Tuesday, April 17, 2012

ಆ ಕೆಂಪು ದೀಪದ ಸಿಗ್ನಲ್‌ನಲ್ಲಿ

ಅಲ್ಲಿ ಕೆಂಪು ಲೈಟ್ ಬಿತ್ತು. ಡ್ರೈವರ್ ಬ್ರೇಕ್ ಹಾಕಿದ. ಬಸ್ ನಿಂತಿತು. ಬಸ್‌ನಲ್ಲಿದ್ದವರೆಲ್ಲಾ ಉಸ್ಸಾಪ್ಪಾ ಎಂದು ನಿಟ್ಟುಸಿರು ಬಿಟ್ಟರು. ಡ್ರೈವರ್ ಮುಖ ಗಂಟಿಕ್ಕಿತು. ಬಸ್‌ನೊಳಗೆ ಉಸಿರುಗಟ್ಟಿಸುವ ವಾತಾವರಣ. ಸೀಟಿನಲ್ಲಿ ಕುಳಿತವರು, ಸೀಟಿಲ್ಲದೆ ನಿಂತವರು ಎಲ್ಲರ ಮುಖದಲ್ಲಿ ದಣಿವಿನ ದನಿ.

ಹೊರಗಿನ ಗಾಳಿ ಬೇಕನಿಸಿತು. ಕೊಂಚ ಮುಖ ಹೊರಹಾಕಿದೆ. ಪಕ್ಕದಲ್ಲಿದ್ದ ಕಾಂಪೌಂಡಿನಲ್ಲಿ ಮೈಸೂರ್ ಪ್ಯಾಲೇಸ್ ಚಿತ್ರ. ಸುಂದರವಾಗಿ ಬಿಡಿಸಿದ ಕಲಾವಿದನಿಗೊಂದು ಮನಸ್ಸಲ್ಲೇ ಶಹಭಾಷ್ ಹೇಳಿದೆ. ನೋಡು ನೋಡುತ್ತಿದ್ದಂತೆ ನಲವತ್ತು ದಾಟಿದ ಗಂಡಸೊಬ್ಬ ಬಂದು ಅದೇ ಕಾಂಪೌಂಡ್ ಮೇಲೆ ಉಚ್ಚೆ ಹೊಯ್ದ! ಇದೇ ಕಲೆಗೆ ಬಿಬಿಎಂಪಿ ಕೋಟಿ-ಕೋಟಿ ಖರ್ಚು ಮಾಡಿದೆ. ವ್ಯವಸ್ಥೆಯ ಕಾಳಜಿಯ ಹೊರುವವರಾರು? ಪ್ರಶ್ನೆಗಿನ್ನೂಉತ್ತರ ಸಿಕ್ಕಿಲ್ಲ.

ಯೋಚನೆಗಳು ತಲೆಕೊರೆಯುತ್ತಿರುವಾಗಲೇ ಮುಖದೆದುರೇ ಟಪ್! ಚಪ್ಪಾಳೆ ಬಿತ್ತು. ಕಂಡಕ್ಟರ್ ಕೊಟ್ಟ ಎರಡು ರೂಪಾಯಿ ಪಾವಳಿಯನ್ನು ಮಂಗಳಮುಖಿಯ ಕೈಗೆ ಹಾಕಿ ನಿಟ್ಟುಸಿರು ಬಿಟ್ಟೆ. ಅಲ್ಲೇ ಇದ್ದ ಹೆಲ್ಮೆಟ್ ಹಾಕಿದ ಚೆಂದದ ಹುಡುಗನ ಬೆನ್ನಿಗೊಂದು ಗುದ್ದಿ ಕೈಯೊಡ್ಡಿದಳು. ಪುಡಿಗಾಸು ಹಾಕಿದ. ಕೆನ್ನೆಗೊಂದು ಮುತ್ತಿಟ್ಟು ಮುಂದೆ ಸಾಗಿದಳು.
ದಪ್ಪ ಕನ್ನಡ ಇಟ್ಟಿದ್ದ ನುಡವಯಸ್ಕನೊಬ್ಬ ಚಿಲ್ರೆಗಾಗಿ ಎಸಿ ಕಾರಿನ ಬಾಗಿಲು ತಟ್ಟಿದರೆ, ಆತ ಬಾಗಿಲೇ ತೆಗೆಯದೆ ನಕ್ಕು ಸುಮ್ಮನಾದ. ಪಕ್ಕದಲ್ಲೇ ನಿಂತಿದ್ದ ಬೈಕ್‌ನಲ್ಲಿ ಕುಳಿತ ಯುವಕನೊಬ್ಬ ತನ್ನ ಹಿಂದೆ ಕುಳಿತ ಯುವತಿಯ ಕೈ ಅದುಮಿದ. ಅವಳು ನಾಚಿ ನಗೆಮಲ್ಲಿಗೆ ಚೆಲ್ಲಿದಳು. ಮುಂದೆ ನೋಡಿದೆ, ಬಿರುಬಿಸಿಲಿನಲ್ಲಿ ಟ್ರಾಫಿಕ್ ಪೊಲೀಸ್ ಸೋತುಹೋಗಿದ್ದ.
ಕಣ್ಣ ರೆಪ್ಪೆ ಮೇಲಿಂದ ದಣಿವಿನ ಬೆವರು ಇಳಿಯುತ್ತಿತ್ತು!

