸಂಸ್ಕೃತಿಯ ಕಟ್ಟಲೆಗಳಿರಲಿಲ್ಲ, ಹೌದು. ನಗರ ಚೆನ್ನಾಗಿದೆಯೆಂದು, ಹಳ್ಳಿಯ ಜನರೆಲ್ಲ ನಗರದಲ್ಲಿ ನೆಲೆಸಲಾಗುತ್ತದೆಯಾ? ಹಳ್ಳಿಯಲೇ ಅಲ್ಲವಾ ನೀವು ತಿನ್ನುವ ಭತ್ತ ಗೋಧಿ ಬೆಳೆಸುವುದು? ಅವರೆಲ್ಲಾ ಅಲ್ಲಿದ್ದರೇ ಚಂದವಲ್ಲವಾ? ಅಮ್ಮ, ಸಮಾಜ ಕಲಿಸಿದ 'ಸಂಸ್ಕೃತಿ'ಯನ್ನು ಹ್ಯಾಗೆ ಮೀರಲಿ ಹೇಳು? ಇಲ್ಲೇ ಹುಟ್ಟಿ, ಇಲ್ಲೇ ಬೆಳೆದ ನನಗೆ ಮಬ್ಬು ಬದುಕು ಚಂದವೇ ಗೆಳತಿ. ಇಲ್ಲೂ ಜೀವನ ಪ್ರೀತಿ ಇದೆ ಗೆಳತೀ. ಹುಣ್ಣಿಮೆಯ ಬೆಳದಿಂಗಳು, ಚಂದಿರನ ತಂಪನ್ನು ಅನುಭವಿಸಿರುವ ನಿನ್ನಲ್ಲಿ ಇದೊಂದು ಸತ್ಯವನ್ನು ಬಿಚ್ಚಿಟ್ಟಿರುವೆ.
ನಾ "ತೆರೆದಿದೆ ಮನೆ ಓ ಬಾ ಗೆಳತಿ..." ಎಂದು ಕರೆದೆಯೆನ್ನುವುದು ಸರಿ. ಕತ್ತಲನ್ನೇ ಹೊದ್ದು ಮಲಗಿರುವ ನನ್ನಲ್ಲಿ ನಿನಗೆ ಅದೇನು ಆಕರ್ಷಣೆ? ದೂರದಲ್ಲಿರುವ ಬೆಟ್ಟ ಸುಂದರವೆನ್ನುವ ನಾಣ್ಣುಡಿಯನ್ನು ಮರೆತು ನಿನ್ನ ನೋಡಿ ಮುಗುಳ್ನಕ್ಕೆ, ನಿನ್ನ ಜೀವನಪ್ರೀತಿಯನ್ನು ನೋಡಿ ಮೈಮರೆತೆ. ನೀನು ನಗುವ ಪರಿಯನ್ನು ಕಂಡು ಕನಸ ಕಂಡೆ, ಎಚ್ಚ್ರವಾದಾಗ ನೀ ತುಂಬ ಹತ್ತಿರವಿದ್ದರೂ ನನ್ನೊಳಗಿನ ಕತ್ತಲಿನ ಅರಿವಾಗಿ ಧಡ್! ಅಂತ ಕದ ಮುಚ್ಚಿದೆ. ಕಾಲ ಕಲಿಸುವ ಬದುಕಿಗೆ ನಾ ಯಾಕೆ ಬಂದಿಯಾಗುವೆನು ಎಂದು ಹೇಗೆ ತಿಳಿಯಪಡಿಸಲಿ ನಿನಗೆ? ನೀ ಮದುವೆಯಾಗಿ ಎರಡು ಮಕ್ಕಳ ಹೆತ್ತ ಮೇಲೆ ನೀ ಇದನ್ನೇ ನಿನ್ನ ಇನಿಯನ ಕೇಳು ಗೆಳತೀ.
ಜೋಗ್ ಜಲಪಾತವೇ ನಾಚುವಂತೆ ನಿನ್ನ ಚುಂಬಿಸುವ ನನ್ನ ಕನಸನ್ನು ಹೇಳಿದರೆ, ನೀ ಎಲ್ಲಿ ಹುಸಿಮುನಿಸು ತೋರಿಸುವೆಯೆಂದು ಹೇಳಿಲ್ಲ ನಿನಗೆ. ನಿನ್ನ ಹುಸಿಮುನಿಸೂ ನನ್ನ ಮನಸನ್ನು ಅಲ್ಲೋಲಕಲ್ಲೋಲ ಮಾಡುವಾಗ, ನನ್ನ ದು:ಖವನ್ನು ಹೇಳಿ, ಎಲ್ಲಿ ನಾ ನಿನ್ನ ಮನಸನ್ನು ಬೇಸರಿಸುವಂತೆ ಮಾಡುವೆನೋ ಎನ್ನುವ ದುಗುಡ ನನ್ನದು. ನನ್ನ ದು:ಖಗಳ ಬದುಕನ್ನು ನೀ ಅಪ್ಪಿಕ್ಕೋಳ್ಳುವೆಯೆಂದು ಹೇಳಿದಾಗ, ನನಗೆ ಇಷ್ಟೊಂದು ಪ್ರೀತಿಯ ಧಾರೆಯನ್ನೀಯುವಾಗ, ನಿನ್ನ ಕಾಲುಗಳ ಮುಟ್ಟಿ ನಮಸ್ಕರಿಸಿ ಧನ್ಯನಾಗುವ ಹಂಬಲವಾಗುತ್ತಿದೆ...ಏನೆನ್ನಲೀ ಗೆಳತೀ,
ಮೊಂಬತ್ತಿಯಲ್ಲೇ ಜೀವನ ಪ್ರೀತಿ ಪಡೆಯುವ ನಿನ್ನ ಮಲ್ಲಿಗೆ ಮನಸ್ಸಿನ ಸಣ್ಣ ಬಜೆಟ್ ಕನಸುಗಳಿಗೆ ನಾ ಅನಂತ ಋಣಿ.
ಬೇಸರಿಸದಿರು ಗೆಳತೀ...ನಿನ್ನ ಗುಲಾಬಿ ಹೃದಯದ ಕದ ತೆರೆದು ಒಮ್ಮೆ ಇಣುಕಿ ನೋಡು. ನಾ ನಲ್ಲೇ ನೆಲೆಸಿರುವೆ.
ಮತ್ತದೇ ಹಾಡಿನ ಗುನುಗು,
ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸ್ಸು
ಹುಣ್ಣಿಮೆಯ ರಾತ್ರಿಯಲಿ
ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
ನಿನ್ನೋಳಿದೆ ನನ್ನ ಮನಸ್ಸು
ಇತಿ,
ನಿನ್ನವನು