ನಾನು ಚಕ್ರವರ್ತಿಯಾಗೋಕೆ ಬಯಸುತ್ತಿಲ್ಲ. ಅದು ನನ್ನ ಬ್ಯುಸಿನೆಸ್ ಅಲ್ಲ. ನಾನು ಯಾರನ್ನೂ ಆಳಬೇಕಾಗಿಲ್ಲ, ಯಾರ ರಾಜ್ಯವನ್ನೂ ಆಕ್ರಮಿಸಿಕೊಳ್ಳಬೇಕಾಗಿಲ್ಲ. ಸಾಧ್ಯವಾದರೆ, ಎಲ್ಲರಿಗೂ ಸಹಾಯಮಾಡಬೇಕೆಂದಿದ್ದೀನಿ. ಜ್ಯೂಯಿಷರು, ಕರಿಯರು, ಬಿಳಿಯರು...ಹೀಗೆ ಜಗತ್ತಿನಲಿರುವ ಎಲ್ಲರಿಗೂ ನಾನು ಸಹಾಯ ಮಾಡ್ಬೇಕು.
ಮನುಷ್ಯ ಇರೋದೇ ಹಾಗೇ, ಪರಸ್ಪರ ಸಂತೋಷದಿಂದ ಕೂಡಿ ಬದುಕಬೇಕು, ಆದರೆ, ಯಾರೋಬ್ಬರೂ ಇನ್ನೊಬ್ಬರ ದುಃಖದಲ್ಲಿ ಬದುಕಬಾರದು. ಇನ್ನೊಬ್ಬರನ್ನು ತಿರಸ್ಕರಿಸಿ ಅಥವಾ ದ್ವೇಷಿಸಿ ಬದುಕುವ ಹಕ್ಕು ಯಾರಿಗೂ ಇಲ್ಲ. ಈ ಜಗತ್ತಿನಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಈ ಫಲವತ್ತಾದ ಸುಂದರ ಭೂಮಿ ಎಲ್ಲರಿಗೂ ಜಾಗ ಕೊಟ್ಟಿದೆ.
ಬದುಕಿನ ದಾರಿ ಸ್ವಚ್ಛಂದ ಹಾಗೂ ಸುಂದರ. ಆದರೆ, ಆ ಚೆಂದದ ದಾರಿಯನ್ನು ಕಳೆದುಕೊಂಡುಬಿಟ್ಟಿದ್ದೀವಿ. ಮನುಷ್ಯನ ಆತ್ಮದಲ್ಲಿ ದುರಾಸೆಯ ವಿಷ ತುಂಬಿದೆ. ಪರಸ್ಪರ ದ್ವೇಷದ ಬ್ಯಾರಿಕೇಡ್ ನಿರ್ಮಾಣವಾಗಿದೆ. ಪರಿಣಾಮವಾಗಿ ದುಃಖ ಹಾಗೂ ನೆತ್ತರನೆಲದಲ್ಲಿ ಬದುಕು ಬಸವಳಿದಿದೆ.
ನಾವು ವೇಗವನ್ನು ಕಲಿತಿದ್ದೇವೆ, ಆದರೆ, ನಮ್ಮ ಹೃದಯದ ಬಾಗಿಲು ಮುಚ್ಚಿಕೊಂಡಿದೆ. ಯಂತ್ರಗಳು ಬೇಕಾದನ್ನು ಕೊಡುತ್ತವೆ. ಇನ್ನು ಬೇಕು ಬೇಕು ಎನ್ನುವ ಆಸೆಯನ್ನು ಮನುಷ್ಯನಲ್ಲಿ ಹುಟ್ಟಿಹಾಕಿವೆ. ನಮ್ಮ ಜ್ಞಾನ ಸಿನಿಕತನದ ಕಡೆಗೆ ಸಾಗಿದೆ. ನಮ್ಮ ಯೋಚನೆ ದೊಡ್ಡದು, ಆದರೆ ಹೃದಯ ವೈಶಾಲ್ಯತೆ ಕಿರಿದು. ನೆನಪಿಡಿ, ಯಂತ್ರಗಳಿಗಿಂತ ಮಾನವೀಯತೆ ಮುಖ್ಯ,ಚಾಣಾಕ್ಷತೆಗಿಂತ ದಯೆ ಹಾಗೂ ಮೃದುತ್ವ ಮುಖ್ಯ. ಇದರಿಂದ ಹೊರತಾದ ನಮ್ಮ ಸುಂದರ ಬದುಕು
ಹಿಂಸೆಯ ಮಡುವಾಗುತ್ತದೆ.