ಮತ್ತೆ ಹಸಿರು ಲೈಟ್. ಬಸ್ ಮುಂದೆ ಸಾಗಿತು. ಬಸ್‌ನಲ್ಲಿ ಸೀಟಿಲ್ಲದೆ ನಿಂತವರು, ಕಚೇರಿಗೆ ಹೊರಟ ಏಳು ತುಂಬಿದ ಯುವತಿ, ಆಫೀಸ್‌ಗೆ ಲೇಟಾಯ್ತು ಬಾಸ್ ಕೈಯಲ್ಲಿ ಬೈಸಿಕೊಳ್ಳಬೇಕೆಂದು ಕುಳಿತಲ್ಲೇ ಚಡಪಡಿಸುವ ಕೆಲವರು, ಮೊದಲ ಕ್ಲಾಸ್ ಮಿಸ್ ಆಯ್ತು, ಮ್ಯಾಥ್ಸ್ ಮೇಷ್ಟ್ರ ಬೈಗುಳಕ್ಕೆ ರೆಡಿಯಾಗೋಣ ಎಂದು ಪೋಲಿ ಜೋಕು ಬಿಡುವ ಕಾಲೇಜು ಹುಡುಗ್ರು..ಎಲ್ಲರಿಗೂ ಬದುಕಿನ ಅನಿವಾರ್ಯತೆ!

ಮತ್ತದೇ, ಕೆಂಪು ಲೈಟ್. ಡ್ರೈವರ್ ಗಂಟಿಕ್ಕಿದ ಮುಖದೊಂದಿಗೆ ಬಸ್ ನಿಲ್ಲಿಸಿದ. ಕಂಡಕ್ಟರ್ ಬೆಂಗ್ಳೂರಿಗೆ ಹಿಡಿಶಾಪ ಹಾಕ್ದ. ಪಕ್ಕದಲ್ಲಿ ನಿಂತಿದ್ದ ಬಸ್‌ನಿಂದ ಅಜ್ಜಿಯೊಬ್ಬಳು ಕತ್ತು ಉದ್ದ ಮಾಡಿ ಉಫ್ ಎಂದು ವೀಳ್ಯದೆಲೆ ಜಗಿದು ಉಗಿದಳು. ಬೈಕ್‌ನಲ್ಲಿದ್ದ ಹೆಲ್ಮೆಟ್‌ಧಾರಿ ಹುಡುಗ ತಲೆ ಮೇಲೆ ಬಿತ್ತು. ತೆಳುಮೀಸೆಯ ಆ ಹುಡುಗ ಅಜ್ಜಿಗೆ ಹಿಡಿಶಾಪ ಹಾಕಿ ತಾನೇ ಸೋತ! ಅಷ್ಟೊತ್ತಿಗೆ ಲೇಡಿಸ್ ಸೀಟಿನಲ್ಲಿ ಕುಳಿತು ದರ್ಬಾರ್ ತೋರಿಸಿದ್ದ ಪುರುಷನಿಗೊಬ್ಬನಿಗೆ ಮಂಗಳಾರತಿ ಆಗುತ್ತಿತು. ೧೪ ಸಿಗ್ನಲ್‌ಗಳನ್ನು ದಾಟಿ ಆಫೀಸ್‌ಗೆ ತಲುಪುವಷ್ಟರಲ್ಲಿ ಬದುಕಿನ ವಿವಿಧ ಮುಖಗಳಿಗೆ ನಾನು ಸಾಕ್ಷಿಯಾಗಿದ್ದೆ.

2 comments:

Umesh Balikai said...

ನಿಜ.. ಬೆಂಗಳೂರಿನ ಟ್ರಾಫಿಕ್ ಸಿಗ್ನಲ್ಲುಗಳಲ್ಲಿ ಬದುಕಿನ ಪೂರ್ಣ ಚಿತ್ರಣ ಸಿಗುತ್ತದೆ... ನೋಡಿ ಸಾಗುವ ಅನಿವಾರ್ಯತೆ ನಮಗೆಲ್ಲ..

sunaath said...

ಸಿಗ್ನಲ್ ಎರಡರ ನಡುವಿನ ಅವಧಿಯಲ್ಲಿಯೇ ಜೀವನದ ಅನೇಕ ಮುಖಗಳ ದರ್ಶನ ಮಾಡಿಸಿರುವಿರಿ. ದೈನಂದಿನ ಬದುಕಿನ ಭಾಗಗಳಾದ ಈ ಮುಖಗಳನ್ನು casual ಆಗಿ ನೋಡುತ್ತಲೇ, ಜೀವನದರ್ಶನ ಮಾಡಿಸಿರುವ ನಿಮ್ಮ ಲೇಖನ ಪ್ರಶಂಸನೀಯವಾಗಿದೆ.