ನನ್ನ ಹೃದಯದ ಧ್ವನಿ ಈಗ ಮಿಲಿಯನ್‌ಗಟ್ಟಲೆ ಜನರಿಗೆ ಕೇಳಿಸುತ್ತಿರಬಹುದು. ಕುಗ್ಗಿಹೋಗಿರುವ ಮಹಿಳೆಯರು,ಗಂಡಸೆರು, ಮಕ್ಕಳು, ವ್ಯವಸ್ಥೆಯ ಬಲಿಪಶುಗಳು ಎಲ್ಲರೂ ಕಿವಿಯಾಗುತ್ತಿರಬಹುದು. ಅವರು ನನ್ನ ಮಾತುಗಳನ್ನು ಕೇಳುತ್ತಿದ್ದರೆ ಅವರಿಗೆ ನಾನು ಹೇಳೋದಿಷ್ಟೇ: ದುಃಖಕ್ಕೆ ಕುಗ್ಗದಿರಿ, ಅಂತಿಮವಾಗಿ ಸರ್ವಾಧಿಕಾರ ಸಾಯುತ್ತೆ, ಅಧಿಕಾರ ಜನರ ಕೈಗೆ ಬರುತ್ತೆ,
ಎಲ್ಲಿಯವರೆಗೆ ಮನುಷ್ಯ ಸಾಯುತ್ತಾ ಇರುತ್ತಾನೋ ಅಲ್ಲಿಯವರೆಗೆ ಸ್ವಾತಂತ್ರ್ಯಕನಸಾಗಿರುತ್ತದೆ.
ದೇಶಕಾಯುವ ಯೋಧರೇ,
ಕ್ರೂರಿಗಳಿಗೆ ನಿಮ್ಮನ್ನು ಬಲಿ ಕೊಡಬೇಡಿ, ನಿಮ್ಮನ್ನು ಕಡೆಗಣಿಸುವವರು, ನಿಮ್ಮನ್ನು ಜೀತಕ್ಕೆ ಇಟ್ಟುಕೊಂಡಿದ್ದವರು, ನೀವು ಹೀಗೆ ಇರಬೇಕೆಂದು ಜೀವನ ಪರಿಕ್ರಮಗಳನ್ನು ಸೂಚಿಸುವವರು, ನಿಮ್ಮ, ಯೋಚನೆಗಳನ್ನು ಕಸಿದುಕೊಂಡವರು, ನಿಮ್ಮನ್ನು ಜೀವಂತವಾಗಿ ಭಕ್ಷಿಸುವವರು, ನಿಮ್ಮನ್ನು ದನಕರುಗಳಂತೆ ಕಾಣೋರು, ಫಿರಂಗಿ ಒಳಗಿನ ಗುಂಡಿನ ಮೇವಾಗಿ ಬಳಸುವಂಥ ಅಸ್ವಾಭಾವಿಕ, ಯಂತ್ರದಂಥ ಮನಸ್ಸು-ಹೃದಯವುಳ್ಳವರಿಗೆ ನಿಮ್ಮ ಬಲಿಕೊಡಬೇಡಿ. ನೀವು ಯಂತ್ರಗಳಲ್ಲ, ನೀವು ದನಗಳಲ್ಲ, ನೀವು ಮನುಷ್ಯರು. ನಿಮ್ಮ ಹೃದಯದಲ್ಲಿ ಮಾನವೀಯತೆಯನ್ನು ಪ್ರೀತಿಸುವವರು ನೀವು. ಗುಲಾಮತನಕ್ಕಾಗಿ ಹೋರಾಡಬೇಡಿ, ಬದಲಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ.
ಸಂತ ಲೂಕ್‌ನ ಏಳನೇ ಅಧ್ಯಯದಲ್ಲಿ ಹೀಗೆನ್ನುತ್ತಾರೆ: ದೇವರ ಸಾಮ್ರಾಜ್ಯ ಮನುಷ್ಯನ ಹೃದಯದಲ್ಲೇ ಇದೆ. ಕೇವಲ ಒಬ್ಬನ ಅಂತರಂಗದಲ್ಲಿ ಅಲ್ಲ, ಈ ಮನುಕುಲದಲ್ಲಿ. ನಿಮ್ಮಲ್ಲಿ, ಜಗತ್ತಿನ ಮಿಲಿಯನ್ ಗಟ್ಟಲೆ ಜನರ ಹೃದಯದಲ್ಲಿ. ನೀವು ಮನುಷ್ಯರು, ಯಂತ್ರಗಳನ್ನು ಸೃಷ್ಟಿಸುವ ಅಧಿಕಾರ ನಿಮ್ಮಲ್ಲಿದೆ, ಅಂತೆಯೇ ಸಂತೋಷವನ್ನು ಸೃಷ್ಟಿಸುವ ಸಾಮರ್ಥ್ಯವೂ ನಿಮ್ಮಲ್ಲೇ ಇದೆ.
ಜೀವನವನ್ನು ಸುಂದರ ಹಾಗೂ ಸ್ವತಂತ್ರಗೊಳಿಸುವ, ಜೀವನವನ್ನು ಅತ್ಯಾದ್ಭುತ ಸಾಹಸವನ್ನಾಗಿ ಪರಿವರ್ತಿಸುವ ಸಾಮರ್ಥ್ಯವೂ ನಿಮಗೇ ಇದೆ. ಪ್ರಜಾಪ್ರಭುತ್ವ ಹೆಸರಿನಲ್ಲಿ ಈ ಒಂದು ಮಹೋನ್ನತ ಅವಕಾಶವನ್ನು ಬಳಸಿಕೊಳ್ಳಿ. ನಾವೆಲ್ಲ ಒಗ್ಗೂಡೋಣ. ಶಾಂತಿಯುತ ಹಾಗೂ ಪ್ರಾಮಾಣಿಕ ಜಗತ್ತಿಗಾಗಿ ಹೋರಾಡೋಣ. ಆಗ ಮನುಕುಲದ ಅಭ್ಯುದಯಕ್ಕೆ ಕೆಲಸ ಮಾಡಲು ಸಾಧ್ಯವಾಗುತ್ತೆ. ಯುವಕರಿಗೆ ಭವಿಷ್ಯ ಕಟ್ಟುವ, ವೃದ್ಧರಿಗೆ ಭದ್ರತೆ ಇರುವ, ವಿಜ್ಞಾನ ಹಾಗೂ ಪ್ರಗತಿಯ ಮೂಲಕ ಮನುಷ್ಯನಿಗೆ ಸಂತೋಷ ನೀಡುವ ಚೆಂದದ ಜಗತ್ತು ನಿರ್ಮಾಣವಾಗುತ್ತೆ.
Click below link for Great Dictator speech by Chaplin
3 comments:
ಚಿತ್ರಾ,
ಈ ಚಲನಚಿತ್ರವನ್ನು ನೋಡಿದ್ದೇನೆ. ಅತ್ಯುತ್ತಮ ಚಿತ್ರ. ಸರ್ವಾಧಿಕಾರಿಯ ಭಾಷಣವಂತೂ ತುಂಬ ಸೊಗಸಾಗಿದೆ. ನಿಮ್ಮ ಬ್ಲಾಗಿನಲ್ಲಿ ಸುಂದರವಾಗಿ ಅನುವಾದಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
ಚಿತ್ರಾ ಉತ್ತಮವಾದ ಬರಹಕ್ಕೆ ಧನ್ಯವಾದಗಳು.
Very nice, thank you for sharing.
Swarna
Post a Comment